ಸಾರಾಂಶ
ಆದಾಯಕ್ಕಿಂತ ಹೆಚ್ಚಿನ ಆಸ್ತಿಗಳಿಕೆ ಆರೋಪದ ಮೇರೆಗೆ ಭ್ರಷ್ಟರ ಬೇಟೆಯಾಡಿರುವ ಲೋಕಾಯುಕ್ತ ಪೊಲೀಸರು ಶುಕ್ರವಾರ ಬೆಳ್ಳಂಬೆಳಗ್ಗೆ ಬೆಂಗಳೂರು, ಬೆಳಗಾವಿ ಸೇರಿ ಐದು ಜಿಲ್ಲೆಗಳ ಏಳು ಅಧಿಕಾರಿಗಳಿಗೆ ಸೇರಿದ 27 ಸ್ಥಳಗಳ ಮೇಲೆ ಏಕಕಾಲಕ್ಕೆ ದಾಳಿ ನಡೆಸಿ ₹18.45 ಕೋಟಿ ಮೌಲ್ಯದ ನಗ-ನಾಣ್ಯ ಪತ್ತೆ ಹಚ್ಚಲಾಗಿದೆ.
ಬೆಂಗಳೂರು : ಆದಾಯಕ್ಕಿಂತ ಹೆಚ್ಚಿನ ಆಸ್ತಿಗಳಿಕೆ ಆರೋಪದ ಮೇರೆಗೆ ಭ್ರಷ್ಟರ ಬೇಟೆಯಾಡಿರುವ ಲೋಕಾಯುಕ್ತ ಪೊಲೀಸರು ಶುಕ್ರವಾರ ಬೆಳ್ಳಂಬೆಳಗ್ಗೆ ಬೆಂಗಳೂರು, ಬೆಳಗಾವಿ ಸೇರಿ ಐದು ಜಿಲ್ಲೆಗಳ ಏಳು ಅಧಿಕಾರಿಗಳಿಗೆ ಸೇರಿದ 27 ಸ್ಥಳಗಳ ಮೇಲೆ ಏಕಕಾಲಕ್ಕೆ ದಾಳಿ ನಡೆಸಿ ₹18.45 ಕೋಟಿ ಮೌಲ್ಯದ ನಗ-ನಾಣ್ಯ ಪತ್ತೆ ಹಚ್ಚಲಾಗಿದೆ.
ಬೆಂಗಳೂರು ಮತ್ತು ಬೆಳಗಾವಿಯಲ್ಲಿ ತಲಾ ಎರಡು ಕಡೆ, ಬಾಗಲಕೋಟೆ, ಚಿತ್ರದುರ್ಗ, ರಾಯಚೂರು ಜಿಲ್ಲೆಯಲ್ಲಿ ತಲಾ ಒಂದೊಂದು ಕಡೆ ಶೋಧ ಕಾರ್ಯ ನಡೆಸಲಾಗಿದೆ. ಬಿಬಿಎಂಪಿಯ ಹೆಬ್ಬಾಳ ಉಪವಿಭಾಗ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಮಾಧವ್ ರಾವ್, ಬೆಂಗಳೂರು ಗ್ರಾಮಾಂತರ ಜಿಲ್ಲಾ ಪಂಚಾಯಿತಿ ಉಪಕಾರ್ಯದರ್ಶಿ ಟಿ.ಕೆ.ರಮೇಶ್, ಚಿತ್ರದುರ್ಗದ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ವ್ಯವಸ್ಥಾಪಕ ಕೆ.ಸಿ.ಶಶಿಧರ್, ಬೆಳಗಾವಿಯ ಉಪನೋಂದಣಾಧಿಕಾರಿ ಕಚೇರಿ ಪ್ರಥಮ ದರ್ಜೆ ಸಹಾಯಕ ಸಚಿನ್ ಬಸವಂತ್ ಮಂಡೆಡ್, ರಾಯಭಾಗ್ ತಾಲೂಕು ಪಶು ಆಸ್ಪತ್ರೆ ಪಶು ನಿರೀಕ್ಷಕ ಸಂಜಯ್ ಅಣ್ಣಪ್ಪ ದುರ್ಗಣ್ಣವರ್, ಬಾಗಲಕೋಟೆ ಜಿಲ್ಲೆ ಬಾದಾಮಿ ಹುಲಗೇರಿ ಗ್ರಾಮ ಪಂಚಾಯಿತಿ ಪಿಡಿಒ ಶಿವಲಿಂಗಯ್ಯ ಪಂಚಾಕ್ಷರಯ್ಯ ಹಿರೇಮಠ, ರಾಯಚೂರು ಜಿಪಂ ಸಹಾಯಕ ಲೆಕ್ಕಾಧಿಕಾರಿ ನರಸಿಂಗ ರಾವ್ ಗುಜ್ಜಾರ್ ಅವರು ಲೋಕಾಯುಕ್ತ ಪೊಲೀಸರ ದಾಳಿಗೊಳಗಾದ ಅಧಿಕಾರಿಗಳಾಗಿದ್ದಾರೆ.
ದಾಳಿ ನಡೆಸಿದ ಅಧಿಕಾರಿಗಳ ಪೈಕಿ ಬಿಬಿಎಂಪಿ ಅಧಿಕಾರಿ ಮಾಧವ್ ರಾವ್ ಬಳಿ ಅಧಿಕ ಆಸ್ತಿ ಪತ್ತೆಯಾಗಿದೆ. ₹8.57 ಕೋಟಿ ಆಸ್ತಿ ಇರುವುದು ಗೊತ್ತಾಗಿದೆ. ಬೆಳಗಾವಿ ಉಪನೋಂದಣಾಧಿಕಾರಿ ಕಚೇರಿ ಎಫ್‌ಡಿಎ ಸಚಿನ್ ಬಸವಂತ್ ಮಂಡೆಡ್ ಬಳಿ ₹87 ಲಕ್ಷಕ್ಕಿಂತ ಹೆಚ್ಚಿನ ಮೌಲ್ಯದ ಚಿನ್ನಾಭರಣ ಪತ್ತೆಯಾದರೆ, ₹1 ಕೋಟಿಗಿಂತ ಅಧಿಕ ಇತರೆ ವಸ್ತುಗಳು ಸಿಕ್ಕಿವೆ. ನಿವೇಶನ, ಮನೆ, ಜಮೀನು ಹೊಂದಿರುವವರ ಪೈಕಿ ಮಾಧವ್ ರಾವ್ ಬಳಿ ಹೆಚ್ಚು ಸಿಕ್ಕಿದ್ದು, ₹7.52 ಕೋಟಿ ಮೌಲ್ಯದ ಸ್ಥಿರಾಸ್ತಿ ಪತ್ತೆಯಾಗಿದೆ ಎಂದು ಲೋಕಾಯುಕ್ತ ಪೊಲೀಸರು ತಿಳಿಸಿದ್ದಾರೆ.
ದಾಳಿ ವೇಳೆ ಯಾರ ಬಳಿ? ಎಷ್ಟು ಸಂಪತ್ತು?
1. ಮಾಧವ್ ರಾವ್, ಸಹಾಯಕ ಕಾರ್ಯಪಾಲಕ ಎಂಜಿನಿಯರ್, ಬಿಬಿಎಂಪಿ, ಹೆಬ್ಬಾಳ ಉಪ ವಿಭಾಗ, ಬೆಂಗಳೂರು-
ಒಟ್ಟು 5 ಸ್ಥಳಗಳಲ್ಲಿ ಪರಿಶೀಲನೆ. 7 ನಿವೇಶನಗಳು, 2 ವಾಸದ ಮನೆ, 48.27 ಎಕರೆ ಕೃಷಿ ಜಮೀನು ಸೇರಿ ಒಟ್ಟು ₹7.52 ಕೋಟಿ ಮೌಲ್ಯದ ಸ್ಥಿರಾಸ್ತಿ ಪತ್ತೆ. ₹97,200 ನಗದು, ₹55 ಲಕ್ಷ ಮೌಲ್ಯದ ಚಿನ್ನಾಭರಣ, ₹50 ಲಕ್ಷ ಮೌಲ್ಯದ ವಾಹನಗಳು ಸೇರಿ ಒಟ್ಟು ₹1.05 ಕೋಟಿ ಮೌಲ್ಯದ ಚರಾಸ್ತಿ ಸಿಕ್ಕಿದೆ. ಒಟ್ಟು ₹8.57 ಕೋಟಿ ಮೌಲ್ಯದ ಆಸ್ತಿ ಪತ್ತೆ.
2. ಟಿ.ಕೆ.ರಮೇಶ್, ಉಪಕಾರ್ಯದರ್ಶಿ, ಜಿಲ್ಲಾ ಪಂಚಾಯಿತಿ, ಬೆಂಗಳೂರು ಗ್ರಾಮಾಂತರ ಜಿಲ್ಲೆ-
ಒಟ್ಟು 5 ಸ್ಥಳಗಳಲ್ಲಿ ಶೋಧ, 3 ನಿವೇಶನಗಳು, 1 ವಾಸದ ಮನೆ ಸೇರಿ ಒಟ್ಟು ₹1.23 ಕೋಟಿ ಮೌಲ್ಯದ ಸ್ಥಿರಾಸ್ತಿ ಸಿಕ್ಕಿದೆ. ₹20 ಸಾವಿರ ನಗದು, ₹3.58 ಲಕ್ಷ ಮೌಲ್ಯದ ಚಿನ್ನಾಭರಣಗಳು, ₹20 ಲಕ್ಷ ಮೌಲ್ಯದ ವಾಹನಗಳು, ₹6.55 ಲಕ್ಷ ಮೌಲ್ಯದ ಗೃಹೋಪಯೋಗಿ ವಸ್ತುಗಳು ಮತ್ತು ₹67.50 ಲಕ್ಷ ಮೌಲ್ಯದ ಇತರೆ ವಸ್ತುಗಳು ಸೇರಿ ₹97.83 ಲಕ್ಷ ಮೌಲ್ಯದ ಚರಾಸ್ತಿಯ ದಾಖಲೆಗಳು ಲಭ್ಯವಾಗಿದೆ. ಒಟ್ಟು ₹2.21 ಕೋಟಿ ಮೌಲ್ಯದ ಆಸ್ತಿ ಪತ್ತೆಯಾಗಿದೆ.
3. ಕೆ.ಸಿ.ಶಶಿಧರ್, ವ್ಯವಸ್ಥಾಪಕ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಚಿತ್ರದುರ್ಗ-
ಒಟ್ಟು 4 ಸ್ಥಳಗಳಲ್ಲಿ ಕಾರ್ಯಾಚರಣೆ. 1 ನಿವೇಶನ, 1 ವಾಸದ ಮನೆ, 9.14 ಎಕರೆ ಕೃಷಿ ಜಮೀನು ಸೇರಿ ಒಟ್ಟು ₹1.21 ಕೋಟಿ ಮೌಲ್ಯದ ಸ್ಥಿರಾಸ್ತಿ ಲಭ್ಯವಾಗಿದೆ. ₹58 ಸಾವಿರ ನಗದು, ₹21.66 ಲಕ್ಷ ಮೌಲ್ಯದ ಚಿನ್ನಾಭರಣಗಳು, ₹34.81 ಲಕ್ಷ ಮೌಲ್ಯದ ವಾಹನಗಳು ಸೇರಿ ₹57 ಲಕ್ಷ ಮೌಲ್ಯದ ಚರಾಸ್ತಿ ಸಿಕ್ಕಿದೆ. ಒಟ್ಟು ₹1.78 ಕೋಟಿ ಮೌಲ್ಯದ ಆಸ್ತಿ ಸಿಕ್ಕಿದೆ.
4. ಸಚಿನ್ ಬಸವಂತ್ ಮಂಡೆಡ್ ಮಂಡೇದಾರ್, ಎಫ್‌ಡಿಎ, ಉಪ-ನೋಂದಣಾಧಿಕಾರಿಗಳ ಕಚೇರಿ, ಬೆಳಗಾವಿ-
ಒಟ್ಟು 5 ಸ್ಥಳಗಳಲ್ಲಿ ಶೋಧಕಾರ್ಯ, 1 ನಿವೇಶನ, ನಿರ್ಮಾಣ ಹಂತದ 1 ವಾಸದ ಮನೆ, 1.12 ಎಕರೆ ಕೃಷಿ ಜಮೀನು ಸೇರಿ ಒಟ್ಟು ₹58 ಲಕ್ಷ ಮೌಲ್ಯದ ಸ್ಥಿರಾಸ್ತಿ ಸಿಕ್ಕಿದೆ. ₹1.35 ಲಕ್ಷ ನಗದು, ₹87.27 ಲಕ್ಷ ಮೌಲ್ಯದ ಚಿನ್ನಾಭರಣ, ₹2.50 ಲಕ್ಷ ಮೌಲ್ಯದ ವಾಹನಗಳು, ಬ್ಯಾಂಕ್ ಉಳಿತಾಯ, ಮ್ಯುಚುವಲ್ ಫಂಡ್ ಮತ್ತು ಈಕ್ವಿಟಿ ಷೇರು ₹1.01 ಕೋಟಿ ಸೇರಿ ಒಟ್ಟು ₹1.92 ಕೋಟಿ ಮೌಲ್ಯದ ಚರಾಸ್ತಿ ಪತ್ತೆಯಾಗಿದೆ. ಒಟ್ಟು ₹2.50 ಕೋಟಿ ಮೌಲ್ಯದ ಆಸ್ತಿ ಪತ್ತೆಯಾಗಿದೆ.
5. ಸಂಜಯ್ ಅಣ್ಣಪ್ಪ ದುರ್ಗಣ್ಣವರ್, ಪಶು ನಿರೀಕ್ಷಕ, ಬೆಳಗಾವಿ-
3 ಸ್ಥಳಗಳಲ್ಲಿ ಪರಿಶೀಲನೆ. 4 ನಿವೇಶನಗಳು, 1 ವಾಸದ ಮನೆ, 1 ಎಕರೆ ಕೃಷಿ ಜಮೀನು ಸೇರಿ ಒಟ್ಟು ₹50.77 ಲಕ್ಷ ಮೌಲ್ಯದ ಸ್ಥಿರಾಸ್ತಿ ಲಭ್ಯವಾಗಿದೆ. ₹2,190 ನಗದು, ₹9.92 ಲಕ್ಷ ಮೌಲ್ಯದ ಚಿನ್ನಾಭರಣ, ₹4.50 ಲಕ್ಷ ಮೌಲ್ಯದ ವಾಹನಗಳು, ₹8.86 ಲಕ್ಷ ಮೌಲ್ಯದ ಗೃಹೋಪಯೋಗಿ ವಸ್ತುಗಳು ಸೇರಿ ಒಟ್ಟು ₹23.30 ಲಕ್ಷ ಮೌಲ್ಯದ ಚರಾಸ್ತಿ ಪತ್ತೆಯಾಗಿದೆ. ಒಟ್ಟು ₹74 ಲಕ್ಷ ಮೌಲ್ಯದ ಆಸ್ತಿ ಲಭ್ಯವಾಗಿದೆ.
6. ಶಿವಲಿಂಗಯ್ಯ ಪಂಚಾಕ್ಷರಯ್ಯ ಹಿರೇಮಠ, ಪಿ.ಡಿ.ಓ, ಹುಲಗೇರಿ ಗ್ರಾಮ ಪಂಚಾಯಿತಿ, ಬಾಗಲಕೋಟೆ:
3 ಸ್ಥಳಗಳಲ್ಲಿ ಶೋಧಕಾರ್ಯ, 1 ನಿವೇಶನ, 1 ವಾಸದ ಮನೆ ಸೇರಿ ಒಟ್ಟು ₹1.18 ಕೋಟಿ ಮೌಲ್ಯದ ಸ್ಥಿರಾಸ್ತಿ ಸಿಕ್ಕಿದೆ. ₹1.97 ಲಕ್ಷ ನಗದು, ₹14.28 ಲಕ್ಷ ಮೌಲ್ಯದ ಚಿನ್ನಾಭರಣ, ₹8.50 ಲಕ್ಷ ಮೌಲ್ಯದ ವಾಹನಗಳು ಸೇರಿ ಒಟ್ಟು ₹24.75 ಲಕ್ಷ ಮೌಲ್ಯದ ಚರಾಸ್ತಿ ಪತ್ತೆಯಾಗಿದೆ. ಒಟ್ಟು ₹1.43 ಕೋಟಿ ಮೌಲ್ಯದ ಆಸ್ತಿ ಸಿಕ್ಕಿದೆ.
7. ನರಸಿಂಗ ರಾವ್ ಗುಜ್ಜಾರ್, ಸಹಾಯಕ ಲೆಕ್ಕಾಧಿಕಾರಿ, ಜಿಲ್ಲಾ ಪಂಚಾಯತ್ ಕಚೇರಿ, ರಾಯಚೂರು:
2 ಸ್ಥಳಗಳಲ್ಲಿ ಪರಿಶೀಲನೆ, 5 ನಿವೇಶನಗಳು, 2 ವಾಸದ ಮನೆಗಳು ಸೇರಿ ₹78 ಲಕ್ಷ ಮೌಲ್ಯದ ಸ್ಥಿರಾಸ್ತಿ, ₹38 ಸಾವಿರ ನಗದು, ₹40.40 ಲಕ್ಷ ಮೌಲ್ಯದ ಚಿನ್ನಾಭರಣ, ₹1.70 ಲಕ್ಷ ಮೌಲ್ಯದ ವಾಹನಗಳು ಸೇರಿ ₹42.48 ಲಕ್ಷ ಮೌಲ್ಯದ ಚರಾಸ್ತಿ ಸಿಕ್ಕಿದೆ. ಒಟ್ಟು ₹1.20 ಕೋಟಿ ಮೌಲ್ಯದ ಆಸ್ತಿ ಪತ್ತೆಯಾಗಿದೆ.