ಸಾರಾಂಶ
ನಾಡಪ್ರಭು ಕೆಂಪೇಗೌಡ ಅವರ ಬೆಂಗಳೂರನ್ನು ಕಾಂಗ್ರೆಸ್ ಸರ್ಕಾರ ಗ್ರೇಟರ್ ಅಲ್ಲ, ಕ್ವಾರ್ಟರ್ ಬೆಂಗಳೂರು ಮಾಡಿದೆ ಎಂದು ವಿಧಾನಸಭೆ ಪ್ರತಿಪಕ್ಷ ನಾಯಕ ಆರ್.ಅಶೋಕ್ ವ್ಯಂಗ್ಯವಾಡಿದ್ದಾರೆ.
ಬೆಂಗಳೂರು : ನಾಡಪ್ರಭು ಕೆಂಪೇಗೌಡ ಅವರ ಬೆಂಗಳೂರನ್ನು ಕಾಂಗ್ರೆಸ್ ಸರ್ಕಾರ ಗ್ರೇಟರ್ ಅಲ್ಲ, ಕ್ವಾರ್ಟರ್ ಬೆಂಗಳೂರು ಮಾಡಿದೆ ಎಂದು ವಿಧಾನಸಭೆ ಪ್ರತಿಪಕ್ಷ ನಾಯಕ ಆರ್.ಅಶೋಕ್ ವ್ಯಂಗ್ಯವಾಡಿದ್ದಾರೆ.
ಗುರುವಾರ ನಗರದಲ್ಲಿ ಸುದ್ದಿಗಾರರ ಜತೆ ಮಾತನಾಡಿ, ನಾಡಪ್ರಭು ಕೆಂಪೇಗೌಡ ಒಂದು ಬೆಂಗಳೂರು ಕಟ್ಟಿದರೆ, ಕಾಂಗ್ರೆಸ್ ಸರ್ಕಾರ ಬೆಂಗಳೂರನ್ನು 3 ಭಾಗ ಮಾಡಿದೆ. ಇದರಿಂದಾಗಿ ಅಭಿವೃದ್ಧಿ ಸಾಧ್ಯವಾಗುವುದಿಲ್ಲ. 110 ಹಳ್ಳಿಗಳಲ್ಲಿ ಜನರಿಗೆ ಹೆಚ್ಚು ತೆರಿಗೆ ವಿಧಿಸಲಾಗಿದೆ. ಯಾರದ್ದೋ ಜಮೀನಿಗೆ ಬೆಲೆ ಹಚ್ಚುವಂತೆ ಮಾಡಲು ಇಂತಹ ಯೋಜನೆ ರೂಪಿಸಲಾಗಿದೆ. ಇದರಿಂದಾಗಿ ಕೆಂಪೇಗೌಡರ ಚಿಂತನೆಗೆ ದ್ರೋಹ ಬಗೆದಂತಾಗಿದೆ ಎಂದು ಕಿಡಿಕಾರಿದರು.
ಬೆಂಗಳೂರು ಭಾಗವಾದರೆ ಆದಾಯ ಬರುವುದಿಲ್ಲ. ಅಲ್ಲದೇ, 3 ಪಾಲಿಕೆಗಳಿಗೆ ಕನ್ನಡಿಗರೇ ಮೇಯರ್ ಆಗುತ್ತಾರೆ ಎಂಬ ಖಚಿತತೆ ಇಲ್ಲ. ಮುಖ್ಯಮಂತ್ರಿ ಪಾಲಿಕೆಯಿಂದ ಆಯ್ಕೆಯಾಗುವುದಿಲ್ಲ ಎಂದಾದ ಮೇಲೆ ಗ್ರೇಟರ್ ಬೆಂಗಳೂರು ಪ್ರಾಧಿಕಾರಕ್ಕೆ ಅವರನ್ನು ಹೇಗೆ ಅಧ್ಯಕ್ಷರನ್ನಾಗಿ ಮಾಡುತ್ತಾರೆ? ಸಿಎಂ ಸಿದ್ದರಾಮಯ್ಯ ಪಾಲಿಕೆ ಸಭೆಯಲ್ಲಿ ಬಂದು ಕೂರಲು ಸಾಧ್ಯವಿಲ್ಲ. ಗ್ರೇಟರ್ ಬೆಂಗಳೂರು ವಿರೋಧಿಸಿ ಕಾನೂನು ಹೋರಾಟ ಮಾಡಲಿದ್ದೇವೆ ಎಂದರು.
ನಿಲುವು ಪ್ರಕಟಿಸಬೇಕು:
ಈ ನಡುವೆ, ಕಾಂಗ್ರೆಸ್‌ನಲ್ಲಿ ಒಬ್ಬರು ಯುದ್ಧ ಬೇಕು ಎಂದರೆ, ಮತ್ತೊಬ್ಬರು ಶಾಂತಿ ಬೇಕು ಎನ್ನುತ್ತಾರೆ. ಎಐಸಿಸಿಯಲ್ಲಿ ಈ ಬಗ್ಗೆ ಸರಿಯಾದ ನಿಲುವು ಪ್ರಕಟಿಸಬೇಕು. ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕದನ ವಿರಾಮವನ್ನು ಸ್ವಾಗತಿಸಿದ್ದಾರೆ. ಆದರೆ, ಅದೇ ಕಾಂಗ್ರೆಸ್‌ನಲ್ಲಿ ಹಲವರು ಯುದ್ಧ ಮುಂದುವರಿಸಬೇಕಿತ್ತು ಎಂದಿದ್ದಾರೆ. ಯುದ್ಧದ ಕುರಿತು ಮೊದಲು ಸರಿಯಾದ ನಿಲುವು ಪ್ರಕಟಿಸಬೇಕು. ನಂತರ ವಿಶೇಷ ಅಧಿವೇಶನ ಕರೆಯುವ ಬಗ್ಗೆ ಮಾತಾಡಲಿ ಎಂದು ವಾಗ್ದಾಳಿ ನಡೆಸಿದರು.
ಕಾಂಗ್ರೆಸ್ ಆಡಳಿತದ ವೇಳೆ ಅಮೆರಿಕದ ಬಳಿ ಹೋಗಿ ಭಿಕ್ಷೆ ಬೇಡಿದ್ದನ್ನು ಗಮನಿಸಿದ್ದೇವೆ. ಆದರೆ ಪ್ರಧಾನಿ ನರೇಂದ್ರ ಮೋದಿ ತಕ್ಕ ಪ್ರತ್ಯುತ್ತರ ನೀಡಿದ್ದಾರೆ. ಇಡೀ ಜಮ್ಮು- ಕಾಶ್ಮೀರ ಪ್ರಧಾನಿ ಪರವಾಗಿ ನಿಂತಿದೆ. ಅಲ್ಲಿನ ಮುಖ್ಯಮಂತ್ರಿ ಸಹ ಕೇಂದ್ರ ಸರ್ಕಾರಕ್ಕೆ ಬೆಂಬಲ ನೀಡಿದ್ದಾರೆ. ಪಾಕ್ ಆಕ್ರಮಿತ ಕಾಶ್ಮೀರ ನಮ್ಮದು, ಅದನ್ನು ಮರಳಿ ಪಡೆಯುತ್ತೇವೆ ಎಂಬುದಾಗಿ ಪ್ರಧಾನಿ ನರೇಂದ್ರ ಮೋದಿ ಹೇಳಿದ್ದು, ಕಾಂಗ್ರೆಸ್‌ನ ಒಬ್ಬೇ ಒಬ್ಬ ನಾಯಕರು ಈ ಮಾತನ್ನು ಧೈರ್ಯವಾಗಿ ಹೇಳಿಲ್ಲ ಎಂದು ಟೀಕಾಪ್ರಹಾರ ನಡೆಸಿದರು.