ಸಾರಾಂಶ
ಭಾರತವು ಎದುರಿಸುತ್ತಿರುವುದು ಕೇವಲ ಆರ್ಥಿಕ ಅಥವಾ ಸಾಮಾಜಿಕ ಅಪಾಯವಲ್ಲ, ಸಂವಿಧಾನಿಕ ಅಪಾಯವನ್ನೂ ಎದುರಿಸುತ್ತಿದೆ. ಬಿಜೆಪಿ ಆಡಳಿತವನ್ನು ನಡೆಸದೇ, ನಮ್ಮ ಗಣತಂತ್ರದ ರಚನೆಯನ್ನೇ ವ್ಯವಸ್ಥಿತವಾಗಿ ಧ್ವಂಸಗೊಳಿಸುತ್ತಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದರು.
ಅಹಮದಬಾದ್ : ಭಾರತವು ಎದುರಿಸುತ್ತಿರುವುದು ಕೇವಲ ಆರ್ಥಿಕ ಅಥವಾ ಸಾಮಾಜಿಕ ಅಪಾಯವಲ್ಲ, ಸಂವಿಧಾನಿಕ ಅಪಾಯವನ್ನೂ ಎದುರಿಸುತ್ತಿದೆ. ಬಿಜೆಪಿ ಆಡಳಿತವನ್ನು ನಡೆಸದೇ, ನಮ್ಮ ಗಣತಂತ್ರದ ರಚನೆಯನ್ನೇ ವ್ಯವಸ್ಥಿತವಾಗಿ ಧ್ವಂಸಗೊಳಿಸುತ್ತಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದರು.
ಗುಜರಾತ್‌ನ ಅಹಮದಾಬಾದ್‌ನ ಸರ್ದಾರ್ ಸ್ಮಾರಕದಲ್ಲಿ ನಡೆಯುತ್ತಿರುವ ಕಾಂಗ್ರೆಸ್ ಕಾರ್ಯಕಾರಿ ಸಮಿತಿ (ಸಿಡಬ್ಲ್ಯೂಸಿ) ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.
ಮುಕ್ತ ಹಾಗೂ ನ್ಯಾಯಯುತ ಚುನಾವಣೆಗೆ ಹೆಸರಾಗಿದ್ದ ಚುನಾವಣಾ ಆಯೋಗವು ಇಂದು ಆಡಳಿತ ಪಕ್ಷದವರ ಹಣ ಮತ್ತು ಮಾಧ್ಯಮಗಳ ದುರ್ಬಳಕೆಯಿಂದಾಗಿ ಅಸಹಾಯಕವಾಗಿ ನಿಂತಿದೆ. ಜಾರಿ ನಿರ್ದೇಶನಾಲಯ, ಸಿಬಿಐ ಮತ್ತು ಆದಾಯ ತೆರಿಗೆ ಇಲಾಖೆಗಳನ್ನು ಶಸ್ತ್ರಗಳಂತೆ ಬಳಸಲಾಗುತ್ತಿದೆ. ಇವುಗಳಿಂದ ವಿರೋಧ ಪಕ್ಷದವರನ್ನು ದ್ವೇಷದಿಂದ ಹಿಮ್ಮೆಟ್ಟಿಸಲಾಗುತ್ತಿದ್ದು, ಬಿಜೆಪಿಯ ಅಧಿಕಾರದಲ್ಲಿ ನಡೆಯುತ್ತಿರುವ ಭ್ರಷ್ಟಾಚಾರವನ್ನು ಕಡೆಗಣಿಸುವ ಜೊತೆಗೆ ಪುರಸ್ಕರಿಸಲಾಗುತ್ತಿದೆ ಎಂದರು.
ಸಂಸತ್ ಅನ್ನು ಕೇವಲ ರಬ್ಬರ್ ಸ್ಟ್ಯಾಂಪ್‌ನ ಮಟ್ಟಕ್ಕೆ ಇಳಿಸಲಾಗಿದೆ. ಯಾವುದೇ ಚರ್ಚೆಗಳಿಲ್ಲದೇ ಕಾನೂನುಗಳನ್ನು ಜಾರಿಗೊಳಿಸಲಾಗುತ್ತಿದೆ. ಭಿನ್ನಾಭಿಪ್ರಾಯಗಳನ್ನು ಹತ್ತಿಕ್ಕಿ, ಧ್ವನಿಗಳನ್ನು ಮೌನಗೊಳಿಸಲಾಗುತ್ತಿದೆ ಮತ್ತು ಸತ್ಯವನ್ನು ಅಪೇಕ್ಷಿಸಿದ್ದಕ್ಕಾಗಿ ವಿರೋಧಪಕ್ಷದ ಸಂಸದರನ್ನು ಅಮಾನತ್ತುಗೊಳಿಸಲಾಗುತ್ತಿದೆ. ಬಿಜೆಪಿಯೇತರ ರಾಜ್ಯಸರ್ಕಾರಗಳನ್ನು ಅಭದ್ರಗೊಳಿಸಲು ಸಂವಿಧಾನ ಬದ್ಧವಾಗಿ ಪಕ್ಷಾತೀತವಾಗಿರಬೇಕಾದ ರಾಜ್ಯಪಾಲರುಗಳನ್ನೂ ರಾಜಕೀಯ ಏಜೆಂಟ್ಸ್ ಗಳಾಗಿ ಬಳಸಲಾಗುತ್ತಿದೆ. ಇದು ಪ್ರಜಾಪ್ರಭುತ್ವವಲ್ಲ. ಧ್ವಜದ ಹೆಸರಿನಲ್ಲಿರುವ ನಿರಂಕುಶ ಪ್ರಭುತ್ವ ಎಂದು ಬಿಜೆಪಿ ವಿರುದ್ಧ ವಗ್ದಾಳಿ ನಡೆಸಿದರು.
ಸಂವಿಧಾನವನ್ನು ಪಾಲಿಸುವುದಾಗಿ ಹೇಳಿಕೊಳ್ಳುವ ಬಿಜೆಪಿ, ಅದರ ಆಶಯದಿಂದ ಭಯಭೀತವಾಗಿದೆ. ‘ಭಾರತ್ ಮಾತಾ ಕೀ ಜೈ’ ಎಂದು ಮಂತ್ರಿಸುವ ಅವರು, ಭಾರತದ ಆತ್ಮವನ್ನೇ ಟೊಳ್ಳುಗೊಳಿಸುತ್ತಿದ್ದಾರೆ. ಈ ಸಂವಿಧಾನವನ್ನು ಕಾಪಾಡಲು ಕಾಂಗ್ರೆಸ್ ಕಾರ್ಯಕರ್ತರಾಗಿ, ದೇಶಪ್ರೇಮಿಗಳಾಗಿ, ಭಾರತದ ನಾಗರಿಕರಾಗಿ, ಶಕ್ತಿಮೀರಿ ಹೋರಾಡುವುದು ನಮ್ಮ ಆದ್ಯ ಕರ್ತವ್ಯ. ನಮಗೆ ಸಂವಿಧಾನ ಕೇವಲ ಒಂದು ಕಾನೂನಿನ ದಾಖಲೆಯಲ್ಲ, ಅದು ನಮ್ಮ ಗಣತಂತ್ರದ ಜೀವಸೆಲೆ ಎಂದು ಹೇಳಿದರು.
ಭಾರತ ಕೇವಲ ಒಂದೇ ದನಿಯ ನೆಲವಲ್ಲ-ಇದು ಹಲವು ಸ್ವರಗಳ ಮೇಳವಾಗಿದೆ. ಕರ್ನಾಟಕದ ಜಾನಪದ ಗೀತೆಗಳಿಂದ ತಮಿಳುನಾಡಿನ ಕಾವ್ಯಗಳವರೆಗೆ, ಬಂಗಾಳದ ಹಬ್ಬಗಳಿಂದ ಗುಜರಾತಿನ ಸಂಪ್ರದಾಯದವರೆಗೆ- ನಮ್ಮ ದೇಶದ ಏಕತೆಯು ವಿವಿಧತೆಯಲ್ಲಿ ಅರಳಿದೆ. ಆದರೆ ಇಂದು, ಒಂದು ದೇಶ, ಒಂದು ಭಾಷೆ, ಒಂದು ಸಂಸ್ಕೃತಿ, ಒಂದು ಪಕ್ಷ ಎನ್ನುತ್ತಾ, ಭಾರತವನ್ನು ಸಂಕುಚಿತತೆಯತ್ತ ನೂಕುವ ಅಪಾಯಕಾರಿ ಪ್ರಯತ್ನ ನಡೆಯುತ್ತಿದೆ.
ರಾಜ್ಯಗಳು ಹೇಗೆ ವ್ಯಯಿಸಬೇಕು, ನಾಗರಿಕರು ಏನು ನುಡಿಯಬೇಕು ಮತ್ತು ಯಾರು ಒಳಪಡಲಿದ್ದಾರೆ ಎಂಬುದನ್ನು ನಿಯಂತ್ರಿಸಲಿ ಇಚ್ಛಿಸುವ ಬಿಜೆಪಿಯು ಆರ್ಥಿಕ, ಸಾಂಸ್ಕೃತಿಕ ಮತ್ತು ರಾಜಕೀಯ ಪ್ರಾಬಲ್ಯದ ಅಪಾಯಕಾರಿ ತ್ರಿಕೋನವನ್ನು ಹೇರುತ್ತಿದೆ. ಇದು ಒಕ್ಕೂಟ ವ್ಯವಸ್ಥೆಯಲ್ಲ. ಇದು ಬಲವಂತದ ಏಕರೂಪತೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ಚಿಂತನೆ ಸಂವಿಧಾನದ ಆಶಯಕ್ಕೆ ವಿರೋಧವಾಗಿದೆ. ನಮ್ಮ ಸಂಸ್ಥಾಪಕರು ಏಕರೂಪದ ಭಾರತದ ಕಲ್ಪನೆಯನ್ನು ಹೊಂದಿರಲಿಲ್ಲ. ಅವರು ಪ್ರತಿ ಭಾಷೆಯನ್ನು ಗೌರವಿಸುವ, ಪ್ರತಿಯೊಂದು ಸಂಸ್ಕೃತಿಯನ್ನು ಸಂಭ್ರಮಿಸುವ ಹಾಗೂ ಪ್ರತಿಯೊಂದು ಪ್ರದೇಶವನ್ನು ಸದೃಢಗೊಳಿಸುವ ಒಕ್ಕೂಟ ವ್ಯವಸ್ಥೆಯ ಭಾರತದ ಪರಿಕಲ್ಪನೆಯನ್ನು ಹೊಂದಿದ್ದರು.
ಕನ್ನಡ, ತಮಿಳು, ಗುಜರಾತಿ, ತೆಲುಗು, ಅಸ್ಸಾಮಿ, ಪಂಜಾಬಿ ಹಾಗೂ ಇನ್ನಿತರ ಬಾಷೆಗಳು ಕೇವಲ ಭಾಷಾ ಮಾಧ್ಯಮವಾಗಿರದೇ, ಶತಮಾನಗಳ ಜ್ಞಾನದ, ಅಸ್ಮಿತೆಯ ಹಾಗೂ ಪ್ರತಿಷ್ಠೆಯ ಭಂಡಾರವಾಗಿದೆ. ಇವುಗಳನ್ನು, ಕಡೆಗಣಿಸಿದರೆ, ನಮ್ಮ ಜನರ ಆತ್ಮಾಭಿಮಾನವನ್ನು ಘಾಸಿಗೊಳಿಸಿದಂತೆ.
ಮಂಡ್ಯದ ರೈತ ಕನ್ನಡದಲ್ಲಿ ಮಾತನಾಡಿದಾಗ, ಕಾಶ್ಮೀರದ ಕವಿಯೊಬ್ಬ ಉರ್ದುವಿನಲ್ಲಿ ಬರೆದಾಗ, ಕೇರಳದ ಮಗುವೊಂದು ಮಲೆಯಾಳಂ ಕಲಿತಾಗ, ಅವರೆಲ್ಲರೂ ಒಂದೇ ಭಾರತೀಯರಾಗಿರುತ್ತಾರೆ. ಯಾವುದೇ ಒಂದು ಭಾಷೆ, ಸಂಸ್ಕೃತಿ, ಪ್ರದೇಶ ಮತ್ತೊಂದಕ್ಕಿಂತ ಕಡಿಮೆಯಿರುವುದಿಲ್ಲ. ಕಾಂಗ್ರೆಸ್ ಎಂದಿಗೂ ಎಲ್ಲಾ ರಾಜ್ಯಗಳನ್ನು ಸಮಾನವಾಗಿ ಗೌರವಿಸುವ ಒಕ್ಕೂಟ ವ್ಯವಸ್ಥೆಯ ಭಾರತದಲ್ಲಿ ನಂಬಿಕೆಯಿರಿಸಿದೆ. ಅಂತಹ ಭಾರತದಲ್ಲಿ ಮಾತ್ರ ಪ್ರತಿಯೊಬ್ಬ ನಾಗರಿಕನಿಗೂ ತನ್ನದೆಂಬ ಭಾವವನ್ನು ಹೊಂದುತ್ತಾನೆ. ಒಂದು ದೇಶ- ಒಂದು ವ್ಯವಸ್ಥೆ’ ಎಂಬುದಕ್ಕೆ ನೀಡಿರುವ ಒತ್ತು , ಕೇವಲ ತಾತ್ವಿಕವಾಗಿರದೇ, ಪ್ರಾದೇಶಿಕ ಸ್ವಾತಂತ್ರ್ಯ ಹಾಗೂ ಸಮಾಜಿಕ ನ್ಯಾಯದ ಮೂಲಕ್ಕೆ ಪೆಟ್ಟು ನೀಡುವಂತಹ ನೀತಿಗಳನ್ನು ಹೇರುವ ಮೂಲಕ ಅನುಷ್ಠಾನಗೊಳಿಸುವುದಾಗಿದೆ.
ಬಿಜೆಪಿಯು ವಿಭಜನೆ ಮತ್ತು ಬೇರೆಡೆಗೆ ಗಮನ ಸೆಳೆಯುವ ತಂತ್ರಗಳ ಮೇಲೆಯೇ ವಿಜೃಂಭಿಸಿದರೆ, ಕರ್ನಾಟಕದಲ್ಲಿ ಕಾಂಗ್ರೆಸ್ ನಿಜವಾದ ಆಡಳಿತ ಎಂದರೇನು ಎಂದು ಇಡೀ ದೇಶಕ್ಕೇ ನಿರೂಪಿಸುತ್ತಿದೆ. ಜನರಿಗೆ ಪ್ರಾಶಸ್ತ್ಯ ನೀಡುವ ಮಾದರಿಯೊಂದನ್ನು ನಾವು ರೂಪಿಸಿದ್ದೇವೆ.
ಕರ್ನಾಟಕ ರಾಜ್ಯವು ಇಂದು ನಕ್ಸಲ್ ಚಟುವಟಿಕೆಗಳಿಂದ ಮುಕ್ತವಾಗಿದೆ ಎಂದರೆ ಅದಕ್ಕೆ ಕಾರಣ ಪ್ರಬಲ ಕಾನೂನು ಸುವ್ಯವಸ್ಥೆ ಒಂದೇ ಕಾರಣವಲ್ಲ. ಸೂಕ್ತ ವಾತಾವರಣ ಕಲ್ಪಿಸಿ ಅವರನ್ನು ಮುಖ್ಯ ವಾಹಿನಿಗೆ ತರುವ ಸೂಕ್ತ ನ್ಯಾಯ ಕಲ್ಪಿಸುವ ಸರ್ಕಾರದ ಪ್ರಯತ್ನಗಳು ಸೇರಿವೆ.
ಇಂದಿರಾ ಕ್ಯಾಂಟೀನ್ ಗಳ ಮೂಲಕ ಹಸಿವು ನೀಗುವ ಯತ್ನವನ್ನು ಮಾಡಿದ್ದೇವೆ. ಸಮಾಜದ ಕಟ್ಟಕಡೆಯ ಮನುಷ್ಯನೂ ಹಸಿವೆಯಿಂದಿರದೆ ಹೊಟ್ಟೆ ತುಂಬ ಊಟ ಮಾಡುವ ಅವಕಾಶವನ್ನು ಕಲ್ಪಿಸಲಾಗಿದೆ. ಸಮರ್ಥ ಆಡಳಿತದೊಂದಿಗೆ ಸ್ಪಂದನಶೀಲ ಆಡಳಿತವೂ ನಮ್ಮದಾಗಿದೆ. ವೋಟ್ ಬ್ಯಾಂಕ್ ರಾಜಕಾರಣವನ್ನು ಬದಿಗಿಟ್ಟು ಸಮಾಜದಲ್ಲಿನ ದಲಿತ, ಹಿಂದುಳಿದ, ಅಲ್ಪಸಂಖ್ಯಾತ, ಮಹಿಳೆಯರು, ಯುವ ಜನತೆ, ರೈತರು, ಕಾರ್ಮಿಕರು ಹೀಗೆ ಸಮಾಜದ ಎಲ್ಲಾ ವರ್ಗಗಳಿಗೂ ನ್ಯಾಯ ಒದಗಿಸುವ ದಿಸೆಯಲ್ಲಿ ಸ್ಪಂದಿಸುತ್ತಿದೆ. ಇದು ಕರ್ನಾಟಕದ ಮಾದರಿ- ಬಿಜೆಪಿಯ ದ್ವೇಷಪೂರಿತ, ಗಗನಮುಖಿ ಬೆಲೆಗಳ, ಪೊಳ್ಳು ಆಶ್ವಾಸನೆಗಳ ರಾಜಕೀಯದಾಟಕ್ಕೆ ಕರ್ನಾಟಕದ ಶಕ್ತಿಯುತ ಪ್ರತಿರೋಧವಾಗಿದೆ ಎಂದರು.