ಬೇಲೆಕೇರಿ ಅದಿರು ಕಳವು ಕೇಸ್‌ - ಸತೀಶ್‌ ಸೈಲ್‌ಗೆ ಎಷ್ಟು ವರ್ಷ ಜೈಲ್‌? ಇಂದು ಪ್ರಕಟ

| Published : Oct 26 2024, 07:12 AM IST

Satish Sail

ಸಾರಾಂಶ

ಬೇಲೆಕೇರಿ ಅದಿರು ನಾಪತ್ತೆ ಪ್ರಕರಣ ಸಂಬಂಧ ಶಾಸಕ ಸತೀಶ್‌ ಸೈಲ್‌ ಸೇರಿ ಇತರೆ ಅಪರಾಧಿಗಳ ವಿರುದ್ಧದ ಶಿಕ್ಷೆ ಪ್ರಮಾಣ ಘೋಷಣೆಯನ್ನು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಶನಿವಾರಕ್ಕೆ ಮುಂದೂಡಿದೆ.

ಬೆಂಗಳೂರು : ಬೇಲೆಕೇರಿ ಅದಿರು ನಾಪತ್ತೆ ಪ್ರಕರಣ ಸಂಬಂಧ ಶಾಸಕ ಸತೀಶ್‌ ಸೈಲ್‌ ಸೇರಿ ಇತರೆ ಅಪರಾಧಿಗಳ ವಿರುದ್ಧದ ಶಿಕ್ಷೆ ಪ್ರಮಾಣ ಘೋಷಣೆಯನ್ನು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಶನಿವಾರಕ್ಕೆ ಮುಂದೂಡಿದೆ.

ಶುಕ್ರವಾರ ಶಿಕ್ಷೆಯ ಪ್ರಮಾಣ ಸಂಬಂಧ ವಾದ-ಪ್ರತಿವಾದ ನಡೆದ ಹಿನ್ನೆಲೆಯಲ್ಲಿ ತೀರ್ಪನ್ನು ಶನಿವಾರಕ್ಕೆ ಮುಂದೂಡಲಾಗಿದೆ.

ಸಿಬಿಐ ಪರ ಸರ್ಕಾರಿ ಅಭಿಯೋಜಕಿ ಕೆ.ಎಸ್‌.ಹೇಮಾ ವಾದ ಮಂಡಿಸಿ, ಅಪರಾಧಿಗಳಿಗೆ ಜೈಲು ಶಿಕ್ಷೆಯ ಜತೆಗೆ ದಂಡ ವಿಧಿಸಬೇಕು. ಅಪರಾಧಿಗಳು 3,100 ಮೆಟ್ರಿಕ್ ಟನ್ ಅದಿರು ಕಳ್ಳಸಾಗಣೆ ಮಾಡಿದ್ದಾರೆ. ಇದರಿಂದ ಸರ್ಕಾರದ ಬೊಕ್ಕಸಕ್ಕೆ ಸುಮಾರು 250 ಕೋಟಿ ರು. ನಷ್ಟವಾಗಿದೆ. ಅಪರಾಧಿಗಳು ಅರ್ಥಿಕ ಅಪರಾಧ ಎಸಗಿರುವುದರಿಂದ ಗರಿಷ್ಠ ಜೈಲು ಶಿಕ್ಷೆಯ ಜತೆಗೆ ದಂಡ ವಿಧಿಸಬೇಕು ಎಂದು ಮನವಿ ಮಾಡಿದರು.

ಸತೀಶ್‌ ಸೈಲ್‌ ಪರ ವಕೀಲ ಮೂರ್ತಿ ಡಿ.ನಾಯ್ಕ್ ವಾದ ಮಂಡಿಸಿ, ತಮ್ಮ ಕಕ್ಷಿದಾರರಿಗೆ ಅನಾರೋಗ್ಯ ಸಮಸ್ಯೆಗಳಿದ್ದು, ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಜಾಮೀನು ಸಹ ಇದೇ ಆಧಾರದ ಮೇಲೆ ಪಡೆಯಲಾಗಿತ್ತು. ಈ ಸಂಬಂಧ ವೈದ್ಯಕೀಯ ದಾಖಲೆಗಳನ್ನು ಸಲ್ಲಿಕೆ ಮಾಡಲಾಗಿದೆ. ಪ್ರಕರಣದಲ್ಲಿ ವೈಯಕ್ತಿಕವಾಗಿ ಸತೀಶ್‌ ಸೈಲ್‌ ಪಾತ್ರ ಇಲ್ಲ. ಕಂಪನಿಯ ಮೂಲಕ ರಫ್ತು ಆಗಿದೆ. ಪ್ರಕರಣದಲ್ಲಿ ಕಕ್ಷಿದಾರನ ಪಾತ್ರ ಎಷ್ಟಿದೆ ಎಂಬುದನ್ನು ಸಿಬಿಐ ಸ್ಪಷ್ಟಪಡಿಸಿಲ್ಲ. ಭ್ರಷ್ಟಾಚಾರ ನಿಗ್ರಹ ಕಾಯ್ದೆಯಡಿ ಗರಿಷ್ಠ ಮೂರು ವರ್ಷಗಳಿದೆ. ಹೀಗಾಗಿ ಮೂರು ವರ್ಷಕ್ಕಿಂತ ಕಡಿಮೆ ಶಿಕ್ಷೆ, ದಂಡ ವಿಧಿಸಬಹುದು ಎಂದರು.

ತನಿಖೆ ನಡೆಸಿದಾಗ ಸತೀಶ್‌ ಸೈಲ್ ಮಾಲೀಕತ್ವದ ಮಲ್ಲಿಕಾರ್ಜುನ ಶಿಪ್ಪಿಂಗ್‌ ಪ್ರೈ.ಲಿ. ಸುಮಾರು 7.23 ಲಕ್ಷ ಟನ್ ಮೆಟ್ರಿಕ್ ಅದಿರನ್ನು ಬೇಲೆಕೇರಿ ಮೂಲಕ ವಿದೇಶಕ್ಕೆ ರಫ್ತು ಮಾಡಿರುವುದು ತನಿಖೆಯಲ್ಲಿ ಕಂಡುಬಂದಿದೆ. ವಿಚಾರಣೆ ವೇಳೆ ಆರೋಪ ಸಾಬೀತಾಗಿದೆ. ಈ ಹಿನ್ನೆಲೆಯಲ್ಲಿ ನ್ಯಾಯಾಲಯವು ಅಪರಾಧಿಗಳೆಂದು ಪರಿಗಣಿಸಿದೆ.