ಸಾರಾಂಶ
ಸರ್ಜಾಪುರದ ಟೆಕಿ ದಂಪತಿ ಎಕ್ಸ್ ಬಾಕ್ಸ್ ಕಂಟ್ರೋಲರ್‌ಗೆ ಆರ್ಡರ್ ಮಾಡಿದ್ದರು. ಆದರೆ ಅವರಿಗೆ ಬಂದ ಪಾರ್ಸೆಲ್ ತೆರೆವ ವೇಳೆ ಪ್ಯಾಕೇಜಿಂಗ್ ಟೇಪ್ ನಡುವೆ ಹಾವಿನ ಮರಿಯೊಂದು ಸಿಕ್ಕಿಹಾಕಿಕೊಂಡ ರೀತಿ ಕಾಣಿಸಿಕೊಂಡಿದೆ ಎಂಬ ವಿಡಿಯೋ ವೈರಲ್ ಆಗಿದೆ.
ಬೆಂಗಳೂರು : ಆನ್‌ಲೈನ್ ತಾಣಗಳ ಮೂಲಕ ವಸ್ತುಗಳನ್ನು ಆರ್ಡರ್ ಮಾಡಿದಾಗ ಕಳಪೆ ವಸ್ತುಗಳನ್ನು ಕಳಿಸಿದ್ದು, ಆರ್ಡರ್ ಮಾಡಿದ್ದೇ ಬೇರೆ ವಸ್ತು, ಬಂದಿದ್ದೇ ಬೇರೆ ವಸ್ತು ಎಂಬಂತಹ ಆರೋಪ ಕೇಳಿದ್ದೇವೆ. ಆದರೆ, ಇಲ್ಲಿ ಘಟಿಸಿದ್ದು ಜೀವ ಹೋಗುವಂತಹ ವಿಚಾರ. ಆನ್‌ಲೈನ್‌ನಲ್ಲಿ ಆರ್ಡರ್ ಮಾಡಿದ್ದು ಗೇಮಿಂಗ್ ಬಾಕ್ಸ್, ಪಾರ್ಸೆಲ್‌ನಲ್ಲಿ ಅದರ ಜೊತೆಗೆ ಬಂದಿದ್ದು ವಿಷಪೂರಿತ ಹಾವು!
ಸರ್ಜಾಪುರದ ಟೆಕಿ ದಂಪತಿ ಎಕ್ಸ್ ಬಾಕ್ಸ್ ಕಂಟ್ರೋಲರ್‌ಗೆ ಆರ್ಡರ್ ಮಾಡಿದ್ದರು. ಆದರೆ ಅವರಿಗೆ ಬಂದ ಪಾರ್ಸೆಲ್ ತೆರೆವ ವೇಳೆ ಪ್ಯಾಕೇಜಿಂಗ್ ಟೇಪ್ ನಡುವೆ ಹಾವಿನ ಮರಿಯೊಂದು ಸಿಕ್ಕಿಹಾಕಿಕೊಂಡ ರೀತಿ ಕಾಣಿಸಿಕೊಂಡಿದೆ ಎಂಬ ವಿಡಿಯೋ ವೈರಲ್ ಆಗಿದೆ.
ಹಾವಿರುವ ಬಾಕ್ಸ್‌ನ್ನು ಬಕೆಟ್‌ನಲ್ಲಿಟ್ಟು ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಅಪ್‌ಲೋಡ್ ಆಗಿದ್ದು, ಕೆಲವೇ ಹೊತ್ತಲ್ಲಿ ಸಾಕಷ್ಟು ಜನ ಹಂಚಿಕೊಂಡಿದ್ದಾರೆ. ಅದರಲ್ಲೂ ಪಾರ್ಸೆಲ್ ಬಾಕ್ಸ್ ಮೇಲೆ ಪ್ರತಿಷ್ಠಿತ ಅಮೆಜಾನ್ ಪ್ರೈಮ್ ಲೋಗೋ ರ್‍ಯಾಪರ್ ಕೂಡ ಇರುವುದು ಸಾಕಷ್ಟು ಚರ್ಚೆಗೆ ಕಾರಣವಾಗಿದೆ.
‘ಎಕ್ಸ್’ ನಲ್ಲಿ ಹಲವರು ಅಮೆಜಾನ್ ಬಗ್ಗೆ ಅಸಮಾಧಾನ ತೋಡಿಕೊಂಡಿದ್ದರೆ. ಇನ್ನು ಹಲವರು ಘಟನೆ ಬಗ್ಗೆ ಸಂಶಯ ವ್ಯಕ್ತಪಡಿಸಿದ್ದಾರೆ. ‘ಅಮೆಜಾನ್ ಮಳೆ ಕಾಡಿಂದ ನೇರವಾಗಿ ಹಾವು ಬಂದಿದೆ’, ‘ಹಾವಿಗಾಗಿ ಅಮೆಜಾನ್ ಹೆಚ್ಚುವರಿ ಹಣ ಪಡೆಯುತ್ತಾ?’, ‘ಇದು ತುಂಬಾ ಅಪಾಯಕಾರಿ’, ಇದು ಹೇಗೆ ಸಾಧ್ಯ, ಇದೊಂದು ತಮಾಷೆ ಎಂದು ಹಲವರು ಹಲವು ಬಗೆಯಲ್ಲಿ ಕಮೆಂಟ್ ಮಾಡಿದ್ದಾರೆ.
ಪಾರ್ಸೆಲ್ ಪಡೆದವರು ಕಾನೂನು ಹೋರಾಟಕ್ಕೆ ಹೋಗುವುದಾಗಿಯೂ ಹೇಳಿದ್ದಾರೆ ಎಂದು ವರದಿಯಾಗಿದೆ. ಇನ್ನು, ಈ ಬಗ್ಗೆ ಅಮೆಜಾನ್ ಕೂಡ ಪ್ರತಿಕ್ರಿಯಿಸಿ ‘ಅನನುಕೂಲತೆಯ ಬಗ್ಗೆ ನಾವು ವಿಷಾದಿಸುತ್ತೇವೆ. ನಾವು ಇದನ್ನು ಪರಿಶೀಲಿಸಲು ಬಯಸಿದ್ದು, ದಯವಿಟ್ಟು ಅಗತ್ಯವಿರುವ ವಿವರಗಳನ್ನು ಹಂಚಿಕೊಳ್ಳಿ ಮತ್ತು ನಮ್ಮ ತಂಡವು ಶೀಘ್ರದಲ್ಲೇ ನಿಮ್ಮನ್ನು ಸಂಪರ್ಕಿಸುತ್ತದೆ ಎಂದು ಪ್ರತಿಕ್ರಿಯಿಸಿದೆ ಎನ್ನಲಾಗಿದೆ.