ಧರ್ಮಸ್ಥಳ ಪ್ರಕರಣ ಸಂಬಂಧ ಸಮಗ್ರ ತನಿಖೆ ನಡೆಸಲು ವಿಶೇಷ ತನಿಖಾ ತಂಡ (ಎಸ್‌ಐಟಿ) ರಚನೆ ಬೆನ್ನಲ್ಲೇ ತಂಡದ ಇಬ್ಬರು ಐಪಿಎಸ್‌ ಅಧಿಕಾರಿಗಳು ಈ ತಂಡದಿಂದ ಹೊರಗುಳಿಯಲು ಮುಂದಾಗಿದ್ದಾರೆ.  

 ಬೆಂಗಳೂರು : ಧರ್ಮಸ್ಥಳ ಪ್ರಕರಣ ಸಂಬಂಧ ಸಮಗ್ರ ತನಿಖೆ ನಡೆಸಲು ವಿಶೇಷ ತನಿಖಾ ತಂಡ (ಎಸ್‌ಐಟಿ) ರಚನೆ ಬೆನ್ನಲ್ಲೇ ತಂಡದ ಇಬ್ಬರು ಐಪಿಎಸ್‌ ಅಧಿಕಾರಿಗಳು ಈ ತಂಡದಿಂದ ಹೊರಗುಳಿಯಲು ಮುಂದಾಗಿದ್ದಾರೆ. ಈ ಸಂಬಂಧ ರಾಜ್ಯ ಸರ್ಕಾರಕ್ಕೆ ಪತ್ರ ಬರೆಯುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.

ರಾಜ್ಯ ಸರ್ಕಾರ ಪ್ರಕರಣದ ಸಮಗ್ರ ತನಿಖೆ ಸಂಬಂಧ ನಾಲ್ವರು ಐಪಿಎಸ್‌ ಅಧಿಕಾರಿಗಳನ್ನೊಳಗೊಂಡ ಎಸ್‌ಐಟಿ ರಚಿಸಿದೆ. ಇದರಲ್ಲಿ ಇಬ್ಬರು ಐಪಿಎಸ್‌ ಅಧಿಕಾರಿಗಳು ವೈಯಕ್ತಿಕ ಕಾರಣ ಮುಂದಿಟ್ಟುಕೊಂಡು ತನಿಖಾ ತಂಡದಿಂದ ಹೊರಗುಳಿಯಲು ಮುಂದಾಗಿದ್ದಾರೆ ಎಂದು ತಿಳಿದು ಬಂದಿದೆ.

ಈ ಪ್ರಕರಣ ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಭಾರೀ ಚರ್ಚೆಗೆ ಗ್ರಾಸವಾದ ಬೆನ್ನಲ್ಲೇ ರಾಜ್ಯ ಸರ್ಕಾರ ಗಂಭೀರವಾಗಿ ಪರಿಗಣಿಸಿ ಪ್ರಕರಣದ ಸಮಗ್ರ ತನಿಖೆಗೆ ಎಸ್‌ಐಟಿ ರಚಿಸಿದೆ. ಈ ಹಿಂದೆ ಗಂಭೀರ ಪ್ರಕರಣಗಳ ತನಿಖೆಯಲ್ಲಿ ತೋರಿದ ಕರ್ತವ್ಯ ನಿಷ್ಠೆ ಹಾಗೂ ಕಾರ್ಯ ದಕ್ಷತೆ ಆಧರಿಸಿ ನಾಲ್ವರು ಐಪಿಎಸ್ ಅಧಿಕಾರಿಗಳನ್ನು ಈ ಎಸ್‌ಐಟಿಗೆ ಆಯ್ಕೆ ಮಾಡಿದೆ.

ಇದೀಗ ಎಸ್‌ಐಟಿಯಿಂದ ಇಬ್ಬರು ಐಪಿಎಸ್‌ ಅಧಿಕಾರಿಗಳು ಹೊರಬರಲು ಮನಸ್ಸು ಮಾಡಿದ್ದಾರೆ. ಒಂದು ವೇಳೆ ಅವರು ಈ ಎಸ್‌ಐಟಿಯಿಂದ ತಮ್ಮನ್ನು ಕೈ ಬಿಡುವಂತೆ ಸರ್ಕಾರಕ್ಕೆ ಪತ್ರ ಬರೆದರೆ, ಸರ್ಕಾರ ಆ ಇಬ್ಬರು ಅಧಿಕಾರಿಗಳನ್ನು ಕರೆಸಿ ಮನವೊಲಿಸುವ ಸಾಧ್ಯತೆಯೂ ಇದೆ ಎನ್ನಲಾಗಿದೆ.