ಸಾರಾಂಶ
ರಾಜ್ಯದಲ್ಲಿ ಮೈಕ್ರೋ ಫೈನಾನ್ಸ್ ಸಂಸ್ಥೆಗಳಿಂದ ತೊಂದರೆ ಆಗುತ್ತಿದೆ ಎಂಬ ಆರೋಪಗಳಿಗೆ ಸಂಬಂಧಿಸಿ ಮುಕ್ತವಾಗಿ ಚರ್ಚೆ ಮಾಡಲು ಸಿದ್ಧರಿದ್ದೇವೆ. ಜನತೆ ವದಂತಿ ನಂಬಬಾರದು ಎಂದು ಮೈಕ್ರೋ ಫೈನಾನ್ಸ್ ಇಂಡಸ್ಟ್ರೀ ನೆಟ್‌ವರ್ಕ್ ರಾಜ್ಯ ಮುಖ್ಯಸ್ಥ ರಾಮ ಕಾಮರಾಜು ಹೇಳಿದರು.
ಬೆಂಗಳೂರು : ರಾಜ್ಯದಲ್ಲಿ ಮೈಕ್ರೋ ಫೈನಾನ್ಸ್ ಸಂಸ್ಥೆಗಳಿಂದ ತೊಂದರೆ ಆಗುತ್ತಿದೆ ಎಂಬ ಆರೋಪಗಳಿಗೆ ಸಂಬಂಧಿಸಿ ಮುಕ್ತವಾಗಿ ಚರ್ಚೆ ಮಾಡಲು ಸಿದ್ಧರಿದ್ದೇವೆ. ಜನತೆ ವದಂತಿ ನಂಬಬಾರದು ಎಂದು ಮೈಕ್ರೋ ಫೈನಾನ್ಸ್ ಇಂಡಸ್ಟ್ರೀ ನೆಟ್‌ವರ್ಕ್ ರಾಜ್ಯ ಮುಖ್ಯಸ್ಥ ರಾಮ ಕಾಮರಾಜು ಹೇಳಿದರು.
ಅನಧಿಕೃತ ಸಂಸ್ಥೆಗಳು ಮತ್ತು ಮಾಹಿತಿ ಇಲ್ಲದ ಗುಂಪುಗಳು ಸುಳ್ಳು ವದಂತಿಗಳನ್ನು ಹರಡಿಸುತ್ತಿವೆ. ಮೈಕ್ರೋ ಫೈನಾನ್ಸ್‌ಗಳು ಆರ್‌ಬಿಐ ಮಾರ್ಗದರ್ಶನಗಳನ್ನು ಕಟ್ಟುನಿಟ್ಟಾಗಿ ಪಾಲಿಸುತ್ತಿವೆ. ಯಾವುದೇ ಅಹಿತಕರ ಘಟನೆಗಳನ್ನು ನಡೆಸುತ್ತಿದ್ದೇವೆಂದು ಯಾರಿಗಾದರೂ ಅನ್ನಿಸಿದಲ್ಲಿ ಅಂಥವರೊಂದಿಗೆ ಮುಕ್ತವಾಗಿ ಚರ್ಚೆ ಮಾಡಲು ಸಿದ್ಧರಿದ್ದೇವೆ ಎಂದರು.
ಮೈಕ್ರೋ ಫೈನಾನ್ಸ್‌ಗಳಿಂದ ಹಿಂದುಳಿದ ವರ್ಗವೂ ಸೇರಿ ತಳಮಟ್ಟ ಜನರ ಆರ್ಥಿಕ ಸಬಲತೆ ಸಾಧ್ಯವಾಗಿದೆ. ಪ್ರಸ್ತುತ 63 ಲಕ್ಷಕ್ಕೂ ಹೆಚ್ಚು ಗ್ರಾಹಕರಿಗೆ ಸೇವೆ ಸಲ್ಲಿಸುತ್ತಿದೆ. ರಾಜ್ಯದಲ್ಲಿ ಸಂಘಟನೆಯಡಿ 76 ಮೈಕ್ರೋಫೈನಾನ್ಸ್ ಸಂಸ್ಥೆಗಳಿವೆ. 2019ರಲ್ಲಿ 16,946 ಕೋಟಿಗಳಷ್ಟಿದ್ದ ಮೈಕ್ರೋಫೈನಾನ್ಸ್ ಸಂಸ್ಥೆಗಳ ಒಟ್ಟು ಸಾಲದ ಬಂಡವಾಳ ಪ್ರಸ್ತುತ 42,265 ಕೋಟಿಗಳಿಗೆ ಏರಿದೆ. ಇದು ಸಾವಿರಾರು ಮಹಿಳೆಯರು, ಕುಟುಂಬ ಮತ್ತು ಸಮುದಾಯ ಸಬಲೀಕರಣಹೊಂದಿ ಅಭಿವೃದ್ಧಿ ಹೊಂದುವಂತೆ ಮಾಡಿವೆ ಎಂದರು.
ಸಮಸ್ತಾ ಫೈನಾನ್ಸ್ ಲಿಮಿಟೆಡ್‌ನ ವ್ಯವಸ್ಥಾಪಕ ನಿರ್ದೇಶಕ ವೆಂಕಟೇಶ್ ಎನ್. ಮಾತನಾಡಿ, ಡಿಸೆಂಬರ್ ತಿಂಗಳಿನ ವರದಿಯಂತೆ ಸಾಲಗಾರರಿಂದ ಸಾಲ ಸಂಗ್ರಹ ಮಾಡುವಲ್ಲಿ ಕೆಲವು ಸಮಸ್ಯೆಗಳು ಕಂಡುಬಂದಿವೆ. ಸಂಸ್ಥೆಗಳು ಸಮಸ್ಯೆಗಳನ್ನು ಬಗೆಹರಿಸುವಲ್ಲಿ ಸಕಾರಾತ್ಮಕ ನಿರ್ಣಯ ತೆಗೆದುಕೊಂಡಿದೆ. ಕೆಲವೇ ತಿಂಗಳುಗಳಲ್ಲಿ ಸಮಸ್ಯೆಗಳು ನಿವಾರಣೆ ಆಗಲಿವೆ ಎಂದರು. ಚೈತನ್ಯ ಇಂಡಿಯಾ ಫಿನ್ ಕ್ರೆಡಿಟ್‌ನ ವ್ಯವಸ್ಥಾಪಕ ನಿರ್ದೇಶಕ ಆನಂದ್ ರಾವ್ ಸೇರಿ ಇತರರಿದ್ದರು.