ಲಿಂಗಾಯತ ಉಪ ಪಂಗಡಕ್ಕೆ ಅನ್ಯಾಯ-ಜಾತಿ ಸಮೀಕ್ಷೆ ಮಾನದಂಡಗಳೇ ಅವೈಜ್ಞಾನಿಕ : ಬಿದರಿ

| N/A | Published : Apr 25 2025, 11:07 AM IST

Janata Curfew Vidhansoudha

ಸಾರಾಂಶ

ಹಿಂದುಳಿದ ವರ್ಗಗಳ ಆಯೋಗದ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ-2025ರ ಅಧ್ಯಯನ ವರದಿಯಲ್ಲಿ ವೀರಶೈವ ಲಿಂಗಾಯತ ಪಂಥದ ಅತ್ಯಂತ ಹಿಂದುಳಿದ ಅನೇಕ ಉಪಜಾತಿಗಳನ್ನು ಸೂಕ್ತ ಪ್ರವರ್ಗಕ್ಕೆ ಸೇರಿಸಲಾಗಿಲ್ಲ

 ಬೆಂಗಳೂರು :  ಹಿಂದುಳಿದ ವರ್ಗಗಳ ಆಯೋಗದ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ-2025ರ ಅಧ್ಯಯನ ವರದಿಯಲ್ಲಿ ವೀರಶೈವ ಲಿಂಗಾಯತ ಪಂಥದ ಅತ್ಯಂತ ಹಿಂದುಳಿದ ಅನೇಕ ಉಪಜಾತಿಗಳನ್ನು ಸೂಕ್ತ ಪ್ರವರ್ಗಕ್ಕೆ ಸೇರಿಸಲಾಗಿಲ್ಲ. ಬಹುತೇಕ ಉಪಜಾತಿಗಳನ್ನು ಅವೈಜ್ಞಾನಿಕವಾಗಿ ಪ್ರವರ್ಗ ‘3ಬಿ’ ಗೆ ಸೇರಿಸಿ ಘೋರ ಅನ್ಯಾಯ ಮಾಡಲಾಗಿದೆ. ಇದನ್ನು ಒಪ್ಪಲು ಸಾಧ್ಯವಿಲ್ಲ. ಸರ್ಕಾರ ಈ ಸಮೀಕ್ಷಾ ವರದಿ ತಿರಸ್ಕರಿಸಬೇಕು ಅಖಿಲ ಭಾರತ ವೀರಶೈವ/ಲಿಂಗಾಯತ ಮಹಾಸಭಾ ಆಗ್ರಹಿಸಿದೆ.

ಈ ಸಂಬಂಧ ಗುರುವಾರ ನಗರದ ಬಳ್ಳಾರಿ ರಸ್ತೆಯ ಮಹಾಸಭಾ ಭವನದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಮಹಾಸಭಾದ ರಾಜ್ಯಘಟಕದ ಅಧ್ಯಕ್ಷ ಶಂಕರ್‌ ಬಿದರಿ, 12ನೇ ಶತಮಾನದಲ್ಲಿ ಬಸವಣ್ಣನವರ ಪ್ರಭಾವದಿಂದಾಗಿ ನಾಲ್ಕೂ ವರ್ಣಗಳು ಹಾಗೂ 99 ಜಾತಿಗಳಿಂದಲೂ ಲಕ್ಷಾಂತರ ಜನ ಲಿಂಗಾಯತರಾಗಿ ಪರಿವರ್ತನೆಯಾದರು.

ಇದರಿಂದ ಲಿಂಗಾಯತ ಜಾತಿ ಅಲ್ಲ, ಪಂಥ ಎಂದು ನಾವು ಪರಿಗಣಿಸುತ್ತೇವೆ. ಪರಿವರ್ತನೆಯಾದ ಹೆಳವ, ಭೋವಿ, ಸುಣಗಾರ, ಭಜಂತ್ರಿ, ಜಂಗಮ, ಉಪ್ಪಾರ, ಹಾವಾಡಿಗ, ಮಚೆಗಾರ, ಮಡಿವಾಳ, ಕಮ್ಮಾರ, ಕುಂಬಾರ ಸೇರಿ ಅನೇಕ ಜಾತಿಯ ಭಾಗಶಃ ಜನಾಂಗ ಲಿಂಗಾಯತದ ಉಪಪಂಗಡಗಳಾದವು. ಲಿಂಗಾಯತರಾದ ಮಾತ್ರಕ್ಕೆ ಅವರ ವೃತ್ತಿ ಮತ್ತು ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಸ್ಥಿತಿಗತಿ ಏನೂ ಬದಲಾಗಿಲ್ಲ. ಹಾಗಾಗಿ ಆಯಾ ಉಪಪಂಗಡಗಳ ವೃತ್ತಿ, ಸ್ಥಿತಿಗತಿ ಆಧರಿಸಿ ಪ್ರವರ್ಗ 1ಎ, 1ಬಿ, 2ಎ ಪ್ರವರ್ಗದಡಿ ಸೇರಿಸಬೇಕಿತ್ತು. ಆದರೆ, ಆಯೋಗವು ಲಿಂಗಾಯತ ಎನ್ನುವ ಒಂದೇ ಕಾರಣಕ್ಕೆ ಎಲ್ಲ ಉಪಜಾತಿಗಳನ್ನೂ 3ಬಿಗೆ ಸೇರಿಸಿದೆ. ಇದನ್ನು ನಾವು ಒಪ್ಪುವುದಿಲ್ಲ ಎಂದರು.

ಜಾತಿ ಸಮೀಕ್ಷೆ, ಕೆನೆಪದರ ಜಾರಿಗೆ ನಮ್ಮ ವಿರೋಧ ಇಲ್ಲ. ಸರ್ಕಾರ ಕಾನೂನಾತ್ಮಕವಾಗಿ ಪ್ರತೀ ಹತ್ತುವರ್ಷಕ್ಕೊಮ್ಮೆ ಸಮೀಕ್ಷೆ ನಡೆಸಿ ಮುಂದುವರೆದ ಜಾತಿಗಳನ್ನು ಪತ್ತೆ ಮಾಡಿ ಹಿಂದುಳಿದ ವರ್ಗಗಳ ಪಟ್ಟಿಹಿಂದ ತೆಗೆದುಹಾಕುವ ಅದೇ ರೀತಿ ಹಿಂದುಳಿದ ಹೊಸ ಜಾತಿಗಳನ್ನು ಆ ಪಟ್ಟಿಗೆ ಸೇರಿಸುವ ಕೆಲಸ ಮಾಡಲಿ.

- ಶಂಕರ್‌ ಬಿದರಿ, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ರಾಜ್ಯಾಧ್ಯಕ್ಷ