ವಾಲ್ಮೀಕಿ ನಿಗಮ ಅಕ್ರಮ ಕೇಸ್‌ ಸಿಬಿಐಗಿಲ್ಲ - ಯೂನಿಯನ್‌ ಬ್ಯಾಂಕ್‌ ಅರ್ಜಿ ವಜಾ : ಹೈಕೋರ್ಟ್‌

| Published : Nov 14 2024, 10:31 AM IST

Highcourt

ಸಾರಾಂಶ

ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದಲ್ಲಿ ನಡೆದಿರುವ ಕೋಟ್ಯಂತರ ರುಪಾಯಿ ಅಕ್ರಮ ವರ್ಗಾವಣೆ ಹಗರಣವನ್ನು ಕೇಂದ್ರ ತನಿಖಾ ಸಂಸ್ಥೆಯ (ಸಿಬಿಐ) ತನಿಖೆಗೆ ವಹಿಸುವಂತೆ ಕೋರಿ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ.

ಬೆಂಗಳೂರು :  ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದಲ್ಲಿ ನಡೆದಿರುವ ಕೋಟ್ಯಂತರ ರುಪಾಯಿ ಅಕ್ರಮ ವರ್ಗಾವಣೆ ಹಗರಣವನ್ನು ಕೇಂದ್ರ ತನಿಖಾ ಸಂಸ್ಥೆಯ (ಸಿಬಿಐ) ತನಿಖೆಗೆ ವಹಿಸುವಂತೆ ಕೋರಿ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ. ಇದೇ ವೇಳೆ ರಾಜ್ಯದ ತನಿಖಾ ಸಂಸ್ಥೆಯು ಹಗರಣದಿಂದ ಕೈ ಬಿಟ್ಟಿರುವ ಬ್ಯಾಂಕಿನ ವ್ಯಕ್ತಿಗಳನ್ನು ಸಿಬಿಐ ತನಿಖೆಗೊಳಪಡಿಸಬಹುದು ಎಂದು ನ್ಯಾಯಪೀಠ ಸ್ಪಷ್ಟಪಡಿಸಿದೆ.

ಈ ಕುರಿತಂತೆ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಸಲ್ಲಿಸಿದ್ದ ಅರ್ಜಿ ವಿಚಾರಣೆ ಪೂರ್ಣಗೊಳಿಸಿ ಸೆ.30ರಂದು ಕಾಯ್ದಿರಿಸಿದ್ದ ತೀರ್ಪನ್ನು ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರ ಪೀಠ ಬುಧವಾರ ಪ್ರಕಟಿಸಿದೆ.

ಬ್ಯಾಂಕಿಂಗ್‌ ನಿಬಂಧನೆಗಳ ಕಾಯ್ದೆ-1949ರ ಸೆಕ್ಷನ್‌ 35ಎ ಪ್ರಕಾರ, ಬ್ಯಾಂಕ್‌ ವ್ಯವಹಾರಗಳ ಕುರಿತು ಯಾವುದೇ ಬ್ಯಾಂಕ್‌ಗಳಿಗೆ ಕಾಲಕಾಲಕ್ಕೆ ನಿರ್ದೇಶನ ನೀಡುವ ಅಧಿಕಾರವನ್ನು ಭಾರತೀಯ ರಿಸರ್ವ್‌ ಬ್ಯಾಂಕ್‌ (ಆರ್‌ಬಿಐ) ಹೊಂದಿದೆ. ಆ ಸೆಕ್ಷನ್‌ ಅನ್ವಯ ಬ್ಯಾಂಕ್‌ ವ್ಯವಹಾರಗಳಲ್ಲಿ ನಡೆದಿರುವ ವಂಚನೆ ಹಾಗೂ ಅಕ್ರಮದ ಬಗ್ಗೆ ಸಿಬಿಐನಂತಹ ಸ್ವತಂತ್ರ ಸಂಸ್ಥೆಯ ತನಿಖೆಗೆ ವಹಿಸಲು ಕೋರಬಹುದಾಗಿದೆ. ಬ್ಯಾಂಕಿಂಗ್‌ ವ್ಯವಹಾರದಲ್ಲಿ ₹50 ಕೋಟಿಗೂ ಅಧಿಕ ಅಕ್ರಮ ವ್ಯವಹಾರ ನಡೆದ ಪಕ್ಷದಲ್ಲಿ ಅಂತಹ ಪ್ರಕರಣವನ್ನು ಸಿಬಿಐಗೆ ವಹಿಸಬಹುದಾಗಿದೆ. ಹಗರಣದಲ್ಲಿ ವಾಲ್ಮೀಕಿ ನಿಗಮದ ವ್ಯವಸ್ಥಾಪಕ ನಿರ್ದೇಶಕರು, ಉನ್ನತ ಶ್ರೇಣಿಯ ಅಧಿಕಾರಿಗಳು ಮತ್ತು ನಿಗಮದ ಅಧ್ಯಕ್ಷರು, ಶಾಸಕರು ಭಾಗಿಯಾಗಿದ್ದಾರೆ. ರಾಜ್ಯ ಸರ್ಕಾರ ವಾಲ್ಮೀಕಿ ಪ್ರಕರಣದ ತನಿಖೆಗೆ ರಚಿಸಿರುವ ಎಸ್‌ಐಟಿಯು ನ್ಯಾಯಯುತ ತನಿಖೆ ನಡೆಸುವುದಿಲ್ಲ. ಹಾಗಾಗಿ, ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಬೇಕು ಎಂದು ಯೂನಿಯನ್‌ ಬ್ಯಾಂಕ್‌ ಪರ ಅಟಾರ್ನಿ ಜನರಲ್‌ ಅವರು ವಾದ ಮಂಡಿಸಿದ್ದರು.

ಆಘಾತ ತರಿಸಿದೆ:

ಇದೀಗ ಹೈಕೋರ್ಟ್‌, ಅಟಾರ್ನಿ ಜನರಲ್‌ ಅವರು ಸೆಕ್ಷನ್‌ 35ಎ ಅನ್ನು ವ್ಯಾಖ್ಯಾನ ಮಾಡಿರುವುದನ್ನು ಒಪ್ಪಲಾಗದು. ಸೆಕ್ಷನ್‌ 35ಎ ಕೇವಲ ಯಾವುದೇ ಬ್ಯಾಂಕಿಂಗ್‌ ಸಂಸ್ಥೆಗಳ ವ್ಯವಹಾರಗಳನ್ನು ಸಂಪೂರ್ಣವಾಗಿ ನಿಯಂತ್ರಿಸುವ ಮತ್ತು ಮೇಲ್ವಿಚಾರಣೆ ನಡೆಸುವುದಕ್ಕೆ ಸಂಬಂಧಿಸಿರುತ್ತದೆ. ಯಾವುದೇ ಬ್ಯಾಂಕಿಂಗ್ ಸಂಸ್ಥೆಗೆ ತನಿಖೆಯನ್ನು ಸಿಬಿಐ ಕೈಗೆ ವರ್ಗಾಯಿಸಲು ಅನುಮತಿ ನೀಡಿದರೆ, ಅದು ಸೆಕ್ಷನ್ 35ಎಗೆ ಶಾಸನ ನೀಡದ ಅಧಿಕಾರವನ್ನು ನೀಡಿದಂತಾಗುತ್ತದೆ. ವಾಲ್ಮೀಕಿ ಹಗರಣದ ಕುರಿತು ದೂರು ದಾಖಲಾದ ಸಂದರ್ಭದಲ್ಲಿ ಯೂನಿಯನ್‌ ಬ್ಯಾಂಕ್‌ ಆಫ್‌ ಇಂಡಿಯಾದ ಕೆಲ ಅಧಿಕಾರಿಗಳು ಆರೋಪಿಗಳಾಗಿದ್ದರು ಎಂಬ ಕಾರಣಕ್ಕೆ ಹಗರಣವನ್ನು ಸಿಬಿಐಗೆ ವಹಿಸುವಂತೆ ಬ್ಯಾಂಕ್‌ ಕೋರಿದೆ. ಬ್ಯಾಂಕ್‌ ಮನವಿ ಮಾಡಿದೆ ಎಂಬ ಮಾತ್ರಕ್ಕೆ ಅಟಾರ್ನಿ ಜನರಲ್‌ ಅವರು ಹೇಳಿರುವಂತೆ ಸೆಕ್ಷನ್‌ 35ಎ ವ್ಯಾಖ್ಯಾನವನ್ನು ನ್ಯಾಯಾಲಯವು ಒಪ್ಪಬೇಕಿಲ್ಲ ಎಂದು ಆದೇಶದಲ್ಲಿ ತಿಳಿಸಿದೆ 

ಪರಿಶಿಷ್ಟ ಪಂಗಡದ ಸಮುದಾಯದವರು ಆರ್ಥಿಕವಾಗಿ ಅಭಿವೃದ್ಧಿ ಹೊಂದಲು ಹಣಕಾಸು ನೆರವು ಕಲ್ಪಿಸಲು, ಕೃಷಿ ಕಾರ್ಮಿಕರಿಗೆ ಬೆಂಬಲ ನೀಡಲು ವಾಲ್ಮೀಕಿ ನಿಗಮವನ್ನು ಸ್ಥಾಪಿಸಲಾಗಿದೆ. ನಿಗಮಕ್ಕೆ ಸೇರಿದ ಹಣದ ಅವ್ಯವಹಾರ ಮಾಡಿರುವುದು ನ್ಯಾಯಾಲಯದ ಆತ್ಮಸಾಕ್ಷ್ಮಿಗೆ ಆಘಾತ ತರಿಸಿದೆ ಎಂದು ಪೀಠ ಹೇಳಿದೆ.

ಸಚಿವರು ಮತ್ತು ಅಧಿಕಾರಿಗಳು ಹಗರಣದಲ್ಲಿ ಭಾಗಿಯಾಗಿರುವ ಆರೋಪ ಎದುರಾದಾಗ, ತನಿಖೆಯನ್ನು ರಾಜ್ಯ ಸರ್ಕಾರದ ಅಧೀನ/ನಿಯಂತ್ರಣದಲ್ಲಿರದ ಸ್ವತಂತ್ರ ತನಿಖಾ ಸಂಸ್ಥೆಗೆ ವಹಿಸಬೇಕಾಗುತ್ತದೆ. ಆಗ ಮಾತ್ರ ಅದು ಸಾರ್ವಜನಿಕರಲ್ಲಿ ವಿಶ್ವಾಸವನ್ನು ಮೂಡಿಸುತ್ತದೆ. ಆದರೆ, ಬ್ಯಾಂಕಿಂಗ್‌ ನಿಬಂಧನೆಗಳ ಕಾಯ್ದೆ ಸೆಕ್ಷನ್‌ 35ಎ ವ್ಯಾಖ್ಯಾನದ ಮೇಲೆ ಪ್ರಕರಣದ ತನಿಖೆಯನ್ನು ಸ್ವತಂತ್ರ ತನಿಖಾ ಸಂಸ್ಥೆಗೆ ವಹಿಸುವುದಿಲ್ಲ. ಇತರೆ ವ್ಯಾಖ್ಯಾನವನ್ನು ಮಂಡಿಸಿದ್ದರೆ, ಆಗ ಅರ್ಜಿದಾರರ ಮನವಿಯನ್ನು ನ್ಯಾಯಾಲಯವು ಪರಿಗಣಿಸುತ್ತಿತ್ತು ಎಂದ ಪೀಠ ಹೇಳಿದೆ.

ಜೊತೆಗೆ, ಪ್ರಕರಣದ ಕುರಿತು ದೂರು ದಾಖಲಾದಾಗ ಯೂನಿಯನ್‌ ಬ್ಯಾಂಕಿನ ಅಧಿಕಾರಿಗಳು ಸಹ ಆರೋಪಿಗಳಾಗಿದ್ದರು. ಅದಕ್ಕಾಗಿಯೇ ಯೂನಿಯನ್‌ ಬ್ಯಾಂಕ್‌ ತನಿಖೆಯನ್ನು ಸಿಬಿಐಗೆ ವಹಿಸಲು ಕೋರಿದೆ. ಬ್ಯಾಂಕು ಸಿಬಿಐ ತನಿಖೆ ಕೇಳಿದ‌ ಮಾತ್ರಕ್ಕೆ ಸೆಕ್ಷನ್‌ 35ಎ ವ್ಯಾಖ್ಯಾನದ ಆಧಾರದಲ್ಲಿ ಸಿಬಿಐ ತನಿಖೆಗೆ ವಹಿಸಲು ಸಾಧ್ಯವಿಲ್ಲ. ಇನ್ನು ಎಸ್‌ಐಟಿಯ ದೋಷಾರೋಪ ಪಟ್ಟಿಯಿಂದ ಬ್ಯಾಂಕ್‌ ಅಧಿಕಾರಿಗಳನ್ನು ಕೈಬಿಡಲಾಗಿದೆ. ಆದರೆ, ಕಾನೂನಿಗೆ ಅನುಗುಣವಾದ ಮಾರ್ಗದಲ್ಲಿ ಸಿಬಿಐ ತನಿಖೆಗೆ ಅಭ್ಯಂತರವಿಲ್ಲ. ಆಗ ರಾಜ್ಯದ ತನಿಖಾ ಸಂಸ್ಥೆಯು ಹಗರಣದಿಂದ ಕೈ ಬಿಟ್ಟಿರುವ ವ್ಯಕ್ತಿಗಳನ್ನು ಸಿಬಿಐ ತನಿಖೆಗೊಳಪಡಿಸಬಹುದು ಎಂದು ನ್ಯಾಯಪೀಠ ಸ್ಪಷ್ಟಪಡಿಸಿ ಅರ್ಜಿ ವಜಾಗೊಳಿಸಿದೆ.