ಆರ್ಥಿಕ ಹೊರೆ ಹಿನ್ನೆಲೆ - ಹಣ ಉಳಿಸಲು 850 ಕೆಎಸ್ಸಾರ್ಟಿಸಿ ಬಸ್‌ಗಳಲ್ಲಿ ಕಂಡಕ್ಟರ್‌ಲೆಸ್‌ ಸೇವೆ

| Published : Nov 10 2024, 10:35 AM IST

ksrtc

ಸಾರಾಂಶ

ಕೆಎಸ್ಸಾರ್ಟಿಸಿ ಆದಾಯ ಉಳಿತಾಯಕ್ಕಾಗಿ 850ಕ್ಕೂ ಹೆಚ್ಚಿನ ಬಸ್‌ಗಳಲ್ಲಿ ನಿರ್ವಾಹಕ ರಹಿತ ವ್ಯವಸ್ಥೆಯನ್ನು ವಿಸ್ತರಿಸಿದೆ.

ಬೆಂಗಳೂರು : ಕೆಎಸ್ಸಾರ್ಟಿಸಿ ಆದಾಯ ಉಳಿತಾಯಕ್ಕಾಗಿ 850ಕ್ಕೂ ಹೆಚ್ಚಿನ ಬಸ್‌ಗಳಲ್ಲಿ ನಿರ್ವಾಹಕ ರಹಿತ ವ್ಯವಸ್ಥೆಯನ್ನು ವಿಸ್ತರಿಸಿದೆ.

ಕೆಎಸ್ಸಾರ್ಟಿಸಿಯು ಪ್ರತಿದಿನ 8 ಸಾವಿರಕ್ಕೂ ಹೆಚ್ಚಿನ ಬಸ್‌ಗಳಿಂದ 28 ಲಕ್ಷ ಕಿಮೀವರೆಗೆ ಬಸ್‌ ಸೇವೆ ನೀಡುತ್ತಿದೆ. ಬಂಡವಾಳ ವೆಚ್ಚ, ಡೀಸೆಲ್‌, ಆಡಳಿತಾತ್ಮಕ ವೆಚ್ಚ, ಬಸ್‌ಗಳ ನಿರ್ವಹಣೆ, ಡ್ರೈವರ್‌, ಕಂಡಕ್ಟರ್‌ ವೆಚ್ಚವೂ ಸೇರಿದಂತೆ ಒಂದು ಬಸ್‌ಗೆ ಪ್ರತಿ ಕಿಮೀಗೆ 50 ರು.ವರೆಗೆ ವೆಚ್ಚವಾಗುತ್ತಿದೆ. ಆದರೆ, ಆ ಬಸ್‌ಗಳ ಪೈಕಿ ಅಂದಾಜು 5 ಸಾವಿರ ಬಸ್‌ಗಳು ಪ್ರತಿ ಕಿಮೀಗೆ 50 ರು.ಗಿಂತ ಕಡಿಮೆ ಆದಾಯಗಳಿಸುತ್ತಿವೆ. ಹೀಗೆ ಆದಾಯ ಕಡಿತದಿಂದ ನಿಗಮಕ್ಕೆ ಆರ್ಥಿಕ ಹೊರೆಯಾಗುತ್ತಿದೆ. ಇದನ್ನು ತಪ್ಪಿಸಲುವ ಸಲುವಾಗಿ ನಿರ್ವಾಹಕ ರಹಿತ ವ್ಯವಸ್ಥೆಯನ್ನು ಕೆಎಸ್ಸಾರ್ಟಿಸಿ ಅನುಷ್ಠಾನಗೊಳಿಸಿದೆ.

ಕಳೆದ ಕೆಲ ತಿಂಗಳಿಂದ ನಿರ್ವಾಹಕ ರಹಿತ ವ್ಯವಸ್ಥೆ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಯಾವೆಲ್ಲ ಮಾರ್ಗಗಳಲ್ಲಿ ಅದನ್ನು ಜಾರಿ ಮಾಡಬೇಕು ಎಂಬ ಬಗ್ಗೆ ಕೆಎಸ್ಸಾರ್ಟಿಸಿ ಅಧ್ಯಯನ ನಡೆಸಿದೆ. ಅಲ್ಲದೆ, ಕೆಲ ಮಾರ್ಗಗಳಲ್ಲಿ ಅದನ್ನು ಅನುಷ್ಠಾನವನ್ನೂ ಮಾಡಿದೆ. ಅದರಂತೆ ಇದೀಗ 850ಕ್ಕೂ ಹೆಚ್ಚಿನ ಬಸ್‌ಗಳಲ್ಲಿ ನಿರ್ವಾಹಕ ರಹಿತ ವ್ಯವಸ್ಥೆ ಅನುಷ್ಠಾನಗೊಳಿಸಲಾಗಿದೆ. ನೂತನ ವ್ಯವಸ್ಥೆಯಿಂದಾಗಿ ನಿಗಮಕ್ಕೆ ಪ್ರತಿ ಕಿಮೀಗೆ ಅಂದಾಜು 10 ರು. ಉಳಿತಾಯವಾಗುವ ಲೆಕ್ಕಾಚಾರ ಹಾಕಲಾಗಿದೆ.

ಬೆಂಗಳೂರು-ಮೈಸೂರು, ಬೆಂಗಳೂರು-ಹಾಸನ, ಬೆಂಗಳೂರು-ದಾವಣಗೆರೆ, ಬೆಂಗಳೂರು-ಶಿವಮೊಗ್ಗ, ಬೆಂಗಳೂರು-ಮಡಿಕೇರಿ ಸೇರಿದಂತೆ ಇನ್ನಿತರ ಕಡಿಮೆ ಅಥವಾ ಯಾವುದೇ ನಿಲುಗಡೆ ಇಲ್ಲದ ಪಾಯಿಂಟ್-ಟು-ಪಾಯಿಂಟ್‌ ಮಾರ್ಗಗಳಲ್ಲಿ ನೂತನ ಮಾದರಿಯನ್ನು ಪರಿಚಯಿಸಲಾಗಿದೆ. ಅದರಲ್ಲೂ 5 ಗಂಟೆಗಳ ಪ್ರಯಾಣದ ಸಮಯ ಹೊಂದಿರುವ ಬಸ್‌ಗಳಲ್ಲಿ ಮಾತ್ರ ನಿರ್ವಾಹಕ ರಹಿತ ಸೇವೆ ನೀಡಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ನಿರ್ವಾಹಕ ರಹಿತಕ್ಕೆ ನಿಗದಿ ಮಾಡಿರುವ ಬಸ್‌ಗಳ ಚಾಲಕರು ಸೇವೆ ಆರಂಭಕ್ಕೂ ಮುನ್ನ ಟಿಕೆಟ್‌ ನೀಡುತ್ತಾರೆ. ಅದಾದ ನಂತರ ನಿಗದಿತ ಸ್ಥಳ ತಲುಪುವವರೆಗೆ ಮಾರ್ಗ ಮಧ್ಯದಲ್ಲಿ ನಿಲುಗಡೆ ಇದ್ದರೆ ಅಲ್ಲಿ ಪ್ರಯಾಣಿಕರು ಬಸ್‌ ಹತ್ತಿದರೆ ಚಾಲಕರೇ ಟಿಕೆಟ್‌ ನೀಡುತ್ತಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.