ಪಡಿತರ ಚೀಟಿಗೆ ಆಧಾರ್‌ ದೃಢೀಕರಣ (ಇ-ಕೆವೈಸಿ) ಮಾಡಿಸಲು ಇನ್ನುಮುಂದೆ ನ್ಯಾಯಬೆಲೆ ಅಂಗಡಿಗಳ ಮುಂದೆ ನಿಲ್ಲದೇ ಮನೆಯಲ್ಲೇ ಕುಳಿತು ಬೆರಳ ತುದಿಯಲ್ಲೇ ಇ-ಕೆವೈಸಿ ಪೂರ್ಣಗೊಳಿಸಲು ಅನುಕೂಲವಾಗುವಂತೆ ಆಹಾರ ಇಲಾಖೆ ‘ಅನ್ನಸೇವೆ’ ಮೊಬೈಲ್‌ ಅಪ್ಲಿಕೇಷನ್‌ ಅಭಿವೃದ್ಧಿಪಡಿಸಿದೆ.

ಬೆಂಗಳೂರು : ಪಡಿತರ ಚೀಟಿಗೆ ಆಧಾರ್‌ ದೃಢೀಕರಣ (ಇ-ಕೆವೈಸಿ) ಮಾಡಿಸಲು ಇನ್ನುಮುಂದೆ ನ್ಯಾಯಬೆಲೆ ಅಂಗಡಿಗಳ ಮುಂದೆ ನಿಲ್ಲದೇ ಮನೆಯಲ್ಲೇ ಕುಳಿತು ಬೆರಳ ತುದಿಯಲ್ಲೇ ಇ-ಕೆವೈಸಿ ಪೂರ್ಣಗೊಳಿಸಲು ಅನುಕೂಲವಾಗುವಂತೆ ಆಹಾರ ಇಲಾಖೆ ‘ಅನ್ನಸೇವೆ’ ಮೊಬೈಲ್‌ ಅಪ್ಲಿಕೇಷನ್‌ ಅಭಿವೃದ್ಧಿಪಡಿಸಿದೆ.

ಗುರುವಾರ ನಗರದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಆಹಾರ ಸಚಿವ ರಿಜ್ವಾನ್ ಅರ್ಷದ್, ಅಧಿಕೃತವಾಗಿ ಈ ಆ್ಯಪ್ ಅನಾವರಣಗೊಳಿಸಿದರು. ಫಲಾನುಭವಿಗಳು ಗೂಗಲ್ ಪ್ಲೇಸ್ಟೋರ್‌ನಲ್ಲಿ ಆ್ಯಪ್ ಡೌನ್‌ಲೋಡ್ ಮಾಡಿಕೊಂಡು ಯುಐಡಿಎಐ ಫೇಸ್ ಆಥಂಟಿಕೇಷನ್ ತಂತ್ರಜ್ಞಾನ ಬಳಸಿ ಮನೆಯಲ್ಲಿ ಇ-ಕೆವೈಸಿ ಪೂರ್ಣಗೊಳಿಸಬಹುದಾಗಿದೆ.

ಮೊದಲ ಹಂತದಲ್ಲಿ ಬೆಂಗಳೂರು ನಗರ, ಬೆಂ.ಗ್ರಾಮಾಂತರ, ಉಡುಪಿ, ಹಾವೇರಿ, ಉತ್ತರ ಕನ್ನಡ, ಬಳ್ಳಾರಿ, ಬೀದರ್ ಮತ್ತು ಕೊಪ್ಪಳದ ಫಲಾನುಭವಿಗಳು, ಆಹಾರ ಇಲಾಖೆಯ ಅಧಿಕಾರಿಗಳು ಈ ಆ್ಯಪ್ ಡೌನ್‌ಲೋಡ್ ಮಾಡಿಕೊಂಡು ಇಕೆವೈಸಿ ಮಾಡಬಹುದು. 2ನೇ ಹಂತದಲ್ಲಿ ಅ.10ರಿಂದ ಉಳಿದ ಜಿಲ್ಲೆಗಳ ಫಲಾನುಭವಿಗಳಿಗೆ ಆ್ಯಪ್ ಬಳಸಲು ಅವಕಾಶ ಕಲ್ಪಿಸಲಾಗಿದೆ.

ರಾಜ್ಯದಲ್ಲಿ ಒಟ್ಟು 2,67,64,276 ಫಲಾನುಭವಿಗಳು

ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ರಿಜ್ವಾನ್‌ ಅರ್ಷದ್‌ ಅವರು, ರಾಜ್ಯದಲ್ಲಿ ಒಟ್ಟು 2,67,64,276 ಫಲಾನುಭವಿಗಳು ಇಕೆವೈಸಿ ಮಾಡಿಸಬೇಕು. ಸೆ.29ರವರೆಗೆ 1,56,21,608 ಮಂದಿ ಇ-ಕೆವೈಸಿ ಪೂರ್ಣಗೊಳಿಸಿದ್ದಾರೆ. ರಾಜ್ಯದಲ್ಲಿ ಇದುವರೆಗೆ ಒಮ್ಮೆಯೂ ಇ-ಕೆವೈಸಿ ಮಾಡಿಸದ 3,82,362 ಸದಸ್ಯರು ತಕ್ಷಣ ಇ-ಕೆವೈಸಿ ಮಾಡಬೇಕು. ತಪ್ಪಿದ್ದಲ್ಲಿ ಮುಂದಿನ ಕ್ರಮ ಕೈಗೊಳ್ಳಲಾಗುವುದು. ನ್ಯಾಯಬೆಲೆ ಅಂಗಡಿಗಳು, ಆಹಾರ ನಿರೀಕ್ಷಕರ ಮೂಲಕವೂ ಇ-ಕೆವೈಸಿ ಮಾಡಿಸಬಹುದು ಎಂದು ತಿಳಿಸಿದರು.

‘ಅನ್ನ ಸೇವೆ’ ಆ್ಯಪ್ ಬಳಕೆ ಹೇಗೆ?

‘ಅನ್ನ ಸೇವೆ’ ಆ್ಯಪ್ ಬಳಸುವ ಮುನ್ನ ಫಲಾನುಭವಿಗಳು ತಮ್ಮ ಮೊಬೈಲ್‌ನ ಗೂಗಲ್ ಪ್ಲೇ ಸ್ಟೋರ್‌ನಲ್ಲಿ ಸಿಇಜಿ ಫೇಸ್ ಕೆವೈಸಿ ಆ್ಯಪ್, ಆಧಾರ್‌ಫೇಸ್‌ ಆರ್‌ಡಿ ಮತ್ತು ಅನ್ನಸೇವೆ ಎಂಬ 3 ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಬೇಕು. ಫೇಸ್‌ ಆಥಂಟಿಕೇಷನ್ ತಂತ್ರಜ್ಞಾನ ಬಳಸಿ ಇ-ಕೆವೈಸಿ ಮಾಡಿಕೊಳ್ಳಬಹುದು. ರಾಜ್ಯದಲ್ಲಿ ಬೋಗಸ್ ಕಾರ್ಡ್ ಪತ್ತೆ ಮತ್ತು ಪಡಿತರ ಸೋರಿಕೆ ತಡೆಗೆ ಇ-ಕೆವೈಸಿ ಪ್ರಕ್ರಿಯೆ ನಡೆಯುತ್ತಿದ್ದು, ಅ.20ರವರೆಗೆ ವಿಸ್ತರಿಸಲಾಗಿದೆ.