ಧರ್ಮಸ್ಥಳ ಕೇಸ್‌ ಅನಾಮಿಕ ಹಿಂದೆ ಯಾರ ಕೈವಾಡ ತನಿಖೆ : ದಿನೇಶ್‌

| N/A | Published : Aug 14 2025, 11:56 AM IST / Updated: Aug 14 2025, 11:57 AM IST

Dinesh gundurao
ಧರ್ಮಸ್ಥಳ ಕೇಸ್‌ ಅನಾಮಿಕ ಹಿಂದೆ ಯಾರ ಕೈವಾಡ ತನಿಖೆ : ದಿನೇಶ್‌
Share this Article
  • FB
  • TW
  • Linkdin
  • Email

ಸಾರಾಂಶ

‘ಧರ್ಮಸ್ಥಳ ಗ್ರಾಮದಲ್ಲಿ ಶವಗಳನ್ನು ಹೂಳಲಾಗಿದೆ ಎಂದು ಅನೇಕ ಸಂಘಟನೆಗಳು, ಗಣ್ಯರು ರಾಷ್ಟ್ರೀಯ ಮಟ್ಟದಲ್ಲಿ ಸುದ್ದಿ ಹಬ್ಬಿಸಿದರು. ಇಲ್ಲಿಯವರೆಗೂ ಅಂತಹದ್ದು ಏನೂ ದೊರೆತಿಲ್ಲ.

ಬೆಂಗಳೂರು: ‘ಧರ್ಮಸ್ಥಳ ಗ್ರಾಮದಲ್ಲಿ ಶವಗಳನ್ನು ಹೂಳಲಾಗಿದೆ ಎಂದು ಅನೇಕ ಸಂಘಟನೆಗಳು, ಗಣ್ಯರು ರಾಷ್ಟ್ರೀಯ ಮಟ್ಟದಲ್ಲಿ ಸುದ್ದಿ ಹಬ್ಬಿಸಿದರು. ಇಲ್ಲಿಯವರೆಗೂ ಅಂತಹದ್ದು ಏನೂ ದೊರೆತಿಲ್ಲ. ಆದ್ದರಿಂದ, ಅನಾಮಿಕ ಯಾರು? ಅವರ ಹಿಂದೆ ಯಾರಿದ್ದಾರೆ ? ಎಂಬುದು ಸೇರಿ ಎಲ್ಲವನ್ನೂ ತನಿಖೆ ನಡೆಸಬೇಕಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ಆರೋಗ್ಯ ಸಚಿವ ದಿನೇಶ್‌ ಗುಂಡೂರಾವ್‌ ಹೇಳಿದ್ದಾರೆ. 

ಧರ್ಮಸ್ಥಳ ಬಗ್ಗೆ ಸುಳ್ಳು ಆರೋಪ ಮಾಡಿದವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ರಾಜ್ಯದ ಹಲವೆಡೆ ಭಕ್ತರು, ಸಂಘಟನೆಗಳು ಬುಧವಾರ ಪ್ರತಿಭಟನೆ ನಡೆಸಿದ್ದು ಸದನದಲ್ಲೂ ಈ ವಿಷಯ ಮಾರ್ದನಿಸಿತ್ತು. ಈ ಬಗ್ಗೆ ಸುದ್ದಿಗಾರರು ಪ್ರಶ್ನಿಸಿದಾಗ ಉತ್ತರಿಸಿದ ಸಚಿವರು, ‘ಪ್ರಪಂಚದಲ್ಲೇ ಈ ರೀತಿ ಎಲ್ಲೂ ಆಗಿಲ್ಲ ಎಂದು ಸಾಕ್ಷಿ ಇಲ್ಲದೇ ಕೆಲವರು ಬಿಂಬಿಸಿದ್ದಾರೆ. ಅವರ ಉದ್ದೇಶ ಏನಾಗಿತ್ತು ಎಂಬ ಬಗ್ಗೆ ಸರಿಯಾದ ತನಿಖೆ ಆಗಬೇಕು’ ಎಂದು ಹೇಳಿದರು.

‘ಧರ್ಮಸ್ಥಳ ವಿರುದ್ಧವಾಗಿ ಪ್ರಚಾರ ನಡೆಸಲಾಗಿತ್ತು. ರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗುವಂತೆ ಘಟನೆಯನ್ನು ವೈಭವೀಕರಿಸಿದರು. ಭಯಾನಕವಾಗಿ ಏನೋ ನಡೆದಿದೆ ಎಂದು ಅನೇಕ ಗಣ್ಯರು, ಸಂಘಟನೆಗಳು ಹೇಳಿದ್ದವು. ಆಗ ಧರ್ಮಸ್ಥಳದವರೂ ವಿಶೇಷ ತನಿಖಾ ತಂಡ(ಎಸ್‌ಐಟಿ) ರಚಿಸಲಿ ಎಂದು ಹೇಳಿದ್ದರು. ಅದರಂತೆ ಕಾನೂನು ಪ್ರಕಾರ ಎಸ್‌ಐಟಿ ರಚನೆಯಾಯಿತು. ಆದರೆ ಇಲ್ಲಿಯವರೆಗೂ ಗುರುತು ಮಾಡಿದ ಸ್ಥಳಗಳಲ್ಲಿ ಅಂತಹದ್ದು ಏನೂ ದೊರೆತಿಲ್ಲ’ ಎಂದು ದೃಢಪಡಿಸಿದರು.

ಎಲ್ಲವೂ ತನಿಖೆ ನಡೆಸಬೇಕಿದೆ:

ಎಸ್‌ಐಟಿ ನಿಷ್ಪಕ್ಷಪಾತವಾಗಿ ತನಿಖೆ ನಡೆಸುತ್ತಿದೆ. ನಾವು ಯಾರ ಪರವೂ ಇಲ್ಲ. ಸತ್ಯದ ಪರ ಇದ್ದೇವೆ. ಇವರು ಏಕೆ ಈ ರೀತಿ ವೈಭವೀಕರಿಸಿದರು ಎಂಬುದು ತಿಳಿದಿಲ್ಲ. ಅವರ ನಿಜವಾದ ಉದ್ದೇಶ ಏನಾಗಿತ್ತು? ಕಳಂಕ ತರುವ ರೀತಿ, ಭಾರೀ ಭಯ, ಗಾಬರಿ ಹುಟ್ಟಿಸುವ ಅವರ ಹಿಂದಿನ ಉದ್ದೇಶ ಏನಾಗಿತ್ತು? ಅನಾಮಿಕ ಯಾರು? ಅವರ ಹಿಂದೆ ಯಾರಿದ್ದಾರೆ? ಎಂಬುದು ಸೇರಿ ಎಲ್ಲವೂ ತನಿಖೆ ನಡೆಸಬೇಕಿದೆ ಎಂದು ವಿವರಿಸಿದರು.

‘ಪುನಃ ಧರ್ಮಸ್ಥಳದಲ್ಲಿ ಗುಂಡಿಗಳನ್ನು ತೆಗೆಯಲಾಗುತ್ತದೆಯೇ ಅಥವಾ ಇಲ್ಲಿಗೇ ನಿಲ್ಲಿಸಲಾಗುತ್ತದೆಯೇ’ ಎಂದು ಸುದ್ದಿಗಾರರು ಪ್ರಶ್ನಿಸಿದಾಗ, ‘ಇದನ್ನು ನಾನು ಹೇಳಲು ಬರುವುದಿಲ್ಲ. ಗೃಹ ಸಚಿವ ಡಾ.ಜಿ.ಪರಮೇಶ್ವರ್‌ ಅವರು ಸದನದಲ್ಲಿ ಹೇಳಲಿದ್ದಾರೆ’ ಎಂದು ಪ್ರತಿಕ್ರಿಯಿಸಿದರು.

‘ಧರ್ಮಸ್ಥಳದ ವಿರುದ್ಧ ಅಪಪ್ರಚಾರ ನಡೆಸಿರುವುದರ ವಿರುದ್ಧ ಸೂಕ್ತ ತನಿಖೆಗೆ ಆಗ್ರಹಿಸಿ ಬಿಜೆಪಿಯವರು ಧರ್ಮಸ್ಥಳ ಚಲೋ ನಡೆಸಲಿದ್ದಾರಲ್ಲಾ’ ಎಂದು ಸುದ್ದಿಗಾರರು ಪ್ರಶ್ನಿದಾಗ, ‘ಬಿಜೆಪಿಯವರು ಈವರೆಗೂ ರ್‍ಯಾಲಿ ಮಾಡಿರಲಿಲ್ಲ. ಈಗ ರಾಜಕೀಯ ಲಾಭ ಪಡೆದುಕೊಳ್ಳಲು ಹೋಗುತ್ತಿದ್ದಾರೆ. ಅಧಿಕಾರಕ್ಕೆ ಬರಬೇಕು, ಲೂಟಿ ಹೊಡೆಯಬೇಕು ಎಂದು ಜನರ ಮಧ್ಯೆ ಈ ರೀತಿ ರಾಜಕೀಯ ಪ್ರಯೋಜನ ಪಡೆಯಲು ಪ್ರಯತ್ನ ಮಾಡುತ್ತಿದ್ದಾರೆ ಎಂದು ಟೀಕಿಸಿದರು.

Read more Articles on