ಬಿಜೆಪಿಯಿಂದ ಕೊರೋನಾ ಹತ್ಯಾಕಾಂಡ: 1.23 ಲಕ್ಷ ಜನರ ಸಾವನ್ನು ಬಿಜೆಪಿ ಸರ್ಕಾರ ಮುಚ್ಚಿಟ್ಟಿದ್ದು ದೃಢ - ಪ್ರಿಯಾಂಕ್‌

| Published : Nov 11 2024, 07:47 AM IST

Priyank Kharge

ಸಾರಾಂಶ

‘ಕೊರೋನಾ ಹಗರಣ ಕುರಿತ ನಿವೃತ್ತ ನ್ಯಾ.ಮೈಕಲ್‌ ಡಿ. ಕುನ್ಹಾ ಅವರ ಮಧ್ಯಂತರ ವರದಿಯಲ್ಲಿ 700 ಕೋಟಿ ರು. ಹಗರಣದ ಬಗ್ಗೆ ಬೆಳಕು ಚೆಲ್ಲಲಾಗಿದೆ.

ಬೆಂಗಳೂರು : ‘ಕೊರೋನಾ ಹಗರಣ ಕುರಿತ ನಿವೃತ್ತ ನ್ಯಾ.ಮೈಕಲ್‌ ಡಿ. ಕುನ್ಹಾ ಅವರ ಮಧ್ಯಂತರ ವರದಿಯಲ್ಲಿ 700 ಕೋಟಿ ರು. ಹಗರಣದ ಬಗ್ಗೆ ಬೆಳಕು ಚೆಲ್ಲಲಾಗಿದೆ. ಅಷ್ಟೇ ಅಲ್ಲದೆ ಕೊರೋನಾ ಅವಧಿಯಲ್ಲಿ 1.23 ಲಕ್ಷ ಜನರ ಸಾವನ್ನು ಬಿಜೆಪಿ ಸರ್ಕಾರ ಮುಚ್ಚಿಟ್ಟಿರುವುದು ವರದಿಯಲ್ಲಿ ದೃಢಪಟ್ಟಿದೆ. ತನ್ಮೂಲಕ ಕೊರೋನಾ ಭ್ರಷ್ಟಾಚಾರದ ಮೂಲಕ ಬಿಜೆಪಿಯು ಕರ್ನಾಟಕದಲ್ಲಿ ದೊಡ್ಡ ಹತ್ಯಾಕಾಂಡವನ್ನೇ ನಡೆಸಿದೆ’ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್‌ ಖರ್ಗೆ ಗಂಭೀರ ಆರೋಪ ಮಾಡಿದ್ದಾರೆ.

ಕೊರೋನಾ ವೇಳೆ ಒಟ್ಟಾರೆ ಸುಮಾರು ಮೂರು ಸಾವಿರ ಕೋಟಿ ರು.ಗೂ ಹೆಚ್ಚಿನ ಹಗರಣ ನಡೆದಿದ್ದು, ಮುಂದಿನ ಆರು ಸಂಪುಟಗಳಲ್ಲಿ ಎಲ್ಲವೂ ಹೊರಗೆ ಬರಲಿದೆ. ಹದಿನೈದು ದಿನದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜೀನಾಮೆ ನೀಡಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಹೇಳಿದ್ದಾರೆ. ಮುಂದಿನ ಹದಿನೈದು ದಿನಗಳಲ್ಲಿ ಕೊರೋನಾ ಹಗರಣ ಯಾವ ಸ್ವರೂಪ ಪಡೆಯಲಿದೆ ಎಂಬುದನ್ನು ಕಾದು ನೋಡಲಿ ಎಂದೂ ಅವರು ಎಚ್ಚರಿಕೆ ನೀಡಿದ್ದಾರೆ.

ಭಾನುವಾರ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕೊರೋನಾ ವೇಳೆ 37,206 ಮಂದಿ ಮಾತ್ರ ಸಾವನ್ನಪ್ಪಿರುವುದಾಗಿ ಅಂದಿನ ರಾಜ್ಯ ಸರ್ಕಾರ ಹೇಳಿತ್ತು. ಆದರೆ ಕೇಂದ್ರ ಸರ್ಕಾರದ ಡೈರೆಕ್ಟೊರೆಟ್‌ ಆಫ್ ಎಕನಾಮಿಕ್ಸ್ ಅಂಡ್ ಸ್ಟಾಟಿಸ್ಟಿಕ್ಸ್‌ ನೀಡಿರುವ ವರದಿ ಪ್ರಕಾರ 2020ರ ಜನವರಿಯಿಂದ ಜುಲೈವರೆಗೆ 2 ಲಕ್ಷ 29 ಸಾವಿರ ಜನರು ಹಾಗೂ 2021ರ ಜನವರಿಯಿಂದ ಜುಲೈ ತನಕ 4.26 ಲಕ್ಷ ಜನರು ಸಾವನ್ನಪ್ಪಿದ್ದಾರೆ. ಇದು ನರೇಂದ್ರ ಮೋದಿ ನೀಡಿರುವ ಲೆಕ್ಕ. ಆದರೆ ಬಿಜೆಪಿ ಸರ್ಕಾರ 37,206 ಸಾವು ಎಂದು ಸುಳ್ಳು ಹೇಳಿದೆ. ಇದು ಬಿಜೆಪಿ ಸರ್ಕಾರದ ನಿರ್ಲಕ್ಷ್ಯ ಹಾಗೂ ಹಣದ ದುರಾಸೆಯಿಂದ ನಡೆದ ಹತ್ಯಾಕಾಂಡವೆಂದು ಆರೋಪಿಸಿದರು.

1.27 ಲಕ್ಷ ಸಾವು ಮುಚ್ಚಿಟ್ಟ ಅಧಿಕಾರಿಗಳು:

1.27 ಲಕ್ಷ ಜನ ಸಾವನ್ನಪ್ಪಿರುವುದನ್ನು ವರದಿ ಮಾಡಿಲ್ಲ. ಇಂತಹ ಗಂಭೀರ ತಪ್ಪು ಎಸಗಿರುವ ಅಧಿಕಾರಿಗಳನ್ನು ಕಠಿಣವಾಗಿ ಶಿಕ್ಷಿಸಬೇಕು. ಸಾವನ್ನಪ್ಪಿರುವವರ ವಿವರ ಪತ್ತೆ ಹಚ್ಚಿ ಅವರ ಕುಟುಂಬಗಳಿಗೆ ಸೂಕ್ತ ಪರಿಹಾರ ನೀಡಬೇಕು ಎಂದು ಕುನ್ಹಾ ಅವರ ವರದಿಯಲ್ಲಿ ಹೇಳಲಾಗಿದೆ. ಇದಕ್ಕೆ ಯಾರು ಹೊಣೆ? ಈ ಹತ್ಯಾಕಾಂಡಕ್ಕೆ ಯಾವ ಶಿಕ್ಷೆ ವಿಧಿಸುತ್ತೀರಿ? ಎಂದು ಪ್ರಿಯಾಂಕ್‌ ಖರ್ಗೆ ಅವರು ಪ್ರಧಾನಿಗಳನ್ನು ಪ್ರಶ್ನಿಸಿದರು.

ಬಿಜೆಪಿಯವರು ಹೆಣದ ಮೇಲೆ ಹಣ ಮಾಡಿದ್ದಾರೆ. ನಕಲಿ ಔಷಧ, ನಕಲಿ ಪಿಪಿಇ ಕಿಟ್‌, ನಕಲಿ ವ್ಯಾಕ್ಸಿನ್‌, ರೆಮ್‌ಡೆಸಿವರ್‌ ನೀಡಿ ಜನರನ್ನು ಸಾಯಿಸಿದ್ದಾರೆ. ಜನ ಸಾಯುತ್ತಿರುವ ಸಂದಿಗ್ಧ ಸ್ಥಿತಿಯಲ್ಲೂ ಹಣದ ಬಗ್ಗೆ ಯೋಚಿಸಿದರೇ ಹೊರತು ಮನುಷ್ಯರ ಜೀವದ ಬಗ್ಗೆ ಯೋಚಿಸಿಲ್ಲ. ಇವರು ಮನುಷ್ಯರೇ ಎಂದು ಹರಿಹಾಯ್ದರು.

ವಿಜಯೇಂದ್ರ ಹಾಗೂ ಅಶೋಕ್‌ ಅವರು ಈ ಬಗ್ಗೆ ಏನು ಹೇಳುತ್ತಾರೆ? ಇಂತಹ ಅಕ್ಷಮ್ಯ ಅಪರಾಧಗಳನ್ನು ಮಾಡಿರುವ ಪೋಕ್ಸೋ ಆರೋಪಿ ಅಪ್ಪಾಜಿ (ಬಿ.ಎಸ್‌. ಯಡಿಯೂರಪ್ಪ) ಹಾಗೂ ಬಿ. ಶ್ರೀರಾಮುಲು ಅವರನ್ನು ಅವರನ್ನು ಉಚ್ಚಾಟಿಸಲಿ. ನೈತಿಕ ಹೊಣೆ ಹೊತ್ತು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ರಾಜೀನಾಮೆ ನೀಡಲಿ ಎಂದು ಆಗ್ರಹಿಸಿದರು.

15 ದಿನ ಕಾದು ನೋಡಿ:

ಮುಂದಿನ ಹದಿನೈದು ದಿನದಲ್ಲಿ ಯಾವ್ಯಾವ ಸ್ವರೂಪ ತೆಗೆದುಕೊಳ್ಳುತ್ತದೆ ಎಂಬುದನ್ನು ನೋಡಿ. ಕಾನೂನಾತ್ಮಕವಾಗಿ ಪ್ರಕರಣವನ್ನು ನಾವು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯುತ್ತೇವೆ. ಕೇಂದ್ರ ಹಾಗೂ ಬಿಜೆಪಿಯಂತೆ ನಾವು ಕಾನೂನಾತ್ಮಕ ಸಂಸ್ಥೆಗಳ ದುರ್ಬಳಕೆ ಮಾಡಿಕೊಳ್ಳುವುದಿಲ್ಲ. ಕಾನೂನಾತ್ಮಕವಾಗಿಯೇ ಕ್ರಮ ಕೈಗೊಳ್ಳುತ್ತೇವೆ. ವೈದ್ಯಕೀಯ ಕಾಲೇಜುಗಳಲ್ಲಿ, ಆರೋಗ್ಯ ಇಲಾಖೆಯಲ್ಲಿ ಏನೇನಾಗಿದೆ ಎಂಬುದನ್ನು ಎಲ್ಲವನ್ನೂ ಹೊರಗೆ ತಂದು ಬಿಜೆಪಿ ಬಣ್ಣ ಬಯಲು ಮಾಡುತ್ತೇವೆ ಎಂದು ಪ್ರಿಯಾಂಕ್ ಗುಡುಗಿದರು. ಸುದ್ದಿಗೋಷ್ಠಿಯಲ್ಲಿ ಕೆಪಿಸಿಸಿ ಮಾಧ್ಯಮ ವಿಭಾಗದ ಅಧ್ಯಕ್ಷರಾದ ರಮೇಶ್ ಬಾಬು ಹಾಜರಿದ್ದರು.