ವರಮಹಾಲಕ್ಷ್ಮೀ ಹಬ್ಬ : ಕನಕಾಂಬರಕ್ಕೆ 1800 - ಮಲ್ಲಿಗೆ ಕೇಳಲೇಬೇಡಿ !

| N/A | Published : Aug 07 2025, 06:41 AM IST

flower market
ವರಮಹಾಲಕ್ಷ್ಮೀ ಹಬ್ಬ : ಕನಕಾಂಬರಕ್ಕೆ 1800 - ಮಲ್ಲಿಗೆ ಕೇಳಲೇಬೇಡಿ !
Share this Article
  • FB
  • TW
  • Linkdin
  • Email

ಸಾರಾಂಶ

ರಾಜಧಾನಿಯಲ್ಲಿ ವರಮಹಾಲಕ್ಷ್ಮೀ ಹಬ್ಬಕ್ಕೆ ಸಿದ್ಧತೆ ಜೋರಾಗಿದ್ದು, ಬುಧವಾರ ಹೂವಿನ ಬೆಲೆ ಕಳೆದ ವಾರಕ್ಕಿಂತ ಮೂರ್ನಾಲ್ಕು ಪಟ್ಟು ಹೆಚ್ಚಾಗಿದ್ದು, ಹಣ್ಣು, ಇತರೆ ಪೂಜಾ ಸಾಮಗ್ರಿ ದರವೂ ಮತ್ತಷ್ಟು ಗಗನಕ್ಕೇರಿತ್ತು.

ಬೆಂಗಳೂರು : ರಾಜಧಾನಿಯಲ್ಲಿ ವರಮಹಾಲಕ್ಷ್ಮೀ ಹಬ್ಬಕ್ಕೆ ಸಿದ್ಧತೆ ಜೋರಾಗಿದ್ದು, ಬುಧವಾರ ಹೂವಿನ ಬೆಲೆ ಕಳೆದ ವಾರಕ್ಕಿಂತ ಮೂರ್ನಾಲ್ಕು ಪಟ್ಟು ಹೆಚ್ಚಾಗಿದ್ದು, ಹಣ್ಣು, ಇತರೆ ಪೂಜಾ ಸಾಮಗ್ರಿ ದರವೂ ಮತ್ತಷ್ಟು ಗಗನಕ್ಕೇರಿತ್ತು.

ನಗರದ ಪ್ರಮುಖ ಮಾರುಕಟ್ಟೆಗಳಲ್ಲಿ ಹೂವು, ಹಣ್ಣು, ಬಾಳೆ ಕಂದು, ಪೂಜಾ ಸಾಮಗ್ರಿ, ಅಲಂಕಾರಿಕ ವಸ್ತುಗಳ ಖರೀದಿಯಲ್ಲಿ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ತೊಡಗಿರುವುದು ಕಂಡು ಬಂತು. ಬೆಲೆ ಗಗನಕ್ಕೆ ಏರಿದ್ದರೂ ಖರೀದಿ ಜೋರಾಗಿ ನಡೆಯಿತು.

ಕೆ.ಆರ್.ಮಾರುಕಟ್ಟೆಯಲ್ಲಿ ಬೆಳಗ್ಗೆ ಹೂವು ಖರೀದಿಸಲು ಆಗಮಿಸಿದ್ದ ಗ್ರಾಹಕರ ಸಂಖ್ಯೆ ಹೆಚ್ಚಾಗಿತ್ತು. ಕಳೆದ ಎಂಟತ್ತು ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ಹೂವುಗಳ ಪೂರೈಕೆ ಕಡಿಮೆಯಾಗಿದ್ದು, ಹೂವಿನ ದರ ದುಬಾರಿಯಾಗಿತ್ತು. ಇದಲ್ಲದೆ, ಮಲ್ಲೇಶ್ವರ ಮಾರುಕಟ್ಟೆ, ಗಾಂಧಿಬಜಾರ್, ಯಶವಂತಪುರ, ಮಡಿವಾಳ ಮಾರುಕಟ್ಟೆ, ಮಾಗಡಿ ರಸ್ತೆ ಹೀಗೆ ಹಲವು ರಸ್ತೆಯಲ್ಲಿ ಖರೀದಿ ಭರಾಟೆ ಇತ್ತು. ಲಕ್ಷ್ಮೀ ವಿಗ್ರಹ, ಮೂರ್ತಿ, ಮುಖವಾಡ, ಹಾರ, ತುರಾಯಿ, ಬಳೆ, ಅರಿಶಿಣ, ಮಾಂಗಲ್ಯ ಸರ, ಉತ್ತತ್ತಿ, ಕೊಬ್ಬರಿ ಸೇರಿ ಮುತ್ತೈದೆಯರಿಗೆ ಉಡಿ ತುಂಬುವ ವಸ್ತುಗಳನ್ನು ಮಹಿಳೆಯರು ಖರೀದಿಸಿದರು. ಕೆ.ಆರ್.ಮಾರುಕಟ್ಟೆ, ಮಲ್ಲೇಶ್ವರದಲ್ಲಿ ರಸ್ತೆಯ ಇಕ್ಕೆಲಗಳಲ್ಲಿ ನಡೆದಾಡಲು ಕಷ್ಟವಾಗುವಷ್ಟು ಗ್ರಾಹಕರು ಬುಧವಾರ ಬೆಳಗ್ಗೆ ಜಮಾಯಿಸಿದ್ದು, ಸಂಚಾರ ದಟ್ಟಣೆ ಉಂಟಾಗಿತ್ತು.

ಕನಕಾಂಬರ ₹1800ಕ್ಕೆ ಮಾರಾಟ:

ಕಳೆದ ವಾರವಿದ್ದ ಬೆಲೆಗಿಂತ 4 ಪಟ್ಟು ಹೂವಿನ ಬೆಲೆ ಹೆಚ್ಚಾಗಿದೆ ಎಂದು ಗ್ರಾಹಕರು ಬೇಸರ ವ್ಯಕ್ತಪಡಿಸಿದ್ದಾರೆ. ಬುಧವಾರ ಬೆಳಗ್ಗೆಯಂತೂ ಬಹುತೇಕ ಹೂವುಗಳಿಗೆ ಚಿನ್ನದ ಬೆಲೆಯಿತ್ತು. ಸೇವಂತಿಗೆ ₹100- ₹150 ಇದ್ದುದು ಬುಧವಾರ ಬರೋಬ್ಬರಿ ₹600 ಆಗಿತ್ತು. ಕನಕಾಂಬರಕ್ಕೆ ಚಿನ್ನದ ಬೆಲೆ ಬಂದಿದ್ದು, ₹1800 ವರೆಗೆ ಏರಿಕೆಯಾಗಿತ್ತು. ಮಲ್ಲಿಗೆಯೂ ₹1600 ಗೆ ಹೆಚ್ಚಿತ್ತು. ಕೆಲ ಮಾರುಕಟ್ಟೆಗಳಲ್ಲಿ ಇದು ಮತ್ತಷ್ಟು ಹೆಚ್ಚಾಗಿತ್ತು. ದುಂಡು ಮಲ್ಲಿಗೆ ಹಾಗೂ ಕನಕಾಂಬರ, ರುದ್ರಾಕ್ಷಿ ಹೂವು, ಚಂಡು ಹೂವು, ಸೇವಂತಿಗೆ ಹಾಗೂ ಗುಲಾಬಿ, ತುಳಸಿ ಹಾರಗಳಿಗೆ ಭಾರಿ ಬೇಡಿಕೆ ಇದ್ದುದರಿಂದ ಬೆಲೆಯೂ ಅಧಿಕವಾಗಿತ್ತು.

ಹಬ್ಬದಲ್ಲಿ ಲಕ್ಷ್ಮಿ ಪೂಜೆಯ ವೇಳೆ ಬಗೆಬಗೆಯ ಹಣ್ಣುಗಳನ್ನು ಜೋಡಿಸುವುದರಿಂದ ಹಣ್ಣುಗಳ ದರ ಸ್ವಲ್ಪ ಏರಿಕೆಯಾಗಿದೆ. ತರಕಾರಿಗಳ ಬೆಲೆಯಲ್ಲಿ ಏರಿಳಿತವಾಗಿದೆ. ಉಳಿದ ತರಕಾರಿ ದರಗಳು ಸ್ಥಿರವಾಗಿವೆ. ಸೊಪ್ಪಿನ ಬೆಲೆಯೂ ಕಡಿಮೆಯಾಗಿತ್ತು. ಬೆಂಗಳೂರು, ತುಮಕೂರು, ಕುಣಿಗಲ್, ಶಿವಮೊಗ್ಗ, ಮೈಸೂರು ಮುಂತಾದ ಕಡೆಗಳಿಂದ ನಗರದ ಮಾರುಕಟ್ಟೆಗಳಿಗೆ ಹೂವು ಪೂರೈಕೆಯಾಗುತ್ತದೆ. ಕಳೆದ ಕೆಲ ದಿನಗಳಿಂದ ನಿರಂತರ ಮಳೆಯಿಂದಾಗಿ ಹೂವುಗಳು ಕೊಳೆತು ಹೋಗುತ್ತಿವೆ. ಇದರಿಂದ ತಾಜಾ ಹೂವಿನ ಪೂರೈಕೆಗೂ ತೊಂದರೆಯಾಗಿತ್ತು.

ರೆಡಿಮೇಡ್ ಲಕ್ಷ್ಮಿಗೆ ಡಿಮ್ಯಾಂಡ್:

ಅಲಂಕರಿಸಿದ ಪುಟಾಣಿ ಲಕ್ಷ್ಮಿ ಮೂರ್ತಿಗೆ 3 ಸಾವಿರದಿಂದ 5 ಸಾವಿರ ಮಾರಾಟವಾಗುತ್ತಿವೆ. ಗಾಂಧಿಬಜಾರ್, ಮಲ್ಲೇಶ್ವರ, ಜಯನಗರ, ಆರ್.ಟಿ. ನಗರ, ವಿಜಯನಗರ ಹೀಗೆ ನಗರದ ನಾನಾ ಭಾಗಗಳಲ್ಲಿ ಮೂರ್ತಿಗಳ ಮಾರಾಟ ಜೋರಾಗಿ ನಡೆದಿದೆ.

ಬುಧವಾರವಿದ್ದ ಹೂವಿನ ದರ

ಹೂವಿನ ಬೆಲೆ (ಕೇಜಿಗೆ ₹)

ಸೇವಂತಿಗೆ 600 -800

ಮಲ್ಲಿಗೆ 1200 1600

ಕನಕಾಂಬರ 1300

ಸುಗಂಧ 300

ಗುಲಾಬಿ 300

ಕಣಗಲೆ 500 -600

ತಾವರೆ ಹೂವು ಜೋಡಿಗೆ 100

ನಗರ ಮಾರುಕಟ್ಟೆಯಲ್ಲಿ ಬುಧವಾರ ತರಾಕಾರಿ ದರ

ತರಕಾರಿ ಪ್ರಸ್ತುತ ದರ ಹಿಂದಿನ ದರ (₹)

ಬಟಾಣಿ 150 120

ಹುರುಳಿಕಾಯಿ 120 80

ಕ್ಯಾರೆಟ್‌ 120 60

ಬೀನ್ಸ್ 60 40

ಕ್ಯಾಪ್ಸಿಕಮ್ 60 40

ಬದನೇಕಾಯಿ 60 40

ಹಿರೇಕಾಯ 60 40

ಶುಂಠಿ 80 60

ಬೆಳ್ಳುಳ್ಳಿ 140 100

ಹೂಕೋಸು 20 15

Read more Articles on