ಗ್ರೇಟರ್ ಬೆಂಗಳೂರು ವ್ಯಾಪ್ತಿಗೆ ಆನೇಕಲ್‌ : ಡಿಸಿಎಂ

| N/A | Published : May 03 2025, 09:30 AM IST

DK Shivakumar

ಸಾರಾಂಶ

ಗ್ರೇಟರ್ ಬೆಂಗಳೂರು ಯೋಜನೆಗೆ ಅಂಕಿತ ಹಾಕಿದ್ದು, ಆನೇಕಲ್ ತಾಲೂಕು ವ್ಯಾಪ್ತಿಯನ್ನು ಗ್ರೇಟರ್ ಬೆಂಗಳೂರಿಗೆ ಸೇರ್ಪಡೆ ಮಾಡಲಾಗುವುದು ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.

ಬೆಂಗಳೂರು ದಕ್ಷಿಣ : ಆನೇಕಲ್, ಸರ್ಜಾಪುರಕ್ಕೆ ಮೆಟ್ರೋ ವಿಸ್ತರಣೆಗೆ ಡಿಪಿಆರ್ ತಯಾರಾಗುತ್ತಿದೆ. ರಾಜ್ಯಪಾಲರು ಗ್ರೇಟರ್ ಬೆಂಗಳೂರು ಯೋಜನೆಗೆ ಅಂಕಿತ ಹಾಕಿದ್ದು, ಆನೇಕಲ್ ತಾಲೂಕು ವ್ಯಾಪ್ತಿಯನ್ನು ಗ್ರೇಟರ್ ಬೆಂಗಳೂರಿಗೆ ಸೇರ್ಪಡೆ ಮಾಡಲಾಗುವುದು ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.

ಬೆಂಗಳೂರು ನಗರ ಜಿಲ್ಲಾ ಪಂಚಾಯಿತಿ, ಆನೇಕಲ್ ತಾಲೂಕು ಪಂಚಾಯಿತಿ ಹಾಗೂ ಹೆನ್ನಾಗರ ಗ್ರಾಮ ಪಂಚಾಯಿತಿ ವತಿಯಿಂದ ಎಚ್.ಹೊಸಹಳ್ಳಿ ಬಸ್ ನಿಲ್ದಾಣದ ಮುಂಭಾಗದಲ್ಲಿ ಹಮ್ಮಿಕೊಂಡಿದ್ದ ವಿವಿಧ ಕಾಮಗಾರಿಗಳ ಶಂಕುಸ್ಥಾಪನೆ ಹಾಗೂ ಅರ್ಹ ಫಲಾನುಭವಿಗಳಿಗೆ ಸವಲತ್ತು ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿ, ನೇರವಾಗಿ ಮಾತನಾಡುವವರಿಗೆ ಶತ್ರುಗಳು ಜಾಸ್ತಿ, ಸುಳ್ಳು ಹೇಳುವವರಿಗೆ ಸ್ನೇಹಿತರು ಜಾಸ್ತಿ ಇರುತ್ತಾರೆ. ಬಿಜೆಪಿ ಭಾವನೆ ಮೇಲೆ ರಾಜಕಾರಣ ಮಾಡುತ್ತಿದೆ. ಆದರೆ, ಕಾಂಗ್ರೆಸ್ ಬದುಕಿನ ಮೇಲೆ ರಾಜಕಾರಣ ಮಾಡುತ್ತಿದೆ

ರೈತರಿಗೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ಹಾಲಿನ ದರವನ್ನು ಲೀಟರ್‌ಗೆ ₹4ಹೆಚ್ಚಳ ಮಾಡಿದರೆ ಬಿಜೆಪಿಗರು ಜನಾಕ್ರೋಶ ಯಾತ್ರೆ ಮಾಡುತ್ತಿದ್ದಾರೆ. ಪೆಟ್ರೋಲ್, ಡೀಸೆಲ್ ಬೆಲೆ ಗಗನಕ್ಕೇರುತ್ತಿದ್ದು, ದಿನನಿತ್ಯದ ವಸ್ತುಗಳ ಮೇಲೆ ಕೇಂದ್ರ ಸರ್ಕಾರ ಜಿಎಸ್‌ಟಿ ವಿಧಿಸಿ ಮಧ್ಯಮ ವರ್ಗದವರ ಬದುಕನ್ನು ಹಾಳುಗೆಡವಿದೆ ಎಂದು ಹರಿಹಾಯ್ದರು.

ಕಾವೇರಿ ಕುಡಿಯುವ ನೀರು ಒದಗಿಸಲು ಕ್ರಮ ಕೈಗೊಳ್ಳಲಾಗುವುದು. 78 ವಿವಿಧ ಕಾಮಗಾರಿಗಳಿಗೆ ಶಂಕುಸ್ಥಾಪನೆ ಹಾಗೂ ಉದ್ಘಾಟನೆ ನೆರವೇರಿಸಿ ಟೀಕಾಕಾರರಿಗೆ ಅಭಿವೃದ್ಧಿ ಮೂಲಕ ಉತ್ತರ ನೀಡಲಾಗುತ್ತಿದೆ ಎಂದರು.

ಕೋಟ್ಯಂತರ ಮಹಿಳೆಯರು ಉಚಿತ ಪ್ರಯಾಣ:

ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಮಾತನಾಡಿ, ಶಕ್ತಿ ಯೋಜನೆ ಅಡಿ ಕೋಟ್ಯಂತರ ಮಹಿಳೆಯರು ಉಚಿತ ಬಸ್ ಪ್ರಯಾಣ ಮಾಡಿದ್ದಾರೆ. ಹೆನ್ನಾಗರ ಗ್ರಾಮ ಪಂಚಾಯಿತಿಯ ಎಲ್ಲಾ ಮಾಜಿ ಹಾಗೂ ಹಾಲಿ ಪ್ರತಿನಿಧಿಗಳ ಅವಿರತ ಶ್ರಮದಿಂದ ₹5.13 ಕೋಟಿ ವೆಚ್ಚದ ಕಾಮಗಾರಿಗೆ ಚಾಲನೆ ನೀಡಲಾಗಿದ್ದು, 901 ಫಲಾನುಭವಿಗಳಿಗೆ ಸವಲತ್ತುಗಳನ್ನು ವಿತರಿಸಲಾಗಿದೆ ಎಂದರು.

ಹೆನ್ನಾಗರ ಗ್ರಾಮ ಪಂಚಾಯಿತಿ ಅಧ್ಯಕ್ಷ ಕೆ.ವಿ.ರಾಮಸ್ವಾಮಿ ಮಾತನಾಡಿದರು. ಶಾಸಕ ಬಿ.ಶಿವಣ್ಣ, ಮಾಜಿ ಸಂಸದ ಡಿ.ಕೆ.ಸುರೇಶ್, ಕಾಂಗ್ರೆಸ್ ಮುಖಂಡ ಆರ್.ಕೆ.ರಮೇಶ್, ಪರಿಷತ್ ಸದಸ್ಯ ರಾಮೋಜಿ ಗೌಡ, ಸಿಇಒ ಲತಾ ಕುಮಾರಿ, ಗ್ರಾಪಂ ಉಪಾಧ್ಯಕ್ಷೆ ಜಿ.ಚಂದ್ರಕಲಾ, ಎಚ್.ಜೆ.ಪ್ರಸನ್ನ ಕುಮಾ‌ರ್, ಆರ್‌.ಕೆ.ಕೇಶವರೆಡ್ಡಿ, ಎಂ.ಮುನಿರತ್ನ ಮುನಿರಾಜು, ಆರ್.ಮಹೇಶ್, ಎಂ.ಕಿರಣ್ ಕುಮಾರ್, ಎಂ.ಲಕ್ಷ್ಮೀ ಇದ್ದರು.

ರಾಮರಾಜ್ಯದ ಕನಸನ್ನು ಅಭಿವೃದ್ಧಿ ಮೂಲಕ ಸಾಕಾರಗೊಳಿಸಿ ನನಸು ಮಾಡಿದ ಕೀರ್ತಿ ಹೆನ್ನಾಗರ ಗ್ರಾಮ ಪಂಚಾಯಿತಿಗೆ ಸಲ್ಲುತ್ತದೆ. ಎಲ್ಲಾ ಜಾತಿಯ ಮುಖಂಡರು ಒಂದಾಗಿ ಪಂಚಾಯಿತಿ ಅಭಿವೃದ್ಧಿಗೆ ಒತ್ತು ನೀಡಿದ್ದಾರೆ.

- ಡಿ.ಕೆ.ಸುರೇಶ್, ಮಾಜಿ ಸಂಸದ