ಸಾರಾಂಶ
ಬೆಂಗಳೂರು ಅರಮನೆ ಮೈದಾನದ ಭೂಮಿಯಲ್ಲಿ ಯಾವುದೇ ಕಾಮಗಾರಿ ನಡೆಸುವುದು ಅಥವಾ ಕೈ ಬಿಡುವ ಹಕ್ಕನ್ನು ರಾಜ್ಯ ಸರ್ಕಾರದ ವಿವೇಚನೆಗೆ ನೀಡುವಂತಹ ಬೆಂಗಳೂರು ಅರಮನೆ (ಭೂ ಬಳಕೆ ಮತ್ತು ನಿಯಂತ್ರಣ) ವಿಧೇಯಕ 2025ಕ್ಕೆ ಬಿಜೆಪಿ ಸಭಾ ತ್ಯಾಗದ ನಡುವೆ ಅನುಮೋದನೆ ಪಡೆಯಲಾಯಿತು.
ವಿಧಾನಸಭೆ : ಬೆಂಗಳೂರು ಅರಮನೆ ಮೈದಾನದ ಭೂಮಿಯಲ್ಲಿ ಯಾವುದೇ ಕಾಮಗಾರಿ ನಡೆಸುವುದು ಅಥವಾ ಕೈ ಬಿಡುವ ಹಕ್ಕನ್ನು ರಾಜ್ಯ ಸರ್ಕಾರದ ವಿವೇಚನೆಗೆ ನೀಡುವಂತಹ ಬೆಂಗಳೂರು ಅರಮನೆ (ಭೂ ಬಳಕೆ ಮತ್ತು ನಿಯಂತ್ರಣ) ವಿಧೇಯಕ 2025ಕ್ಕೆ ಬಿಜೆಪಿ ಸಭಾ ತ್ಯಾಗದ ನಡುವೆ ಅನುಮೋದನೆ ಪಡೆಯಲಾಯಿತು.
ಬೆಂಗಳೂರು ಅರಮನೆ ಮೈದಾನದ 15.39 ಎಕರೆ ಭೂಮಿಯಲ್ಲಿ ರಸ್ತೆ ಅಗಲೀಕರಣ ಕಾಮಗಾರಿ ನಡೆಸಲು ಮೈಸೂರು ರಾಜಮನೆತನದ ವಾರಸುದಾರರಿಗೆ 3 ಸಾವಿರ ಕೋಟಿ ರು.ಗೂ ಹೆಚ್ಚಿನ ಮೊತ್ತದ ವರ್ಗಾಯಿಸಬಹುದಾದ ಅಭಿವೃದ್ಧಿ ಹಕ್ಕು (ಟಿಡಿಆರ್) ನೀಡುವಂತೆ ಸುಪ್ರೀಂಕೋರ್ಟ್ ಆದೇಶಿಸಿದೆ. ಆದರೆ, ಅಷ್ಟು ದುಬಾರಿ ಮೌಲ್ಯದ ಟಿಡಿಆರ್ ನೀಡುವುದರಿಂದ ಸರ್ಕಾರದ ಆರ್ಥಿಕತೆ ಹಾಗೂ ಭವಿಷ್ಯದಲ್ಲಿ ಅಭಿವೃದ್ಧಿ ಕಾಮಗಾರಿಗಳ ಮೇಲೆ ದುಷ್ಪರಿಣಾಮ ಬೀರಲಿದೆ ಎಂದು ಅಭಿಪ್ರಾಯಪಟ್ಟಿರುವ ರಾಜ್ಯ ಸರ್ಕಾರ, ಅದಕ್ಕಾಗಿ ಬೆಂಗಳೂರು ಅರಮನೆ (ಭೂ ಬಳಕೆ ಮತ್ತು ನಿಯಂತ್ರಣ) ವಿಧೇಯಕ 2025ನ್ನು ಮಂಗಳವಾರ ಮಂಡಿಸಿತ್ತು. ಈ ವಿಧೇಯಕ ಗುರುವಾರ ಚರ್ಚೆಗೆ ಬಂದಿದ್ದು, ಬಿಜೆಪಿ ವಿರೋಧದ ನಡುವೆಯೇ ಅನುಮೋದನೆ ಪಡೆಯಲಾಯಿತು.
ಟಿಡಿಆರ್ ಜಮೆ, ಬಳಕೆಗೆ ಷರತ್ತು:
ಸುಪ್ರೀಂಕೋರ್ಟ್ ಆದೇಶದಂತೆ ಹೊಸ ರಸ್ತೆ ಅಗಲೀಕರಣ ಕಾಮಗಾರಿಗಾಗಿ ಅಗತ್ಯವಿರುವ 15.39 ಎಕರೆ ಜಾಗಕ್ಕೆ 3,014 ಕೋಟಿ ರು. ಹಾಗೂ ಈಗಾಗಲೇ ಬಳಕೆ ಮಾಡಲಾದ ಭೂಮಿಗೆ ಸೇರಿದಂತೆ ಒಟ್ಟು 3,414 ಕೋಟಿ ರು. ಮೊತ್ತದ ಟಿಡಿಆರ್ ನೀಡಬೇಕಿದೆ. ಅದರಂತೆ ಎರಡು ವಿಭಾಗದಲ್ಲಿ ಟಿಡಿಆರ್ ಅನ್ನು ಸುಪ್ರೀಂಕೋರ್ಟ್‌ಗೆ ಜಮಾ ಮಾಡಲು ಮುಂದಾಗಿರುವ ರಾಜ್ಯ ಸರ್ಕಾರ, ಅದರ ಬಳಕೆಗೆ ಮಾತ್ರ ಷರತ್ತು ವಿಧಿಸುತ್ತಿದೆ. ಅದಕ್ಕೂ ನೂತನ ಕಾಯ್ದೆಯಲ್ಲಿ ಅವಕಾಶ ಮಾಡಿಕೊಡಲಾಗಿದೆ.
। ಬಿಜೆಪಿ ಸಭಾತ್ಯಾಗ ನಡುವೆ ಪಾಸ್
- ಚಾಮುಂಡೇಶ್ವರಿ ಶಾಪ ಸರ್ಕಾರಕ್ಕೆ ತಟ್ಟುತ್ತೆ: ಬೆಲ್ಲದ್ ಕಿಡಿ । ಹೇಳಿಕೆಗೆ ಕಾಂಗ್ರೆಸ್ ತೀವ್ರ ಆಕ್ರೋಶ
ಅದರಂತೆ ಅರಮನೆ ಮೈದಾನದ 472.16 ಎಕರೆ ಭೂಮಿಯನ್ನು ರಾಜ್ಯ ಸರ್ಕಾರ ಸ್ವಾಧೀನ ಪಡಿಸಿಕೊಳ್ಳುವುದಕ್ಕೆ ಸಂಬಂಧಿಸಿದಂತೆ ಬೆಂಗಳೂರು ಅರಮನೆ (ಆರ್ಜನೆ ಮತ್ತು ವರ್ಗಾವಣೆ) ಕಾಯ್ದೆ 1996 ಕುರಿತು ಸುಪ್ರೀಂಕೋರ್ಟ್‌ನಲ್ಲಿ ನಡೆಯುತ್ತಿರುವ ಪ್ರಕರಣದ ಅಂತಿಮ ತೀರ್ಪು ಬರುವವರೆಗೆ ಟಿಡಿಆರ್ ಬಳಸದಿರುವುದಕ್ಕೆ ಕಾಯ್ದೆ ಮೂಲಕ ರಕ್ಷಣೆ ಪಡೆಯಲಾಗಿದೆ. ಒಂದು ವೇಳೆ ಸುಪ್ರೀಂಕೋರ್ಟ್ 1996ರ ಕಾಯ್ದೆ ಪರವಾಗಿ ಆದೇಶಿಸಿದರೂ ಟಿಡಿಆರ್ ರದ್ದಾಗಲಿದ್ದು, ಸಂಪೂರ್ಣ ಅರಮನೆ ಭೂಮಿ ಸರ್ಕಾರದ ಸ್ವಾಧೀನಕ್ಕೆ ಬರಲಿದೆ.
ಎಲ್ಲದಕ್ಕೂ ಸರ್ಕಾರದ ವಿವೇಚನೆ:
ದುಬಾರಿ ಮೌಲ್ಯದ ಟಿಡಿಆರ್ ಪರಿಹಾರದ ಕುರಿತು ಸುಪ್ರೀಂಕೊರ್ಟ್ ಆದೇಶ ನೀಡಿದ ನಂತರ ರಸ್ತೆ ಅಗಲೀಕರಣ ಕಾಮಗಾರಿ ಕೈಬಿಡಲು ರಾಜ್ಯ ಸರ್ಕಾರ ನಿರ್ಧರಿಸಿ, ಅದಕ್ಕೆ ಪೂರಕವಾಗಿ ಸುಗ್ರೀವಾಜ್ಞೆ ಹೊರಡಿಸಿತ್ತು. ಆದರೆ, ಸುಪ್ರೀಂಕೋರ್ಟ್ ಅದಕ್ಕೆ ಅನುಮತಿಸಿರಲಿಲ್ಲ. ಹೀಗಾಗಿ ಸುಗ್ರೀವಾಜ್ಞೆಯನ್ನು ಕಾಯ್ದೆ ರೂಪಕ್ಕೆ ತರಲಾಗಿದ್ದು, ಆ ಮೂಲಕ ಅರಮನೆ ಮೈದಾನ ಭೂಮಿಯಲ್ಲಿ ಕಾಮಗಾರಿ ನಡೆಸುವುದು ಅಥವಾ ಕೈ ಬಿಡುವ ಹಕ್ಕನ್ನು ರಾಜ್ಯ ಸರ್ಕಾರ ಹೊಂದುವಂತೆ ಮಾಡಲಾಗಿದೆ.
ವಿಶ್ವದಲ್ಲೇ ದುಬಾರಿ ರಸ್ತೆಯಾಗಲಿದೆ
ನೂತನ ಕಾಯ್ದೆ ಕುರಿತಂತೆ ವಿವರಿಸಿದ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ. ಪಾಟೀಲ್, ಸುಪ್ರೀಂಕೋರ್ಟ್ ಆದೇಶದಂತೆ 3 ಸಾವಿರ ಕೋಟಿ ರು.ಗೂ ಹೆಚ್ಚಿನ ಮೌಲ್ಯದ ಟಿಡಿಆರ್ ನೀಡಬೇಕಿದೆ. ಕೇವಲ 2 ಕಿ.ಮೀ. ಉದ್ದದ ರಸ್ತೆಗೆ ಇಷ್ಟು ದೊಡ್ಡ ಮೊತ್ತದ ಟಿಡಿಆರ್ ನೀಡುವುದರಿಂದ ರಾಜ್ಯ ಸರ್ಕಾರದ ಆರ್ಥಿಕತೆ ಹಾಗೂ ಭವಿಷ್ಯದ ಕಾಮಗಾರಿಗಳ ಮೇಲೆ ಪರಿಣಾಮ ಬೀರಲಿದೆ. ಅಲ್ಲದೆ, ಇದು ವಿಶ್ವದಲ್ಲೇ ಅತಿ ದುಬಾರಿ ರಸ್ತೆಯಾಗಿ ಪರಿಣಮಿಸಲಿದೆ.
ಅಲ್ಲದೆ, ಈಗಾಗಲೇ ಅರಮನೆ ಮೈದಾನದ ಭೂಮಿ ಸರ್ಕಾರಕ್ಕೆ ಸೇರಿದ್ದು ಎಂದು ರೂಪಿಸಲಾದ ಕಾಯ್ದೆಗೆ ಹೈಕೋರ್ಟ್ ಮಾನ್ಯತೆ ನೀಡಿದ್ದು, ಸುಪ್ರೀಂಕೊರ್ಟ್‌ನಲ್ಲಿ ಪ್ರಕರಣ ವಿಚಾರಣೆಯಲ್ಲಿದೆ. ಹೀಗಾಗಿ 472.16 ಎಕರೆ ಭೂಮಿಯು ತಾಂತ್ರಿಕವಾಗಿ ಸರ್ಕಾರಕ್ಕೇ ಸೇರಿದ್ದಾಗಿದೆ. ಅದರ ನಡುವೆ ಸುಪ್ರೀಂಕೋರ್ಟ್ ಟಿಡಿಆರ್ ನೀಡುವಂತೆ ಆದೇಶಿಸಿದ್ದು, ಅದನ್ನು ನೀಡದಿದ್ದರೆ ನ್ಯಾಯಾಂಗ ನಿಂದನೆಯಾಗಲಿದೆ. ಹೀಗಾಗಿ ಅದರಿಂದ ತಪ್ಪಿಸಿಕೊಳ್ಳಲು ಹಾಗೂ ಭವಿಷ್ಯದ ದುಷ್ಪರಿಣಾಮಗಳಿಂದ ಬಚಾವಾಗಲು ನೂತನ ಕಾಯ್ದೆ ತರಲಾಗಿದೆ ಎಂದು ವಿವರಿಸಿದರು.
ದ್ವೇಷದ ರಾಜಕಾರಣ:
ನೂತನ ಕಾಯ್ದೆಗೆ ವಿರೋಧ ವ್ಯಕ್ತಪಡಿಸಿದ ಬಿಜೆಪಿ ಸದಸ್ಯರು, ರಾಜ್ಯ ಸರ್ಕಾರ ಅದರಲ್ಲೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮೈಸೂರು ರಾಜಮನೆತನದ ವಿರುದ್ಧ ದ್ವೇಷದ ರಾಜಕಾರಣ ಮಾಡುತ್ತಿದೆ. ರಾಜ ಮನೆತನದ ವಾರಸುದಾರರು ಈಗ ಬಿಜೆಪಿ ಸಂಸದರಾಗಿದ್ದಾರೆ. ಹೀಗಾಗಿಯೇ ಟಿಡಿಆರ್ ನೀಡಲು ಮುಂದಾಗದೇ, ಕಾಯ್ದೆ ಜಾರಿಗೆ ತರುತ್ತದೆ ಎಂದರು.
ಮಾತಿನ ನಡುವೆ ಬಿಜೆಪಿ ಉಪನಾಯಕ ಅರವಿಂದ್ ಬೆಲ್ಲದ್, ಚಾಮುಂಡೇಶ್ವರಿ ಶಾಪ ನಿಮಗೆ ತಟ್ಟುತ್ತದೆ ಎಂದರು. ಅದಕ್ಕೆ ಆಕ್ರೋಶ ವ್ಯಕ್ತಪಡಿಸಿದ ಕಾಂಗ್ರೆಸ್ ಶಾಸಕರು, ಬಿಜೆಪಿ ವಿರುದ್ಧ ಮುಗಿಬಿದ್ದರು. ಕೊನೆಗೆ ಸ್ಪೀಕರ್ ಯು.ಟಿ. ಖಾದರ್ ಮಧ್ಯಪ್ರವೇಶಿಸಿ, ಕಾಯ್ದೆಯನ್ನು ಧ್ವನಿಮತಕ್ಕೆ ಹಾಕುವುದಾಗಿ ತಿಳಿಸಿದರು. ಅಂತಿಮವಾಗಿ ಬಿಜೆಪಿ ಶಾಸಕರು ಕಾಯ್ದೆ ವಿರೋಧಿಸಿ ಸಭಾತ್ಯಾಗ ಮಾಡಿದರು. ಅದರ ನಡುವೆಯೇ ಕಾಯ್ದೆಗೆ ಅನುಮೋದನೆ ನೀಡಲಾಯಿತು.