ಏಪ್ರಿಲಲ್ಲಿ ಬಿಬಿಎಂಪಿಗೆ ₹1,417 ಕೋಟಿ ಆಸ್ತಿ ತೆರಿಗೆ

| N/A | Published : May 04 2025, 08:20 AM IST

BBMP latest news today photo
ಏಪ್ರಿಲಲ್ಲಿ ಬಿಬಿಎಂಪಿಗೆ ₹1,417 ಕೋಟಿ ಆಸ್ತಿ ತೆರಿಗೆ
Share this Article
  • FB
  • TW
  • Linkdin
  • Email

ಸಾರಾಂಶ

ಏಪ್ರಿಲಲ್ಲಿ ಬಿಬಿಎಂಪಿಗೆ ₹1,417 ಕೋಟಿ ಆಸ್ತಿ ತೆರಿಗೆ ಆರ್ಥಿಕ ವರ್ಷದ ಆರಂಭದಲ್ಲೇ ಉತ್ತಮ ಸಂಗ್ರಹ । 22 ಲಕ್ಷದಲ್ಲಿ 8 ಲಕ್ಷ ಆಸ್ತಿ ಮಾಲೀಕರಿಂದ ಪಾವತಿ

  ಬೆಂಗಳೂರು : ಬಿಬಿಎಂಪಿಯು 2025-26ನೇ ಸಾಲಿನ ಆರ್ಥಿಕ ವರ್ಷದ ಮೊದಲ ಒಂದೇ ಒಂದು ತಿಂಗಳಿನಲ್ಲಿ ಬರೋಬ್ಬರಿ ₹1,417 ಕೋಟಿ ಆಸ್ತಿ ತೆರಿಗೆ ಸಂಗ್ರಹಿಸಿದೆ. ನಗರದಲ್ಲಿ ಸುಮಾರು 22 ಲಕ್ಷ ಆಸ್ತಿಗಳು ತೆರಿಗೆ ವ್ಯಾಪ್ತಿಗೆ ಒಳಪಟ್ಟಿವೆ. ಈ ಪೈಕಿ ಸುಮಾರು 8 ಲಕ್ಷ ಆಸ್ತಿ ಮಾಲೀಕರು ಏಪ್ರಿಲ್‌ನಲ್ಲಿಯೇ ಆಸ್ತಿ ತೆರಿಗೆ ಪಾವತಿ ಮಾಡಿದ್ದಾರೆ. ಇದರಿಂದ ಆಸ್ತಿ ತೆರಿಗೆ ಸಂಗ್ರಹ ಮೊತ್ತ ₹1,417 ಕೋಟಿಗೆ ಏರಿಕೆಯಾಗಿದೆ.

2025-26ನೇ ಸಾಲಿನಲ್ಲಿ ಒಟ್ಟು ₹5,716 ಕೋಟಿ ಆಸ್ತಿ ತೆರಿಗೆ ಸಂಗ್ರಹಿಸುವ ಗುರಿ ಹಾಕಿಕೊಂಡಿದ್ದು, ಏಪ್ರಿಲ್‌ ಒಂದೇ ತಿಂಗಳಿನಲ್ಲಿ ₹1,417 ಕೋಟಿ ಸಂಗ್ರಹಿಸಿದೆ. ಶೇ.25ರಷ್ಟು ಗುರಿ ಸಾಧನೆ ಮಾಡಿದ್ದು, ಮುಂದಿನ 11 ತಿಂಗಳಿನಲ್ಲಿ ಇನ್ನೂಳಿದ ₹4,299 ಕೋಟಿ ಸಂಗ್ರಹಿಸಬೇಕಾಗಿದೆ. ಕಳೆದ ವರ್ಷ ಆಸ್ತಿ ಬಾಕಿ ಉಳಿಸಿಕೊಂಡವರಿಗೆ ಬಡ್ಡಿ ಹಾಗೂ ದಂಡ ಮನ್ನಾಗೊಳಿಸುವ ಒನ್-ಟೈಮ್ ಸೆಟ್ಲ್‌ಮೆಂಟ್ ಯೋಜನೆ ಜಾರಿ ಮಾಡಲಾಗಿತ್ತು. ಆದರೂ ಏಪ್ರಿಲ್‌ ಅಂತ್ಯಕ್ಕೆ ಕೇವಲ ₹670 ಕೋಟಿ ಸಂಗ್ರಹವಾಗಿತ್ತು. ಈ ಬಾರಿ ಆಸ್ತಿ ತೆರಿಗೆಯೊಂದಿಗೆ ಘನತ್ಯಾಜ್ಯ ಶುಲ್ಕ ಸಂಗ್ರಹ ಮಾಡುತ್ತಿರುವುದು ₹1 ಸಾವಿರ ಕೋಟಿಗೂ ಅಧಿಕ ಆಸ್ತಿ ತೆರಿಗೆ ಸಂಗ್ರಹಕ್ಕೆ ಕಾರಣವಾಗಿದೆ.

 ಜೂನ್‌ನಿಂದ ಬಾಕಿ

ವಸೂಲಿಗೆ ಕ್ರಮ ರಾಜ್ಯ ಸರ್ಕಾರವು ಆಸ್ತಿ ತೆರಿಗೆಯ ಮೇಲೆ ನೀಡುವ ಶೇ.5 ರಷ್ಟು ರಿಯಾಯಿತಿ ಅವಧಿಯನ್ನು ಮೇ ಅಂತ್ಯದ ವರೆಗೆ ವಿಸ್ತರಣೆ ಮಾಡಲಾಗಿದೆ. ಹೀಗಾಗಿ, ಮೇ ಅಂತ್ಯದ ವರೆಗೆ ಸಂಗ್ರಹಿಸುವ ಆಸ್ತಿ ತೆರಿಗೆ ಸಂಗ್ರಹಕ್ಕೆ ಒತ್ತಡವಿಲ್ಲದ ಕ್ರಮ ಕೈಗೊಳ್ಳಲಾಗುವುದು. ಜೂನ್‌ನಿಂದ ಆಸ್ತಿ ತೆರಿಗೆ ಬಾಕಿದಾರರ ಪಟ್ಟಿಯನ್ನು ಸಿದ್ದಪಡಿಸಿಕೊಂಡು ವಸೂಲಿಗೆ ಕ್ರಮ ಕೈಗೊಳ್ಳಲಾಗುವುದು. ಆಗ ಆಸ್ತಿ ಸೀಜ್‌ ಮಾಡುವುದು. ಹರಾಜು ಹಾಕುವುದು ಸೇರಿದಂತೆ ಮೊದಲಾದ ಕ್ರಮ ಕೈಗೊಳ್ಳಲಾಗುವುದು ಎಂದು ಪಾಲಿಕೆ ಕಂದಾಯ ವಿಭಾಗದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಕಳೆದ ವರ್ಷ ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡವರಿಗೆ ಒಟಿಎಸ್‌ ಸೌಲಭ್ಯ ನೀಡಿದರೂ ನಗರದಲ್ಲಿ 3.75 ಲಕ್ಷ ಆಸ್ತಿ ಮಾಲೀಕರು ₹836 ಕೋಟಿ ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡಿದ್ದಾರೆ.