ಕುಂಭಮೇಳಕ್ಕೆ ಹೋಗೋದು, ಬಿಡೋದು ನನಗೆ ಬಿಟ್ಟಿದ್ದು: ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌

| N/A | Published : Feb 06 2025, 11:05 AM IST

dk shivakumar

ಸಾರಾಂಶ

ನಾನು ಕುಂಭಮೇಳದಲ್ಲಿ ಭಾಗವಹಿಸುವ ಕುರಿತು ಟೀಕೆ ಮಾಡುತ್ತಿರುವ ಪ್ರತಿಪಕ್ಷ ನಾಯಕ ಆರ್‌.ಅಶೋಕ್‌ ಅವರು ಮೊದಲು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಕುಂಭಮೇಳದಲ್ಲಿ ಭಾಗಹಿಸುತ್ತಿರುವುದನ್ನು ಪ್ರಶ್ನಿಸಲಿ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ತಿರುಗೇಟು ನೀಡಿದ್ದಾರೆ.

  ಬೆಂಗಳೂರು : ನಾನು ಕುಂಭಮೇಳದಲ್ಲಿ ಭಾಗವಹಿಸುವ ಕುರಿತು ಟೀಕೆ ಮಾಡುತ್ತಿರುವ ಪ್ರತಿಪಕ್ಷ ನಾಯಕ ಆರ್‌.ಅಶೋಕ್‌ ಅವರು ಮೊದಲು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಕುಂಭಮೇಳದಲ್ಲಿ ಭಾಗಹಿಸುತ್ತಿರುವುದನ್ನು ಪ್ರಶ್ನಿಸಲಿ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ತಿರುಗೇಟು ನೀಡಿದ್ದಾರೆ.

ತಾವು ಕುಂಭಮೇಳದಲ್ಲಿ ಭಾಗವಹಿಸುವುದಾಗಿ ಹೇಳಿರುವುದನ್ನು ವಿಪಕ್ಷ ನಾಯಕ ಆರ್.ಅಶೋಕ್ ಎಕ್ಸ್ ಖಾತೆಯಲ್ಲಿ ಟೀಕಿಸಿದ್ದಾರಲ್ವಾ ಎಂಬ ಸುದ್ದಿಗಾರರ ಪ್ರಶ್ನೆಗೆ, ಅಶೋಕ್‌ ಮೊದಲು ಪ್ರಧಾನಿ ಮೋದಿ ಹಾಗೂ ಅವರ ಪಕ್ಷದ ಇತರೆ ನಾಯಕರು ಭಾಗವಹಿಸುತ್ತಿರುವುದನ್ನು ಪ್ರಶ್ನಿಸಲಿ. ನನ್ನ ವೈಯಕ್ತಿಕ ನಂಬಿಕೆ ವಿಚಾರವಾಗಿ ಮಾತನಾಡಲು ಯಾರಿಗೂ ಹಕ್ಕಿಲ್ಲ. ನಾನು ಹೋಗುತ್ತೇನೋ, ಬಿಡುತ್ತೇನೋ ನನಗೆ ಬಿಟ್ಟ ವಿಚಾರ ಎಂದರು. 

ಕುಂಭಮೇಳದ ಕುರಿತು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಅವರ ಹೇಳಿಕೆ ಬಗ್ಗೆ ಕೇಳಿದಾಗ, ಅವರು ಹೇಳಿರುವುದೇ ಬೇರೆ ಅರ್ಥದಲ್ಲಿ. ಯಾವುದೇ ಧರ್ಮದ ಬಗ್ಗೆ ಶ್ರದ್ಧೆ, ಭಕ್ತಿ, ಆಚರಣೆ, ನಂಬಿಕೆಗಳು ಆಯಾಯ ವ್ಯಕ್ತಿಗೆ ಸಂಬಂಧಿಸಿದ್ದು, ನಾವು ಪ್ರತಿಯೊಂದಕ್ಕೂ ಗೌರವ ನೀಡಬೇಕು. ಆದರೆ, ಇಂತಹ ವಿಚಾರಗಳನ್ನೂ ಬಿಜೆಪಿಯ ರಾಜಕೀಯ ಉದ್ದೇಶಗಳಿಗೆ ಬಳಸಿಕೊಳ್ಳುತ್ತಿದೆ ಎಂದರು.

ಎರಡನೇ ವಿಮಾನ ನಿಲ್ದಾಣಕ್ಕೆ ಜಾಗ ನಿಗದಿ ಕುರಿತ ಪ್ರಶ್ನೆಗೆ, ಬೃಹತ್ ಕೈಗಾರಿಕೆ ಸಚಿವರು, ಎರಡನೇ ವಿಮಾನ ನಿಲ್ದಾಣ ಬಗ್ಗೆ ಪರಿಶೀಲನೆ ಮಾಡುತ್ತಿದ್ದಾರೆ. ಅಂತಿಮ ನಿರ್ಧಾರದ ಬಗ್ಗೆ ನನ್ನ ಬಳಿ, ಮುಖ್ಯಮಂತ್ರಿ ಬಳಿ ಚರ್ಚೆ ಮಾಡಿಲ್ಲ. ಪ್ರಾಥಮಿಕ ಸಭೆ ಮಾತ್ರ ಆಗಿದೆ. ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶ ಮುಗಿದ ನಂತರ ನಾವು ಚರ್ಚೆ ಮಾಡುತ್ತೇವೆ ಎಂದು ತಿಳಿಸಿದರು.

ಸಂಪುಟ ಸಭೆಯಲ್ಲಿ ನೀರಿನ ದರ ಏರಿಕೆ ಚರ್ಚೆ: ಇದೇ ವೇಳೆ ನೀರಿನ ದರ ಏರಿಕೆ ಪ್ರಸ್ತಾವನೆ ಸಲ್ಲಿಕೆ ಬಗ್ಗೆ ಕೇಳಿದಾಗ, ಈ ಬಗ್ಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಚರ್ಚೆ ಮಾಡಬೇಕು ಎಂದರು.