ಸಾರಾಂಶ
ಗ್ರಾಮೀಣ ಭಾಗದಲ್ಲಿ ಇ-ಸ್ವತ್ತಿನಿಂದ ಹೊರಗುಳಿದಿರುವ 96 ಲಕ್ಷ ಅನಧಿಕೃತ ಆಸ್ತಿಗಳ ಮೇಲೆ ಶುಲ್ಕ ಅಥವಾ ದಂಡ ವಿಧಿಸಿ ಇ-ಖಾತಾ ವ್ಯವಸ್ಥೆಯಡಿ ತರುವ ಸಲುವಾಗಿ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ 1993ಕ್ಕೆ 199-ಬಿ ಹಾಗೂ 199-ಸಿ ಸೇರ್ಪಡೆ ಮಾಡಲು ಅನುಮೋದನೆ ನೀಡಲಾಗಿದೆ.
ಬೆಂಗಳೂರು : ಗ್ರಾಮೀಣ ಭಾಗದಲ್ಲಿ ಇ-ಸ್ವತ್ತಿನಿಂದ ಹೊರಗುಳಿದಿರುವ 96 ಲಕ್ಷ ಅನಧಿಕೃತ ಆಸ್ತಿಗಳ ಮೇಲೆ ಶುಲ್ಕ ಅಥವಾ ದಂಡ ವಿಧಿಸಿ ಇ-ಖಾತಾ ವ್ಯವಸ್ಥೆಯಡಿ ತರುವ ಸಲುವಾಗಿ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ 1993ಕ್ಕೆ 199-ಬಿ ಹಾಗೂ 199-ಸಿ ಸೇರ್ಪಡೆ ಮಾಡಲು ಶುಕ್ರವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ನೀಡಲಾಗಿದೆ.
ಈಗಾಗಲೇ ನಗರಾಭಿವೃದ್ಧಿ ಹಾಗೂ ಪೌರಾಡಳಿತ ಇಲಾಖೆ ವ್ಯಾಪ್ತಿಯಲ್ಲಿ ನಕ್ಷೆ ಮಂಜೂರಾತಿ ಪಡೆಯದ ಕಂದಾಯ ನಿವೇಶನ ಅಥವಾ ಕ್ರಮಬದ್ಧವಲ್ಲದ ನಿವೇಶನಗಳನ್ನೂ ವಿವಿಧ ನಮೂನೆಯಡಿ ಇ-ಸ್ವತ್ತು ಅಥವಾ ಇ-ಆಸ್ತಿ ಅಡಿ ತರಲು ಕ್ರಮ ಕೈಗೊಳ್ಳಲಾಗಿದೆ. ಆದರೆ, ಅಕ್ರಮ-ಸಕ್ರಮ ಅನ್ವಯ ಆಗುವವರೆಗೂ ಇಂತಹ ಅನಧಿಕೃತ ಆಸ್ತಿಗಳನ್ನು ಪ್ರತ್ಯೇಕ ವಹಿಯಲ್ಲಿ ನಿರ್ವಹಿಸಲು ತೀರ್ಮಾನಿಸಲಾಗಿದೆ. ಇದೇ ರೀತಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಇಲಾಖೆ ವ್ಯಾಪ್ತಿಯಲ್ಲಿ ಸಾಕಷ್ಟು ಆಸ್ತಿಗಳು ತೆರಿಗೆ ವ್ಯಾಪ್ತಿಯಿಂದ ಹೊರಗೆ ಉಳಿದಿವೆ. ಅವುಗಳಿಗೆ ಸೂಕ್ತ ದಂಡ ಅಥವಾ ಶುಲ್ಕ ವಿಧಿಸಿ ನಮೂನೆ ನೀಡಬಹುದು. ಕಂದಾಯ ನಿವೇಶನಗಳಿಗೆ ನೀಡುವ ಇ-ಖಾತಾ ಅವುಗಳಿಗೆ ಕಾನೂನು ಪ್ರಕಾರ ಸಕ್ರಮ ಮಾನ್ಯತೆ ನೀಡುವುದಿಲ್ಲ.
ಆದರೆ, ರಾಜ್ಯದಲ್ಲಿ ಎಲ್ಲಾ ರೀತಿಯ ಆಸ್ತಿ ದಸ್ತಾವೇಜು ನೋಂದಣಿಗೆ ಇ-ಖಾತಾ ಕಡ್ಡಾಯ ಮಾಡಲಾಗಿದೆ. ಇ-ಖಾತಾ ಹೊಂದಿರದ ಗ್ರಾಮೀಣ ಭಾಗದ ಆಸ್ತಿಗಳ ಖರೀದಿ, ಮಾರಾಟಕ್ಕೆ ಸಮಸ್ಯೆಯಾಗುತ್ತಿದೆ. ಹೀಗಾಗಿ ಅವುಗಳಿಗೆ ಯಾವುದಾದರೂ ಮಾರ್ಗದಲ್ಲಿ ಇ-ಸ್ವತ್ತಿನಡಿ ಅವಕಾಶ ನೀಡಲು ಕಾಯ್ದೆಯಲ್ಲಿ ಅವಕಾಶ ಮಾಡಿಕೊಡುವ ಬಗ್ಗೆ ಪ್ರಸ್ತಾಪ ಮಾಡಲಾಗಿದೆ. 96 ಲಕ್ಷ ಆಸ್ತಿ ಇ-ಸ್ವತ್ತಿನಿಂದ ಹೊರಗೆ:
ಸಾಕಷ್ಟು ಗ್ರಾಮ ಪಂಚಾಯಿತಿಗಳು ಸ್ಥಳೀಯ ಸ್ವಯಂ ಸರ್ಕಾರಗಳಾಗಿದ್ದು, ಗ್ರಾಮ ಪಂಚಾಯಿತಿಗಳ ನಿರ್ವಹಣೆಗೆ ಆಸ್ತಿ ತೆರಿಗೆಯಿಂದ ಸಂಗ್ರಹವಾಗುವ ಸಂಪನ್ಮೂಲವೇ ಮೂಲ ಆದಾಯವಾಗಿದೆ. ಅನಧಿಕೃತ ಬಡಾವಣೆ ಸೃಷ್ಟಿಯಾಗುವುದನ್ನು ತಡೆಯಲು 2013ರ ಜೂ.15 ರಂದು ಇ-ಸ್ವತ್ತು ತಂತ್ರಾಂಶ ಜಾರಿಗೆ ತರಲಾಯಿತು.
ಆದರೂ ಪ್ರಸ್ತುತ ಪಂಚತಂತ್ರ (ಪಿ-2) ಅಡಿ 1.40 ಕೋಟಿ ಆಸ್ತಿಗಳು ನಮೂದಾಗಿವೆ. ಇ-ಸ್ವತ್ತು ತಂತ್ರಾಂಶದಲ್ಲಿ ಕೇವಲ 44 ಲಕ್ಷ ಆಸ್ತಿ ಮಾತ್ರ ನಮೂದಾಗಿವೆ. ಉಳಿದ 96 ಲಕ್ಷ ಆಸ್ತಿಗಳನ್ನು ಇ-ಸ್ವತ್ತಿನ ಅಡಿ ತರಲು ತಿದ್ದುಪಡಿ ವಿಧೇಯಕಕ್ಕೆ ನಿಯಮ 199-ಸಿ ಹಾಗೂ 199 -ಬಿ ಸೇರಿಸಬೇಕಾಗಿದೆ ಎಂದು ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನಿಸಿರುವುದಾಗಿ ಮೂಲಗಳು ತಿಳಿಸಿವೆ.
2013ರ ಬಳಿಕ ಹಾಗೂ ಹಿಂದಿನ ನಿವೇಶನಗಳಿಗೂ ಅನ್ವಯ: ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿರುವ ಕ್ರಮಬದ್ಧವಲ್ಲದ ನಿವೇಶನ ಹಾಗೂ ಕಟ್ಟಡಗಳನ್ನು ತೆರಿಗೆ ವ್ಯಾಪ್ತಿಗೆ ಒಳಪಡಿಸಲು ಕ್ರಮ ಕೈಗೊಳ್ಳುತ್ತಿದ್ದು, 2013ಕ್ಕೆ ಮೊದಲು ಅಥವಾ ನಂತರ ನೋಂದಣಿಯಾದ ಎಲ್ಲಾ ನಿವೇಶನ ಹಾಗೂ ಕಟ್ಟಡಗಳನ್ನೂ ಇ-ಖಾತೆ ಅಡಿ ತರಲಾಗುವುದು. ಸರ್ಕಾರಿ, ಸ್ಥಳೀಯ ಸಂಸ್ಥೆ, ಶಾಸನಬದ್ಧ ಸಂಸ್ಥೆ, ಅರಣ್ಯ ಭೂಮಿಯನ್ನು ಹೊರತುಪಡಿಸಿ ಉಳಿದ ಖಾಸಗಿ ಆಸ್ತಿಗಳನ್ನು ತೆರಿಗೆ ವ್ಯಾಪ್ತಿಗೆ ಒಳಪಡಿಸಲು ಪ್ರತ್ಯೇಕ ವಹಿಯಲ್ಲಿ ದಾಖಲಿಸಲು ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್‌ರಾಜ್ ಅಧಿನಿಯಮ-1993ಕ್ಕೆ ತಿದ್ದುಪಡಿ ತರಲು ತೀರ್ಮಾನಿಸಲಾಗಿದೆ.