ಸಾರಾಂಶ
ರಾಜ್ಯದಲ್ಲಿ ವೃತ್ತಿ ಪರ ತೆರಿಗೆಯನ್ನು ಮಾಸಿಕ 200 ರು.ಗಳಿಂದ 300 ರು.ಗಳಿಗೆ ಹೆಚ್ಚಳ ಮಾಡುವ ಸಲುವಾಗಿ ‘ಕರ್ನಾಟಕ ವೃತ್ತಿ, ಕಸುಬು, ಆಜೀವಿಕೆಗಳ ಮತ್ತು ಉದ್ಯೋಗಗಳ ಮೇಲಣ ತೆರಿಗೆ ತಿದ್ದುಪಡಿ ವಿಧೇಯಕ-2025’ಕ್ಕೆ ಬುಧವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನ ಮಾಡಲಾಗಿದೆ.
ಬೆಂಗಳೂರು : ರಾಜ್ಯದಲ್ಲಿ ವೃತ್ತಿ ಪರ ತೆರಿಗೆಯನ್ನು ಮಾಸಿಕ 200 ರು.ಗಳಿಂದ 300 ರು.ಗಳಿಗೆ ಹೆಚ್ಚಳ ಮಾಡುವ ಸಲುವಾಗಿ ‘ಕರ್ನಾಟಕ ವೃತ್ತಿ, ಕಸುಬು, ಆಜೀವಿಕೆಗಳ ಮತ್ತು ಉದ್ಯೋಗಗಳ ಮೇಲಣ ತೆರಿಗೆ ತಿದ್ದುಪಡಿ ವಿಧೇಯಕ-2025’ಕ್ಕೆ ಬುಧವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನ ಮಾಡಲಾಗಿದೆ.
ಈವರೆಗೆ ರಾಜ್ಯದಲ್ಲಿ ಮಾಸಿಕ 15,000 ರು.ಗಳಿಗಿಂತ ಹೆಚ್ಚು ಆದಾಯ ಗಳಿಸುವ (ಉದ್ಯೋಗ, ವೃತ್ತಿ, ವ್ಯಾಪಾರ) ವ್ಯಕ್ತಿಗಳು ಮಾಸಿಕ 200 ರು. ವೃತ್ತಿ ತೆರಿಗೆ ಪಾವತಿಸಬೇಕಾಗಿತ್ತು. ವರ್ಷದ 12 ತಿಂಗಳಲ್ಲಿ 11 ತಿಂಗಳು ತಲಾ 200 ರು. ಹಾಗೂ ಒಂದು ತಿಂಗಳು 300 ರು. ಸೇರಿ ವಾರ್ಷಿಕ 2,500 ರು. ಪಾವತಿಸಬೇಕಾಗಿತ್ತು.
ಇದೀಗ ಈ ಪ್ರಮಾಣವನ್ನು ಮಾಸಿಕ 200 ರು.ಗಳಿಂದ 300 ರು.ಗಳಿಗೆ ಹೆಚ್ಚಳ ಮಾಡಲು ಸಂಪುಟದಲ್ಲಿ ತೀರ್ಮಾನಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಅಕ್ರಮ ಪಶು ಆಹಾರ ಉತ್ಪಾದನೆಗೆ 3 ವರ್ಷ ಜೈಲು:
ಇನ್ನು ರಾಜ್ಯದಲ್ಲಿ ಪಶು ಆಹಾರ ಉತ್ಪಾದನೆ, ಪೂರೈಕೆ ಮತ್ತು ಮಾರಾಟ ನಿಯಂತ್ರಿಸಲು ಮತ್ತು ಅದರ ಮೇಲೆ ನಿಗಾ ಇಡುವ ಉದ್ದೇಶದಿಂದ ಕಾಯ್ದೆ ರೂಪಿಸಲು ಸಂಪುಟ ಒಪ್ಪಿಗೆ ನೀಡಿದೆ. ಪಶು ಆಹಾರ ಉತ್ಪಾದನೆ ಘಟಕಗಳ ನಿಯಂತ್ರಣ ಪ್ರಾಧಿಕಾರ ಮತ್ತು ಪರವಾನಗಿ ನೀಡುವ ಸಂಬಂಧ ಪಶುಸಂಗೋಪನಾ ಇಲಾಖೆಯ ಆಯುಕ್ತರ ಅಧ್ಯಕ್ಷತೆಯಲ್ಲಿ ತಜ್ಞರ ಸಮಿತಿ ರಚಿಸುವ ಪ್ರಸ್ತಾಪ ಮಸೂದೆಯಲ್ಲಿದೆ. ಪರವಾನಗಿ ಇಲ್ಲದೆ ಪಶು ಆಹಾರ ಉತ್ಪಾದಿಸಿ, ಮಾರಾಟ ಮಾಡುವ ಮೂಲಕ ಕಾಯ್ದೆಯಲ್ಲಿರುವ ನಿಯಮ ಉಲ್ಲಂಘಿಸಿದರೆ 3 ವರ್ಷದವರೆಗೆ ವಿಸ್ತರಿಸಬಹುದಾದ ಜೈಲು ಶಿಕ್ಷೆ ಹಾಗೂ 5 ಲಕ್ಷದವರೆಗೆ ದಂಡ ವಿಧಿಸಲು ಕೂಡ ಅವಕಾಶ ಕಲ್ಪಿಸಲಾಗಿದೆ.
ಗ್ರಾಮೀಣ ವಿವಿಗೆ ಗಾಂಧೀಜಿ ಹೆಸರು:
ಕರ್ನಾಟಕ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ವಿಶ್ವವಿದ್ಯಾಲಯದ (ತಿದ್ದುಪಡಿ) ವಿಧೇಯಕ-2025ಕ್ಕೆ ಅನುಮೋದನೆ ನೀಡಿದ್ದು, ತನ್ಮೂಲಕ ವಿಶ್ವವಿದ್ಯಾಲಯಕ್ಕೆ ಮಹಾತ್ಮ ಗಾಂಧೀಜಿ ಹೆಸರು ನಾಮಕರಣ ಮಾಡಲು ತೀರ್ಮಾನಿಸಲಾಗಿದೆ.