ಸಾರಾಂಶ
ಅನಧಿಕೃತ ಕಟ್ಟಡ ಹಾಗೂ ನಕ್ಷೆಗೆ ವ್ಯತಿರಿಕ್ತವಾಗಿ ನಿರ್ಮಿಸಿದ ಕಟ್ಟಡಗಳನ್ನು ಪತ್ತೆ ಮಾಡಿ ತ್ವರಿತವಾಗಿ ತೆರವುಗೊಳಿಸುವಂತೆ ಮುಖ್ಯ ಆಯುಕ್ತ ಮಹೇಶ್ವರ್ ರಾವ್ ಅಧಿಕಾರಿಗಳಿಗೆ ಸೂಚಿಸಿದರು.
ಬೆಂಗಳೂರು : ಅನಧಿಕೃತ ಕಟ್ಟಡ ಹಾಗೂ ನಕ್ಷೆಗೆ ವ್ಯತಿರಿಕ್ತವಾಗಿ ನಿರ್ಮಿಸಿದ ಕಟ್ಟಡಗಳನ್ನು ಪತ್ತೆ ಮಾಡಿ ತ್ವರಿತವಾಗಿ ತೆರವುಗೊಳಿಸುವಂತೆ ಮುಖ್ಯ ಆಯುಕ್ತ ಮಹೇಶ್ವರ್ ರಾವ್ ಅಧಿಕಾರಿಗಳಿಗೆ ಸೂಚಿಸಿದರು.
ಮಹದೇವಪುರ ವ್ಯಾಪ್ತಿಯ ನಲ್ಲೂರುಹಳ್ಳಿ ಮೆಟ್ರೋ ಸ್ಟೇಷನ್ ನಿಂದ ನಲ್ಲೂರಹಳ್ಳಿ ಬೋರ್ವೆಲ್ ರಸ್ತೆ, ವೈಟ್ ಫೀಲ್ಡ್ ಮುಖ್ಯರಸ್ತೆ ವರೆಗೆ ಬುಧವಾರ ಪರಿಶೀಲನೆ ನಡೆಸಿದ ಅವರು, ನಲ್ಲೂರಹಳ್ಳಿ ಕಾಲೋನಿಯ 3ನೇ ಅಡ್ಡರಸ್ತೆ, 7ನೇ ಅಡ್ಡರಸ್ತೆಯಲ್ಲಿ ನಕ್ಷೆಗೆ ವ್ಯತಿರಿಕ್ತವಾಗಿ ಕಟ್ಟಡಗಳನ್ನು ನಿರ್ಮಿಸಲಾಗಿದ್ದು, ನಿಯಮಾನುಸಾರ ಅನಧಿಕೃತ ಕಟ್ಟಡದ ಭಾಗವನ್ನು ತ್ವರಿತವಾಗಿ ತೆರವುಗೊಳಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ನಲ್ಲೂರಹಳ್ಳಿ ಮೆಟ್ರೋ ಸ್ಟೇಷನ್ ನಿಂದ ನಲ್ಲೂರಹಳ್ಳಿ ಬೋರ್ವೆಲ್ ರಸ್ತೆ ಮುಖಾಂತರ ವೈಟ್ ಫೀಲ್ಡ್ ಮುಖ್ಯ ರಸ್ತೆವರೆಗೆ ರಸ್ತೆ ಅಗಲೀಕರಣಕ್ಕೆ ಸೂಚಿಸಿದರು. ಡಾಡ್ಸ್ ವರ್ತ್ ಎನ್ಕ್ಲೇವ್ ರೋಡ್ ಬಳಿ ಚರಂಡಿಯ ನೀರು ರಸ್ತೆಗೆ ಬರುತ್ತಿದ್ದು, ಪರಿಶೀಲನೆ ನಡೆಸಿ ಕಟ್ಟಡದ ಮಾಲೀಕರಿಗೆ ನೋಟಿಸ್ ನೀಡಲು ಹಾಗೂ ಕಟ್ಟಡ ಮಾಲೀಕರಿಗೆ ದಂಡ ವಿಧಿಸಲು ನಿರ್ದೇಶಿಸಿದರು.
ರಸ್ತೆಯ ಇಕ್ಕೆಲಗಳಲ್ಲಿ ವಾಹನಗಳನ್ನು ನಿಲ್ಲಿಸಿರುವುದು ಕಂಡು ಬಂದ ಹಿನ್ನೆಲೆಯಲ್ಲಿ ವಾಹನಗಳ ಮಾಲೀಕರಿಗೆ ದಂಡ ವಿಧಿಸಿ ತೆರವು ಮಾಡುವಂತೆ ಸಂಚಾರಿ ಪೊಲೀಸರಿಗೆ ತಿಳಿಸಿದರು.
ನಲ್ಲೂರಹಳ್ಳ ರಾಜಕಾಲುವೆಗೆ ತಡೆಗೋಡೆ ನಿರ್ಮಿಸುವ ಅಗತ್ಯವಿದ್ದು, ತ್ವರಿತವಾಗಿ ಸೂಕ್ತ ಕ್ರಮ ಕೈಗೊಂಡು ನಾಲಾ ಪಕ್ಕದಲ್ಲಿ ನಿರ್ಮಿಸಿರುವ ಅಕ್ರಮ ಕಟ್ಟಡ ತೆರವುಗೊಳಿಸಿ, ಬಫರ್ ಜೋನ್‌ನಲ್ಲಿ ಯಾವುದೇ ಕಟ್ಟಡಗಳ ನಿರ್ಮಾಣಕ್ಕೆ ನಕ್ಷೆ ಮಂಜೂರಾತಿ ನೀಡದಂತೆ ಸೂಚಿಸಿದರು.
ಪರಿಶೀಲನೆಯ ವೇಳೆ ವಲಯ ಆಯುಕ್ತ ರಮೇಶ್, ರಸ್ತೆ ಮೂಲ ಸೌಕರ್ಯ ವಿಭಾಗದ ಮುಖ್ಯ ಎಂಜಿನಿಯರ್ ಲೋಕೇಶ್ ಉಪಸ್ಥಿತರಿದ್ದರು.