ವಾಹನಗಳಿಗೆ ಎಫ್‌ಸಿ ನೀಡಲು 32 ಕಡೆ ಎಟಿಎಸ್‌

| N/A | Published : May 06 2025, 10:01 AM IST

up vehicle tax hike 2025 new car bike registration rates increased notification

ಸಾರಾಂಶ

ವಾಹನಗಳ ಸದೃಢತೆ (ಫಿಟ್‌ನೆಸ್‌)ಯನ್ನು ಮಾನವ ರಹಿತವಾಗಿ ಹಾಗೂ ನಿಖರವಾಗಿ ಪರೀಕ್ಷಿಸುವ ಉದ್ದೇಶದೊಂದಿಗೆ ರಾಜ್ಯದಲ್ಲಿ 32 ಕಡೆ ಸ್ವಯಂಚಾಲಿತ ವಾಹನ ಪರೀಕ್ಷಾ ಕೇಂದ್ರ (ಎಟಿಎಸ್‌) ಸ್ಥಾಪನೆ

ಗಿರೀಶ್‌ ಗರಗ

ಬೆಂಗಳೂರು : ವಾಹನಗಳ ಸದೃಢತೆ (ಫಿಟ್‌ನೆಸ್‌)ಯನ್ನು ಮಾನವ ರಹಿತವಾಗಿ ಹಾಗೂ ನಿಖರವಾಗಿ ಪರೀಕ್ಷಿಸುವ ಉದ್ದೇಶದೊಂದಿಗೆ ರಾಜ್ಯದಲ್ಲಿ 32 ಕಡೆ ಸ್ವಯಂಚಾಲಿತ ವಾಹನ ಪರೀಕ್ಷಾ ಕೇಂದ್ರ (ಎಟಿಎಸ್‌) ಸ್ಥಾಪನೆಗೆ ಯೋಜನೆ ರೂಪಿಸಲಾಗಿದೆ.

ಫಿಟ್‌ನೆಸ್‌ ಇಲ್ಲದ ವಾಹನಗಳಿಂದಾಗಿ ದೇಶದಲ್ಲಿ ಸಂಭವಿಸುತ್ತಿರುವ ಅಪಘಾತಗಳ ಸಂಖ್ಯೆ ಕಡಿಮೆ ಮಾಡುವ ಉದ್ದೇಶದೊಂದಿಗೆ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ (ಎಂಒಆರ್‌ಟಿಎಚ್‌)ವು ಎಟಿಎಸ್‌ ಸ್ಥಾಪಿಸುವಂತೆ ಎಲ್ಲ ರಾಜ್ಯದ ಸಾರಿಗೆ ಇಲಾಖೆಗಳಿಗೂ ಸೂಚನೆ ನೀಡಿದೆ. ಅದರಂತೆ ಈಗಾಗಲೇ 14 ರಾಜ್ಯಗಳಲ್ಲಿ ಎಟಿಎಸ್‌ ಸ್ಥಾಪಿಸಲಾಗಿದೆ. ಆದರೆ, ಕರ್ನಾಟಕದಲ್ಲಿ ಈವರೆಗೆ ಎಟಿಎಸ್‌ ಸ್ಥಾಪಿಸಿಲ್ಲ. ಇದಕ್ಕೆ ಸಂಬಂಧಿಸಿ ಎಂಒಆರ್‌ಟಿಎಚ್‌ ರಾಜ್ಯ ಸಾರಿಗೆ ಇಲಾಖೆಗೆ ಹಲವು ಬಾರಿ ಸೂಚನೆ ನೀಡಿದೆ. ಈ ಹಿನ್ನೆಲೆಯಲ್ಲಿ ಇದೀಗ ರಾಜ್ಯದಲ್ಲಿ 32 ಕಡೆಗಳಲ್ಲಿ ಸಾರ್ವಜನಿಕ-ಖಾಸಗಿ ಸಹಭಾಗಿತ್ವದಲ್ಲಿ ಎಟಿಎಸ್‌ ಸ್ಥಾಪಿಸಲು ಯೋಜನೆ ರೂಪಿಸಲಾಗಿದೆ.

374.13 ಕೋಟಿ ರು. ವೆಚ್ಚ:

ಸಾರಿಗೆ ಇಲಾಖೆಯು ಎರಡು ರೂಪದಲ್ಲಿ ಯೋಜನೆ ಅನುಷ್ಠಾನಕ್ಕೆ ಮುಂದಾಗಿದೆ. ಅದರಂತೆ 32 ಕಡೆ ಈಗಾಗಲೇ ಸಾರಿಗೆ ಇಲಾಖೆ ಒಡೆತನದ ಅಥವಾ ಸ್ಥಳೀಯ ಪ್ರಾಧಿಕಾರದಿಂದ ಜಾಗ ಪಡೆದು ಎಟಿಎಸ್‌ ಸ್ಥಾಪಿಸಲಾಗುತ್ತದೆ. ಒಂದು ವೇಳೆ ಯಾವ ಸ್ಥಳದಲ್ಲಿ ಎಟಿಎಸ್‌ ಸ್ಥಾಪನೆಗೆ ಜಾಗ ಸಿಗುವುದಿಲ್ಲವೋ ಅಲ್ಲಿ ಎಟಿಎಸ್‌ ಸ್ಥಾಪಿಸಲು ಗುತ್ತಿಗೆ ಪಡೆಯುವ ಖಾಸಗಿ ಸಂಸ್ಥೆಯೇ ಜಾಗ ಗುರುತಿಸಿ ಎಟಿಎಸ್‌ ಸ್ಥಾಪಿಸುವ ಅವಕಾಶ ನೀಡಲಾಗುತ್ತದೆ. ಒಟ್ಟಾರೆ 32 ಕಡೆ ಸಾರಿಗೆ ಇಲಾಖೆಯು 12 ಕಡೆಗಳಲ್ಲಿ ಜಾಗ ಗುರುತಿಸಿದೆ. ಉಳಿದ 20 ಕಡೆ ಖಾಸಗಿ ಸಂಸ್ಥೆಯ ಜಾಗದಲ್ಲೇ ಎಟಿಎಸ್‌ ಸ್ಥಾಪಿಸಲು ಉದ್ದೇಶಿಸಲಾಗಿದೆ. 32 ಕಡೆ ಎಟಿಎಸ್‌ ಸ್ಥಾಪನೆಗಾಗಿ ಒಟ್ಟು 374.13 ಕೋಟಿ ರು. ವೆಚ್ಚವಾಗಲಿದೆ ಎಂದು ಸಾರಿಗೆ ಇಲಾಖೆ ಅಂದಾಜಿಸಿದೆ.

ಮಾನವ ರಹಿತ ವಾಹನ ಪರೀಕ್ಷೆ

ಈವರೆಗೆ ವಾಹನಗಳ ಸದೃಢತೆಯನ್ನು ಆಯಾ ಆರ್‌ಟಿಒ ಅಧಿಕಾರಿಗಳು ಪರೀಕ್ಷೆ ನಡೆಸಿ, ಫಿಟ್‌ನೆಸ್‌ ಪ್ರಮಾಣಪತ್ರವನ್ನು ನೀಡುತ್ತಿದ್ದರು. ಕೆಲವೊಮ್ಮೆ ವಾಹನಗಳು ಸದೃಢವಾಗಿರದಿದ್ದರೂ ಫಿಟ್‌ನೆಸ್‌ ಪ್ರಮಾಣಪತ್ರ ನೀಡಲಾಗುತ್ತದೆ. ಇದನ್ನು ತಪ್ಪಿಸುವ ಉದ್ದೇಶದೊಂದಿಗೆ ಫಿಟ್‌ನೆಸ್‌ ಪ್ರಮಾಣಪತ್ರ ನೀಡುವುದರಲ್ಲಿ ಪಾರದರ್ಶಕತೆ ಕಾಯ್ದುಕೊಳ್ಳಲು ಸ್ವಯಂಚಾಲಿತ ವಾಹನ ಪರೀಕ್ಷಾ ಕೇಂದ್ರ ಸ್ಥಾಪಿಸಲಾಗುತ್ತಿದೆ. ಅದರಿಂದ ವಾಹನಗಳ ಸದೃಢತೆಯನ್ನು ವೀಡಿಯೋ ಚಿತ್ರೀಕರಣ ಮಾಡಿ, ಅದನ್ನು ಸಾಫ್ಟ್‌ವೇರ್‌ನಲ್ಲಿ ದಾಖಲಿಸಿ ಪರೀಕ್ಷಿಸಲಾಗುತ್ತದೆ. ಅದರಿಂದ ವಾಹನಗಳ ಸದೃಢತೆಯನ್ನು ಸಾಫ್ಟ್‌ವೇರ್‌ ಮೂಲಕವೇ ನಿರ್ಧರಿಸಿ ಪ್ರಮಾಣಪತ್ರ ನೀಡಲಾಗುತ್ತದೆ. ಹೀಗೆ ಯಾರ ಹಸ್ತಕ್ಷೇಪವಿಲ್ಲದೇ ಸಾಫ್ಟ್‌ವೇರ್‌ ಮೂಲಕ ಪಾರದರ್ಶಕವಾಗಿ ಫಿಟ್‌ನೆಸ್‌ ಪ್ರಮಾಣಪತ್ರ ನೀಡಲು ಎಟಿಎಸ್‌ ಸ್ಥಾಪಿಸಲಾಗುತ್ತಿದೆ.

39 ಬಗೆಯ ಪರೀಕ್ಷೆ:

ಎಟಿಎಸ್‌ನಲ್ಲಿ ದ್ವಿಚಕ್ರ ವಾಹನದಿಂದ ಭಾರೀ ವಾಹನಗಳವರೆಗೆ ಸದೃಢತೆ ಪರೀಕ್ಷೆಗೊಳಪಡಿಸಲಾಗುತ್ತದೆ. ವಾಹನಗಳ 39 ಪರಿಕರಗಳನ್ನು ಪರೀಕ್ಷೆಗೊಳಪಡಿಸಲಾಗುತ್ತದೆ. ಹೆಡ್‌ಲೈಟ್‌, ಬ್ರೇಕ್‌, ಸೈಲೆನ್ಸರ್‌, ಎಂಜಿನ್‌, ಬ್ಯಾಟರಿ, ಆಸನಗಳು ಸೇರಿ ವಿವಿಧ 39 ಬಗೆಯ ಪರಿಕರಗಳನ್ನು ಪರೀಕ್ಷಿಸಿ ವಾಹನವು ಸಂಚಾರಕ್ಕೆ ಯೋಗ್ಯವಾಗಿವೆಯೇ ಎಂಬುದನ್ನು ದೃಢಪಡಿಸಲಾಗುತ್ತದೆ. ಒಂದು ವೇಳೆ ಯಾವ ಪರಿಕರ ಹಾಳಾಗಿದೆ, ಅದರಿಂದ ವಾಹನವು ರಸ್ತೆಗಿಳಿಸಲು ಸಾಧ್ಯವಿಲ್ಲ ಎಂದಾದರೆ ಅದನ್ನು ಫಿಟ್‌ನೆಸ್‌ ಪ್ರಮಾಣಪತ್ರದಲ್ಲಿ ನಮೂದಿಸಲಾಗುತ್ತದೆ.

ವಾಣಿಜ್ಯ ವಾಹನಗಳು ನೋಂದಣಿಯಾದ 8 ವರ್ಷಗಳವರೆಗೆ ಪ್ರತಿ 2 ವರ್ಷಕ್ಕೊಮ್ಮೆ ಹಾಗೂ 8 ವರ್ಷಗಳ ನಂತರ ಪ್ರತಿ ವರ್ಷ ಸಧೃಡತೆ ಪರೀಕ್ಷೆಗೊಳಪಡಿಸಬೇಕಿದೆ. ಹಾಗೆಯೇ, ಖಾಸಗಿ ವಾಹನಗಳು ನೋಂದಣಿಯಾದ 15 ವರ್ಷಗಳ ನಂತರ ಪ್ರತಿ 5 ವರ್ಷಕ್ಕೊಮ್ಮೆ ಸಧೃಡತೆ ಪರೀಕ್ಷೆಗೊಳಪಡಬೇಕು. ಈ ವಾಹನಗಳು ಎಟಿಎಸ್‌ನಲ್ಲಿ ಎಲ್ಲ ಪರೀಕ್ಷೆಗಳಲ್ಲೂ ಪಾಸಾಗಿ ಫಿಟ್‌ನೆಸ್‌ ಪ್ರಮಾಣ ಪತ್ರ ಪಡೆದರೆ, ಆ ಪ್ರಮಾಣಪತ್ರವು ದೇಶದಲ್ಲೆಡೆ ಮಾನ್ಯ ಮಾಡಲಾಗುತ್ತದೆ. ಆ ವಾಹನಗಳನ್ನು ಯಾವುದೇ ರಾಜ್ಯದಲ್ಲಾದರೂ ಅದನ್ನು ಮತ್ತೊಮ್ಮೆ ಪರೀಕ್ಷೆಗೊಳಿಸಲು ಸಾಧ್ಯವಿಲ್ಲ.