ಓಲಾ, ಉಬರ್‌ ಮತ್ತು ರ‍್ಯಾಪಿಡೋ ಸಂಸ್ಥೆಗಳು ಬೈಕ್‌ ಟ್ಯಾಕ್ಸಿ ಕಾರ್ಯಾಚರಣೆಯನ್ನು ಆರು ವಾರಗಳಲ್ಲಿ ಸ್ಥಗಿತಗೊಳಿಸಬೇಕು ಎಂದು ಹೈಕೋರ್ಟ್‌ ಬುಧವಾರ ಮಹತ್ವದ ಆದೇಶ ಮಾಡಿದೆ.

ಬೆಂಗಳೂರು : ಓಲಾ, ಉಬರ್‌ ಮತ್ತು ರ‍್ಯಾಪಿಡೋ ಸಂಸ್ಥೆಗಳು ಬೈಕ್‌ ಟ್ಯಾಕ್ಸಿ ಕಾರ್ಯಾಚರಣೆಯನ್ನು ಆರು ವಾರಗಳಲ್ಲಿ ಸ್ಥಗಿತಗೊಳಿಸಬೇಕು ಎಂದು ಹೈಕೋರ್ಟ್‌ ಬುಧವಾರ ಮಹತ್ವದ ಆದೇಶ ಮಾಡಿದೆ.

ಬೈಕ್‌ ಟ್ಯಾಕ್ಸಿ ಸೇವೆ ಮುಂದುವರಿಸಲು ತಮಗೆ ಅನುಮತಿಸುವಂತೆ ಸಾರಿಗೆ ಇಲಾಖೆಗೆ ನಿರ್ದೇಶಿಸಬೇಕು ಎಂದು ಕೋರಿ ಉಬರ್‌ ಇಂಡಿಯಾ ಸಿಸ್ಟಮ್ಸ್‌ ಪ್ರೈವೇಟ್‌ ಲಿಮಿಟೆಡ್‌, ರೊಪ್ಪೆನ್‌ ಟ್ರಾನ್ಸ್‌ಪೋರ್ಟೇಶನ್‌ ಸರ್ವೀಸಸ್‌ ಪ್ರೈವೇಟ್‌ ಲಿಮಿಟೆಡ್‌ ಮತ್ತು ಎಎನ್‌ಐ ಟೆಕ್ನಾಲಜೀಸ್‌ ಪ್ರೈವೇಟ್‌ ಲಿಮಿಟೆಡ್‌ ಸಲ್ಲಿಸಿದ್ದ ಅರ್ಜಿಗಳನ್ನು ವಜಾಗೊಳಿಸಿ ನ್ಯಾಯಮೂರ್ತಿ ಬಿ.ಎಂ.ಶ್ಯಾಮಪ್ರಸಾದ್‌ ಅವರ ಪೀಠ ಆದೇಶಿಸಿದೆ.

ರಾಜ್ಯದಲ್ಲಿ ಬೈಕ್ ಟ್ಯಾಕ್ಸಿ ಸೇವೆ ಕಾರ್ಯಾಚರಣೆ ಮಾಡಲು ರಾಜ್ಯ ಸರ್ಕಾರ ಈವರೆಗೆ ನಿಯಮಗಳನ್ನು ರೂಪಿಸಿಲ್ಲ. ಹಾಗಾಗಿ, ಆರು ವಾರದೊಳಗೆ ಓಲಾ, ಉಬರ್‌ ಮತ್ತಿತರ ಸಂಸ್ಥೆಗಳು ಬೈಕ್‌ ಟ್ಯಾಕ್ಸಿಗೆ ಸಂಬಂಧಿಸಿ ನಡೆಸುತ್ತಿರುವ ಎಲ್ಲ ಚಟುವಟಿಕೆಗಳನ್ನು ನಿರ್ಬಂಧಿಸಬೇಕು ಎಂದು ಪೀಠ ಆದೇಶದಲ್ಲಿ ತಿಳಿದೆ.

ಅರ್ಜಿದಾರರ ಮನವಿಯಂತೆ ಬೈಕ್‌ ಟ್ಯಾಕ್ಸಿ ಸೇವೆಗೆ ಸಂಬಂಧಿಸಿ ನಿಯಂತ್ರಣ ಕ್ರಮ ರೂಪಿಸಲು ಮತ್ತು ಸಾರಿಗೇತರ ವಾಹನಗಳನ್ನು ಸಾರಿಗೆ ವಾಹನಗಳನ್ನಾಗಿ ಮಾಡಲು ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಲಾಗದು ಎಂದು ನ್ಯಾಯಪೀಠ ಆದೇಶದಲ್ಲಿ ತಿಳಿಸಿದೆ. ವಿಸ್ತೃತ ಆದೇಶ ಇನ್ನಷ್ಟೇ ಬಿಡುಗಡೆಯಾಗಬೇಕಿದೆ.

ಬೈಕ್‌ ಟ್ಯಾಕ್ಸಿ ಸೇವೆ ನೀಡಲು ಅನುಮತಿ ನೀಡಲು ಕೋರಿ 2022ರ ಫೆ.19ರಂದು ಸಾರಿಗೆ ಇಲಾಖೆ ಕಾರ್ಯದರ್ಶಿಗೆ ಮನವಿ ಪತ್ರವನ್ನು ನೀಡಲಾಗಿದೆ. ಆ ಮನವಿ ಪರಿಗಣಿಸಲು ಮತ್ತು ಸಾರಿಗೆ ವಾಹನಗಳಾಗಿ ಪರವಾನಗಿಯ ನೋಂದಣಿ ಕೋರುವ ಮೋಟಾರ್‌ ಬೈಕ್‌ಗಳಿಗೆ ಅನುಮತಿ ನೀಡಲು ಸಾರಿಗೆ ಆಯುಕ್ತರಿಗೆ ನಿರ್ದೇಶಿಸಬೇಕು ಎಂದು ಅರ್ಜಿದಾರ ಸಂಸ್ಥೆಗಳು ನ್ಯಾಯಾಲಯವನ್ನು ಕೋರಿದ್ದವು.