ಸಾರಾಂಶ
ಶಿಕ್ಷಣ ಇಲಾಖೆಯ ಕೆಲ ಜಿಲ್ಲಾ ಉಪನಿರ್ದೇಶಕರು, ಕ್ಷೇತ್ರ ಶಿಕ್ಷಣಾಧಿಕಾರಿಗಳು ಈ ಅರ್ಹತೆ ಇಲ್ಲದ ಶಾಲೆಗಳಿಗೂ 5 ವರ್ಷ, 10 ವರ್ಷಗಳ ಕಾಲ ಮಾನ್ಯತೆ ನವೀಕರಿಸಿ ಅಕ್ರಮ ಎಸಗಿರುವ ಆರೋಪಗಳು ಕೇಳಿಬಂದಿವೆ.
ಲಿಂಗರಾಜು ಕೋರಾ
ಬೆಂಗಳೂರು : ಶಾಲಾ ಕಟ್ಟಡ ಸುರಕ್ಷತೆ, ಅಗ್ನಿ ಸುರಕ್ಷತೆ, ಕಟ್ಟಡ ನಕ್ಷೆ ಮಂಜೂರಾತಿ ಹಾಗೂ ಶೈಕ್ಷಣಿಕ ಉದ್ದೇಶಕ್ಕಾಗಿ ಭೂ ಪರಿವರ್ತನೆಯ ಪ್ರಮಾಣ ಪತ್ರಗಳನ್ನು ಸಲ್ಲಿಸಿದ ಶಾಲೆಗಳಿಗೆ ಮಾತ್ರ 10 ವರ್ಷಗಳ ಅವಧಿಗೆ ಮಾನ್ಯತೆ ನವೀಕರಿಸಲು ಸರ್ಕಾರ ಅವಕಾಶ ನೀಡಿದ್ದರೆ, ಶಿಕ್ಷಣ ಇಲಾಖೆಯ ಕೆಲ ಜಿಲ್ಲಾ ಉಪನಿರ್ದೇಶಕರು, ಕ್ಷೇತ್ರ ಶಿಕ್ಷಣಾಧಿಕಾರಿಗಳು ಈ ಅರ್ಹತೆ ಇಲ್ಲದ ಶಾಲೆಗಳಿಗೂ 5 ವರ್ಷ, 10 ವರ್ಷಗಳ ಕಾಲ ಮಾನ್ಯತೆ ನವೀಕರಿಸಿ ಅಕ್ರಮ ಎಸಗಿರುವ ಆರೋಪಗಳು ಕೇಳಿಬಂದಿವೆ.
ಅನಧಿಕೃತ ಶಾಲೆಗಳನ್ನು ಮಟ್ಟ ಹಾಕಲು ಸರ್ಕಾರ ಒಂದೆಡೆ ಕಠಿಣ ನಿಯಮಗಳನ್ನು ಜಾರಿಗೆ ತಂದರೆ, ಆ ನಿಯಮಗಳನ್ನು ಗಾಳಿಗೆ ತೂರಿ ಇಲಾಖೆಯ ಅಧಿಕಾರಿಗಳೇ ಅನರ್ಹ ಖಾಸಗಿ ಶಾಲೆಗಳಿಗೆ ಶ್ರೀರಕ್ಷೆ ನೀಡುತ್ತಿದ್ದಾರೆ. ಇದರಲ್ಲಿ ಅಧಿಕಾರಿಗಳು ಭಾರೀ ಭ್ರಷ್ಟಾಚಾರ ನಡೆಸಿರುವ ಸಾಧ್ಯತೆಯನ್ನೂ ತಳ್ಳಿಹಾಕುವಂತಿಲ್ಲ. ಈ ಬಗ್ಗೆ ಸರ್ಕಾರ ಕೂಡಲೇ ಎಚ್ಚೆತ್ತುಕೊಂಡು ಪ್ರತಿ ಜಿಲ್ಲೆಯಲ್ಲೂ 5 ಮತ್ತು 10 ವರ್ಷ ಮಾನ್ಯತೆ ನವೀಕರಿಸಿರುವ ಶಾಲೆಗಳ ದಾಖಲಾತಿಗಳ ಬಗ್ಗೆ ಸಮಗ್ರ ತನಿಖೆ ನಡೆಸಬೇಕು ಎಂದು ರಾಜ್ಯದ ವಿವಿಧ ಖಾಸಗಿ ಶಾಲಾ ಸಂಘಟನೆಗಳು ಹಾಗೂ ಪೋಷಕರ ಸಂಘಟನೆಗಳ ಪ್ರತಿನಿಧಿಗಳು ಆಗ್ರಹಿಸಿದ್ದಾರೆ.
ಹೊಸ ಶಾಲೆಗಳ ಮಾನ್ಯತೆ ನೀಡಿಕೆ ಮತ್ತು ಮಾನ್ಯತೆ ನವೀಕರಣದಲ್ಲಿ ನಡೆಯುತ್ತಿದ್ದ ನಿಯಮ ಉಲ್ಲಂಘನೆ ಹಾಗೂ ಭ್ರಷ್ಟಾಚಾರ ತಡೆಯಲು ಸರ್ಕಾರ ಇಡೀ ಪ್ರಕ್ರಿಯೆನ್ನು ಆನ್‌ಲೈನ್‌ಗೊಳಿಸಿದೆ. ಪ್ರತಿ ಶಾಲೆಯೂ ಸುಮಾರು 24 ದಾಖಲೆಗಳನ್ನು ಆನ್‌ಲೈನ್ ಮೂಲಕ ಸಲ್ಲಿಸಬೇಕು, ಅವುಗಳನ್ನು ಪರಿಶೀಲಿಸಿ ಅಧಿಕಾರಿಗಳು ಹೊಸ ಮಾನ್ಯತೆ ಅಥವಾ ಮಾನ್ಯತೆ ನವೀಕರಣ ಮಾಡಬೇಕು. ಶಾಲೆಗಳು ಸಲ್ಲಿಸಿರುವ ದಾಖಲೆಗಳನ್ನು ಶಿಕ್ಷಣ ಇಲಾಖೆ ವೆಬ್‌ಸೈಟ್ ಮೂಲಕ ಸಾರ್ವಜನಿಕರು ಕೂಡ ವೀಕ್ಷಿಸಬಹುದು.
‘ಕನ್ನಡಪ್ರಭ’ ಈ ದಾಖಲೆಗಳನ್ನು ಪರಿಶೀಲಿಸಿದಾಗ ಬೆಂಗಳೂರು ದಕ್ಷಿಣ, ಚಿಕ್ಕಮಗಳೂರು, ಚಿಕ್ಕಬಳ್ಳಾಪುರ, ಹಾವೇರಿ, ಶಿವಮೊಗ್ಗ, ದಾವಣಗೆರೆ ಸೇರಿ ವಿವಿಧ ಜಿಲ್ಲೆಗಳಲ್ಲಿ ಸೂಕ್ತ ಮಾನದಂಡಗಳನ್ನು ಪೂರ್ಣಗೊಳಿಸದ ಕೆಲ ಶಾಲೆಗಳಿಗೂ 5 ವರ್ಷ, 10 ವರ್ಷ ಮಾನ್ಯತೆ ನವೀಕರಿಸಿರುವುದು ಕಂಡು ಬಂದಿತು.
ಈ ಮಧ್ಯೆ, ಶಾಲಾ ನಕ್ಷೆ ಮಂಜೂರಾತಿ, ಕಟ್ಟಡ ಸುರಕ್ಷತೆ, ಅಗ್ನಿ ಸುರಕ್ಷತೆ, ಶೈಕ್ಷಣಿಕ ಉದ್ದೇಶಕ್ಕಾಗಿ ಭೂ ಪರಿವರ್ತನೆ ವಿಚಾರ ಕುರಿತ ಮಾನದಂಡಗಳ ಬಗ್ಗೆ ಖಾಸಗಿ ಶಾಲೆಗಳು ತೀವ್ರ ಆಕ್ಷೇಪ, ಕೋರ್ಟ್ ಮೆಟ್ಟಿಲು ಹತ್ತುವ ಪ್ರಯತ್ನಗಳಿಗೆ ಇಳಿದ ಹಿನ್ನೆಲೆಯಲ್ಲಿ ಸರ್ಕಾರ 2024-25ನೇ ಸಾಲಿಗೆ ಮಾತ್ರ ಅನ್ವಯಿಸಿ 2017-18ನೇ ಸಾಲಿಗೆ ಮುನ್ನ ಆರಂಭವಾದ ಶಾಲೆಗಳಿಗೆ ಈ ಮಾನದಂಡಗಳನ್ನು ಮುಂದಿನ ಶೈಕ್ಷಣಿಕ ಸಾಲಿನಲ್ಲಿ ಪೂರೈಸುವ ಷರತ್ತಿಗೊಳಪಟ್ಟ ಪ್ರಮಾಣ ಪತ್ರ ಪಡೆದು ಒಂದು ವರ್ಷಕ್ಕೆ ಮಾತ್ರ ಮಾನ್ಯತೆ ನವೀಕರಿಸಲು ಅವಕಾಶ ನೀಡಿದೆ.
ಆದರೆ, ಇಲಾಖೆಯ ಶಿಕ್ಷಣ ಕಿರಣ ಡ್ಯಾಷ್‌ಬೋರ್ಡ್‌ನಲ್ಲಿ ಅಪ್‌ಲೋಡ್ ಮಾಡಿರುವ ಮಾಹಿತಿಗಳನ್ನು ಪರಿಶೀಲಿಸಿದರೆ ಈ ಮೂರು ಪ್ರಮುಖ ಮಾನದಂಡಗಳಿಗೆ ಸಂಬಂಧಿಸಿದ ಪ್ರಮಾಣ ಪತ್ರಗಳನ್ನು ಒದಗಿಸದ ಶಾಲೆಗಳಿಗೂ ಅಧಿಕಾರಿಗಳು 5 ವರ್ಷ, 10 ವರ್ಷಗಳ ಅವಧಿಗೆ ಮಾನ್ಯತೆ ನವೀಕರಿಸಿದ್ದಾರೆ. ಇನ್ನು, ಕೆಲ ಅಧಿಕಾರಿಗಳು ಶಾಲೆಯಲ್ಲಿ ಮಾನ್ಯತೆ ನವೀಕರಣಕ್ಕೆ ಮಾನದಂಡಗಳ ಕೊರತೆಯ ಪಟ್ಟಿಯನ್ನೂ ದಾಖಲಿಸಿದ್ದಾರೆ. ವಿಪರ್ಯಾಸವೆಂದರೆ ಕೆಲ ಶಾಲೆಗಳು ಶಾಲಾ ನೋಂದಣಿ ಪತ್ರವನ್ನೇ ಸಲ್ಲಿಸಿಲ್ಲ, ಶೌಚಾಲಯದಲ್ಲಿ ನೀರಿನ ಸೌಲಭ್ಯವಿಲ್ಲ, ಮುಖ್ಯೋಪಾಧ್ಯಾಯರ ಕಚೇರಿ ಇಲ್ಲ. ಈ ರೀತಿ ಅನೇಕ ಸಮಸ್ಯೆಗಳ ಪಟ್ಟಿ ಮಾಡಿದ್ದಾರೆ. ಆದರೆ, ಅಂತಹ ಶಾಲೆಗಳಿಗೂ 5 ವರ್ಷ, 10 ವರ್ಷ ಮಾನ್ಯತೆ ನವೀಕರಿಸಿರುವುದು ಕಂಡುಬರುತ್ತದೆ.
ಇನ್ನು, ಕೆಲ ಶಾಲೆಗಳು ಎಲ್ಲ ದಾಖಲೆಗಳನ್ನೂ ಅಪ್‌ಲೋಡ್ ಮಾಡಿದ್ದು, ಎಲ್ಲವೂ ಸಮಂಜಸವಾಗಿದೆ ಎಂದು ಅಧಿಕಾರಿಗಳು ಷರಾ ಬರೆದಿದ್ದಾರಾದರೂ, ಆ ಶಾಲೆಗಳಿಗೆ ಸಂಬಂಧಿಸಿದ ದಾಖಲೆಗಳನ್ನು ನೋಡಲು ಹೋದರೆ ಡ್ಯಾಷ್ ಬೋರ್ಡ್‌ನಲ್ಲಿ ತೆರೆದುಕೊಳ್ಳುವುದೇ ಇಲ್ಲ. ಇದು ತಾಂತ್ರಿಕ ಸಮಸ್ಯೆಯೋ ಅಥವಾ ಖಾಸಗಿ ಶಾಲೆಗಳಿಗೆ ಶ್ರೀರಕ್ಷೆ ನೀಡುತ್ತಿರುವ ಅಧಿಕಾರಿಗಳನ್ನು ರಕ್ಷಿಸುವ ತಂತ್ರವೋ ಇಲಾಖೆಯೇ ಹೇಳಬೇಕು.
ನಾನು ಮೊದಲಿಂದಲೂ ಹೇಳುತ್ತಿದ್ದೇನೆ. ಮಾನ್ಯತೆ ನವೀಕರಣ ವಿಚಾರದಲ್ಲಿ ಡಿಡಿಪಿಐ, ಬಿಇಒಗಳು ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ. ಅದು ಇಂದಿಗೂ ನಿಂತಿಲ್ಲ. ಈ ವಿಚಾರದಲ್ಲಿ ಶಾಲೆಗಳನ್ನು ಮಾತ್ರ ಹೊಣೆ ಮಾಡುವುದಲ್ಲ, ಅಧಿಕಾರಿಗಳ ವಿರುದ್ಧವೂ ಕ್ರಿಮಿನಲ್ ಪ್ರಕರಣ ದಾಖಲಿಸಲು ಸರ್ಕಾರ ಅವಕಾಶ ಮಾಡಿಕೊಡಬೇಕು. ನಾವೂ ಇಲಾಖೆಯ ವೆಬ್‌ಸೈಟ್ ಪರಿಶೀಲಿಸಿದ್ದೇವೆ. ಸಾಕಷ್ಟು ಲೋಪಗಳು ಕಂಡುಬರುತ್ತವೆ. ಈ ಬಗ್ಗೆ ಸರ್ಕಾರ ಅಧಿಕಾರಿಗಳ ವಿರುದ್ಧ ಸೂಕ್ತ ತನಿಖೆ ನಡೆಸಬೇಕು.
- ಡಿ.ಶಶಿಕುಮಾರ್, ಕ್ಯಾಮ್ಸ್ ಪ್ರಧಾನ ಕಾರ್ಯದರ್ಶಿ
ಮಾನ್ಯತೆ ನೀಡಿಕೆ, ಮಾನ್ಯತೆ ನವೀಕರಣದಲ್ಲಿ ಸಾಕಷ್ಟು ಭ್ರಷ್ಟಾಚಾರಗಳಾಗಿರುವ ಅನುಮಾನಗಳಿವೆ. ಅಧಿಕಾರಿಗಳು ಗೋಲ್ ಮಾಲ್ ನಡೆಸಿರುವ ಸಾಧ್ಯತೆ ಇದೆ. ಈ ಬಗ್ಗೆ ನಮಗೂ ಕೆಲ ಶಾಲಾ ಆಡಳಿತ ಮಂಡಳಿಗಳು ಮಾಹಿತಿ ನೀಡಿ ಬೇಸರ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಸರ್ಕಾರ ಸೂಕ್ತ ಸಂಸ್ಥೆಯಿಂದ ಪ್ರತಿ ಜಿಲ್ಲೆಗೂ ಸಂಬಂಧಿಸಿ ಸಮಗ್ರ ತನಿಖೆ ನಡೆಸಿದರೆ ಎಲ್ಲವೂ ಬಯಲಾಗಲಿದೆ.
- ಪ್ರಭಾಕರ್ ಅರಸ್, ಅವರ್ ಸ್ಕೂಲ್ಸ್ ಪ್ರಧಾನ ಕಾರ್ಯದರ್ಶಿ
- ಕೆಲ ಶಾಲೆಗಳು ಶಾಲಾ ನೋಂದಣಿ ಪತ್ರವನ್ನೇ ಸಲ್ಲಿಸಿಲ್ಲ, ಶೌಚಾಲಯದಲ್ಲಿ ನೀರಿನ ಸೌಲಭ್ಯವಿಲ್ಲ, ಮುಖ್ಯೋಪಾಧ್ಯಾಯರ ಕಚೇರಿ ಇಲ್ಲ. ಈ ರೀತಿ ಅನೇಕ ಸಮಸ್ಯೆಗಳ ಪಟ್ಟಿಯನ್ನು ಅಧಿಕಾರಿಗಳು ಮಾಡಿದ್ದಾರೆ. ಆದರೂ ಅಂಥ ಶಾಲೆಗಳ ಮಾನ್ಯತೆಯೂ 5ರಿಂದ 10 ವರ್ಷ ನವೀಕರಣ.
- ಕೆಲ ಶಾಲೆಗಳು ಅಪ್‌ಲೋಡ್ ಮಾಡಿರುವ ದಾಖಲೆಗಳು ಶಿಕ್ಷಣ ಇಲಾಖೆ ವೆಬ್‌ಸೈಟ್‌ನ ಶಿಕ್ಷಣ ಕಿರಣ ಡ್ಯಾಷ್ ಬೋರ್ಡ್‌ನಲ್ಲಿ ತೆರೆದುಕೊಳ್ಳುವುದೇ ಇಲ್ಲ. ಇದು ತಾಂತ್ರಿಕ ಸಮಸ್ಯೆಯೋ ಅಥವಾ ಶ್ರೀರಕ್ಷೆ ನೀಡುತ್ತಿರುವ ಅಧಿಕಾರಿಗಳನ್ನು ರಕ್ಷಿಸುವ ತಂತ್ರವೋ ಇಲಾಖೆಯೇ ಹೇಳಬೇಕು.