ಪತ್ನಿ ಬಗ್ಗೆ ಸಾರ್ವಜನಿಕರ ಮುಂದೆ ಕೀಳು ಮಾತು : ಬೈದವನನ್ನು ಕೊಂದವಗೆ ಹೈಕೋರ್ಟ್‌ ರಿಲೀಫ್‌

| N/A | Published : Feb 24 2025, 11:24 AM IST

Highcourt

ಸಾರಾಂಶ

ಪತ್ನಿ ನಡತೆ ಬಗ್ಗೆ ಸಾರ್ವಜನಿಕರ ಮುಂದೆ ಕೀಳಾಗಿ ಮಾತನಾಡಿದವನನ್ನು ಚಾಕುವಿನಿಂದ ಚುಚ್ಚಿ ಕೊಲೆಗೈದ ಪ್ರಕರಣದಲ್ಲಿ ಪತಿ ಜೀವನವಿಡೀ ಜೈಲಿನಲ್ಲಿ ಕೊಳೆಯುವ ಪರಿಸ್ಥಿತಿಯಿಂದ ಹೈಕೋರ್ಟ್‌ ಪಾರು ಮಾಡಿದೆ.

 ವೆಂಕಟೇಶ್‌ ಕಲಿಪಿ

 ಬೆಂಗಳೂರು : ಪತ್ನಿ ನಡತೆ ಬಗ್ಗೆ ಸಾರ್ವಜನಿಕರ ಮುಂದೆ ಕೀಳಾಗಿ ಮಾತನಾಡಿದವನನ್ನು ಚಾಕುವಿನಿಂದ ಚುಚ್ಚಿ ಕೊಲೆಗೈದ ಪ್ರಕರಣದಲ್ಲಿ ಪತಿ ಜೀವನವಿಡೀ ಜೈಲಿನಲ್ಲಿ ಕೊಳೆಯುವ ಪರಿಸ್ಥಿತಿಯಿಂದ ಹೈಕೋರ್ಟ್‌ ಪಾರು ಮಾಡಿದೆ.

ಸಂಗಾತಿಯ ನಡವಳಿಕೆಯನ್ನು ಇತರರ ಮುಂದೆ ಚರ್ಚಿಸಿದಾಗ ಯಾರಾದರೂ ಭಾವುಕರಾಗುವುದು ಮತ್ತು ಅಸಮಾಧಾನಗೊಳ್ಳುವುದು ಸಹಜ. ಕೌಟುಂಬಿಕ-ವೈಯಕ್ತಿಕ ವಿಷಯ ಕುರಿತು ಅಹಿತಕರವಾಗಿ ಸಾರ್ವಜನಿಕವಾಗಿ ಚರ್ಚಿಸಿದಾಗ ಮನುಷ್ಯ ಅಸಹಿಷ್ಣುತೆ ಹೊಂದುವುದು ಸಹಜ ಪ್ರತಿಕ್ರಿಯೆ ಎಂದು ಅಭಿಪ್ರಾಯಪಟ್ಟ ಹೈಕೋರ್ಟ್‌, ಕನಕಪುರ ತಾಲೂಕು ನಿವಾಸಿ ಮೆಹಬೂಬ್‌ ಪಾಷಾಗೆ ಕೊಲೆ ಅಪರಾಧದಡಿ ಅಧೀನ ನ್ಯಾಯಾಲಯ ವಿಧಿಸಿದ್ದ ಜೀವಾವಧಿ ಶಿಕ್ಷೆ ರದ್ದುಪಡಿಸಿದೆ.

ಇದೇ ವೇಳೆ ಕೊಲೆ ಅಪರಾಧದ ಬದಲು ಉದ್ದೇಶಪೂರ್ವಕವಲ್ಲದ ಕೊಲೆ ಪ್ರಕರಣದಲ್ಲಿ ದೋಷಿಯಾಗಿ ಪರಿಗಣಿಸಿ ಶಿಕ್ಷೆ ಪ್ರಮಾಣವನ್ನು ಆತ ಈವರೆಗೆ ಅನುಭವಿಸಿದ ಆರೂವರೆ ವರ್ಷಗಳ ಸಜೆಗೆ ಸೀಮಿತಗೊಳಿಸಿದೆ. ಕೊಲೆ ಪ್ರಕರಣದಲ್ಲಿ ತನಗೆ ಜೀವಾವಧಿ ಶಿಕ್ಷೆ ವಿಧಿಸಿದ ರಾಮನಗರದ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಲಯ ಆದೇಶ ಪ್ರಶ್ನಿಸಿ ಕನಕಪುರ ತಾಲೂಕಿನ ಹುಣಸಮಾರನಹಳ್ಳಿ ನಿವಾಸಿ ಮೆಹಬೂಬ್‌ ಪಾಷಾ ಸಲ್ಲಿಸಿದ್ದ ಕ್ರಿಮಿನಲ್‌ ಮೇಲ್ಮನವಿಯನ್ನು ಭಾಗಶಃ ಪುರಸ್ಕರಿಸಿದ ಹೈಕೋರ್ಟ್‌ ಈ ಆದೇಶ ಮಾಡಿದೆ.

ಪ್ರಕರಣದ ವಿವರ: ಸಿಖಿಂದರ್‌ ಬೇಗ್‌ ಎಂಬಾತ 2015ರ ಜೂ.18ರಂದು ಹೋಟೆಲ್‌ವೊಂದರಲ್ಲಿ ಕುಳಿತಿದ್ದ ಸಮಯಕ್ಕೆ ಅಲ್ಲಿಗೆ ಬಂದ ಪಾಷಾ ಹಾಗೂ ಆತನ ಪತ್ನಿ, ಸಿಖಿಂದರ್‌ ಎದುರಿನ ಟೇಬಲ್‌ನಲ್ಲಿ ಕೂತರು. ಈ ವೇಳೆ ಪಾಷಾ ಪತ್ನಿಯನ್ನು ಸಿಖಿಂದರ್‌ ಕೀಟಲೆ ಮಾಡುತ್ತಾ, ಆಕೆ ನನ್ನ ಪ್ರೀತಿಸುತ್ತಿದ್ದಾಳೆ. ಆಕೆಯೊಂದಿಗೆ ನನಗೆ ಸಂಬಂಧವಿದೆ. ಬೆಳಗ್ಗೆ ನಾನು ಪಾಷಾ ಮನೆಗೆ ಹೋಗಿ, ಪತ್ನಿಯೊಂದಿಗೆ ಸಮಯ ಕಳೆದಿದ್ದೇನೆ ಎಂದು ಸಾರ್ವಜನಿಕವಾಗಿ ಹೇಳಿದ್ದ. ಇದರಿಂದ ಕೆರಳಿದ ಪಾಷಾ, ಪತ್ನಿ ನಡತೆ ಬಗ್ಗೆ ಕೀಳಾಗಿ ಮಾತನಾಡುವುದನ್ನು ನಿಲ್ಲಿಸಲು ಸೂಚಿಸಿದ್ದ. ಸಿಖಿಂದರ್‌ ಮಾತ್ರ ಅಪಹಾಸ್ಯ ಮುಂದುವರಿಸಿದ್ದ. ಆಗ ಮಾತಿಗೆ ಮಾತು ಬೆಳೆದು ಪರಿಸ್ಥಿತಿ ವಿಕೋಪಕ್ಕೆ ತಿರುಗಿ, ಸಿಖಿಂದರ್‌ಗೆ ಪಾಷಾ ಚಾಕುವಿನಿಂದ ಚುಚ್ಚಿದ್ದರು. ಪರಿಣಾಮ ಗಂಭೀರವಾಗಿ ಗಾಯಗೊಂಡಿದ್ದ ಸಿಖಿಂದರ್‌ ಮೃತಪಟ್ಟಿದ್ದ. ಪ್ರಕರಣ ಸಂಬಂಧ ವಿಚಾರಣಾ ನ್ಯಾಯಾಲಯ ಪಾಷಾಗೆ 2018ರ ಜು.13ರಂದು ಜೀವಾವಧಿ ಶಿಕ್ಷೆ ವಿಧಿಸಿತ್ತು. ಅದರ ರದ್ದತಿಗೆ ಕೋರಿ ಪಾಷಾ ಹೈಕೋರ್ಟ್‌ ಮೊರೆ ಹೋಗಿದ್ದ.

ಪ್ರಕರಣದ ವಿಚಾರಣೆ ನಡೆಸಿದ ಹೈಕೋರ್ಟ್‌, ಪತ್ನಿ ಬಗ್ಗೆ ಅನುಚಿತವಾಗಿ ಮಾತನಾಡುವುದನ್ನು ನಿಲ್ಲಿಸಲು ಸತತವಾಗಿ ಎಚ್ಚರಿಸಿದರೂ ಮೃತ ಮಾತ್ರ ತನ್ನ ದುರ್ವತನೆ ಮುಂದುವರಿಸಿದ. ಇದರಿಂದ ಕೋಪಗೊಂಡು ಆರೋಪಿ ಮೃತನಿಗೆ ಚಾಕುವಿನಿಂದ ಚುಚ್ಚಿದ್ದಾನೆ. ಆರೋಪಿ ಮತ್ತು ಮೃತನ ಭೇಟಿ ಕಾಕತಾಳೀಯವೇ ಹೊರತು ಯೋಜಿತವಾಗಿರಲಿಲ್ಲ. ಕೊಲೆ ಘಟನೆ ಪೂರ್ವಯೋಜಿತವಲ್ಲ. ಮಾತಿನ ಸಂಘರ್ಷದಿಂದ ಕ್ಷಣಾರ್ಧದಲ್ಲಿ ಘಟನೆ ಸಂಭವಿಸಿದೆ. ಮೃತನನ್ನು ಕೊಲ್ಲುವ ಯಾವುದೇ ಪೂರ್ವ ಉದ್ದೇಶ ಆರೋಪಿಗೆ ಇರಲಿಲ್ಲ. ಪತ್ನಿ ಬಗೆಗಿನ ಟೀಕೆ ನಿಲ್ಲಿಸದ ಕಾರಣ ಕೃತ್ಯ ಎಸಗಲು ಆರೋಪಿಯನ್ನು ಪ್ರೇರೇಪಿಸಿದೆ ಎಂಬುದಾಗಿ ತೀರ್ಮಾನಿಸಬಹುದಾಗಿದೆ ಎಂದು ಅಭಿಪ್ರಾಯಪಟ್ಟಿತು.

ಆದರೆ, ತನ್ನ ಕಾರ್ಯ ಸಿಖಿಂದರ್‌ ಸಾವಿಗೆ ಕಾರಣವಾಗಬಹುದು ಎಂಬ ಅರಿವು ಆರೋಪಿಗೆ ಇತ್ತು. ಹಾಗಾಗಿ ಇದು ಭಾರತೀಯ ದಂಡ ಸಂಹಿತೆ (ಐಪಿಸಿ) ಸೆಕ್ಷನ್‌ 302 ಅಡಿಯ ಕೊಲೆ ಬದಲು 304 ಅಡಿಯಲ್ಲಿ ಉದ್ದೇಶಪೂರ್ವಕವಲ್ಲದ ಕೊಲೆ ಅಪರಾಧವಾಗಲಿದೆ. ಘಟನೆ 2015ರ ಜೂ.18ರಂದು ನಡೆದಿದ್ದು, ಅಂದಿನಿಂದ 2018ರ ಜುಲೈವರೆಗೆ ಆರೋಪಿ ನ್ಯಾಯಾಂಗ ಬಂಧನಲ್ಲಿದ್ದ. ವಿಚಾರಣಾ ನ್ಯಾಯಾಲಯದ ಆದೇಶದ ನಂತರ ಜೈಲಿಗೆ ಹೋಗಿದ್ದ. ಈವರೆಗೂ ಆರೂವರೆ ವರ್ಷ ಕಠಿಣ ಸಜೆ ಅನುಭವಿಸಿದ್ದಾನೆ. ವಿಚಾರಣಾ ನ್ಯಾಯಾಲಯ ವಿಧಿಸಿದ ಶಿಕ್ಷೆ ಮಾರ್ಪಡಿಸುವ ಅಗತ್ಯವಿದೆ ಎಂದು ತೀರ್ಮಾನಿಸಿದ ಹೈಕೋರ್ಟ್‌, ಪಾಷಾಗೆ ವಿಧಿಸಲಾಗಿರುವ ಜೀವಾವಧಿ ಶಿಕ್ಷೆ ರದ್ದುಪಡಿಸಿದೆ. ಉದ್ದೇಶಪೂರ್ವಕವಲ್ಲದ ಕೊಲೆ ಅಪರಾಧದಡಿ ಶಿಕ್ಷೆಯನ್ನು ಪಾಷಾ ಈಗಾಗಲೇ ಅನುಭವಿಸಿರುವ ಆರೂವರೆ ವರ್ಷದ ಕಠಿಣ ಸಜೆಗೆ ಸೀಮಿತಗೊಳಿಸಿ ಬಿಡುಗಡೆಗೆ ಆದೇಶಿಸಿದೆ.