ಪಾತಾಳಕ್ಕಿಳಿದಿದ್ದ ಆರ್ಥಿಕ ವ್ಯವಸ್ಥೆ ಸರಿದಾರಿಗೆ - ಬಿಜೆಪಿ ಅವಧಿಯಲ್ಲಿ ಸಾಕಷ್ಟು ಲೋಪ : ಸಿಎಂ

| N/A | Published : Feb 22 2025, 11:35 AM IST

Siddaramaiah

ಸಾರಾಂಶ

ಪಾತಾಳದತ್ತ ಕುಸಿಯುತ್ತಿದ್ದ ರಾಜ್ಯದ ಅರ್ಥ ವ್ಯವಸ್ಥೆಯನ್ನು ನಾವು ಸರಿದಾರಿಗೆ ತರುತ್ತಿದ್ದೇವೆ. ಇದನ್ನು ಸಹಿಸಿಕೊಳ್ಳಲಾಗದೆ ಬಿಜೆಪಿಯವರು ಸುಳ್ಳು ಆರೋಪ ಮಾಡುತ್ತಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ.

 ಬೆಂಗಳೂರು :ರಾಜ್ಯದಲ್ಲಿ ಬಸವರಾಜ ಬೊಮ್ಮಾಯಿ ಸೇರಿ ಬಿಜೆಪಿಯವರು ಆಡಳಿತ ನಡೆಸುತ್ತಿದ್ದಾಗ ಆರ್ಥಿಕ ವ್ಯವಸ್ಥೆಯನ್ನು ಪಾತಾಳಕ್ಕೆ ಕುಸಿಯುವಂತೆ ಮಾಡಿದ್ದರು. ಬಿಜೆಪಿಯವರ ಅರಾಜಕ ಆರ್ಥಿಕ ನಿರ್ವಹಣೆ, ಆರ್ಥಿಕ ದುರಾಡಳಿತದಿಂದ ಪಾತಾಳದತ್ತ ಕುಸಿಯುತ್ತಿದ್ದ ರಾಜ್ಯದ ಅರ್ಥ ವ್ಯವಸ್ಥೆಯನ್ನು ನಾವು ಸರಿದಾರಿಗೆ ತರುತ್ತಿದ್ದೇವೆ. ಇದನ್ನು ಸಹಿಸಿಕೊಳ್ಳಲಾಗದೆ ಬಿಜೆಪಿಯವರು ಸುಳ್ಳು ಆರೋಪ ಮಾಡುತ್ತಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ.

ರಾಜ್ಯದ ಆರ್ಥಿಕ ಸ್ಥಿತಿ ಟೀಕಿಸುತ್ತಿರುವ ಮಾಜಿ ಮುಖ್ಯಮಂತ್ರಿ, ಸಂಸದ ಬಸವರಾಜ ಬೊಮ್ಮಾಯಿ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಸೇರಿದಂತೆ ರಾಜ್ಯ ನಾಯಕರಿಗೆ ಪತ್ರಿಕಾ ಹೇಳಿಕೆ ಮೂಲಕ ಸವಿವರವಾಗಿ ಸಿದ್ದರಾಮಯ್ಯ ತಿರುಗೇಟು ನೀಡುತ್ತಿದ್ದಾರೆ.

ಬಿಜೆಪಿಯ ಅವಧಿಯಲ್ಲಿ ಲೋಕೋಪಯೋಗಿ, ಸಣ್ಣ ನೀರಾವರಿ, ಜಲಸಂಪನ್ಮೂಲ, ನಗರಾಭಿವೃದ್ಧಿ, ಗ್ರಾಮೀಣಾಭಿವೃದ್ಧಿ, ವಸತಿ ಇಲಾಖೆಗಳಲ್ಲಿ 2.70 ಲಕ್ಷ ಕೋಟಿ ರು. ಬೃಹತ್‌ ಮೊತ್ತದ ಕಾಮಗಾರಿಗಳನ್ನು ಬೇಕಾಬಿಟ್ಟಿ ತೆಗೆದುಕೊಂಡು ಅನುದಾನ ಒದಗಿಸದೆ ಬಿಟ್ಟು ಹೋಗಿದ್ದಾರೆ. ಮುಖ್ಯಮಂತ್ರಿಗಳ ವಿವೇಚನಾ ಕೋಟಾದ ಕೆಳಗಡೆ 1.66 ಲಕ್ಷ ಕೋಟಿ ರು. ಕಾಮಗಾರಿಗಳಿಗೆ ಅನುನೋದನೆ ನೀಡಿದ್ದಾರೆ. ಬಿಜೆಪಿ ಸರ್ಕಾರದ ಈ ಆರ್ಥಿಕ ದುರಾಡಳಿತ, ಬೇಜವಬ್ದಾರಿತನ, ಭ್ರಷ್ಟಾಚಾರಯುತ ಕಾಮಗಾರಿಗಳ ನಿರ್ವಹಣೆಯನ್ನು ಒಂದೆರಡು ವರ್ಷಗಳಲ್ಲಿ ದುರಸ್ತಿ ಮಾಡಲು ಸಾಧ್ಯವೇ ಎಂದು ಪ್ರಶ್ನಿಸಿದ್ದಾರೆ.

ಮೋದಿ ಸರ್ಕಾರ ರಾಜ್ಯದ ಸಂಪನ್ಮೂಲಗಳನ್ನು ಗುಡಿಸಿ ಗುಂಡಾಂತರ ಮಾಡುತ್ತಿದ್ದಾರೆ. ಜಿಎಸ್‌ಟಿ ಸೆಸ್‌ ಪರಿಹಾರ ನಿಲ್ಲಿಸಿದರು. ಇಷ್ಟಾದರೂ ರಾಜ್ಯ ಬಿಜೆಪಿಯವರು ಕೈ ಕಟ್ಟಿ ಬಾಯಿ ಮುಚ್ಚಿ ಕೂತಿದ್ದರು. ಇದು ಜೀವಂತ ಕುರಿಯ ಚರ್ಮ ಸುಲಿಯುತ್ತಿದ್ದರೂ ಕಣ್ಣ ಮುಂದಿನ ಗರಿಕೆ ಹುಲ್ಲಿಗೆ ಬಾಯಿ ಬಿಡುವಂತೆ ಕಾಣುತ್ತಿತ್ತು ಎಂದು ಕಿಡಿ ಕಾರಿದ್ದಾರೆ.

ಕರ್ನಾಟಕ ತಲೆ ಎತ್ತಿ ನಿಲ್ಲುತ್ತಿದೆ:

ಬಿಜೆಪಿಯವರು ಎಷ್ಟೇ ಪಿತೂರಿ ಮಾಡಿ ಕರ್ನಾಟಕಕ್ಕೆ ನಿರಂತರವಾಗಿ ದ್ರೋಹ ಮಾಡುತ್ತಿದ್ದರೂ ಕರ್ನಾಟಕ ತಲೆ ಎತ್ತಿ ನಿಲ್ಲುತ್ತಿದೆ. ಬಿಜೆಪಿಯ ದ್ರೋಹದ ಹೊರತಾಗಿಯೂ ರಾಜ್ಯ ಆರ್ಥಿಕವಾಗಿ ಸದೃಢವಾಗಿದೆ. ನಮ್ಮ ಆರ್ಥಿಕತೆಯನ್ನು ಉಳಿಸಿ ಬೆಳೆಸುವುದು ಹೇಗೆ ಎಂಬುದು ನಮಗೆ ಗೊತ್ತಿದೆ. ಆದರೆ, ಕೇಂದ್ರದ ದ್ರೋಹವನ್ನು ರಾಜ್ಯದ ಜನತೆ ಕ್ಷಮಿಸುವುದಿಲ್ಲ. ಇನ್ನಾದರೂ ರಾಜ್ಯದ ಬಗ್ಗೆ ಕಿಂಚಿತ್‌ ಕಾಳಜಿಯಿದ್ದರೂ ರಾಜ್ಯದ ಜನರ ಜತೆ ಸೇರಿ ಕೇಂದ್ರದ ವಿರುದ್ಧ ಹೋರಾಟ ಮಾಡಿ ಬಿಜೆಪಿ ನಾಯಕರಿಗೆ ಕರೆ ನೀಡಿದ್ದಾರೆ.

ರಾಜ್ಯ ಆರ್ಥಿಕತೆ ಸದೃಢವಾಗಿದೆ:

ರಾಜ್ಯದ ಆರ್ಥಿಕತೆ ಈಗಲೂ ಉತ್ತಮವಾಗಿದೆ. ಹೂಡಿಕೆದಾರರ ಸಮಾವೇಶದಲ್ಲಿ 10.27 ಲಕ್ಷ ಕೋಟಿ ರು. ಹೂಡಿಕೆ ಬಂದಿರುವುದೇ ಇದಕ್ಕೆ ಸಾಕ್ಷಿ. ನಮ್ಮ ಎರಡು ವರ್ಷಗಳ ಬಜೆಟ್‌ ಗಾತ್ರದ ಸರಾಸರಿ ಬೆಳವಣಿಗೆ ಶೇ.18.3 ರಷ್ಟಿದೆ. ಬಿಜೆಪಿಯ 4 ವರ್ಷಗಳ ಅಧಿಕಾರಾವಧಿಯಲ್ಲಿ ಕೇವಲ ಶೇ.5 ರಷ್ಟಿತ್ತು ಎಂದಿದ್ದಾರೆ.

ಇಷ್ಟು ಸಾಲ ಯಾಕಾಯಿತು?: ವಿಜಯೇಂದ್ರಗೆ ಸಿದ್ದು ಪ್ರಶ್ನೆ

ಸಾಲದ ಬಗ್ಗೆ ಮಾತನಾಡುವ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ನರೇಂದ್ರ ಮೋದಿ ಅವರ ಅವಧಿಯಲ್ಲಿ ಯಾಕೆ ಸಾಲ ಜಾಸ್ತಿಯಾಯಿತು ಎಂಬುದನ್ನು ಪ್ರಶ್ನಿಸಲಿ. 2013-14ರಲ್ಲಿ 53.11 ಲಕ್ಷ ಕೋಟಿಗಳಿಷ್ಟಿದ್ದ ಕೇಂದ್ರ ಸರ್ಕಾರದ ಸಾಲ 2026ರ ಮಾ. ವೇಳೆಗೆ 200.16 ಲಕ್ಷ ಕೋಟಿಗಳಷ್ಟಾಗುತ್ತಿದೆ. 11 ವರ್ಷಗಳಲ್ಲಿ 147 ಲಕ್ಷ ಕೋಟಿಗೂ ಹೆಚ್ಚಿನ ಸಾಲವನ್ನು ಮೋದಿ ಸರ್ಕಾರ ಮಾಡಿದೆ. ಇಷ್ಟು ಬೃಹತ್‌ ಮೊತ್ತದ ಸಾಲ ಯಾಕಾಯಿತು ಎಂದು ಉತ್ತರಿಸಬೇಕು ಎಂದು ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.

ರಾಜ್ಯದ ಸ್ವಂತ ತೆರಿಗೆಯ ಬೆಳವಣಿಗೆ ಶೇ.15 ರಷ್ಟಿದೆ. ಬಿಜೆಪಿ ಸರ್ಕಾರದ ಅವಧಿಯಲ್ಲಿ ಶೇ.11 ರಷ್ಟು ಮಾತ್ರ ಇತ್ತು. ನಾವು ಗ್ಯಾರಂಟಿ ಯೋಜನೆಗಳ 52,000 ಕೋಟಿ ರು. ಸೇರಿ ಸೇರಿದಂತೆ ಪ್ರತಿ ವರ್ಷ 90 ಸಾವಿರ ಕೋಟಿಗೂ ಹೆಚ್ಚಿನ ಮೊತ್ತವನ್ನು ಜನರಿಗೆ ನೇರವಾಗಿ ಡಿಬಿಟಿ ಮೂಲಕ ಹಾಗೂ ಸಬ್ಸಿಡಿ ಪ್ರೋತ್ಸಾಹಧನದ ಮೂಲಕ ನೀಡುತ್ತಿದ್ದೇವೆ. ನಮ್ಮ ಸರ್ಕಾರ ವೃದ್ಧರಿಗೆ, ಅಶಕ್ತರಿಗೆ, ವಿಧವೆಯರಿಗೆ, ಅಂಗವಿಕಲರಿಗೆ ವರ್ಷಕ್ಕೆ 10,400 ಕೋಟಿಗೂ ಹೆಚ್ಚಿನ ಹಣ ಕೊಡುತ್ತಿದೆ. ಇದರಲ್ಲಿ ಕೇಂದ್ರ ಸರ್ಕಾರ ಕೇವಲ 450 ಕೋಟಿ ರು. ಮಾತ್ರ ನೀಡುತ್ತಿದೆ. ರಾಜ್ಯಕ್ಕೆ ಬಿಜೆಪಿ ನಾಯಕರಿಂದ ಆದ ಅನುಕೂಲವೇನು ಎಂದು ಕಿಡಿ ಕಾರಿದ್ದಾರೆ.

ರಾಜ್ಯದ ವಿತ್ತೀಯ ಶಿಸ್ತು ನಿಯಮಗಳಿಗೆ ಅನುಗುಣವಾಗಿಯೇ ಇದೆ. ವಿತ್ತೀಯ ಕೊರತೆ ಶೇ.3ರ ಒಳಗೆ ಇದೆ. ನಮ್ಮ ಒಟ್ಟು ಹೊಣೆಗಾರಿಕೆ ಜಿಎಸ್‌ಡಿಪಿಯ ಶೇ.25ರ ಒಳಗೆ ಇದೆ. ಬಿಜೆಪಿ ಅವಧಿಯಲ್ಲಿ ಇವುಗಳಲ್ಲೂ ವತ್ಯಾಸಗಳಾಗಿದ್ದವು. ನಮ್ಮ ಬಂಡವಾಳ ವೆಚ್ಚವು ನಮ್ಮ ನೆರೆಯ ಪ್ರಗತಿಪರ ಎನಿಸಿಕೊಂಡ ರಾಜ್ಯಗಳಿಗಿಂತ ಉತ್ತಮವಾಗಿದ್ದು, ಕರ್ನಾಟಕವು ಈ ವರ್ಷದ ಬಜೆಟ್‌ ಗಾತ್ರಕ್ಕೆ ಎದುರಾಗಿ ಶೇ.15.01 ರಷ್ಟು ಬಂಡವಾಳ ವೆಚ್ಚ ಮಾಡುತ್ತಿದೆ ಎಂದು ಹೇಳಿದ್ದಾರೆ.

ನಾವು ಬೆಂಗಳೂರು ಸೇರಿ ರಾಜ್ಯದ ಎಲ್ಲಾ ಭಾಗಗಳಿಗೆ ಅನುದಾನಗಳನ್ನು ನೀಡುತ್ತಿದ್ದೇವೆ. ಬೊಮ್ಮಾಯಿವರು ಜಲಸಂಪನ್ಮೂಲ ಸಚಿವರಾಗಿದ್ದರೂ ಕೃಷ್ಣ ಮೇಲ್ದಂಡೆ ಯೋಜನೆಗೆ ಕೊಡಬೇಕಾದ ಅನುದಾನಗಳನ್ನು ಕೊಡಲಿಲ್ಲ ಎಂದು ಬಸವರಾಜ ಬೊಮ್ಮಾಯಿ ವಿರುದ್ಧ ಕಿಡಿ ಕಾರಿದ್ದಾರೆ.

ವಿವಿಧ ಸಂಘ-ಸಂಸ್ಥೆ ಜತೆ ಸಿಎಂ ಬಜೆಟ್‌ ಸಭೆ

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿಧಾನಸೌಧದಲ್ಲಿ ಶುಕ್ರವಾರ ವಿವಿಧ ಸಂಘ-ಸಂಸ್ಥೆಗಳ ಪ್ರತಿನಿಧಿಗಳೊಂದಿಗೆ ಬಜೆಟ್‌ ಪೂರ್ವಭಾವಿ ಸಭೆ ನಡೆಸಿ ಅವರ ಬೇಡಿಕೆ, ಸಮಸ್ಯೆಗಳನ್ನು ಆಲಿಸಿದರು.

ಮಂಡಿ ನೋವಿನ ಹಿನ್ನೆಲೆಯಲ್ಲಿ ಖರೀದಿಸಿರುವ ಟೊಯೋಟಾದ ಹೊಸ ವೆಲ್‌ಫೈಯರ್‌ ಕಾರಿನಲ್ಲಿ ವಿಧಾನಸೌಧಕ್ಕೆ ಆಗಮಿಸಿದ ಮುಖ್ಯಮಂತ್ರಿಯವರು ವ್ಹೀಲ್‌ ಚೇರ್‌ ಮೂಲಕವೇ ಮೂರನೇ ಮಹಡಿಯ ಸಮ್ಮೇಳನ ಸಭಾಂಗಣಕ್ಕೆ ತೆರಳಿದರು. ಅಲ್ಲಿ, ವಾಣಿಜ್ಯ, ಸಾರಿಗೆ, ಅಬಕಾರಿ ಹಾಗೂ ಭೂ ಮಾರುಕಟ್ಟೆ ಹಾಗೂ ಇನ್ನಿತರೆ ಸಂಘ-ಸಂಸ್ಥೆಗಳ ಪ್ರತಿನಿಧಿಗಳೊಂದಿಗೆ ಪ್ರತ್ಯೇಕವಾಗಿ ಸಭೆ ನಡೆಸಿದರು. ಸಂಘ-ಸಂಸ್ಥೆಗಳ ಪ್ರಮುಖರು ಅವರ ಬೇಡಿಕೆ, ಸಮಸ್ಯೆಗಳನ್ನು ಮನವರಿಕೆ ಮಾಡಿಕೊಟ್ಟು ಅವುಗಳ ಪರಿಹಾರಕ್ಕೆ ಬಜೆಟ್‌ನಲ್ಲಿ ಸೂಕ್ತ ಕಾರ್ಯಕ್ರಮ, ಅನುದಾನ ಒದಗಿಸಲು ಕೋರಿ ಮನವಿ ಮಾಡಿದರು. ಇದಕ್ಕೆ ಸಕಾರಾತ್ಮಕವಾಗಿ ಸ್ಪಂಧಿಸಿದ ಮುಖ್ಯಮಂತ್ರಿ ಅವರು, ಬಜೆಟ್‌ನಲ್ಲಿ ತಮ್ಮ ಬೇಡಿಕೆಗಳ ಈಡೇರಿಕೆಗೆ ಕೆಲ ಘೋಷಣೆಗಳನ್ನು ಮಾಡುವ ಭರವಸೆ ನೀಡಿದರು ಎಂದು ತಿಳಿದು ಬಂದಿದೆ.

ಸಭೆ ವೇಳೆ ಸರ್ಕಾರದ ಇತ್ತೀಚೆಗೆ ಜಾರಿಗೆ ತಂದಿರುವ ಹೊಸ ಪ್ರವಾಸೋದ್ಯಮ ನೀತಿ ಬಗ್ಗೆ ವಾಣಿಜ್ಯೋದ್ಯಮಿಗಳು ಮತ್ತು ವಾಣಿಜ್ಯ ಸಂಘ-ಸಂಸ್ಥೆಗಳ ಪ್ರತಿನಿಧಿಗಳು ಮೆಚ್ಚುಗೆ ವ್ಯಕ್ತಪಡಿಸಿದರು. ಈ ನೀತಿ ಏಕಕಾಲಕ್ಕೆ ರಾಜ್ಯದ ಆರ್ಥಿಕತೆ ವೃದ್ಧಿಸುವ ಜೊತೆಗೆ ಉದ್ಯಮಗಳ ಬೆಳವಣಿಗೆಗೂ ಪೂರಕವಾಗಿದೆ ಎಂದು ಶ್ಲಾಘಿಸಿದರು.

ಸಭೆಯಲ್ಲಿ ಮುಖ್ಯಮಂತ್ರಿಯವರ ಆರ್ಥಿಕ ಸಲಹೆಗಾರ ಬಸವರಾಜ ರಾಯರೆಡ್ಡಿ, ರಾಜಕೀಯ ಕಾರ್ಯದರ್ಶಿ ನಾಸಿರ್‌ ಅಹಮದ್‌ ಹಾಗೂ ಹಣಕಾಸು ಇಲಾಖೆಯ ಉನ್ನತ ಅಧಿಕಾರಿಗಳು ಉಪಸ್ಥಿತರಿದ್ದರು.