ಕೆಆರ್‌ಎಸ್‌ ಥೀಮ್‌ ಪಾರ್ಕಿಗೆ ತಜ್ಞರ ಸಮ್ಮತಿ ಇದೆಯೇ?: ಕೋರ್ಟ್

| N/A | Published : Jun 28 2025, 08:29 AM IST

KRS Dam
ಕೆಆರ್‌ಎಸ್‌ ಥೀಮ್‌ ಪಾರ್ಕಿಗೆ ತಜ್ಞರ ಸಮ್ಮತಿ ಇದೆಯೇ?: ಕೋರ್ಟ್
Share this Article
  • FB
  • TW
  • Linkdin
  • Email

ಸಾರಾಂಶ

ಕೆಆರ್‌ಎಸ್‌ ಜಲಾಶಯದ ಬೃಂದಾವನ ಉದ್ಯಾನ ಆವರಣದಲ್ಲಿ ಅಮ್ಯೂಸ್‌ಮೆಂಟ್‌ ಮತ್ತು ಥೀಮ್‌ ಪಾರ್ಕ್‌ ನಿರ್ಮಾಣ ಹಾಗೂ ಕಾವೇರಿ ಪ್ರತಿಮೆ ಸ್ಥಾಪನೆ ಕಾಮಗಾರಿಗೆ ತಾಂತ್ರಿಕ ತಜ್ಞರ ಅನುಮತಿ ಪಡೆಯಲಾಗಿದೆಯೇ? ಎಂಬ ಬಗ್ಗೆ ಉತ್ತರಿಸಿ ಎರಡು ವಾರದಲ್ಲಿ ಪ್ರಮಾಣ ಪತ್ರ ಸಲ್ಲಿಸುವಂತೆ ಹೈಕೋರ್ಟ್‌ ನಿರ್ದೇಶಿಸಿದೆ.

ಬೆಂಗಳೂರು : ಕೃಷ್ಣರಾಜ ಸಾಗರ (ಕೆಆರ್‌ಎಸ್‌) ಜಲಾಶಯದ ಬೃಂದಾವನ ಉದ್ಯಾನ ಆವರಣದಲ್ಲಿ ಅಮ್ಯೂಸ್‌ಮೆಂಟ್‌ ಮತ್ತು ಥೀಮ್‌ ಪಾರ್ಕ್‌ (ಮನೋರಂಜನೆ ಉದ್ಯಾನ) ನಿರ್ಮಾಣ ಹಾಗೂ ಕಾವೇರಿ ಪ್ರತಿಮೆ ಸ್ಥಾಪನೆ ಕಾಮಗಾರಿಗೆ ತಾಂತ್ರಿಕ ತಜ್ಞರ ಅನುಮತಿ ಪಡೆಯಲಾಗಿದೆಯೇ? ಎಂಬ ಬಗ್ಗೆ ಉತ್ತರಿಸಿ ಎರಡು ವಾರದಲ್ಲಿ ಪ್ರಮಾಣ ಪತ್ರ ಸಲ್ಲಿಸುವಂತೆ ರಾಜ್ಯ ಸರ್ಕಾರ ಮತ್ತು ಕಾವೇರಿ ನಿಗಮಕ್ಕೆ ಹೈಕೋರ್ಟ್‌ ನಿರ್ದೇಶಿಸಿದೆ.

ಕೆಆರ್‌ಎಸ್ ಡ್ಯಾಂ ಬಳಿ ಗಂಗಾ ಆರತಿ ಮಾದರಿಯಲ್ಲಿ ಕಾವೇರಿ ಆರತಿ ಆಯೋಜಿಸುವ ಮತ್ತು ಬೃಂದಾವನ ಉದ್ಯಾನ ಆವರಣದಲ್ಲಿ ಮನರಂಜನಾ ಪಾರ್ಕ್‌ ನಿರ್ಮಾಣ ಕಾಮಗಾರಿ ಪ್ರಶ್ನಿಸಿ ರೈತ ನಾಯಕಿ, ಮಂಡ್ಯ ಜಿಲ್ಲೆಯ ಸುನಂದಾ ಜಯರಾಂ ಮತ್ತು ರೈತರಾದ ಕೆ.ಬೋರಯ್ಯ ಮತ್ತಿತರರು ಎರಡು ಪ್ರತ್ಯೇಕ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು.

ಕೆಲ ಕಾಲ ಅರ್ಜಿದಾರರ ಪರ ವಕೀಲರು ಮತ್ತು ಸರ್ಕಾರಿ ವಕೀಲರ ವಾದ-ಪ್ರತಿವಾದ ಆಲಿಸಿದ ಹಂಗಾಮಿ ಮುಖ್ಯ ನ್ಯಾಯಮೂರ್ತಿ ವಿ.ಕಾಮೇಶ್ವರ್‌ ರಾವ್ ಅವರ ನೇತೃತ್ವದ ವಿಭಾಗೀಯ ಪೀಠ, ಕಾಮಗಾರಿಗೆ ಭೂಮಿ ಅಗೆಯುವುದರಿಂದ ಜಲಾಶಯಕ್ಕೆ ಹಾನಿಯಾಗುವುದಿಲ್ಲವೇ? ಜಲಾಶಯಕ್ಕೆ ಸುರಕ್ಷತೆ ಸಮಿತಿಯ ಅನುಮತಿ ಏಕೆ ಪಡೆದಿಲ್ಲ? ಮನರಂಜನಾ ಪಾರ್ಕ್ ಕಾಮಗಾರಿಗೆ ತಾಂತ್ರಿಕ ತಜ್ಙರ ಅನುಮತಿ ಪಡೆಯಲಾಗಿದೆಯೇ? ಕಾವೇರಿ ಪ್ರತಿಮೆ ಸ್ಥಾಪಿಸುವಾಗ ತಜ್ಞರ ಸಲಹೆ ಪಾಲಿಸಲಾಗಿದೆಯೇ? ಎಂಬ ಬಗ್ಗೆ ಉತ್ತರಿಸಿ ಪ್ರಮಾಣ ಪತ್ರ ಸಲ್ಲಿಸುವಂತೆ ಸರ್ಕಾರಕ್ಕೆ ನಿರ್ದೇಶಿಸಿತು.

ಅಲ್ಲದೆ, ಅರ್ಜಿಗಳಲ್ಲಿ ಪ್ರತಿವಾದಿಗಳಾಗಿರುವ ಕೇಂದ್ರ, ರಾಜ್ಯ ಸರ್ಕಾರ, ರಾಷ್ಟ್ರೀಯ ಜಲಾಶಯ ಸುರಕ್ಷತಾ ಪ್ರಾಧಿಕಾರ, ಜಲಸಂಪನ್ಮೂಲ, ಪ್ರವಾಸೋದ್ಯಮ ಇಲಾಖೆ, ಕಾವೇರಿ ನೀರಾವರಿ ನಿಗಮ, ಮಂಡ್ಯ ಜಿಲ್ಲಾಡಳಿತ ಮತ್ತು ಪೊಲೀಸ್‌ ವರಿಷ್ಠಾಧಿಕಾರಿಗೆ ನೋಟಿಸ್‌ ಜಾರಿಗೊಳಿಸಿ ವಿಚಾರಣೆ ಮುಂದೂಡಿತು.

ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲ ಎಂ. ಶಿವಪ್ರಕಾಶ್‌ ವಾದ ಮಂಡಿಸಿ, ಕೆಆರ್‌ಎಸ್‌ ಬಳಿ 120 ಅಡಿಯ ಕಾವೇರಿ ವಿಗ್ರಹ ಸ್ಥಾಪಿಸಲಾಗುತ್ತಿದೆ. ಕಾಮಗಾರಿಗೆ ಪೂರಕವಾಗಿ ಫೋಟೋ ಸಲ್ಲಿಕೆ ಮಾಡಲಾಗಿದೆ ಎಂದು ನ್ಯಾಯಪೀಠಕ್ಕೆ ತಿಳಿಸಿದರು.

ರಾಜ್ಯ ಸರ್ಕಾರದ ಅಡ್ವೊಕೇಟ್‌ ಜನರಲ್‌ ಕೆ. ಶಶಿಕಿರಣ್‌ ಶೆಟ್ಟಿ, ಕಾವೇರಿ ಪ್ರತಿಮೆ ಸ್ಥಾಪಿಸಲು ಮಾತ್ರ ಟೆಂಡರ್ ನೀಡಲಾಗಿದೆ. ಕಾವೇರಿ ಪ್ರತಿಮೆ ಸ್ಥಾಪನೆಗೆ ತಾಂತ್ರಿಕ ತಜ್ಞರ ಅನುಮತಿ ಪಡೆಯಲಾಗಿದೆ. ಮನರಂಜನಾ ಪಾರ್ಕ್ ಕಾಮಗಾರಿಯ ಟೆಂಡರ್ ಪೂರ್ಣಗೊಂಡಿಲ್ಲ ಎಂದು ತಿಳಿಸಿದರು.

Read more Articles on