ಜನಿವಾರ್‌ಗೆ 4 ತಲೆದಂಡ - ವಿದ್ಯಾರ್ಥಿಗೆ ಪ್ರವೇಶ ನೀಡದ ಬೀದರ್ ಪ್ರಾಚಾರ್ಯ, ಗುಮಾಸ್ತ ವಜಾ

| N/A | Published : Apr 20 2025, 06:16 AM IST

Astrology Tips-Janivara is the cure for many diseases

ಸಾರಾಂಶ

ರಾಜ್ಯವಷ್ಟೇ ಅಲ್ಲದೆ ದೇಶಾದ್ಯಂತ ಭಾರೀ ಆಕ್ರೋಶಕ್ಕೆ ಕಾರಣವಾದ ಸಿಇಟಿ ಪರೀಕ್ಷೆ ವೇಳೆ ಜನಿವಾರಕ್ಕೆ ಆಕ್ಷೇಪ ಪ್ರಕರಣ ಶನಿವಾರ ಕೊನೆಗೂ ಒಂದು ಹಂತದಲ್ಲಿ ತಾರ್ಕಿಕ ಅಂತ್ಯಕ್ಕೆ ಬಂದಿದ್ದು, ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸುವಿಕೆ ಆರಂಭವಾಗಿದೆ.

 ಬೀದರ್‌ / ಶಿವಮೊಗ್ಗ : ರಾಜ್ಯವಷ್ಟೇ ಅಲ್ಲದೆ ದೇಶಾದ್ಯಂತ ಭಾರೀ ಆಕ್ರೋಶಕ್ಕೆ ಕಾರಣವಾದ ಸಿಇಟಿ ಪರೀಕ್ಷೆ ವೇಳೆ ಜನಿವಾರಕ್ಕೆ ಆಕ್ಷೇಪ ಪ್ರಕರಣ ಶನಿವಾರ ಕೊನೆಗೂ ಒಂದು ಹಂತದಲ್ಲಿ ತಾರ್ಕಿಕ ಅಂತ್ಯಕ್ಕೆ ಬಂದಿದ್ದು, ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸುವಿಕೆ ಆರಂಭವಾಗಿದೆ. ಬೀದರ್‌ನಲ್ಲಿ ಕಾಲೇಜು ಪ್ರಾಚಾರ್ಯ ಹಾಗೂ ಗುಮಾಸ್ತನ ವಜಾ ಮಾಡಲಾಗಿದ್ದರೆ, ಶಿವಮೊಗ್ಗದಲ್ಲಿ ಇಬ್ಬರು ಹೋಂ ಗಾರ್ಡ್‌ಗಳನ್ನು ಅಮಾನತು ಮಾಡಲಾಗಿದೆ.

ಬೀದರ್‌ನ ಸಾಯಿಸ್ಫೂರ್ತಿ ಕಾಲೇಜಿನ ಸಿಇಟಿ ಪರೀಕ್ಷಾ ಕೇಂದ್ರದಲ್ಲಿ ಜನಿವಾರ ತೆಗೆಯಲೊಪ್ಪದ ವಿದ್ಯಾರ್ಥಿ ಸುಚಿವೃತ ಕುಲಕರ್ಣಿಗೆ ಪ್ರವೇಶ ನಿರಾಕರಣೆ ಮಾಡಲಾಗಿತ್ತು, ಇನ್ನೊಂದೆಡೆ ಶಿವಮೊಗ್ಗದ ಆದಿಚುಂಚನಗಿರಿ ಶಾಲೆಯಲ್ಲಿ ಪರೀಕ್ಷಾರ್ಥಿಯಿಂದ ಜನಿವಾರ ತೆಗೆಸಿ ಕರ್ತವ್ಯಲೋಪ ಎಸಗಲಾಗಿತ್ತು. ಇದರ ವಿರುದ್ಧ ಬ್ರಾಹ್ಮಣ, ಹಿಂದೂ ಸಂಘಟನೆಗಳು, ಸ್ವಾಮೀಜಿಗಳು, ರಾಜಕೀಯ ನಾಯಕರು ಸಿಡಿದೆದ್ದು ರಾಜ್ಯ ಸರ್ಕಾರದ ವಿರುದ್ಧ ಭಾರೀ ಆಕ್ರೋಶ ವ್ಯಕ್ತಪಡಿಸಿದ್ದರು.

ಬೀದರ್‌ನಲ್ಲಿ ಇಬ್ಬರು ವಜಾ:

ಪ್ರಕರಣ ಗಂಭೀರತೆ ಪಡೆದ ಕಾರಣ ಬೀದರ್‌ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಅ‍ವರು ಜಿಲ್ಲಾಧಿಕಾರಿಗಳಿಗೆ 24 ಗಂಟೆಗಳಲ್ಲಿ ವರದಿ ಸಲ್ಲಿಸಿ ಕ್ರಮ ಕೈಗೊಳ್ಳುವಂತೆ ಶುಕ್ರವಾರ ಸೂಚಿಸಿದ್ದರು. ಅದರಂತೆ ತನಿಖಾ ತಂಡ ಸರ್ಕಾರಕ್ಕೆ ಸಲ್ಲಿಸಿದ್ದರಲ್ಲದೆ, ಘಟನೆ ನಡೆಸಿದ್ದ ಸಾಯಿಸ್ಫೂರ್ತಿ ಶಿಕ್ಷಣ ಸಂಸ್ಥೆಗೆ ನೋಟಿಸ್‌ ಜಾರಿಗೊಳಿಸಿ ಪ್ರಾಚಾರ್ಯ ಹಾಗೂ ಗುಮಾಸ್ತನ ವಿರುದ್ಧ ಶಿಸ್ತು ಕ್ರಮಕ್ಕೆ ಶಿಫಾರಸು ಮಾಡಿತ್ತು. ತಕ್ಷಣವೇ ಕೈಗೊಂಡ ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿ ಕಾಲೇಜಿನ ಪ್ರಾಂಶುಪಾಲ ಚಂದ್ರಶೇಖರ ಪಾಟೀಲ್‌ ಹಾಗೂ ಎಸ್‌ಡಿಸಿ ಸತೀಶ ಪವಾರ್‌ ಅವರನ್ನು ಸೇವೆಯಿಂದ ವಜಾಗೊಳಿಸಿ ಶನಿವಾರ ಆದೇಶ ಹೊರಡಿಸಿದೆ.

ಗಣಿತ ಪರೀಕ್ಷೆ ವೇಳೆ ಬೀದರ್‌ನಲ್ಲಿ ವಿದ್ಯಾರ್ಥಿ ಸುಚಿವೃತ ಕುಲಕರ್ಣಿ ಪರೀಕ್ಷಾ ಕೇಂದ್ರದ ಒಳ ಪ್ರವೇಶಿಸುವ ಮುನ್ನ ಹೋಮ್‌ ಗಾರ್ಡ್‌ಗಳು ಪರೀಕ್ಷೆ ನಡೆಸಿ ಒಳಪ್ರವೇಶ ನೀಡಿದ್ದರು. ನಂತರ ಇಬ್ಬರು ಕಾಲೇಜು ಸಿಬ್ಬಂದಿ (ಪ್ರಾಚಾರ್ಯ ಹಾಗೂ ಗುಮಾಸ್ತ) ವಿದ್ಯಾರ್ಥಿಯ ಟಿ-ಶರ್ಟ್‌ ಒಳಗಿನ ದಾರದ ಕುರಿತು ಪ್ರಶ್ನಿಸಿದ್ದರು. ಈ ದೃಶ್ಯಗಳು ಅಲ್ಲಿನ ಸಿಸಿಟಿವಿಯಲ್ಲಿ ಸೆರೆಯಾಗಿದ್ದವು. ವಿದ್ಯಾರ್ಥಿ ಎರಡ್ಮೂರು ಬಾರಿ ಬಂದು ಪ್ರವೇಶ ನೀಡುವಂತೆ ಕೋರಿದ್ದು ಅದರಲ್ಲಿ ಕಂಡು ಬಂದಿತ್ತು. ಇದನ್ನು ಗಮನಿಸಿ ಒಟ್ಟಾರೆ ಸಿಬ್ಬಂದಿ ವರ್ತನೆ ಕುರಿತಾಗಿ ಹಲವು ಅಂಶಗಳೊಂದಿಗೆ ಸರ್ಕಾರಕ್ಕೆ ಶುಕ್ರವಾರ ರಾತ್ರಿಯೇ ಜಿಲ್ಲಾಧಿಕಾರಿಗಳು ವರದಿ ಸಲ್ಲಿಸಿದ್ದರು.

ಇದೇ ವೇಳೆ ವಂಚಿತ ವಿದ್ಯಾರ್ಥಿಗೆ ಪರೀಕ್ಷೆಗೆ ವ್ಯವಸ್ಥೆ ಮಾಡುವ ಕುರಿತಂತೆ ಸರ್ಕಾರವೇ ತೀರ್ಮಾನ ಕೈಗೊಳ್ಳಲಿದೆ. ಮುಚ್ಚಿದ ಲಕೋಟೆಯಲ್ಲಿ ಸರ್ಕಾರಕ್ಕೆ ವರದಿ ಸಲ್ಲಿಸಿದ್ದೇವೆ ಎಂದು ‘ಕನ್ನಡಪ್ರಭ’ಕ್ಕೆ ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ ತಿಳಿಸಿದ್ದಾರೆ.

ಶಿವಮೊಗ್ಗದಲ್ಲಿ 2 ಹೋಂ ಗಾರ್ಡ್‌ ಸಸ್ಪೆಂಡ್‌:

ಶಿವಮೊಗ್ಗ ಆದಿಚುಂಚನಗಿರಿ ಶಾಲೆಯಲ್ಲಿ ಸಿಇಟಿ ಪರೀಕ್ಷೆ ವೇಳೆ ಪರೀಕ್ಷಾರ್ಥಿಗಳು ಧರಿಸಿದ್ದ ಜನಿವಾರ ತೆಗೆಸಿದ ಪ್ರಕರಣಕ್ಕೆ ಸಂಬಂಧಿಸಿ ಕರ್ತವ್ಯಲೋಪ ಎಸಗಿದ ಇಬ್ಬರು ಗೃಹ ರಕ್ಷಕ ದಳದ ಸಿಬ್ಬಂದಿ ಅಮಾನತು ಮಾಡಲಾಗಿದೆ.

ಶನಿವಾರ ಇಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ, ಸಂಬಂಧಪಟ್ಟ ಅಧಿಕಾರಿಗಳ ವಿಚಾರಣೆ ಹಾಗೂ ಸಿಸಿಟಿವಿ ವಿಡಿಯೋ ಸಂಪೂರ್ಣ ಪರಿಶೀಲಿಸಿ ಈ ಕ್ರಮ ಕೈಗೊಳ್ಳಲಾಗಿದೆ ಎಂದರು.

ಸಿಸಿಟಿವಿ ವಿಡಿಯೋದಲ್ಲಿ ಕಂಡ ವಿಡಿಯೋ ಬಗ್ಗೆ ವಿವರಿಸಿದ ಅವರು, ‘ಒಬ್ಬ ವಿದ್ಯಾರ್ಥಿ ಬರುತ್ತಾನೆ. ಇಬ್ಬರು ಸೆಕ್ಯುರಿಟಿಗಳಿಗೆ (ಹೋಂ ಗಾರ್ಡ್‌ಗಳಿಗೆ) ಆ ವಿದ್ಯಾರ್ಥಿಯೇ ಜನಿವಾರ ತೆಗೆದು ತೋರಿಸುತ್ತಾನೆ. ಇದಕ್ಕೆ ಅನುಮತಿ ಇದೆಯೇ? ಎಂದು ಕೇಳುತ್ತಾನೆ. ಆಗ ಆ ಹೋಂ ಗಾರ್ಡ್‌ ಸಿಬ್ಬಂದಿ ‘ಇಲ್ಲ’ ಎಂದಾಗ, ಪಕ್ಕಕ್ಕೆ ಹೋಗಿ ಜನಿವಾರ ತೆಗೆದು ಬರುತ್ತಾನೆ. ಇನ್ನೊಬ್ಬ ವಿದ್ಯಾರ್ಥಿ ಇದೇ ರೀತಿ ಬಂದಾಗ ಅದೇ ಗೃಹರಕ್ಷಕ ಭದ್ರತಾ ಸಿಬ್ಬಂದಿ, ‘ಜನಿವಾರ ಹಾಕಿಕೊಂಡು ಪರೀಕ್ಷಾ ಕೊಠಡಿಗೆ ತೆರಳಲು ಅವಕಾಶ ಇಲ್ಲ’ ಎನ್ನುತ್ತಾರೆ. ಆಗ ವಿದ್ಯಾರ್ಥಿ, ‘ನಾನು ಜನಿವಾರ ತೆಗೆಯುವುದಿಲ್ಲ’ ಎನ್ನುತ್ತಾನೆ. ಆಗ ಸೆಕ್ಯೂರಿಟಿಯವರು, ‘ಅಲ್ಲೇ ಐದು ನಿಮಿಷ ಕುಳಿತುಕೊಳ್ಳಿ’ ಎಂದು ಹೇಳುತ್ತಾರೆ. ನಂತರ ಕಾಲೇಜಿನ ಪ್ರಾಂಶುಪಾಲರು ಬಂದು, ವಿದ್ಯಾರ್ಥಿಯನ್ನು ಪರೀಕ್ಷೆ ಬರೆಯಲು ಒಳಗೆ ಕಳುಹಿಸಿದ್ದರು’ ಎಂದು ತಿಳಿಸಿದರು.

‘ಮುಂದಿನ ಹಂತದ ತನಿಖೆಗೆ ಆದೇಶ ಮಾಡಲಾಗಿದೆ. ಇಲ್ಲಿ ಜನಿವಾರ ಕಟ್ ಮಾಡಲಾಗಿಲ್ಲ. ಪ್ರಕರಣದ ಕುರಿತು ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ದೂರು ಸಹ ದಾಖಲಿಸಲಾಗಿದೆ’ ಎಂದು ತಿಳಿಸಿದರು.