ಸಾರಾಂಶ
ಅನಾರೋಗ್ಯಪೀಡಿತ ತಾಯಿ ಮತ್ತು ತನ್ನ ಮಗನ ಆರೈಕೆ ಮಾಡಲೆಂದು, ವಯೋವೃದ್ಧೆಯನ್ನು ಕೊಲೆಗೈದು ಚಿನ್ನಾಭರಣ ದೋಚಿದ್ದ ಪ್ರಕರಣದ ಆರೋಪಿಗೆ ವಿಚಾರಣಾ ನ್ಯಾಯಾಲಯ ವಿಧಿಸಿದ್ದ ಜೀವಾವಧಿ ಶಿಕ್ಷೆಯನ್ನು ಹೈಕೋರ್ಟ್ ಅಮಾನತುಪಡಿಸಿ ಜಾಮೀನು ನೀಡಿದೆ.
ಬೆಂಗಳೂರು : ಅನಾರೋಗ್ಯಪೀಡಿತ ತಾಯಿ ಮತ್ತು ತನ್ನ ಮಗನ ಆರೈಕೆ ಮಾಡಲೆಂದು, ವಯೋವೃದ್ಧೆಯನ್ನು ಕೊಲೆಗೈದು ಚಿನ್ನಾಭರಣ ದೋಚಿದ್ದ ಪ್ರಕರಣದ ಆರೋಪಿಗೆ ವಿಚಾರಣಾ ನ್ಯಾಯಾಲಯ ವಿಧಿಸಿದ್ದ ಜೀವಾವಧಿ ಶಿಕ್ಷೆಯನ್ನು ಹೈಕೋರ್ಟ್ ಅಮಾನತುಪಡಿಸಿ ಜಾಮೀನು ನೀಡಿದೆ.
ಶಿಕ್ಷೆ ಅಮಾನತು ಕೋರಿ ಪ್ರಕರಣದ ಮೊದಲನೆ ಆರೋಪಿ ಕನಕಪುರದ ನಿವಾಸಿ ರಾಚಾಚಾರಿ ಎರಡನೇ ಬಾರಿಗೆ ಸಲ್ಲಿಸಿರುವ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ಈ ಆದೇಶ ಮಾಡಿದೆ.
ರಾಚಾಚಾರಿ 2019ರಿಂದ ಆರು ವರ್ಷಕ್ಕಿಂತ ಹೆಚ್ಚು ಅವಧಿಯಿಂದ ಜೈಲಿನಲ್ಲಿದ್ದಾರೆ. ಶಿಕ್ಷೆ ಅಮಾನತು ಕೋರಿ ಎರಡನೇ ಬಾರಿಗೆ ಸಲ್ಲಿಸಿದ ಅರ್ಜಿ ಇದಾಗಿದೆ. ಆತನದು ವಾದಯೋಗ್ಯ ಪ್ರಕರಣವಾಗಿದೆ. ಶಿಕ್ಷೆ ಅಮಾನತುಪಡಿಸಿ ಜಾಮೀನು ನೀಡಲು ಇದು ಅರ್ಹ ಪ್ರಕರಣವಾಗಿದೆ ಎಂದು ಪೀಠ ಆದೇಶಿಸಿದೆ.
ಇದೇ ವೇಳೆ ಪ್ರಕರಣದ ಎರಡನೇ ಆರೋಪಿ ಕಿರಣ್‌ಗೆ ವಿಧಿಸಲಾಗಿರುವ ಜೀವಾವಧಿ ಶಿಕ್ಷೆಯನ್ನು ಅಮಾನತುಪಡಿಸಿ ಜಾಮೀನು ನೀಡಿರುವ ನ್ಯಾಯಾಲಯ, ಆರೋಪಿಗಳು ತಲಾ 50 ಸಾವಿರ ರು. ವೈಯಕ್ತಿಕ ಬಾಂಡ್ ಮತ್ತು ಅಷ್ಟಕ್ಕೇ ಇಬ್ಬರ ಭದ್ರತಾ ಖಾತರಿ ನೀಡಬೇಕು. ವಿಚಾರಣೆಗೆ ಅಗತ್ಯ ಇದ್ದಾಗ ನ್ಯಾಯಾಲಯಕ್ಕೆ ಹಾಜರಾಗಬೇಕು ಎಂದು ಸೂಚಿಸಿದೆ.
ರಾಚಾಚಾರಿ ಪರ ವಕೀಲ ಡಿ.ಮೋಹನ್ ಕುಮಾರ್, ಜೀವಾವಧಿ ಶಿಕ್ಷೆ ಪ್ರಶ್ನಿಸಿ ಸಲ್ಲಿಸಿರುವ ಮೇಲ್ಮನವಿಯ ವಿಚಾರಣೆ ವಿಳಂಬವಾದರೆ, ಆರೋಪಿಗೆ ವಿಧಿಸಲಾಗಿರುವ ಶಿಕ್ಷೆ ಅಮಾನತುಪಡಿಸಿ ಜಾಮೀನು ನೀಡಬೇಕು ಎಂದು 1978ರಲ್ಲಿಯೇ ಬಾಬುಸಿಂಗ್ ಎಂಬಾತನ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ತೀರ್ಪು ನೀಡಿದೆ. ಶಿಕ್ಷೆ ಅಮಾನತು ಕೋರಿ ಎರಡನೇ ಬಾರಿಗೆ ಅರ್ಜಿ ಸಲ್ಲಿಸುವುದಕ್ಕೆ ಯಾವುದೇ ನಿರ್ಬಂಧವಿಲ್ಲ. ಇದೇ ವೇಳೆ ರಾಚಾಚಾರಿಯ ತಾಯಿ ಅನಾರೋಗ್ಯ ಪೀಡಿತರಾಗಿದ್ದಾರೆ. ಆರೋಗ್ಯ ಸಮಸ್ಯೆಯಿಂದ ಏಳು ವರ್ಷದ ಪುತ್ರನೂ ಸಹ ಆಸ್ಪತ್ರೆಗೆ ದಾಖಲಾಗಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾನೆ. ಪತ್ನಿ ಬೆನ್ನುನೋವಿಂದ ಬಳಲುತ್ತಿದ್ದಾರೆ. ಅವರೆಲ್ಲರ ವೈದ್ಯಕೀಯ ಚಿಕಿತ್ಸೆಯ ವೆಚ್ಚ ಭರಿಸುವ ಹಾಗೂ ಕುಟುಂಬದ ಪೋಷಣೆ ಜವಾಬ್ದಾರಿ ರಾಚಾಚಾರಿ ಮೇಲಿರುವ ಕಾರಣ ಆತನಿಗೆ ಜಾಮೀನು ನೀಡುವಂತೆ ಕೋರಿದ್ದರು. ಹೈಕೋರ್ಟ್ ಈ ವಾದ ಪುರಸ್ಕರಿಸಿದೆ.
ಪ್ರಕರಣದ ವಿವರ:
ಚನ್ನಪಟ್ಟಣದ ನಿವಾಸಿ ಇಂದಿರಮ್ಮ ಎಂಬ ವೃದ್ಧೆಯನ್ನು 2013ರ ಅ.24ರಂದು ಅವರ ಮನೆಯಲ್ಲಿಯೇ ಉಸಿರುಗಟ್ಟಿಸಿ ಕೊಲೆ ಮಾಡಿ ಚಿನ್ನಾಭರಣ, ಮೊಬೈಲ್ ಫೋನ್ ಮತ್ತು 3,500 ರು. ನಗದು ದೋಚಿದ ಆರೋಪದಲ್ಲಿ ರಾಚಾಚಾರಿ ಮತ್ತು ಕಿರಣ್ ಸೇರಿ ಮೂವರಿಗೆ ರಾಮನಗರದ 3ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯವು 2019ರ ಜ.17ರಂದು ಜೀವಾವಧಿ ಶಿಕ್ಷೆ ವಿಧಿಸಿತ್ತು. ಈ ಆದೇಶ ರದ್ದು ಕೋರಿ ರಾಚಾಚಾರಿ ಹೈಕೋರ್ಟ್‌ಗೆ ಕ್ರಿಮಿನಲ್ ಮೇಲ್ಮನವಿ ಸಲ್ಲಿಸಿದ್ದರು. ಶಿಕ್ಷೆ ಅಮಾನತು ಕೋರಿ ಮೊದಲ ಬಾರಿಗೆ ರಾಚಾಚಾರಿ ಸಲ್ಲಿಸಿದ್ದ ಅರ್ಜಿಯನ್ನು 2021ರಲ್ಲಿ ಹೈಕೋರ್ಟ್ ತಿರಸ್ಕರಿಸಿತ್ತು. ಅನಾರೋಗ್ಯ ಪೀಡಿತ ತಾಯಿ ಮತ್ತು ಮಗನ ಆರೈಕೆ ಮಾಡಬೇಕಿದ್ದರಿಂದ ಜಾಮೀನು ಕೋರಿ ಇತ್ತೀಚೆಗೆ ಎರಡು ಬಾರಿ ಅರ್ಜಿ ಸಲ್ಲಿಸಿದ್ದರು.