‘ವಿಕಸಿತ ಭಾರತ-2041’ ಕಾರ್ಯಕ್ರಮಕ್ಕೆ ಅನುಗುಣವಾಗಿ ಔಷಧಗಳ ತಯಾರಿಕೆ ಮತ್ತು ರಫ್ತಿನಲ್ಲಿ ವಿಶ್ವದಲ್ಲೇ ಭಾರತವನ್ನು ನಂ.1 ಸ್ಥಾನಕ್ಕೆ ತರಲು ಪೂರಕ ಯೋಜನೆ ರೂಪಿಸುತ್ತಿರುವುದಾಗಿ ದಿ ಇನ್ಸಿಟಿಟ್ಯೂಟ್ ಆಫ್ ಹೆಲ್ತ್ ಮ್ಯಾನೇಜ್‌ಮೆಂಟ್ ರಿಸರ್ಚ್‌ನ ಅಧ್ಯಕ್ಷ ಡಾ.ಸುದರ್ಶನ್‌ ಜೈನ್‌ ಹೇಳಿದರು.

 ಬೆಂಗಳೂರು : ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆ ‘ವಿಕಸಿತ ಭಾರತ-2041’ ಕಾರ್ಯಕ್ರಮಕ್ಕೆ ಅನುಗುಣವಾಗಿ ಔಷಧಗಳ ತಯಾರಿಕೆ ಮತ್ತು ರಫ್ತಿನಲ್ಲಿ ವಿಶ್ವದಲ್ಲೇ ಭಾರತವನ್ನು ನಂ.1 ಸ್ಥಾನಕ್ಕೆ ತರಲು ಪೂರಕ ಯೋಜನೆಗಳನ್ನು ರೂಪಿಸುತ್ತಿರುವುದಾಗಿ ದಿ ಇನ್ಸಿಟಿಟ್ಯೂಟ್ ಆಫ್ ಹೆಲ್ತ್ ಮ್ಯಾನೇಜ್‌ಮೆಂಟ್ ರಿಸರ್ಚ್‌ನ (ಐಐಎಚ್‌ಎಂಆರ್) ಅಧ್ಯಕ್ಷ ಡಾ.ಸುದರ್ಶನ್‌ ಜೈನ್‌ ಹೇಳಿದರು.

‘ಔಷಧ ತಂತ್ರಜ್ಞಾನ-2026’ ಸಮಾವೇಶ

ನಗರದ ಖಾಸಗಿ ಹೋಟೆಲ್‌ನಲ್ಲಿ ಶನಿವಾರ ನಡೆದ ‘ಔಷಧ ತಂತ್ರಜ್ಞಾನ-2026’ ಸಮಾವೇಶದಲ್ಲಿ ಪಾಲ್ಗೊಂಡು ಮಾತನಾಡಿ, ಔಷಧಗಳ ರಪ್ತಿಯಲ್ಲಿ ದೇಶ ಸದ್ಯ 3ನೇ ಸ್ಥಾನದಲ್ಲಿದೆ. ವರ್ಷದಿಂದ ವರ್ಷಕ್ಕೆ ಔಷಧ ಕ್ಷೇತ್ರ ಆಗಾಧವಾಗಿ ಬೆಳೆಯುತ್ತಿದೆ. ಔಷಧ ಕಂಪನಿಗಳು ಕೃತಕ ಬುದ್ಧಿಮತ್ತೆ(ಎಐ) ಬಳಸಿ ಜೆನೆರಿಕ್ ಔಷಧಗಳನ್ನು ತಯಾರಿಸುತ್ತಿವೆ. ಮುಂದಿನ ದಿನಗಳಲ್ಲಿ ಗಂಭೀರ ಕಾಯಿಲೆಗಳಿಗೂ ಔಷಧಗಳನ್ನು ತಯಾರಿಸಲು ಈ ತಂತ್ರಜ್ಞಾನ ಅಳವಡಿಸಿಕೊಳ್ಳುತ್ತಿವೆ. ಇದಕ್ಕೆ ಸಂಬಂಧಿಸಿ ಔಷಧ ಕಂಪನಿಗಳಿಗೆ ಕೌಶಲ ಆಧಾರಿತ ಪ್ರತಿಭಾವಂತ ಉದ್ಯೋಗಿಗಳನ್ನು ಒದಗಿಸಲು ಕಾರ್ಯಕ್ರಮ ರೂಪಿಸಲಾಗಿದೆ. ದಕ್ಷಿಣ ಭಾರತದಲ್ಲಿ ಫಾರ್ಮಾಸ್ಯುಟಿಕಲ್ ಮ್ಯಾನೇಜ್‌ಮೆಂಟ್‌ನ ಅವಶ್ಯಕತೆ ಇದೆ. ಆರೋಗ್ಯ ಕ್ಷೇತ್ರಕ್ಕೆ ಸಂಬಂಧಿಸಿದ ಕಾರ್ಯಕ್ರಮಗಳನ್ನು ಅನುಷ್ಠಾನಕ್ಕೆ ತರಲು ಸರ್ಕಾರಗಳೊಂದಿಗೆ ಎಐಎಚ್‌ಎಂಆರ್‌ ಕೆಲಸ ಮಾಡಲಾಗುತ್ತಿದೆ ಎಂದು ತಿಳಿಸಿದರು.

ಕೌಶಲ ಅಳವಡಿಸಿಕೊಳ್ಳುವುದು ಅಗತ್ಯ:

ಐಐಎಚ್‌ಎಂಆರ್ ನಿರ್ದೇಶಕಿ ಡಾ.ಉಷಾ ಮಂಜುನಾಥ್‌ ಮಾತನಾಡಿ, ಔಷಧ ತಯಾರಿಕಾ ಕ್ಷೇತ್ರದಲ್ಲಿ ಕಾಲಕ್ಕೆ ತಕ್ಕಂತೆ ತಂತ್ರಜ್ಞಾನ ಮತ್ತು ಕೌಶಲ ಅಳವಡಿಸಿಕೊಳ್ಳುವುದು ಮುಖ್ಯ. ಐಐಎಚ್‌ಎಂಆರ್ ನಿಂದ ಫಾರ್ಮಾಸ್ಯೂಟಿಕಲ್ ಮ್ಯಾನೇಜ್‌ಮೆಂಟ್ ಕೋರ್ಸ್‌ಗಳನ್ನು ಜಾರಿಗೆ ತರಲಾಗುತ್ತಿದೆ. ಕೋರ್ಸ್ ಮುಗಿದ ತಕ್ಷಣ ಪ್ರಮುಖ ಔಷಧ ಕಂಪನಿಗಳಲ್ಲಿ ವಿದ್ಯಾರ್ಥಿಗಳಿಗೆ ಉದ್ಯೋಗ ಸಿಗಲಿದೆ. ಎಐ ತಂತ್ರಜ್ಞಾನ ಆಧಾರಿತ ಹೆಲ್ತ್ ಪ್ರಾಜೆಕ್ಸ್‌ಗಳನ್ನು ರೂಪಿಸಲಾಗುತ್ತಿದೆ. ಈ ಕುರಿತು ಔಷಧ ಕಂಪನಿಗಳ ಜೊತೆ ಕೈಜೋಡಿಸಿದ್ದೇವೆ. ರಾಜ್ಯ ಮತ್ತು ಕೇಂದ್ರ ಸರ್ಕಾರದ ಸಹಯೋಗದಲ್ಲಿ ಹಲವು ಪ್ರಾಜೆಕ್ಟ್‌ಗಳಿಗೆ ಪಾಲುದಾರಿಕೆ ಪಡೆಯಲಾಗಿದೆ ಎಂದು ತಿಳಿಸಿದರು.

ಐಐಎಚ್‌ಎಂಆರ್‌ನ ಪ್ರೊ.ಎಸ್.ಸದಾಗೋಪನ್, ಡಾ.ಸಿ.ಎಸ್.ಕೇದಾರ್ ಉಪಸ್ಥಿತರಿದ್ದರು.