ಯುಕೆ ಸಂಸ್ಥೆಗಳ ಹೂಡಿಕೆಗೆ ನೆಚ್ಚಿನ ತಾಣ ಕರ್ನಾಟಕ: 89 ಯುಕೆ ಕಂಪನಿಗಳಿಂದ 29000 ಉದ್ಯೋಗ ಸೃಷ್ಟಿ

| N/A | Published : Feb 13 2025, 11:42 AM IST

top certification courses for quick high salary jobs

ಸಾರಾಂಶ

ಕರ್ನಾಟಕದಲ್ಲಿ ಯುನೈಟೆಡ್‌ ಕಿಂಗ್‌ಡಂ (ಯುಕೆ) ಮೂಲದ ಸಂಸ್ಥೆಗಳ ಸಂಖ್ಯೆ ಹೆಚ್ಚುತ್ತಿದ್ದು, ಅದರಿಂದ ಭಾರೀ ಪ್ರಮಾಣದ ಉದ್ಯೋಗ ಸೃಷ್ಟಿಯಾಗುತ್ತಿದೆ.

 ಬೆಂಗಳೂರು : ಕರ್ನಾಟಕದಲ್ಲಿ ಯುನೈಟೆಡ್‌ ಕಿಂಗ್‌ಡಂ (ಯುಕೆ) ಮೂಲದ ಸಂಸ್ಥೆಗಳ ಸಂಖ್ಯೆ ಹೆಚ್ಚುತ್ತಿದ್ದು, ಅದರಿಂದ ಭಾರೀ ಪ್ರಮಾಣದ ಉದ್ಯೋಗ ಸೃಷ್ಟಿಯಾಗುತ್ತಿದೆ. ಸದ್ಯ ರಾಜ್ಯದಲ್ಲಿ 89 ಯುಕೆ ಮೂಲದ ಕಂಪನಿಗಳಿದ್ದು, ಅವುಗಳಿಂದ 29500ಕ್ಕೂ ಹೆಚ್ಚಿನ ಉದ್ಯೋಗ ಸೃಷ್ಟಿಯಾಗಿದೆ ಎಂದು ಬ್ರಿಟಿಷ್ ಉಪ ಹೈಕಮಿಷನರ್‌ ಚಂದ್ರು ಅಯ್ಯರ್‌ ತಿಳಿಸಿದರು.

ಇನ್ವೆಸ್ಟ್ ಕರ್ನಾಟಕದಲ್ಲಿ ‘ಯುಕೆ ಮತ್ತು ಕರ್ನಾಟಕ: ಆರ್ಥಿಕ ಬೆಳವಣಿಗೆಯಲ್ಲಿ ಪಾಲುದಾರರು’ ಕುರಿತ ಗೋಷ್ಠಿಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಕರ್ನಾಟಕವು ಯುಕೆ ಮೂಲದ ಸಂಸ್ಥೆಗಳಿಗೆ ಪ್ರಮುಖ ಆಕರ್ಷಣೆಯಾಗಿದೆ. ರಾಜ್ಯದಲ್ಲಿ ಹೂಡಿಕೆ ಮಾಡುವುದರ ಜತೆಗೆ ಇಲ್ಲಿನ ಪ್ರತಿಭಾನ್ವಿತರಿಗೆ ಉದ್ಯೋಗ ನೀಡುವಲ್ಲಿ ಯುಕೆ ಸಂಸ್ಥೆಗಳು ಹೆಚ್ಚಿನ ಒತ್ತು ನೀಡುತ್ತಿವೆ. ಹಾಗೆಯೇ, ಭಾರತದಲ್ಲಿ 667 ಬ್ರಿಟನ್‌ನ ಸಂಸ್ಥೆಗಳು ಕಾರ್ಯನಿರ್ವಹಿಸುತ್ತಿದ್ದು, ಅದರಲ್ಲಿ ಮೂರನೇ ಒಂದು ಭಾಗ ಕರ್ನಾಟಕದಲ್ಲಿವೆ ಎಂದರು.

2023-24ನೇ ಸಾಲಿನಲ್ಲಿ ಕರ್ನಾಟಕ ಮೂಲದ 19 ಸಂಸ್ಥೆಗಳು ಯುಕೆಯಲ್ಲಿ ಕೆಲಸ ಮಾಡುತ್ತಿದ್ದು, 6.72 ಕೋಟಿ ಪೌಂಡ್‌ ಹೂಡಿಕೆ ಮಾಡಿವೆ. ಇನ್ಫೋಸಿಸ್‌, ವಿಪ್ರೋ, ಮೈಕ್ರೋ ಲ್ಯಾಂಡ್‌, ಬಯೋಕಾನ್‌ ಸೇರಿದಂತೆ ಇನ್ನಿತರ ಪ್ರಮುಖ ಸಂಸ್ಥೆಗಳು ಯುಕೆಯಲ್ಲಿ ಕೆಲಸ ಮಾಡುತ್ತಿದ್ದು, 1,349 ಹೊಸ ಉದ್ಯೋಗ ಸೃಷ್ಟಿಸಿವೆ. ಅದೇ ರೀತಿ 2024-25ನೇ ಸಾಲಿನಲ್ಲಿ ನೋಲ್ಸ್‌ಕೇಪ್‌ ಮತ್ತು ಕ್ಲೌಡ್‌ ಎಸ್‌ಇಕೆ 43 ಮಿಲಿಯನ್‌ ಪೌಂಡ್‌ ಹೂಡಿಕೆ ಮಾಡಿವೆ ಎಂದು ವಿವರಿಸಿದರು.

ಬ್ರಿಟಿಷ್‌ ಟೆಲಿಕಾಂನ ಜಯಕುಮಾರ್‌ ದೋಷಿ, ಎಲ್‌ಎಸ್‌ಇಜಿಯ ಮುರಳಿ ಸುಬ್ರಹ್ಮಣ್ಯಂ, ಮೈಕ್ರಾನ್‌ ಕ್ಲೀನ್‌ನ ಆಂಡ್ರ್ಯೂ, ಟೆಸ್ಕೋದ ಜೇಮ್ಸ್‌ ಗ್ಲೇವಿ ಇದ್ದರು.