ರಾಜ್ಯಾದ್ಯಂತ 45 ಐಸ್ ಕ್ರೀಂ ಉತ್ಪಾದನಾ ಘಟಕಗಳ ಮೇಲೆ ಆಹಾರ ಸುರಕ್ಷತಾ ಮತ್ತು ಔಷಧ ಆಡಳಿತ ಅಧಿಕಾರಿಗಳು ದಾಳಿ ನಡೆಸಿದ್ದು, ಬೆಂಗಳೂರಿನ ಎರಡು ಸೇರಿ ನಾಲ್ಕು ಘಟಕಗಳಲ್ಲಿ ಅವಧಿ ಮುಗಿದ ಆಹಾರ ಉತ್ಪನ್ನ, ಲೇಬಲಿಂಗ್‌ ಲೋಪ ಹಾಗೂ ಅನೈರ್ಮಲ್ಯದಂಥ ನಿಯಮ ಉಲ್ಲಂಘನೆಗಳು ಪತ್ತೆಯಾಗಿವೆ.

ಬೆಂಗಳೂರು : ರಾಜ್ಯಾದ್ಯಂತ 45 ಐಸ್ ಕ್ರೀಂ ಉತ್ಪಾದನಾ ಘಟಕಗಳ ಮೇಲೆ ಆಹಾರ ಸುರಕ್ಷತಾ ಮತ್ತು ಔಷಧ ಆಡಳಿತ ಅಧಿಕಾರಿಗಳು ದಾಳಿ ನಡೆಸಿದ್ದು, ಬೆಂಗಳೂರಿನ ಎರಡು ಸೇರಿ ನಾಲ್ಕು ಘಟಕಗಳಲ್ಲಿ ಅವಧಿ ಮುಗಿದ ಆಹಾರ ಉತ್ಪನ್ನ, ಲೇಬಲಿಂಗ್‌ ಲೋಪ ಹಾಗೂ ಅನೈರ್ಮಲ್ಯದಂಥ ನಿಯಮ ಉಲ್ಲಂಘನೆಗಳು ಪತ್ತೆಯಾಗಿವೆ.

ಅ.8 ರಂದು ನಡೆದ ಪರಿಶೀಲನೆ ವೇಳೆ ಬೆಂಗಳೂರಿನ ಜಯನಗರ 3ನೇ ಬ್ಲಾಕ್‌ನಲ್ಲಿರುವ ಸವಾರಾ ಐಸ್ ಕ್ರೀಂ ಕೆಫೆಯಲ್ಲಿ, ಅವಧಿ ಮುಗಿದಿದ್ದ ಮಾರಿಗೋಲ್ಡ್ ಬ್ರಿಟಾನಿಯಾ ಬಿಸ್ಕಟ್‌, ನಂದಿನಿ ಸಮೃದ್ಧಿ ಹಾಲು, ಆಲ್ಕಲೈಸ್ಡ್ ಚಹಾ ಮತ್ತು ಕಾಫಿ ಮಿಶ್ರಣಗಳು ಹಾಗೂ ಒಣಗಿದ ತೆಂಗಿನಕಾಯಿ ಪುಡಿ ಸೇರಿ ವಿವಿಧ ಉತ್ಪನ್ನಗಳನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದು, ಈ ಘಟಕದ ವಿರುದ್ಧ ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಇಲಾಖೆ ತಿಳಿಸಿದೆ.

ಆಹಾರ ಉತ್ಪನ್ನಗಳ ಲೇಬಲಿಂಗ್‌ನಲ್ಲಿಯೂ ಲೋಪ

ಬನ್ನೇರುಘಟ್ಟ ರಸ್ತೆಯ ಬಿಲೆಕಹಳ್ಳಿಯಲ್ಲಿರುವ ಎಂ.ಎನ್.ಎಂಟರ್‌ಪ್ರೈಸಸ್‌ನಲ್ಲಿ ಅವಧಿ ಮುಗಿದಿದ್ದ ಪ್ಲೇನ್ ಕ್ಯಾರಾಮೆಲ್, ನೆಸ್ಲೆ ಮಿಲ್ಕ್‌ಮೇಡ್ ಮತ್ತು ಮಿಲ್ಕಿ ಮಿಸ್ಟ್ ಖೋವಾ ವಶಪಡಿಸಿಕೊಂಡ ಅಧಿಕಾರಿಗಳು ಆಹಾರ ಉತ್ಪನ್ನಗಳ ಲೇಬಲಿಂಗ್‌ನಲ್ಲಿಯೂ ಲೋಪ ಹೊಂದಿರುವುದಾಗಿ ತಿಳಿಸಿದ್ದಾರೆ.

ರಾಯಚೂರು, ಮೈಸೂರಲ್ಲೂ ಉಲ್ಲಂಘನೆ ಪತ್ತೆ:

ರಾಯಚೂರಿನಲ್ಲಿರುವ ಜೆಮಿನಿ ಐಸ್ ಕ್ರೀಂ ಉತ್ಪಾದನಾ ಘಟಕದಲ್ಲಿ ಅನೈರ್ಮಲ್ಯ ಪರಿಸ್ಥಿತಿ ಕಂಡು ಬಂದ ಹಿನ್ನೆಲೆ ಘಟಕಕ್ಕೆ ಇಲಾಖೆಯು ನೋಟಿಸ್ ಜಾರಿ ಮಾಡಿದ್ದು, ಮುಂದಿನ ಕಾನೂನು ಕ್ರಮ ಕೈಗೊಳ್ಳುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.

ಮೈಸೂರಿನ ಜಾನ್ ಕ್ಯಾಂಡಿ ಐಸ್ ಕ್ರೀಂ ಉತ್ಪಾದನಾ ಘಟಕದಲ್ಲಿ ಲೇಬಲಿಂಗ್ ನಿಯಮಗಳ ಪಾಲನೆಯಲ್ಲಿ ಲೋಪಗಳು ಕಂಡುಬಂದಿದ್ದು, ಅಧಿಕಾರಿಗಳು 20,000 ರು. ಮೌಲ್ಯದ ಐಸ್ ಕ್ರೀಂ ಉತ್ಪನ್ನಗಳನ್ನು ವಶಪಡಿಸಿಕೊಂಡಿದ್ದಾರೆ. ಆಹಾರ ಸುರಕ್ಷತಾ ನಿಯಮಗಳು ಮತ್ತು ನಿಬಂಧನೆಗಳನ್ನು ಉಲ್ಲಂಘಿಸುವ ಘಟಕಗಳ ವಿರುದ್ಧ ಕಠಿಣ ಕ್ರಮ ಮುಂದುವರೆಯಲಿದೆ ಎಂದು ಇಲಾಖೆ ತಿಳಿಸಿದೆ.