ಸಾರಾಂಶ
ಇತ್ತೀಚೆಗೆ ಡ್ರಾಪ್ ಕೊಡುವ ನೆಪದಲ್ಲಿ ವಿಜಯನಗರ ಜಿಲ್ಲೆಯ ಗುತ್ತಿಗೆದಾರರೊಬ್ಬರನ್ನು ಕಾರಿಗೆ ಹತ್ತಿಸಿಕೊಂಡು ಬಳಿಕ ಜೀವ ಬೆದರಿಕೆ ಹಾಕಿ ಹಣ ಸುಲಿಗೆ ಮಾಡಿದ್ದ ನಾಲ್ವರು ದರೋಡೆಕೋರರನ್ನು ಪೀಣ್ಯ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಬೆಂಗಳೂರು : ಇತ್ತೀಚೆಗೆ ಡ್ರಾಪ್ ಕೊಡುವ ನೆಪದಲ್ಲಿ ವಿಜಯನಗರ ಜಿಲ್ಲೆಯ ಗುತ್ತಿಗೆದಾರರೊಬ್ಬರನ್ನು ಕಾರಿಗೆ ಹತ್ತಿಸಿಕೊಂಡು ಬಳಿಕ ಜೀವ ಬೆದರಿಕೆ ಹಾಕಿ ಹಣ ಸುಲಿಗೆ ಮಾಡಿದ್ದ ನಾಲ್ವರು ದರೋಡೆಕೋರರನ್ನು ಪೀಣ್ಯ ಠಾಣೆ ಪೊಲೀಸರು ಬಂಧಿಸಿದ್ದಾರೆ.
ವಿಜಯಪುರ ಜಿಲ್ಲೆಯ ಕನಕಮೂರ್ತಿ, ಕಿರಣ್, ಶ್ರೀಕಾಂತ್ ಹಾಗೂ ಮಲ್ಲನ್ ಸಾಬಾ ಶೇಕ್ ಬಂಧಿತರಾಗಿದ್ದು, ಆರೋಪಿಗಳಿಂದ ನಾಡ ಪಿಸ್ತೂಲ್, ಕಾರು ಹಾಗೂ ಮೊಬೈಲ್‌ಗಳು ಸೇರಿದಂತೆ ನಾಲ್ಕು ಲಕ್ಷ ರು. ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಲಾಗಿದೆ. ಕೆಲ ದಿನಗಳ ಹಿಂದೆ ತುಮಕೂರು ರಸ್ತೆ ಪೀಣ್ಯ ಬಳಿ ಊರಿಗೆ ಮರಳಲು ವಿಜಯನಗರ ಜಿಲ್ಲೆ ಹೊಸಪೇಟೆಯ ಗುತ್ತಿಗೆದಾರ ಬಸ್ಸಿಗೆ ಕಾಯುತ್ತಿದ್ದಾಗ ಈ ಕೃತ್ಯ ಎಸಗಿ ದರೋಡೆಕೋರರು ಪರಾರಿಯಾಗಿದ್ದರು. ಕೃತ್ಯ ನಡೆದ ಎರಡು ದಿನಗಳ ಬಳಿಕ ಪೀಣ್ಯ ಠಾಣೆಗೆ ಸಂತ್ರಸ್ತರು ದೂರು ನೀಡಿದರು. ಅದರನ್ವಯ ದರೋಡೆಕೋರರ ಪತ್ತೆಗೆ ಕಾರ್ಯಾಚರಣೆಗಿಳಿದ ಇನ್ಸ್‌ಪೆಕ್ಟರ್ ಅನಿಲ್ ಕುಮಾರ್ ನೇತೃತ್ವದ ತಂಡವು, ತಾಂತ್ರಿಕ ಮಾಹಿತಿ ಆಧರಿಸಿ ಮಾರತ್ತಹಳ್ಳಿ ಬಳಿ ಆರೋಪಿಗಳನ್ನು ಸೆರೆ ಹಿಡಿದಿದೆ.
ಪಿಸ್ತೂಲ್ ತೋರಿಸಿ ಬೆದರಿಕೆ:
ಕನಕಮೂರ್ತಿ, ಕಿರಣ್ ಹಾಗೂ ಶ್ರೀಕಾಂತ್ ಕ್ರಿಮಿನಲ್ ಹಿನ್ನೆಲೆಯುವಳ್ಳರಾಗಿದ್ದು, ಈ ಮೂವರ ವಿರುದ್ಧ ವಿಜಯಪುರ ಜಿಲ್ಲೆಯಲ್ಲಿ ದೌರ್ಜನ್ಯ ಪ್ರಕರಣಗಳು ದಾಖಲಾಗಿವೆ. ಕೆಲ ತಿಂಗಳ ಹಿಂದೆ ಇಟ್ಟಿಗೆ ಕಾರ್ಖಾನೆ ಕಾರ್ಮಿಕರ ಮೇಲೆ ದಾದಾಗಿರಿ ನಡೆಸಿದ ಪ್ರಕರಣದಲ್ಲಿ ಈ ಮೂವರನ್ನು ವಿಜಯಪುರ ಪೊಲೀಸರು ಬಂಧಿಸಿ ಜೈಲಿಗೆ ಕಳುಹಿಸಿದ್ದರು. ಬಳಿಕ ಜಾಮೀನು ಪಡೆದು ಹೊರ ಬಂದ ಆರೋಪಿಗಳು, ತಮ್ಮ ಕಾರ್ಯಕ್ಷೇತ್ರವನ್ನು ಬೆಂಗಳೂರಿಗೆ ಬದಲಾಯಿಸಿದ್ದರು. ಮನೆಯಲ್ಲಿ ರೌಡಿಸಂ ಮಾಡಿಕೊಂಡೇ ಇರುತ್ತೀರಾ ಎಂದು ಬೈದಿದ್ದಕ್ಕೆ ಊರು ತೊರೆದು ನಗರಕ್ಕೆ ಆರೋಪಿಗಳು ಬಂದಿದ್ದರು ಎನ್ನಲಾಗಿದೆ.
ತಮ್ಮ ಎದುರಾಳಿಗಳ ದಾಳಿ ಭೀತಿಗೆ ಮಲ್ಲನ್ ಸಾಬ್ ಬಳಿ ಕನಕಮೂರ್ತಿ ಸ್ನೇಹಿತರು ನಾಡ ಪಿಸ್ತೂಲ್ ಖರೀದಿಸಿದ್ದರು. ಇದನ್ನು ಸದಾ ಕಾಲ ತಮ್ಮ ಜೊತೆಯಲ್ಲೇ ಇಟ್ಟುಕೊಂಡು ಅವರು ಅಡ್ಡಾಡುತ್ತಿದ್ದರು. ಹೊಸಪೇಟೆಯ ನಿರ್ಮಾಣ ಹಂತದ ಕಟ್ಟಡಗಳ ಸೆಂಟ್ರಿಂಗ್ ಗುತ್ತಿಗೆದಾರ, ತಮ್ಮ ಕೆಲಸಕ್ಕೆ ಬೆಂಗಳೂರಿನಲ್ಲಿ ಸಾಮಗ್ರಿ ಖರೀದಿಗೆ ಬಂದಿದ್ದರು. ಬಳಿಕ ಕೆಲಸ ಮುಗಿಸಿ ಊರಿಗೆ ಮರಳಲು ಸೆ.18 ರಂದು ಪೀಣ್ಯ ಬಳಿ ಬಸ್ಸಿಗೆ ಅವರು ಕಾಯುತ್ತಿದ್ದರು. ಅದೇ ವೇಳೆ ಕಾರಿನಲ್ಲಿ ಬಂದ ಆರೋಪಿಗಳು, ತಾವು ಬಳ್ಳಾರಿಗೆ ಹೋಗುತ್ತಿರುವುದಾಗಿ ಹೇಳಿ ದೂರುದಾರರನ್ನು ಕಾರಿಗೆ ಹತ್ತಿಸಿಕೊಂಡರು. ಮಾರ್ಗ ಮಧ್ಯೆ ದಾಬಸಪೇಟೆ ಬಳಿ ವ್ಯಾಪಾರಿಗೆ ಪಿಸ್ತೂಲ್ ತೋರಿಸಿ ಜೀವ ಬೆದರಿಕೆ ಹಾಕಿ 75 ಸಾವಿರ ರು. ಮೌಲ್ಯದ ಐಫೋನ್ ಹಾಗೂ 5 ಸಾವಿರ ರು. ನಗದು ದೋಚಿದ್ದರು. ನಂತರ ದಾಬಸ್‌ಪೇಟೆ ಬಳಿಯೇ ಆತನನ್ನು ಇಳಿಸಿ ಆರೋಪಿಗಳು ಪರಾರಿಯಾಗಿದ್ದರು.
ಐ ಫೋನ್ ಮೇಲಿನ ಪ್ರೀತಿಗೆ ದೂರು ಕೊಟ್ಟ!
ತಾನು ಬಹಳ ಇಷ್ಟಪಟ್ಟು ಖರೀದಿಸಿದ್ದ ಐ ಫೋನ್ ದರೋಡೆ ಆಗಿದ್ದರಿಂದ ನೊಂದು ಪೀಣ್ಯ ಠಾಣೆಗೆ ಸಂತ್ರಸ್ತ ದೂರು ಕೊಟ್ಟಿದ್ದರು. ಈ ದೂರಿನ ಮೇರೆಗೆ ತನಿಖೆಗಿಳಿದ ಪೊಲೀಸರು, ಕಾರಿನ ನೋಂದಣಿ ಸಂಖ್ಯೆ ಆಧರಿಸಿ ಪತ್ತೇದಾರಿಕೆ ನಡೆಸಿದರು. ಕೊನೆಗೆ ಮಾರತ್ತಹಳ್ಳಿ ಸಮೀಪದ ದೊಡ್ಡನೆಕ್ಕುಂದಿಯಲ್ಲಿ ತನ್ನ ಸ್ನೇಹಿತನ ಮನೆಯಲ್ಲಿದ್ದ ಆರೋಪಿಗಳು ಖಾಕಿ ಬಲೆಗೆ ಬಿದ್ದಿದ್ದಾರೆ. ಐ ಫೋನ್ ಅನ್ನು ದರೋಡೆಕೋರರು ಕಿತ್ತುಕೊಳ್ಳದೆ ಹೋಗಿದ್ದರೆ ಪ್ರಾಣ ಭಯದಿಂದ ಅವರು ದೂರ ಕೊಡಲು ಹಿಂದೇಟು ಹಾಕುತ್ತಿದ್ದರು ಎನ್ನಲಾಗಿದೆ.