ಸಾರಾಂಶ
ಕಟ್ಟಡ ಕಾರ್ಮಿಕರ ಆರೋಗ್ಯ ತಪಾಸಣೆಯ ನೆಪದಲ್ಲಿ ಕಾರ್ಮಿಕ ಸಚಿವ ಸಂತೋಷ್ ಲಾಡ್ ಅವರು ಕಳೆದ ಎರಡು ವರ್ಷಗಳಿಂದ ನೂರಾರು ಕೋಟಿ ರು. ಅವ್ಯವಹಾರ ನಡೆಸಿದ್ದಾರೆ ಎಂದು ಆಪಾದಿಸಿರುವ ವಿಧಾನಪರಿಷತ್ತಿನ ಬಿಜೆಪಿ ಸದಸ್ಯ ಕೆ.ಎಸ್.ನವೀನ್
ಬೆಂಗಳೂರು : ಕಟ್ಟಡ ಕಾರ್ಮಿಕರ ಆರೋಗ್ಯ ತಪಾಸಣೆಯ ನೆಪದಲ್ಲಿ ಕಾರ್ಮಿಕ ಸಚಿವ ಸಂತೋಷ್ ಲಾಡ್ ಅವರು ಕಳೆದ ಎರಡು ವರ್ಷಗಳಿಂದ ನೂರಾರು ಕೋಟಿ ರು. ಅವ್ಯವಹಾರ ನಡೆಸಿದ್ದಾರೆ ಎಂದು ಆಪಾದಿಸಿರುವ ವಿಧಾನಪರಿಷತ್ತಿನ ಬಿಜೆಪಿ ಸದಸ್ಯ ಕೆ.ಎಸ್.ನವೀನ್ ಅವರು ಕೂಡಲೇ ಲಾಡ್ ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದ್ದಾರೆ.
ಅಲ್ಲದೆ, ಈ ಅವ್ಯವಹಾರವನ್ನು ಸಿಬಿಐ ತನಿಖೆಗೆ ವಹಿಸಬೇಕು ಎಂದೂ ಅವರು ಆಗ್ರಹಿಸಿದ್ದಾರೆ.
ಗುರುವಾರ ಪಕ್ಷದ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಸಚಿವ ಲಾಡ್ ಕಟ್ಟಡ ಕಾರ್ಮಿಕರ ಕಲ್ಯಾಣ ನಿಧಿಯಿಂದ ಕಾರ್ಮಿಕರ ಆರೋಗ್ಯ ತಪಾಸಣೆಯ ಹೆಸರಿನಲ್ಲಿ ಸುಳ್ಳು ತಪಾಸಣೆಯ ದಾಖಲೆಗಳನ್ನು ನೀಡಿದ್ದಾರೆ. ತಪಾಸಣೆ ನಡೆಸದೇ ರಾಜ್ಯದಿಂದ ಸುಮಾರು 300 ಕೋಟಿ ರು.ಗೂ ಅಧಿಕ ಹಣವನ್ನು ಈ ಸರ್ಕಾರ ಲೂಟಿ ಹೊಡೆದಿದೆ ಎಂದು ಆರೋಪಿಸಿದರು.
ಲಾಡ್ ವಿರುದ್ಧದ ಭ್ರಷ್ಟಾಚಾರ ಆರೋಪ ಸಂಬಂಧ ಹಲವು ದಾಖಲೆಗಳನ್ನು ಇದೇ ವೇಳೆ ಬಿಡುಗಡೆಗೊಳಿಸಿದ ನವೀನ್, 1982ರಲ್ಲಿ ಶ್ರಮಜೀವಿ ಕಾರ್ಮಿಕ ಕಳ್ಳನಲ್ಲ ಎಂಬ ಸಂದೇಶ ಸಾರುವ ‘ಕಾರ್ಮಿಕ ಕಳ್ಳನಲ್ಲ’ ಎಂಬ ಸಿನಿಮಾ ಬಿಡುಗಡೆಯಾಗಿತ್ತು. ಆದರೆ, ಇಂದಿನ ಕಾಂಗ್ರೆಸ್ ಸರ್ಕಾರದಲ್ಲಿ ಕಾರ್ಮಿಕ ಕಳ್ಳನಲ್ಲ, ಕಾರ್ಮಿಕ ಸಚಿವ ಕಳ್ಳನಾ ಎಂದು ಸಂತೋಷ್ ಲಾಡ್ ವಿರುದ್ಧ ವಾಗ್ದಾಳಿ ನಡೆಸಿದರು.
ಇಡ್ಲಿ, ಸಾಂಬಾರ್ ರೀತಿ ದರ ನಿಗದಿಗೊಳಿಸಿ ಅವ್ಯವಹಾರ:
ಕಟ್ಟಡ ಕಾರ್ಮಿಕರ ನಿಗಮಕ್ಕೆ ಸಾವಿರಾರು ಕೋಟಿ ರು. ಹಣವನ್ನು ಸೆಸ್ ಮೂಲಕ ಸಂಗ್ರಹಿಸಲಾಗುತ್ತದೆ. ಈ ಹಣವನ್ನು ಕಟ್ಟಡ ಕಾರ್ಮಿಕರ ಕಲ್ಯಾಣಕ್ಕೆ ಬಳಸಲಾಗುತ್ತದೆ. ಈ ಯೋಜನೆಯಲ್ಲಿ ಕಟ್ಟಡ ಕಾರ್ಮಿಕರಿಗೆ 20 ವಿಧದ ಆರೋಗ್ಯ ತಪಾಸಣೆ ಮಾಡಿಸಲು ಮಂಡಳಿ ನಿರ್ಧರಿಸಿದೆ. ಚಿತ್ರದುರ್ಗ ಜಿಲ್ಲೆಯಲ್ಲಿ ಎರಡು ವರ್ಷಗಳ ಅವಧಿಯಲ್ಲಿ 67 ಸಾವಿರ ಕಟ್ಟಡ ಕಾರ್ಮಿಕರ ಆರೋಗ್ಯ ತಪಾಸಣೆಗೆ ಒಟ್ಟು 19.74 ಕೋಟಿ ರು. ಖರ್ಚು ಮಾಡಿದ್ದಾರೆ. ಅಂದರೆ, ಹೋಟೆಲ್‌ನಲ್ಲಿ ಇಡ್ಲಿ, ಸಾಂಬಾರ್ ಮತ್ತು ಚಟ್ನಿಗೆ ದರ ನಿಗದಿ ಮಾಡಿದಂತೆ ಕಾರ್ಮಿಕರ ಆರೋಗ್ಯ ತಪಾಸಣೆಗೂ ದರ ನಿಗದಿಪಡಿಸಿ ಅವ್ಯವಹಾರ ಮಾಡಿದ್ದಾರೆ ಎಂದು ಆರೋಪಿಸಿದರು.
ಪ್ರಾಣಿಗಳ ರಕ್ತ ಬಳಸಿ ವರದಿ ತಯಾರು:
ಕೇಂದ್ರ ಸರ್ಕಾರಿ ನೌಕರ ಆರೋಗ್ಯ ತಪಾಸಣಾ ವೆಚ್ಚಕ್ಕಿಂತ ಒಂದೂವರೆ ಪಟ್ಟು ಹೆಚ್ಚಿನ ವೆಚ್ಚವನ್ನು ಕಟ್ಟಡ ಕಾರ್ಮಿಕರ ಆರೋಗ್ಯ ತಪಾಸಣೆಗೆ ಪಾವತಿಸಿದ್ದಾರೆ. ಇಲ್ಲಿ ಗಮನಾರ್ಹ ಸಂಗತಿ ಎಂದರೆ, ಕಾರ್ಮಿಕರ ರಕ್ತ ತಪಾಸಣೆಗೂ ಮುನ್ನವೇ ವೈದ್ಯಕೀಯ ತಪಾಸಣೆ ಮುಗಿಸಿರುವ ಬಗ್ಗೆ ವರದಿ ನೀಡಿದ್ದಾರೆ. ರಕ್ತದ ಲ್ಯಾಬ್‌ನಲ್ಲಿ ಸಿಗುವಂತಹ ರಕ್ತ ಅಥವಾ ಪ್ರಾಣಿಗಳ ರಕ್ತ ಬಳಸಿ ಕಾರ್ಮಿಕರ ರಕ್ತ ತಪಾಸಣೆ ವರದಿ ಸಿದ್ಧಪಡಿಸಿದ್ದಾರೆ ಎಂದು ದೂರಿದರು.
ನೋಂದಾಯಿತ ಕಾರ್ಮಿಕರ ಸಂಖ್ಯೆ 6 ಸಾವಿರ:
ಕಾರ್ಮಿಕ ಇಲಾಖೆ ನೀಡಿರುವ ಮಾಹಿತಿ ಪ್ರಕಾರ, ಚಿತ್ರದುರ್ಗ ಜಿಲ್ಲೆಯ 5 ಕಾರ್ಮಿಕರ ಸಂಘಟನೆಗಳ ಪೈಕಿ ಕಟ್ಟಡ ಕಾರ್ಮಿಕ ಮಂಡಳಿಯಲ್ಲಿ ಅಧಿಕೃತವಾಗಿ ನೋಂದಣಿ ಮಾಡಿರುವ ಕಟ್ಟಡ ಕಾರ್ಮಿಕರ ಸಂಖ್ಯೆ ಕೇವಲ 6 ಸಾವಿರ. ಆದರೆ ಸರ್ಕಾರದ ಲೆಕ್ಕದಲ್ಲಿ 33,500 ಕಟ್ಟಡ ಕಾರ್ಮಿಕರ ವಿವರ ಇದೆ. ಮಂಡಳಿಯು 15 ದಿನಗಳ ಕ್ಯಾಂಪ್ ಮಾಡಿ 33,500 ಮಂದಿಗೂ ತಪಾಸಣೆ ಮಾಡಿದ್ದು, ಒಬ್ಬ ಕಾರ್ಮಿಕನಿಗೆ 2,940 ರು. ವೆಚ್ಚದಲ್ಲಿ ಆರೋಗ್ಯ ತಪಾಸಣೆ ಮಾಡಿದ್ದೇವೆ ಎಂದು ವರದಿ ನೀಡಿದ್ದಾರೆ. ತಪಾಸಣೆ ಮಾಡಿರುವ ಆಸ್ಪತ್ರೆಯ ಮುದ್ರೆ ಮತ್ತು ಸಹಿ ಇಲ್ಲ ಎಂದು ಆರೋಪಿಸಿದರು.