ಸಾರಾಂಶ
ದಲಿತ ಜನಪದ ಕಲಾವಿದರ ಬದುಕು ಮತ್ತು ಸಾಧನೆ ದಾಖಲಿಸುವ ಡಿಜಿಟಲ್ ಆತ್ಮಕಥೆ ಯೋಜನೆ ರೂಪುಗೊಂಡು ದಶಕ ಕಳೆದರು ಇಂದಿಗೂ ಸಾಕಾರಗೊಂಡಿಲ್ಲ. ಯೋಜನೆಗೆಂದು ಮಂಜೂರಾದ 2.50 ಕೋಟಿ ರು. ಅಕಾಡೆಮಿ ಖಾತೆಯಲ್ಲೇ ಉಳಿಯುವಂತಾಗಿದೆ.
ಬೆಂಗಳೂರು : ದಲಿತ ಜನಪದ ಕಲಾವಿದರ ಬದುಕು ಮತ್ತು ಸಾಧನೆ ದಾಖಲಿಸುವ ಡಿಜಿಟಲ್ ಆತ್ಮಕಥೆ ಯೋಜನೆ ರೂಪುಗೊಂಡು ದಶಕ ಕಳೆದರು ಇಂದಿಗೂ ಸಾಕಾರಗೊಂಡಿಲ್ಲ. ಯೋಜನೆಗೆಂದು ಮಂಜೂರಾದ 2.50 ಕೋಟಿ ರು. ಅಕಾಡೆಮಿ ಖಾತೆಯಲ್ಲೇ ಉಳಿಯುವಂತಾಗಿದೆ.
ಮೂಲ ಜಾನಪದ ಕಲಾವಿದರ ಆತ್ಮಕಥನವನ್ನು ಸಾಕ್ಷ್ಯಚಿತ್ರದ ಮೂಲಕ ಡಿಜಿಟಲೀಕರಣಗೊಳಿಸುವ ಡಿಜಿಟಲ್ ಆತ್ಮಕಥೆ ಯೋಜನೆಗೆ 2015ರಲ್ಲಿ ಕರ್ನಾಟಕ ಜಾನಪದ ಅಕಾಡೆಮಿ ಅಧ್ಯಕ್ಷರಾಗಿದ್ದ ಪಿಚ್ಚಳ್ಳಿ ಶ್ರೀನಿವಾಸ್ ಯೋಜನೆ ರೂಪಿಸಿದ್ದರು. ಅಂದಿನ ಕನ್ನಡ ಮತ್ತು ಸಂಸ್ಕೃತಿ ಸಚಿವೆ ಉಮಾಶ್ರೀ ಅವರು, ಎಸ್ಸಿಎಸ್ಪಿ ಟಿಎಸ್ಪಿಯಡಿ 2.50 ಕೋಟಿ ರು.ಗಳನ್ನು ಯೋಜನೆಗೆಂದು ಮಂಜೂರು ಮಾಡಿದ್ದರು.
ಪ್ರೊ.ಬರಗೂರು ರಾಮಚಂದ್ರಪ್ಪ ನೇತೃತ್ವದ ತಜ್ಞರ ಸಮಿತಿ ಯೋಜನೆ ರೂಪುರೇಷೆ ಸಿದ್ಧಪಡಿಸಿ ದಲಿತ ಜನಪದ ಕಲಾವಿದರ ಇಡೀ ಬದುಕಿನ ಅನುಭವ ಸಾಧನೆಯನ್ನು ಚಿತ್ರೀಕರಿಸಿ ಒಂದು ತಾಸಿನ ಸಾಕ್ಷ್ಯಚಿತ್ರ ತಯಾರಿಸಬೇಕೆಂದು ಶಿಫಾರಸು ಮಾಡಿತ್ತು. ಆದರೆ, ಯೋಜನೆ ರೂಪುಗೊಂಡು ಪೂರ್ವ ಸಿದ್ಧತಾ ಕಾರ್ಯ ನಡೆದು ದಶಕಗಳು ಕಳೆದಿದ್ದರೂ ಯೋಜನೆ ಕಾರ್ಯರೂಪಕ್ಕೆ ಬಂದಿಲ್ಲ.
ಡಿಜಿಟಲ್ ಆತ್ಮಕಥೆ ಯೋಜನೆ ಅಡ್ಡಿಯಾಗಿರುವುದು ಟೆಂಡರ್-4ಜಿ ತಿಕ್ಕಾಟ ಎನ್ನಲಾಗಿದೆ. ಪ್ರತಿ ಸಾಕ್ಷ್ಯ ಚಿತ್ರಕ್ಕೆ ಕನಿಷ್ಠ 2ರಿಂದ 4 ಲಕ್ಷ ರು.ಖರ್ಚಾಗಲಿದೆ. ಈ ಹಿನ್ನೆಲೆಯಲ್ಲಿ ಟೆಂಡರ್ ಮೂಲಕ ಯೋಜನೆ ಜಾರಿಗೊಳಿಸಬೇಕು ಎಂಬುದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಚಿಂತನೆ. ಆದರೆ, 4ಜಿ ವಿನಾಯಿತಿ ಕೋರಿ ಕಳುಹಿಸಿರುವ ಕಡತ ಅಕಾಡೆಮಿಗೆ ವಾಪಸ್ಸಾಗುತ್ತಿದೆ.
4ಜಿ ವಿನಾಯಿತಿ ಅಡ್ಡಿ:
ಈ ಮಧ್ಯೆ 4ಜಿ ವಿನಾಯಿತಿ ನೀಡದಿದ್ದರೂ ವಾರ್ತಾ ಮತ್ತು ಸಾರ್ವಜನಿಕ ಇಲಾಖೆಯ ಸಾಕ್ಷ್ಯಚಿತ್ರಗಳ ನಿರ್ಮಾಣಕ್ಕೆ ರೂಪಿಸಿರುವ ಮಾದರಿಯನ್ನು ಅನುಸರಿಸಲು ಅನುಮತಿ ಕೋರಿ ಜಾನಪದ ಅಕಾಡೆಮಿ ಅಧ್ಯಕ್ಷ ಡಾ.ಗೊಲ್ಲಹಳ್ಳಿ ಶಿವಪ್ರಸಾದ್ ಮತ್ತು ರಿಜಿಸ್ಟ್ರಾರ್ ಕಡತನವನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ಕಳುಹಿಸಿ ಕೊಟ್ಟಿದ್ದಾರೆ. ಇಂದಿಗೂ ಅನುಮತಿ ಮಾತ್ರ ಸಿಕ್ಕಿಲ್ಲ ಎಂದು ಅಕಾಡೆಮಿ ಮೂಲಗಳು ತಿಳಿಸಿವೆ.