ಮುಂದಿನ ವರ್ಷ ಕಾರ್ಯಾರಂಭ ಮಾಡುವ ನಿರೀಕ್ಷೆಯಿರುವ ನಮ್ಮ ಮೆಟ್ರೋ ನೀಲಿ ಮಾರ್ಗಕ್ಕಾಗಿ (ಕೆಂಪೆಗೌಡ ವಿಮಾನ ನಿಲ್ದಾಣ ಸಂಪರ್ಕಿಸುವ ಮಾರ್ಗ) ಭಾರತ್‌ ಅರ್ಥ್‌ ಮೂವರ್ಸ್‌ ಲಿಮಿಟೆಡ್‌ ಕಂಪನಿಯು 2ನೇ ಬಾರಿಗೆ ಹೆಚ್ಚುವರಿಯಾಗಿ ಆರು ಅತ್ಯಾಧುನಿಕ ಚಾಲಕ ರಹಿತ ರೈಲು ಒದಗಿಸುವ ಗುತ್ತಿಗೆಯನ್ನು ಪಡೆದಿದೆ.

 ಬೆಂಗಳೂರು : ಮುಂದಿನ ವರ್ಷ ಕಾರ್ಯಾರಂಭ ಮಾಡುವ ನಿರೀಕ್ಷೆಯಿರುವ ನಮ್ಮ ಮೆಟ್ರೋ ನೀಲಿ ಮಾರ್ಗಕ್ಕಾಗಿ (ಕೆಂಪೆಗೌಡ ವಿಮಾನ ನಿಲ್ದಾಣ ಸಂಪರ್ಕಿಸುವ ಮಾರ್ಗ) ಭಾರತ್‌ ಅರ್ಥ್‌ ಮೂವರ್ಸ್‌ ಲಿಮಿಟೆಡ್‌ (ಬಿಇಎಂಎಲ್‌) ಕಂಪನಿಯು 2ನೇ ಬಾರಿಗೆ ಹೆಚ್ಚುವರಿಯಾಗಿ ಆರು ಅತ್ಯಾಧುನಿಕ ಚಾಲಕ ರಹಿತ ರೈಲು ಒದಗಿಸುವ ಗುತ್ತಿಗೆಯನ್ನು ಪಡೆದಿದೆ.

ಪ್ರಕಟಣೆ ಹೊರಡಿಸಿರುವ ಕಂಪನಿ

ಈ ಸಂಬಂಧ ಪ್ರಕಟಣೆ ಹೊರಡಿಸಿರುವ ಕಂಪನಿಯು, ಹೆಚ್ಚುವರಿಯಾಗಿ ಬಿಎಂಆರ್‌ಸಿಎಲ್‌ಗೆ ₹414 ಕೋಟಿ ಮೊತ್ತದ ರೈಲುಸೆಟ್‌ಗಳನ್ನು ಒದಗಿಸುವ ಗುತ್ತಿಗೆ ಪಡೆದಿದೆ. ಈ ಮೂಲಕ ಬಿಎಂಆರ್‌ಸಿಲ್‌ಗೆ ಒಟ್ಟೂ 66 ರೈಲು (396 ಬೋಗಿ) ಒದಗಿಸುವ ಒಪ್ಪಂದ ಆದಂತಾಗಿದೆ ಎಂದು ಬಿಇಎಂಎಲ್‌ ‘ಎಕ್ಸ್‌’ ನಲ್ಲಿ ತಿಳಿಸಿದೆ.

 ಗುಲಾಬಿ ಮತ್ತು ನೀಲಿ ಮಾರ್ಗಕ್ಕೆ ಅಗತ್ಯವಿರುವ 318 ಕೋಚ್‌ಗಳ ಪೂರೈಕೆ

ಈ ಮೊದಲು ನಮ್ಮ ಮೆಟ್ರೋದ ಗುಲಾಬಿ ಮತ್ತು ನೀಲಿ ಮಾರ್ಗಕ್ಕೆ ಅಗತ್ಯವಿರುವ 318 ಕೋಚ್‌ಗಳ (53 ರೈಲು) ಪೂರೈಕೆಯ ₹3,177 ಕೋಟಿ ವೆಚ್ಚದ ಟೆಂಡರ್‌ ಅನ್ನು ಬಿಇಎಂಎಲ್‌ ತನ್ನದಾಗಿಸಿಕೊಂಡಿತ್ತು. ಸಿಲ್ಕ್ ಬೋರ್ಡ್‌ - ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ (ನೀಲಿ ಮಾರ್ಗ) ಹಾಗೂ ಕಾಳೇನ ಅಗ್ರಹಾರ-ನಾಗವಾರ ಮಾರ್ಗಕ್ಕೆ (ಗುಲಾಬಿ ಮಾರ್ಗ) ಸೇರಿ ಒಟ್ಟು 73 ಕಿಮೀಗೆ ಅಗತ್ಯವಿರುವ ಕೋಚ್‌ಗಳನ್ನು ಬಿಇಎಂಎಲ್‌ ಪೂರೈಸುವ ಒಪ್ಪಂದ ಇದಾಗಿತ್ತು. ಇದರ ಬಳಿಕ ಕಳೆದ ಮಾರ್ಚ್‌ 28ರಂದು ಹೆಚ್ಚುವರಿಯಾಗಿ 42 ಬೋಗಿಗಳನ್ನು ಒದಗಿಸುವ ಸಂಬಂಧ ₹405 ಕೋಟಿ ಮೊತ್ತದ ಒಪ್ಪಂದವಾಗಿತ್ತು. ಇದೀಗ ಪುನಃ 6 ರೈಲುಗಳ ಪೂರೈಕೆಗೆ ಒಪ್ಪಂದವಾಗಿದೆ ಎಂದು ಬಿಇಎಂಎಲ್‌ ತಿಳಿಸಿದೆ. ಚಾಲಕ ರಹಿತ ರೈಲುಗಳ ಮೆಟ್ರೋ ಕೋಚ್‌ಗಳ ವಿನ್ಯಾಸ, ತಯಾರಿಕೆ, ಪೂರೈಕೆ, ಸ್ಥಾಪನೆ, ಪರೀಕ್ಷೆ, ಕಾರ್ಯಾರಂಭ ಹಾಗೂ 15 ವರ್ಷಗಳವರೆಗೆ ಸಮಗ್ರ ನಿರ್ವಹಣೆ, ಸಿಬ್ಬಂದಿಗೆ ಅಗತ್ಯ ತರಬೇತಿ ನೀಡಬೇಕೆಂದು ಬಿಇಎಂಎಲ್‌ಗೆ ಷರತ್ತು ವಿಧಿಸಲಾಗಿದೆ.