ಸಾರಾಂಶ
ನೆಲಮಂಗಲ ವ್ಯಾಪ್ತಿಯಲ್ಲಿ ಇನ್ನು ಮುಂದೆ ಯಾವುದೇ ಭೂಸ್ವಾಧೀನ ಮಾಡುವಂತಹ ಕ್ರಮಗಳನ್ನು ಕೈಗೊಳ್ಳದಂತೆ ಶಾಸಕ ಎನ್. ಶ್ರೀನಿವಾಸ್ ಅವರು ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ಅವರಲ್ಲಿ ಮನವಿ
ವಿಧಾನಸಭೆ : ನೆಲಮಂಗಲ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಇನ್ನು ಮುಂದೆ ಯಾವುದೇ ಭೂಸ್ವಾಧೀನ ಮಾಡುವಂತಹ ಕ್ರಮಗಳನ್ನು ಕೈಗೊಳ್ಳದಂತೆ ಶಾಸಕ ಎನ್. ಶ್ರೀನಿವಾಸ್ ಅವರು ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ಅವರಲ್ಲಿ ಮನವಿ ಮಾಡಿದ್ದು, ಆಮೂಲಕ ನೆಲಮಂಗಲದಲ್ಲಿ 2ನೇ ಅಂತಾರಾಷ್ಟ್ರೀಯ ವಿಮಾನನಿಲ್ದಾಣ ಸ್ಥಾಪನೆ ಬೇಡ ಎಂದು ಪರೋಕ್ಷವಾಗಿ ತಿಳಿಸಿದ್ದಾರೆ.
ನೆಲಮಂಗಲದಲ್ಲಿ ಕೆಐಎಡಿಬಿ ಹಾಗೂ ಸರ್ಕಾರದಿಂದ ವಿವಿಧ ಯೋಜನೆಗಳಿಗಾಗಿ ಭೂಸ್ವಾಧೀನ ಮಾಡಿಕೊಂಡು ಭೂ ಮಾಲೀಕರಿಗೆ ಪರಿಹಾರ ನೀಡದಿರುವ ಕುರಿತು ಎನ್. ಶ್ರೀನಿವಾಸ್ ಅವರು ಸಚಿವ ಎಂ.ಬಿ. ಪಾಟೀಲ್ ಗಮನ ಸೆಳೆದರು.
ಅದಕ್ಕುತ್ತರಿಸಿದ ಎಂ.ಬಿ. ಪಾಟೀಲ್, ಕೆಐಎಡಿಬಿಯಿಂದ ಭೂಮಿ ಸ್ವಾಧೀನ ಮಾಡಿಕೊಳ್ಳಲಾಗಿರುವಲ್ಲಿ ಬಗರ್‌ಹುಕುಂ ಭೂಮಿಗಳಿಗೆ ಮಾತ್ರ ಪರಿಹಾರ ನೀಡಿಲ್ಲ. ಆ ಭೂಮಿಯಲ್ಲಿ ರೈತರು 20ರಿಂದ 30 ವರ್ಷಗಳಿಂದ ಸಾಗುವಳಿ ಮಾಡುತ್ತಿದ್ದರೂ, ಬಗರ್‌ಹುಕುಂ ಅಡಿಯಲ್ಲಿ ಅವರಿಗೆ ಭೂಮಿ ಮಂಜೂರಾಗಿಲ್ಲ ಹಾಗೂ ಸಾಗುವಳಿ ಚೀಟಿಯನ್ನೂ ನೀಡಿಲ್ಲ. ಹೀಗಾಗಿ ಅವರಿಗೆ ಪರಿಹಾರ ನೀಡಲು ಸಾಧ್ಯವಾಗಿಲ್ಲ. ಹೀಗಾಗಿ ರೈತರಿಗೆ ಪರಿಹಾರ ನೀಡಲು ಸಾಧ್ಯವೇ ಎಂಬ ಬಗ್ಗೆ ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಅದಕ್ಕೆ ಎನ್. ಶ್ರೀನಿವಾಸ್, ಸರ್ಕಾರ ಅಥವಾ ಬೇರೆ ಇಲಾಖೆಗಳು ಭೂಸ್ವಾಧೀನ ಮಾಡಿಕೊಂಡು ಪರಿಹಾರ ನೀಡುವುದಿಲ್ಲ. ಇದರಿಂದ ಕ್ಷೇತ್ರದ ರೈತರು ನನ್ನನ್ನು ತರಾಟೆಗೆ ತೆಗೆದುಕೊಳ್ಳುತ್ತಾರೆ. ಹೀಗಾಗಿ ಇನ್ನು ಮುಂದೆ ನೆಲಮಂಗಲದಲ್ಲಿ ಯಾವುದೇ ಭೂಸ್ವಾಧೀನ ಮಾಡಿಕೊಳ್ಳುವಂತಹ ಯೋಜನೆ ಜಾರಿಗೊಳಿಸಬೇಡಿ ಎಂದು ಹೇಳಿದರು.