ಹಾಲಿನ ದರ ಲೀ.ಗೆ ₹10 ಹೆಚ್ಚಿಸಲು ರೈತರಿಂದ ಬೇಡಿಕೆ ಇದೆ : ಸಚಿವ ಕೆ.ವೆಂಕಟೇಶ್‌

| N/A | Published : Mar 06 2025, 09:47 AM IST

Milk Packet

ಸಾರಾಂಶ

ಹಾಲು ಉತ್ಪಾದನೆ ವೆಚ್ಚ ಹೆಚ್ಚಳ ಹಿನ್ನೆಲೆಯಲ್ಲಿ ರೈತರು ಹಾಲಿನ ಖರೀದಿ ದರವನ್ನು 10 ರು.ನಷ್ಟು ಹೆಚ್ಚಿಸುವಂತೆ ಬೇಡಿಕೆ ಇಡಲಾಗಿದೆ. ಈ ಹಿನ್ನೆಲೆಯಲ್ಲಿ ಹಾಲಿನ ದರ ಹೆಚ್ಚಿಸುವ ವಿಷಯ ಸರ್ಕಾರದ ಪರಿಶೀಲನೆಯಲ್ಲಿದೆ ಎಂದು ಪಶು ಸಂಗೋಪನೆ ಮತ್ತು ರೇಷ್ಮೆ ಸಚಿವ ಕೆ.ವೆಂಕಟೇಶ್‌ ತಿಳಿಸಿದರು.

 ವಿಧಾನ ಪರಿಷತ್‌ : ಹಾಲು ಉತ್ಪಾದನೆ ವೆಚ್ಚ ಹೆಚ್ಚಳ ಹಿನ್ನೆಲೆಯಲ್ಲಿ ರೈತರು ಹಾಲಿನ ಖರೀದಿ ದರವನ್ನು 10 ರು.ನಷ್ಟು ಹೆಚ್ಚಿಸುವಂತೆ ಬೇಡಿಕೆ ಇಡಲಾಗಿದೆ. ಈ ಹಿನ್ನೆಲೆಯಲ್ಲಿ ಹಾಲಿನ ದರ ಹೆಚ್ಚಿಸುವ ವಿಷಯ ಸರ್ಕಾರದ ಪರಿಶೀಲನೆಯಲ್ಲಿದೆ ಎಂದು ಪಶು ಸಂಗೋಪನೆ ಮತ್ತು ರೇಷ್ಮೆ ಸಚಿವ ಕೆ.ವೆಂಕಟೇಶ್‌ ತಿಳಿಸಿದರು.

ಡಾ. ಉಮಾಶ್ರೀ, ಡಾ.ಎಂ.ಜಿ. ಮುಳೆ ಹಾಗೂ ಹೇಮಲತಾ ನಾಯಕ್‌ ಅವರ ಪ್ರಶ್ನೆಗೆ ಉತ್ತರಿಸಿದ ಅವರು, ಹಾಲಿನ ಉತ್ಪಾದನೆ ವೆಚ್ಚ ಸಹ ಜಾಸ್ತಿಯಾಗಿದೆ. ಹಾಲಿನ ಖರೀದಿ ದರ ಹೆಚ್ಚಿಸಬೇಕೆಂಬ ಬೇಡಿಕೆ ಸರಿಯಾಗಿಯೇ ಇದೆ. ದರ ಹೆಚ್ಚಳ ಸಂಬಂಧ ಈಗಾಗಲೇ ಚರ್ಚೆ ನಡೆಸಲಾಗಿದೆ. ಅಂತಿಮವಾಗಿ ಸರ್ಕಾರ ನಿರ್ಧಾರ ಕೈಗೊಳ್ಳಲಿದೆ ಎಂದರು.

656.07 ಕೋಟಿ ರು. ಬಾಕಿ: ಹಾಲು ಉತ್ಪಾದಕರಿಗೆ ನೀಡಬೇಕಾದ ಪ್ರೋತ್ಸಾಹ ಧನ ಮೊತ್ತ 656.07 ಕೋಟಿ ಬಾಕಿ ಉಳಿದಿದೆ. ಈ ಪೈಕಿ ಸಾಮಾನ್ಯ ವರ್ಗದವರಿಗೆ 613.58 ಕೋಟಿ ರು., ಪ.ಜಾತಿಗೆ 18.29 ಕೋಟಿ ರು., ಪರಿಶಿಷ್ಟ ಪಂಗಡಕ್ಕೆ 24.20 ಕೋಟಿ ರು. ಬಾಕಿ ಇದೆ. 90,4547 ಫಲಾನುಭವಿಗಳಿಗೆ ನಾಲ್ಕೈದು ತಿಂಗಳಿಂದ ಪ್ರೋತ್ಸಾಹ ಧನ ಬಾಕಿ ಇದೆ. ಪ್ರೋತ್ಸಾಹ ಧನ ನೀಡಲು ಹೆಚ್ಚುವರಿ ಅನುದಾನ ಬೇಕಿದೆ. ಅನುದಾನ ಬಿಡುಗಡೆಗೆ ಆರ್ಥಿಕ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಅನುದಾನ ಬಿಡುಗಡೆಯಾದ ನಂತರ ಬಾಕಿ ಪಾವತಿಸಲಾಗುವುದು ಎಂದು ಸಚಿವರು ವಿವರಿಸಿದರು.

ಹೆಚ್ಚು ಉತ್ಪಾದನೆ ಕಾರಣ ಬಾಕಿ: ರಾಜ್ಯದಲ್ಲಿ ಹಾಲಿನ ಉತ್ಪಾದನೆ ಹೆಚ್ಚಿರುವ ಕಾರಣ ಬಾಕಿ ಹೆಚ್ಚಾಗುತ್ತಾ ಬಂದಿದೆ. ಪ್ರೋತ್ಸಾಹ ಧನ ನೀಡಲು ಬಜೆಟ್‌ನಲ್ಲಿ ನಿಗದಿಪಡಿಸಿದ್ದಕ್ಕಿಂತ ಹೆಚ್ಚು ಹಣ ಕೊಡುವಂಥ ಸ್ಥಿತಿ ಇದೆ. ಸರ್ಕಾರ ಬಜೆಟ್‌ನಲ್ಲಿ ಹೆಚ್ಚಿನ ಹಣ ನಿಗದಿ ಮಾಡಿದರೆ ಬಾಕಿ ಪಾವತಿಸಬಹುದು ಎಂದು ಸಚಿವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.