ಲಿಂಗಾಯತರ ಬೇಡಿಕೆ ಹಂತವಾಗಿ ಈಡೇರಿಸ್ತೇವೆ: ಲಿಂಗಾಯತ ಶ್ರೀಗಳು, ಸಚಿವರು, ಶಾಸಕರ ಸಭೆಯಲ್ಲಿ ಸಿಎಂ ಭರವಸೆ

| N/A | Published : Feb 25 2025, 10:53 AM IST

Siddaramaiah

ಸಾರಾಂಶ

ಬಸವಣ್ಣನವರ ಕುರಿತ ಮಠಾಧೀಶರ ಬೇಡಿಕೆಗಳನ್ನು ಹಂತ-ಹಂತವಾಗಿ ಈಡೇರಿಸುತ್ತೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದ್ದಾರೆ.

  ಬೆಂಗಳೂರು :  ಪಟ್ಟಭದ್ರರು ಬಹಿರಂಗವಾಗಿ ಬಸವಣ್ಣನವರನ್ನು ವಿರೋಧಿಸಲು ಸಾಧ್ಯವಾಗದೆ ಆಂತರಿಕವಾಗಿ ವಿರೋಧಿಸುತ್ತಿದ್ದಾರೆ. ನಮ್ಮ ಸರ್ಕಾರಕ್ಕೆ ಬಸವ ತತ್ವ, ವಚನ ಸಂಸ್ಕೃತಿ, ಶರಣರ ಹೋರಾಟದ ಬಗ್ಗೆ ಪೂರ್ಣ ಬದ್ಧತೆಯಿದೆ. ಹೀಗಾಗಿ ಬಸವಣ್ಣನವರ ಕುರಿತ ಮಠಾಧೀಶರ ಬೇಡಿಕೆಗಳನ್ನು ಹಂತ-ಹಂತವಾಗಿ ಈಡೇರಿಸುತ್ತೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದ್ದಾರೆ.

ಕಾವೇರಿ ನಿವಾಸದಲ್ಲಿ ಸೋಮವಾರ ತಮ್ಮನ್ನು ಭೇಟಿಯಾದ ಲಿಂಗಾಯತ ಸ್ವಾಮೀಜಿಗಳು, ಸಚಿವರು ಹಾಗೂ ಶಾಸಕರು, ಸಮಾಜದ ಮುಖಂಡರ ಸಭೆ ಉದ್ದೇಶಿಸಿ ಮಾತನಾಡಿದರು.

ನಾನು ಮೊದಲ ಬಾರಿ ಮುಖ್ಯಮಂತ್ರಿಯಾದಾಗ ಬಸವ ಜಯಂತಿಯಂದೇ ಪ್ರಮಾಣವಚನ ಸ್ವೀಕರಿಸಿದೆ. ಬಸವಣ್ಣನವರ ಭಾವಚಿತ್ರ ಸರ್ಕಾರಿ ಕಚೇರಿಗಳಲ್ಲಿ ಕಡ್ಡಾಯಗೊಳಿಸಿದ್ದು, ನಮ್ಮದೇ ಸರ್ಕಾರ. ನಾವು ಗೋರುಚ ಅವರ ಅಧ್ಯಕ್ಷತೆಯಲ್ಲಿ ಅನುಭವ ಮಂಟಪ ಪುನರುಜ್ಜೀವನಕ್ಕೆ ಮುಂದಾದೆವು. ಬಸವಣ್ಣನವರನ್ನು ಸಾಂಸ್ಕೃತಿಕ ನಾಯಕ ಎಂದು ಘೋಷಿಸಿದ್ದು ಕಾಂಗ್ರೆಸ್ ಸರ್ಕಾರ. ಈಗಲೂ ಮಠಾಧೀಶರ ಬೇಡಿಕೆಗಳಲ್ಲಿ ಸಾಧ್ಯ ಇರುವ ಬೇಡಿಕೆಗಳನ್ನು ಹಂತ ಹಂತವಾಗಿ ಈಡೇರಿಸಲಾಗುವುದು ಎಂದು ಹೇಳಿದರು.

ಜಾತ್ಯತೀತ ಸಮಾಜಕ್ಕೆ ಪೂರಕ: ಬಸವಣ್ಣನವರ ವಿಚಾರ ಮತ್ತು ಹೋರಾಟ ಜಾತ್ಯತೀತ ಸಮಾಜ ನಿರ್ಮಾಣಕ್ಕೆ ಪೂರಕ. ಹೀಗಾಗಿ ಜಾತಿವಾದಿ ಪಟ್ಟಭದ್ರರಿಗೆ ಬಸವಣ್ಣನವರ ವಿಚಾರಗಳು ಹಿಡಿಸಲ್ಲ. ಗಟ್ಟಿಯಾಗಿ ಬೇರೂರಿರುವ ಜಾತಿ ವ್ಯವಸ್ಥೆಗೆ ಪಟ್ಟಭದ್ರರು ನೀರು ಗೊಬ್ಬರ ಹಾಕುತ್ತಿದ್ದಾರೆ. ಬಸವಣ್ಣ ಹಾಗೂ ಅಂಬೇಡ್ಕರ್‌ ವಿಚಾರಗಳ ಮೂಲಕ ಮಾತ್ರ ಇದರ ವಿರುದ್ಧ ಹೋರಾಟ ಸಾಧ್ಯ. ಇವುಗಳಿಗೆ ಪರಿಹಾರ ಸಂವಿಧಾನದಲ್ಲಿ ಅಡಕವಾಗಿವೆ ಎಂದರು.

ಮುಖ್ಯಮಂತ್ರಿ ಭೇಟಿ ವೇಳೆ ಬೇಲಿ ಮಠದ ಶಿವರುದ್ರ ಸ್ವಾಮೀಜಿ, ಬಾಲ್ಕಿ ಮಠದ ಬಸವಲಿಂಗ ಪಟ್ಟದೇವರು ಸ್ವಾಮೀಜಿ ಸೇರಿ ಹಲವು ಮಠಾಧೀಶರು, ಬೃಹತ್‌ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್‌, ಶಾಸಕರಾದ ಬಿ.ಆರ್.ಪಾಟೀಲ್‌, ಬಸವರಾಜ ರಾಯರೆಡ್ಡಿ, ವಿನಯ್‌ ಕುಲಕರ್ಣಿ ಸೇರಿ ಹಲವರು ಹಾಜರಿದ್ದರು.

ಸ್ವಾಮೀಜಿಗಳ ನಿಯೋಗದ ಬೇಡಿಕೆಗಳು

- ವಿಶ್ವಗುರು ಬಸವೇಶ್ವರರ ವಿಚಾರಧಾರೆಯನ್ನು ಜನಮಾನಸಕ್ಕೆ ತಲುಪಿಸಲು ಈ ವರ್ಷದ ಬಜೆಟ್‌ನಲ್ಲಿ 100 ಕೋಟಿ ರು. ಸೇರಿ ಮುಂದಿನ ನಾಲ್ಕು ಬಜೆಟ್‌ನಲ್ಲಿ 500 ಕೋಟಿ ರು. ಅನುದಾನ ನೀಡಬೇಕು.

- ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ರಸ್ತೆಯಲ್ಲಿ ಬಸವಣ್ಣನ ಬೃಹತ್ ಪ್ರತಿಮೆ ಪ್ರತಿಷ್ಠಾಪಿಸಬೇಕು. ಜತೆಗೆ ಬೆಂಗಳೂರಿನಲ್ಲಿ 25 ಎಕರೆ ಪ್ರದೇಶದಲ್ಲಿ ಅಕ್ಷರಧಾಮದ ಮಾದರಿಯಲ್ಲಿ ಬೃಹತ್ ''''ಶರಣ ದರ್ಶನ'''' ಕೇಂದ್ರ ಸ್ಥಾಪಿಸಿ ಪ್ರವಾಸಿ ತಾಣವನ್ನಾಗಿ ಮಾಡಬೇಕು.

- ಎಲ್ಲ ಶರಣರ ಜನ್ಮ ಸ್ಥಳ, ಐಕ್ಯಸ್ಥಳ ಹಾಗೂ ಇತರೆ ಸ್ಮಾರಕಗಳ ರಕ್ಷಣೆಗಾಗಿ ''''ಪ್ರತ್ಯೇಕ ಶರಣ ಸ್ಮಾರಕ ರಕ್ಷಣೆ ಪ್ರಾಧಿಕಾರ'''' ರಚಿಸಬೇಕು.

- ಬಸವಕಲ್ಯಾಣದಲ್ಲಿ ನಿರ್ಮಿಸುತ್ತಿರುವ ಅನುಭವ ಮಂಟಪದ ಸದ್ಬಳಕೆಯಾಗಲು ಅಲ್ಲೇ ''''ವಚನ ವಿಶ್ವವಿದ್ಯಾಲಯ'''' ಮತ್ತು ಸಂಶೋಧನ ಕೇಂದ್ರ ಆರಂಭಿಸಬೇಕು.

- ರಾಜ್ಯದ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ''''ಬಸವಭವನ'''' ನಿರ್ಮಿಸಿ ನಿರಂತರವಾಗಿ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಬೇಕು.