ಸಾರಾಂಶ
ಹಿಂದಿನ ಬಿಜೆಪಿ ಸರ್ಕಾರದ ಆರ್ಥಿಕ ಅಶಿಸ್ತಿನಿಂದ ಗುತ್ತಿಗೆದಾರರ ಸಾವಿರಾರು ಕೋಟಿ ರು. ಬಾಕಿ ಇದೆ. ಆಗಿರುವ ತಪ್ಪು ಸರಿಪಡಿಸುವ ಕೆಲಸ ಮಾಡಲಾಗುತ್ತಿದ್ದು, ಹಂತ ಹಂತವಾಗಿ ಬಾಕಿ ಬಿಡುಗಡೆಗೆ ಸಮಯ ಬೇಕು.
ಬೆಂಗಳೂರು : ಹಿಂದಿನ ಬಿಜೆಪಿ ಸರ್ಕಾರದ ಆರ್ಥಿಕ ಅಶಿಸ್ತಿನಿಂದ ಗುತ್ತಿಗೆದಾರರ ಸಾವಿರಾರು ಕೋಟಿ ರು. ಬಾಕಿ ಇದೆ. ಆಗಿರುವ ತಪ್ಪು ಸರಿಪಡಿಸುವ ಕೆಲಸ ಮಾಡಲಾಗುತ್ತಿದ್ದು, ಹಂತ ಹಂತವಾಗಿ ಬಾಕಿ ಬಿಡುಗಡೆಗೆ ಸಮಯ ಬೇಕು.
ಹೀಗಂತ ಬಾಕಿ ಬಿಲ್ ಮೊತ್ತ ಕುರಿತ ಗುತ್ತಿಗಾರರ ಸಂಘದ ಪತ್ರಕ್ಕೆ ವಿವಿಧ ಸಚಿವರು ಪ್ರತಿಕ್ರಿಯಿಸಿದರು. ಈ ಬಗ್ಗೆ ಪ್ರತ್ಯೇಕವಾಗಿ ಹೇಳಿಕೆ ನೀಡಿರುವ ಸತೀಶ್ ಜಾರಕಿಹೊಳಿ, ಪ್ರಿಯಾಂಕ್ ಖರ್ಗೆ, ಎನ್.ಎಸ್.ಬೋಸರಾಜು, ಆರ್.ಬಿ.ತಿಮ್ಮಾಪುರ, ಡಾ.ಎಂ.ಸಿ.ಸುಧಾಕರ್, ಗುತ್ತಿಗೆದಾರರಿಗೆ ಸಾವಿರಾರು ಕೋಟಿ ರು. ಬಿಲ್ ಬಾಕಿ ಉಳಿಯಲು ಹಿಂದಿನ ಬಿಜೆಪಿ ಸರ್ಕಾರದಲ್ಲಿನ ಆರ್ಥಿಕ ಅಶಿಸ್ತು ಕಾರಣ. ಅನುದಾನ ಇಲ್ಲದಿದ್ದರೂ ಕಾಮಗಾರಿಗಳಿಗೆ ಅನುಮೋದನೆ ನೀಡುವ ಮೂಲಕ ಆ ಸರ್ಕಾರ ಮಾಡಿದ ತಪ್ಪನ್ನು ನಮ್ಮ ಸರ್ಕಾರ ಸರಿಪಡಿಸುವ ಕೆಲಸ ಮಾಡುತ್ತಿದೆ. ಇದಕ್ಕೆ ಸಮಯ ಬೇಕಾಗುತ್ತದೆ. ಗುತ್ತಿಗೆದಾರರು ಪ್ರತಿಭಟನೆ ಬದಲು ಚರ್ಚೆ ಮೂಲಕ ತಮ್ಮ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು ಎಂದು ಸಲಹೆ ನೀಡಿದ್ದಾರೆ.
ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಮಾತನಾಡಿ, ಹಿಂದಿನ ಬಿಜೆಪಿ ಸರ್ಕಾರದಲ್ಲಿ ಅನುದಾನವೇ ಇಲ್ಲದಿದ್ದರೂ ಕಾಮಗಾರಿಗಳಿಗೆ ಅನುಮೋದನೆ ನೀಡಲಾಗಿದೆ. ಇದರಿಂದ ಬಿಲ್ ಬಾಕಿ ಹೆಚ್ಚಾಗಿದೆ. ಬೇರೆ ಇಲಾಖೆಯದ್ದು ನನಗೆ ಗೊತ್ತಿಲ್ಲ. ನಮ್ಮ ಇಲಾಖೆಗೆ ಸಂಬಂಧಿಸಿ ಗುತ್ತಿಗೆದಾರರ ಸಮಸ್ಯೆಗಳನ್ನು ಪರಿಹರಿಸುವ ಸಂಬಂಧ ಸಭೆ ನಡೆಸಿ ಚರ್ಚಿಸಿದ್ದೇವೆ. ಹಂತ ಹಂತವಾಗಿ ಬಾಕಿ ಬಿಲ್ ಬಿಡುಗಡೆ ಮಾಡಲಾಗುವುದು ಎಂದು ಹೇಳಿದರು.
ಸಣ್ಣ ನೀರಾವರಿ ಸಚಿವ ಎನ್.ಎಸ್.ಬೋಸರಾಜು ಮಾತನಾಡಿ, ಗುತ್ತಿಗೆದಾರರ ಸಮಸ್ಯೆಗಳ ಪರಿಹಾರಕ್ಕೆ ಸಿದ್ಧವಿದ್ದೇವೆ. ಅವರು ಪತ್ರ ಬರೆದಿರುವಂತೆ ಸಮಯ ನೋಡಿ ಭೇಟಿಗೆ ಅವಕಾಶ ನೀಡಲಾಗುವುದು. ಈ ವೇಳೆ, ಹಿಂದಿನ ಸರ್ಕಾರದ ಕಾಮಗಾರಿಗಳು, ಬಿಲ್ ಬಾಕಿ ಬಗ್ಗೆ ಮನವರಿಕೆ ಮಾಡಿಕೊಡುತ್ತೇವೆ. ಜೊತೆಗೆ ಬಿಲ್ ಬಾಕಿಗೂ ನಮ್ಮ ಸರ್ಕಾರ ಸಂಪೂರ್ಣ ಸಹಕಾರ ನೀಡಲಿದೆ ಎಂದು ತಿಳಿಸಿದರು.
ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್ ಮಾತನಾಡಿ, ಹಿಂದಿನ ಸರ್ಕಾರದಲ್ಲಿ ಕೆಲ ಇಲಾಖೆಗಳಲ್ಲಿ ಮನಸೋ ಇಚ್ಛೆ 1 ಲಕ್ಷ ಕೋಟಿ ರು.ಗೂ ಹೆಚ್ಚಿನ ಕಾಮಗಾರಿಯನ್ನು ಬಜೆಟ್ ಅನುದಾನವಿಲ್ಲಗೆ ನೀಡಿದ್ದಾರೆ. ಹಣಕಾಸು ಶಿಸ್ತನ್ನು ಬಿಜೆಪಿ ಸರ್ಕಾರ ಉಲ್ಲಂಘಿಸಿರುವುದು ನಮ್ಮ ಪಾಲಿಗೆ ದೊಡ್ಡ ತಲೆ ನೋವಾಗಿದೆ. ಆದರೂ ಸರ್ಕಾರ ಗುತ್ತಿಗೆದಾರರ ಎಲ್ಲ ಸಮಸ್ಯೆಗಳನ್ನು ಪರಿಹರಿಸಲು ಬದ್ಧವಿದೆ ಎಂದರು.