ಸಾರಾಂಶ
ರಾಹುಲ್ ಗಾಂಧಿ ಅವರಿಗೆ ಚುನಾವಣಾ ಆಯೋಗ ಟಾರ್ಗೆಟ್ ಅಲ್ಲ, ಅವರದೇನಿದ್ದರೂ ಇಂದಿರಾ ಗಾಂಧಿಯ ತುರ್ತು ಪರಿಸ್ಥಿತಿ ಮಾನಸಿಕತೆ ಎಂದು ಬಿಜೆಪಿ ರಾಷ್ಟ್ರೀಯ ವಕ್ತಾರ ಶಹಜಾದ್ ಪೂನಾವಾಲ ಆರೋಪಿಸಿದ್ದಾರೆ.
ಬೆಂಗಳೂರು : ರಾಹುಲ್ ಗಾಂಧಿ ಅವರಿಗೆ ಚುನಾವಣಾ ಆಯೋಗ ಟಾರ್ಗೆಟ್ ಅಲ್ಲ, ಅವರದೇನಿದ್ದರೂ ಇಂದಿರಾ ಗಾಂಧಿಯ ತುರ್ತು ಪರಿಸ್ಥಿತಿ ಮಾನಸಿಕತೆ ಎಂದು ಬಿಜೆಪಿ ರಾಷ್ಟ್ರೀಯ ವಕ್ತಾರ ಶಹಜಾದ್ ಪೂನಾವಾಲ ಆರೋಪಿಸಿದ್ದಾರೆ.
ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಈ ಹಿಂದೆ ಇಂದಿರಾ ಗಾಂಧಿ ಅವರ ನಿಕಟವರ್ತಿಯೊಬ್ಬರು ‘ಇಂದಿರಾ ಈಸ್ ಇಂಡಿಯ, ಇಂಡಿಯ ಈಸ್ ಇಂದಿರಾ’ ಎಂದಿದ್ದರು. ಅಂದರೆ ಪರಿವಾರ ತಂತ್ರ ಲೋಕತಂತ್ರಕ್ಕಿಂತ ಸಂವಿಧಾನಕ್ಕಿಂತ ಮಿಗಿಲು ಎಂದು ಅವರು ಭಾವಿಸುತ್ತಾರೆ ಎಂದು ಟೀಕಿಸಿದರು.
ಚುನಾವಣೆಯಲ್ಲಿ ಸೋತರೆ ಚುನಾವಣಾ ಆಯೋಗ ತಪ್ಪಿತಸ್ಥ, ಕೋರ್ಟ್ ಕೇಸಿನಲ್ಲಿ ಸೋತರೆ ನ್ಯಾಯಾಂಗ ವ್ಯವಸ್ಥೆ ಸರಿಯಿಲ್ಲ ಎಂದು ರಾಹುಲ್ ಗಾಂಧಿ ಹೇಳುತ್ತಾರೆ. ತೆಲಂಗಾಣದಲ್ಲಿ ರಾಹುಲ್ ಗಾಂಧಿಯವರ ತಂಡ ಗೆದ್ದರೆ ಅಲ್ಲಿ ಯಾವುದೇ ಸಮಸ್ಯೆ ಇಲ್ಲ. ಜಾರ್ಖಂಡ್, ಜಮ್ಮು- ಕಾಶ್ಮೀರದಲ್ಲಿ ಅವರಿಗೆ ಸಮಸ್ಯೆ ಕಾಣುವುದಿಲ್ಲ. ಮಹಾರಾಷ್ಟ್ರದಲ್ಲಿ ಸೋತಾಗ ಸುಪ್ರೀಂ ಕೋರ್ಟಿಗೆ ಹೋಗಿದ್ದರು. ಆಳಂದದ ವಿಚಾರದಲ್ಲೂ ಮತದಾರರ ಹೆಸರು ಆನ್‍ಲೈನ್‌ನಲ್ಲಿ ರದ್ದು ಮಾಡಲಾಗದು ಎಂದು ಸ್ಪಷ್ಟನೆ ಕೊಟ್ಟಿದ್ದಾರೆ ಎಂದು ಹೇಳಿದರು.
ನಂಜೇಗೌಡರ ವಿಚಾರ ಮಾತಾಡಿ:
ರಾಹುಲ್ ಗಾಂಧಿಯವರು ಮತಗಳ್ಳತನದ ಕುರಿತು ಮಾತನಾಡುತ್ತಾರೆ. ಅವರು ನಂಜೇಗೌಡರ ಕುರಿತು ಮಾತನಾಡಬೇಕು. ಡಾ.ಜಿ.ಪರಮೇಶ್ವರ್ ಅವರ ವೈರಲ್ ವಿಡಿಯೋದಲ್ಲಿ ಕಟಾಕಟ್, ಕಟಾಕಟ್ ಎಂದು ಮತ ಹಾಕುತ್ತಿದ್ದ ಬಗ್ಗೆ ಮಾತನಾಡಿದ್ದಾರೆ. ಹೀಗಾಗಿ ರಾಹುಲ್ ಗಾಂಧಿ ಅವರು ಪರಮೇಶ್ವರ್ ಅವರ ವಿಡಿಯೋವನ್ನೂ ನೋಡಬೇಕು. ಅಂತೆಯೇ ಶಶಿ ತರೂರ್, ಕೀರ್ತಿ ಆಜಾದ್ ಅವರ ವಿಡಿಯೋಗಳನ್ನೂ ವೀಕ್ಷಿಸಬೇಕು ಎಂದು ಸವಾಲೆಸೆದರು.
ದರ್ಬಾರಿ ಪಕ್ಷಕ್ಕೆ ಸಂಕಷ್ಟ:
ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ‘ನಮಸ್ತೆ ಸದಾ ವತ್ಸಲೆ’ ಹಾಡಿದ್ದಕ್ಕೆ ಅವರ ಬಳಿ ಕ್ಷಮೆ ಕೇಳಿಸಲಾಯಿತು. ಈಗ ಕೆಲ ನಾಯಕರು ವಿದ್ಯಾರ್ಥಿ ಪರಿಷತ್ತಿನ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವ ಮೂಲಕ ರಾಹುಲ್‍ಗೆ ವಿರೋಧ ವ್ಯಕ್ತಪಡಿಸಲು ಮುಂದಾಗಿದ್ದಾರೆ. ದರ್ಬಾರಿ ಪಕ್ಷಕ್ಕೆ ಸಂಕಷ್ಟ ಒದಗಿ ಬರುತ್ತಿದೆ ಎಂದು ಹೇಳಿದರು.
ರಾಹುಲ್ ಅವರು ಉಪರಾಷ್ಟ್ರಪತಿ ಚುನಾವಣೆಯಲ್ಲಿ ಮತಗಳ್ಳತನದ ಮಾತನಾಡಿದ್ದಾರೆ. ಈ ಮೂಲಕ ತಮಿಳುನಾಡಿನಿಂದ ಆಯ್ಕೆಯಾದ ಉಪ ರಾಷ್ಟ್ರಪತಿ ಹಾಗೂ ಅಲ್ಲಿನ ಜನತೆಯನ್ನು ಅವಮಾನಿಸಿದ್ದಾರೆ ಎಂದು ಪ್ರಶ್ನೆಯೊಂದಕ್ಕೆ ಪೂನಾವಾಲ ಪ್ರತಿಕ್ರಿಯಿಸಿದರು.