ಸಾರಾಂಶ
ಹಂಪಿ ಕನ್ನಡ ವಿಶ್ವವಿದ್ಯಾಲಯ ಕೊಡಮಾಡುವ ಪ್ರತಿಷ್ಠಿತ ನಾಡೋಜ ಗೌರವ ಪದವಿಗೆ ನಿವೃತ್ತ ನ್ಯಾಯಮೂರ್ತಿ ನ್ಯಾ.ಶಿವರಾಜ ವಿ.ಪಾಟೀಲ, ಸಾಹಿತಿ ಕುಂ.ವೀರಭದ್ರಪ್ಪ(ಕುಂ.ವೀ) ಮತ್ತು ಹಿಂದೂಸ್ತಾನಿ ಗಾಯಕ ಎಂ.ವೆಂಕಟೇಶ್‌ಕುಮಾರ್ ಭಾಜನರಾಗಿದ್ದಾರೆ
ಹೊಸಪೇಟೆ: ಹಂಪಿ ಕನ್ನಡ ವಿಶ್ವವಿದ್ಯಾಲಯ ಕೊಡಮಾಡುವ ಪ್ರತಿಷ್ಠಿತ ನಾಡೋಜ ಗೌರವ ಪದವಿಗೆ ನಿವೃತ್ತ ನ್ಯಾಯಮೂರ್ತಿ ನ್ಯಾ.ಶಿವರಾಜ ವಿ.ಪಾಟೀಲ, ಸಾಹಿತಿ ಕುಂ.ವೀರಭದ್ರಪ್ಪ(ಕುಂ.ವೀ) ಮತ್ತು ಹಿಂದೂಸ್ತಾನಿ ಗಾಯಕ ಎಂ.ವೆಂಕಟೇಶ್‌ಕುಮಾರ್ ಭಾಜನರಾಗಿದ್ದಾರೆ ಎಂದು ವಿವಿ ಕುಲಪತಿ ಡಾ। ಡಿ.ವಿ.ಪರಮಶಿವಮೂರ್ತಿ ಪ್ರಕಟಿಸಿದರು.
ಕನ್ನಡ ವಿವಿಯ ಮಂಟಪ ಸಭಾಂಗಣದಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಕನ್ನಡ ವಿವಿಯ 33ನೇ ಘಟಿಕೋತ್ಸವ-ನುಡಿಹಬ್ಬದ ನಿಮಿತ್ತ ರಾಯಚೂರು ಮೂಲದ ಲೋಕಾಯುಕ್ತ ನ್ಯಾ.ಶಿವರಾಜ ವಿ.ಪಾಟೀಲ, ವಿಜಯನಗರ ಜಿಲ್ಲೆ ಕೊಟ್ಟೂರಿನ ಸಾಹಿತಿ ಕುಂ.ವೀರಭದ್ರಪ್ಪ(ಕುಂ.ವೀ) ಬಳ್ಳಾರಿ ಮೂಲದ ಧಾರವಾಡದ ಹಿಂದೂಸ್ತಾನಿ ಗಾಯಕ ಎಂ.ವೆಂಕಟೇಶ್‌ಕುಮಾರ್ ಅವರಿಗೆ ಏ.4ರಂದು ಸಂಜೆ 6:30ಕ್ಕೆ ನಡೆಯಲಿರುವ ಘಟಿಕೋತ್ಸವದಲ್ಲಿ ರಾಜ್ಯಪಾಲ ಥಾವರ್‌ಚಂದ್ ಗೆಹಲೋಟ್ ಅವರು ನಾಡೋಜ ಗೌರವ ಪದವಿ ಪ್ರದಾನ ಮಾಡಲಿದ್ದಾರೆ ಎಂದರು. ಈ ಬಾರಿ 198 ಪಿಎಚ್‌ಡಿ ಮತ್ತು 7 ಡಿ.ಲಿಟ್ ಪದವಿಗಳನ್ನು ಕೂಡ ಪ್ರದಾನ ಮಾಡಲಾಗುತ್ತಿದೆ ಎಂದು ಅವರು ತಿಳಿಸಿದರು.