ಸಾರಾಂಶ
ಮೈಕ್ರೋ ಫೈನಾನ್ಸ್ ತಡೆಗೆ ರಾಜ್ಯ ಸರ್ಕಾರ ಸುಗ್ರೀವಾಜ್ಞೆ ಹೊರಡಿಸಿದರೂ, ಮೈಕ್ರೋ ಫೈನಾನ್ಸ್ ಕಿರುಕುಳಕ್ಕೆ ಬೇಸತ್ತು ಆತ್ಮಹತ್ಯೆಗೆ ಶರಣಾಗುತ್ತಿರುವ ಪ್ರಕರಣಗಳು ದಿನೇ ದಿನೇ ಹೆಚ್ಚಾಗುತ್ತಿದೆ.
ಬೆಂಗಳೂರು : ಮೈಕ್ರೋ ಫೈನಾನ್ಸ್ ತಡೆಗೆ ರಾಜ್ಯ ಸರ್ಕಾರ ಸುಗ್ರೀವಾಜ್ಞೆ ಹೊರಡಿಸಿದರೂ, ಮೈಕ್ರೋ ಫೈನಾನ್ಸ್ ಕಿರುಕುಳಕ್ಕೆ ಬೇಸತ್ತು ಆತ್ಮಹತ್ಯೆಗೆ ಶರಣಾಗುತ್ತಿರುವ ಪ್ರಕರಣಗಳು ದಿನೇ ದಿನೇ ಹೆಚ್ಚಾಗುತ್ತಿದೆ. ಫೈನಾನ್ಸ್ ಸಿಬ್ಬಂದಿ ಕಿರುಕುಳಕ್ಕೆ ಬೇಸತ್ತು ಮೂವರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತುಮಕೂರು ಹಾಗೂ ಕೋಲಾರ ಜಿಲ್ಲೆಯಲ್ಲಿ ನಡೆದಿದೆ.
ತುಮಕೂರು ಜಿಲ್ಲೆಯ ಕುಣಿಗಲ್ ತಾಲೂಕಿನ ಕೊತ್ತಿಪುರ ಗ್ರಾಮದ ಅಜೀಜ್ ಉನ್ನಿಸಾ (59) ಮೃತ ಮಹಿಳೆ. ಇವರು ಇಬ್ಬರ ಹೆಣ್ಣು ಮಕ್ಕಳ ಮದುವೆಗಾಗಿ ಮುತ್ತೂಟ್ ಫೈನಾನ್ಸ್, ಗ್ರಾಮೀಣಕೂಟ, ಐಡಿಎಫ್‌ಸಿ, ಸೇರಿ ವಿವಿಧೆಡೆ ಒಟ್ಟು ₹12 ಲಕ್ಷ ಸಾಲ ಪಡೆದಿದ್ದರು. ಫೈನಾನ್ಸ್ ಕಂಪನಿ ಸಿಬ್ಬಂದಿ ಮನೆ ಬಾಗಿಲಿಗೆ ಬಂದು ಹಣ ಕಟ್ಟುವಂತೆ ನಿಂದಿಸಿದ್ದಾರೆ. ಇದರಿಂದ ಬೇಸತ್ತು ಶನಿವಾರ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.
ಮೀಟರ್ ಬಡ್ಡಿ ಕಿರುಕುಳಕ್ಕೆ ಆತ್ಮಹತ್ಯೆ:
ತುಮಕೂರು ಜಿಲ್ಲೆಯ ನಿವಾಸಿ ಅಂಜನಮೂರ್ತಿ(39) ಮೃತ ದುರ್ದೈವಿ. ಜಿಲ್ಲೆಯ ಎಪಿಎಂಸಿಯಲ್ಲಿ ಹಮಾಲಿ ಕೆಲಸ ಮಾಡುತ್ತಿದ್ದ ಇವರು ವಿವಿಧೆಡೆ ಮೀಟರ್ ಬಡ್ಡಿಗೆ ಸುಮಾರು ₹2 ಲಕ್ಷ ಸಾಲ ಪಡೆದಿದ್ದರು. ಸಾಲಗಾರರ ಕಿರುಕುಳಕ್ಕೆ ಬೇಸತ್ತು ವಿಷ ಕುಡಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆತ್ಮಹತ್ಯೆಗೂ ಮೊದಲು ಮೊಬೈಲ್‌ನಲ್ಲಿ ವಿಡಿಯೋ ಮಾಡಿ, ನನ್ನ ಕೈಯಲ್ಲಿ ಸಾಲ ತೀರಿಸುವುದಕ್ಕೆ ಆಗುತ್ತಿಲ್ಲ, ನಾನು ವಿಷ ತೆಗೆದುಕೊಳ್ಳುತ್ತದ್ದೇನೆ ಎಂದು ಹೇಳಿ ಸಾವಿಗೆ ಶರಣಾಗಿದ್ದಾರೆ.
ಕೋಲಾರದಲ್ಲಿ ರೈತ ನೇಣಿಗೆ:
ಕೋಲಾರ ಜಿಲ್ಲೆಯ ಮುಳಬಾಗಿಲು ತಾಲೂಕಿನ ಕೊತ್ತೂರು ಗ್ರಾಮದ ಚಂದ್ರಪ್ಪ(೪೦)ಮೃತ ರೈತ. ಇವರು ತಮ್ಮ 3 ಎಕರೆ ಜಮೀನಿನ ಜೊತೆಗೆ ಬೇರೊಬ್ಬರ ಜಮೀನಿನನ್ನು ಪಡೆದು ಕೃಷಿ ಚಟುವಟಿಕೆಗಳಿಗಾಗಿ 4 ಬ್ಯಾಂಕ್‌ಗಳು, ಖಾಸಗಿ ಮತ್ತು ಫೈನಾನ್ಸ್‌ಗಳಿಂದ ಸುಮಾರು ₹ 20 ಲಕ್ಷ ಸಾಲ ಪಡೆದಿದ್ದರು. ಸಾಲಕ್ಕಾಗಿ ಖಾಸಗಿ ಫೈನಾನ್ಸ್ ಸಿಬ್ಬಂದಿ ಮನೆಯ ಬಳಿ ಬಂದು ಹಣ ಕಟ್ಟುವಂತೆ ನಿಂದಿಸಿದ್ದರು. ಇದರಿಂದ ಬೇಸತ್ತು ಶನಿವಾರ ತಮ್ಮ ಜಮೀನಿನ ಮರವೊಂದಕ್ಕೆ ಹಗ್ಗದಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.