ಬೀದಿ ನಾಯಿಗಳಿಗೆ ಚಿಕನ್‌ ರೈಸ್‌ ಯೋಜನೆಗೆ ಇಬ್ಬರಿಂದ ಟೆಂಡರ್‌

| N/A | Published : Aug 07 2025, 07:01 AM IST

BBMP
ಬೀದಿ ನಾಯಿಗಳಿಗೆ ಚಿಕನ್‌ ರೈಸ್‌ ಯೋಜನೆಗೆ ಇಬ್ಬರಿಂದ ಟೆಂಡರ್‌
Share this Article
  • FB
  • TW
  • Linkdin
  • Email

ಸಾರಾಂಶ

ವ್ಯಾಪಕ ವಿರೋಧದ ನಡುವೆ ನಗರದ ಬೀದಿ ನಾಯಿಗಳಿಗೆ ಚಿಕನ್‌ ರೈಸ್‌ ಪೂರೈಸಲು ಬಿಬಿಎಂಪಿ ಆಹ್ವಾನಿಸಿದ್ದ ಟೆಂಡರ್‌ನಲ್ಲಿ ಕೇವಲ ಇಬ್ಬರು ಗುತ್ತಿಗೆದಾರರು ಭಾಗವಹಿಸಿದ್ದಾರೆ.

ಬೆಂಗಳೂರು : ವ್ಯಾಪಕ ವಿರೋಧದ ನಡುವೆ ನಗರದ ಬೀದಿ ನಾಯಿಗಳಿಗೆ ಚಿಕನ್‌ ರೈಸ್‌ ಪೂರೈಸಲು ಬಿಬಿಎಂಪಿ ಆಹ್ವಾನಿಸಿದ್ದ ಟೆಂಡರ್‌ನಲ್ಲಿ ಕೇವಲ ಇಬ್ಬರು ಗುತ್ತಿಗೆದಾರರು ಭಾಗವಹಿಸಿದ್ದಾರೆ.

ನಗರದಲ್ಲಿರುವ 2.79 ಲಕ್ಷ ಬೀದಿ ನಾಯಿಗಳ ಪೈಕಿ ಸುಮಾರು 1 ನಾಯಿಗೆ ₹22.42 ವೆಚ್ಚದಲ್ಲಿ ದಿನಕ್ಕೆ 5000 ನಾಯಿಗಳಿಗೆ ಚಿಕನ್‌ ರೈಸ್‌ ಹಾಕಲು ಒಂದು ವರ್ಷಕ್ಕೆ ₹2.88 ಕೋಟಿ ವೆಚ್ಚದ ಕಾರ್ಯಕ್ರಮ ಜಾರಿ ಸಂಬಂಧ ಜು.4 ರಂದು ಟೆಂಡರ್‌ ಆಹ್ವಾನಿಸಿತ್ತು. ಜು.18ರವರೆಗೆ ಟೆಂಡರ್‌ ಬಿಡ್‌ ಮಾಡಲು ಅವಕಾಶ ನೀಡಲಾಗಿತ್ತು. ವ್ಯಾಪಕ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಗುತ್ತಿಗೆದಾರರು ಟೆಂಡರ್ ಪ್ರಕ್ರಿಯೆಯಲ್ಲಿ ಭಾಗವಹಿಸಲು ಹಿಂದೇಟು ಹಾಕಿದ ಹಿನ್ನೆಲೆಯಲ್ಲಿ ಬಿಬಿಎಂಪಿ ಟೆಂಡರ್‌ಗೆ ಅರ್ಜಿ ಸಲ್ಲಿಸುವ ಅವಧಿಯನ್ನು ಆ.2ರವರೆಗೆ ವಿಸ್ತರಿಸಿತ್ತು. ಇದೀಗ ಟೆಂಡರ್‌ನಲ್ಲಿ ಕೇವಲ ಇಬ್ಬರು ಗುತ್ತಿಗೆದಾರರು ಭಾಗವಹಿಸಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಬುಧವಾರ ಟೆಂಡರ್ ಪರಿಶೀಲನೆ:

ಬುಧವಾರ ಟೆಂಡರ್‌ನಲ್ಲಿ ಭಾಗವಹಿಸಿದ ಗುತ್ತಿಗೆದಾರರ ಪರಿಶೀಲನೆ ಮಾಡಲಾಗಿದ್ದು, ಸುದರ್ಶನಾ ಹಾಗೂ ಅರುಣ್‌ ಕುಮಾರ್‌ ಎಂಬುವವರ ಮಾಲೀಕತ್ವದ ಸಂಸ್ಥೆಗಳು ಟೆಂಡರ್‌ನಲ್ಲಿ ಭಾಗವಹಿಸಿವೆ. ಸುದರ್ಶನ ಎಂಬುವವರು ಈಗಾಗಲೇ ಬೆಂಗಳೂರಿನ 1500 ರಿಂದ 1600 ಸಾಕು ನಾಯಿಗಳಿಗೆ ಆಹಾರ ಪೂರೈಕೆ ಮಾಡುತ್ತಿದ್ದಾರೆ. ನಾಯಿಗಳಿಗೆ ಆಹಾರ ಸಿದ್ಧಪಡಿಸಲು ಘಟಕ ಸ್ಥಾಪಿಸಿಕೊಂಡಿದ್ದಾರೆಂದು ತಿಳಿದು ಬಂದಿದೆ. ಅರುಣ್‌ ಕುಮಾರ್ ಮಾಲೀಕತ್ವದ ಕಂಪನಿಯು ದೆಹಲಿ ಮೂಲದ್ದಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಎನ್‌ಜಿಒ ತಾಳಕ್ಕೆ ಪಾಲಿಕೆ

ಅಧಿಕಾರಿಗಳ ಕುಣಿತ?

ಬಿಬಿಎಂಪಿ ಹಣದಲ್ಲಿ ಬೀದಿ ನಾಯಿಗಳಿಗೆ ಚಿಕನ್‌ ರೈಸ್‌ ಯೋಜನೆ ಸಿದ್ಧಪಡಿಸಲು ಕೆಲವು ಎನ್‌ಜಿಒಗಳು ಕಾರಣ ಎಂಬುದು ಬಹಿರಂಗ ಸತ್ಯವಾಗಿದೆ. ಇದೀಗ ಟೆಂಡರ್‌ನಲ್ಲಿ ಭಾಗಹಿಸಿದ ಸಂಸ್ಥೆಗಳು ಎನ್‌ಜಿಒಗಳ ಪೋಷಣೆ ಮಾಡುತ್ತಿರುವ ಸಂಸ್ಥೆಗಳು ಎಂಬ ಆರೋಪ ಕೇಳಿ ಬಂದಿದೆ. ಬೀದಿ ನಾಯಿಗಳಿಗೆ ಚಿಕನ್‌ ರೈಸ್‌ ನೀಡುವ ಯೋಜನೆಗೆ ಸಾಕಷ್ಟು ವಿರೋಧವಿದ್ದರೂ ಪಾಲಿಕೆ ಅಧಿಕಾರಿಗಳು ಮಾತ್ರ ಎನ್‌ಜಿಒಗಳ ತಾಳಕ್ಕೆ ಕುಣಿಯುತ್ತಿದ್ದಾರೆಂಬ ಆರೋಪ ಬಿಬಿಎಂಪಿಯ ಆವರಣದಲ್ಲಿ ಕೇಳಿ ಬರುತ್ತಿದೆ.

ನಾಯಿ ದಾಳಿಯಿಂದ ಮೃತಪಟ್ಟ

ಸೀತಪ್ಪ ಕುಟುಂಬಕ್ಕೆ ಪರಿಹಾರ

ಜುಲೈ 28 ರಂದು ಕೊಡಿಗೇಹಳ್ಳಿಯ ಟೆಲಿಕಾಂ ಲೇಔಟ್‌ನಲ್ಲಿ ಬೀದಿ ನಾಯಿಗಳ ದಾಳಿಯಿಂದ ಸೀನಪ್ಪ (68) ಎಂಬ ವೃದ್ಧ ಮೃತಪಟ್ಟಿದ್ದರು. ಮೃತರ ಮರಣೋತ್ತರ ಪರೀಕ್ಷೆ ಬಾಕಿ ಇರುವ ಹಿನ್ನೆಲೆಯಲ್ಲಿ ಬಿಬಿಎಂಪಿ ಪರಿಹಾರ ಘೋಷಣೆ ಮಾಡಿರಲಿಲ್ಲ. ಇದೀಗ ಮೇಲ್ನೋಟಕ್ಕೆ ನಾಯಿ ದಾಳಿಯಿಂದಲೇ ಸೀತಪ್ಪ ಮೃತಪಟ್ಟಿರುವುದು ಕಂಡು ಬಂದ ಹಿನ್ನೆಲೆಯಲ್ಲಿ ಅವರ ಕುಟುಂಬಕ್ಕೆ ನಿಯಮಾನುಸಾರ ಪರಿಹಾರ ನೀಡಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಬಿಬಿಎಂಪಿ ಪಶುಪಾಲನೆ ವಿಭಾಗದ ವಿಶೇಷ ಆಯುಕ್ತ ಸುರಳ್ಕರ್ ವಿಕಾಸ್ ಕಿಶೋರ್‌ ಮಾಹಿತಿ ನೀಡಿದ್ದಾರೆ.

Read more Articles on