ಪ್ರಶ್ನೆ ಪತ್ರಿಕೆಗಳು ಹಾಗೂ ನಿಖರ ಉತ್ತರ ಮಾತ್ರವಲ್ಲ, ಯಾವ ಪರೀಕ್ಷಾ ಕೇಂದ್ರದಲ್ಲಿ ಅಭ್ಯರ್ಥಿಗಳು ಕುಳಿತು ಪರೀಕ್ಷೆ ಬರೆಯುತ್ತಾರೆ ಎಂಬ ಗೌಪ್ಯ ಮಾಹಿತಿಯನ್ನು ಕೆಪಿಎಸ್‌ಸಿ ಅಧ್ಯಕ್ಷ ಹಾಗೂ ಸದಸ್ಯರಿಗೆ ಐಎಎಸ್ ಅಧಿಕಾರಿ ಜ್ಞಾನೇಂದ್ರ ಕುಮಾರ್ ಗಂಗ್ವಾರ್ ನೀಡಿದ್ದರು ಎಂಬ ಸಂಗತಿ ಇದೀಗ ಬಹಿರಂಗವಾಗಿದೆ.
ಗಿರೀಶ್ ಮಾದೇನಹಳ್ಳಿ
ಬೆಂಗಳೂರು : ಕೆಪಿಎಸ್‌ಸಿ ಪಶುವೈದ್ಯಾಧಿಕಾರಿಗಳ ಅಕ್ರಮ ನೇಮಕಾತಿ ಹಗರಣ ಸಂಬಂಧ ಜಾರಿ ನಿರ್ದೇಶನಾಲಯದ (ಇ.ಡಿ.) ತನಿಖೆ ಮುಂದುವರೆದಂತೆ ಮತ್ತಷ್ಟು ಭಾನಗಡಿ ಬಯಲಾಗುತ್ತಿವೆ.
ಪ್ರಶ್ನೆ ಪತ್ರಿಕೆಗಳು ಹಾಗೂ ನಿಖರ ಉತ್ತರ ಮಾತ್ರವಲ್ಲ, ಯಾವ ಪರೀಕ್ಷಾ ಕೇಂದ್ರದಲ್ಲಿ ಅಭ್ಯರ್ಥಿಗಳು ಕುಳಿತು ಪರೀಕ್ಷೆ ಬರೆಯುತ್ತಾರೆ ಎಂಬ ಗೌಪ್ಯ ಮಾಹಿತಿಯನ್ನು ಕೆಪಿಎಸ್‌ಸಿ ಅಧ್ಯಕ್ಷ ಹಾಗೂ ಸದಸ್ಯರಿಗೆ ಐಎಎಸ್ ಅಧಿಕಾರಿ ಜ್ಞಾನೇಂದ್ರ ಕುಮಾರ್ ಗಂಗ್ವಾರ್ ನೀಡಿದ್ದರು ಎಂಬ ಸಂಗತಿ ಇದೀಗ ಬಹಿರಂಗವಾಗಿದೆ.
ಈ ಮಾಹಿತಿಯೇ ಪರೀಕ್ಷೆಗೆ ಸಿದ್ಧಪಡಿಸಿದ್ದ ನಾಲ್ಕು ಸೆಟ್ ಪ್ರಶ್ನೆ ಪತ್ರಿಕೆಗಳನ್ನು ಅಭ್ಯರ್ಥಿಗಳಿಗೆ ಬಿಕರಿ ಮಾಡಲು ಆಯೋಗದ ಅಮಾನತುಗೊಂಡಿರುವ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್, ಸದಸ್ಯೆ ಗೀತಾ ಹಾಗೂ ಮಧ್ಯವರ್ತಿ ಬಸವರಾಜ್ ಕನ್ನಾಳೆ ಗ್ಯಾಂಗ್‌ಗಳಿಗೆ ನೆರವಾಗಿದೆ. ಅಲ್ಲದೆ ಪ್ರಶ್ನೆಗಳನ್ನು ಖರೀದಿಸಿದ ಅಭ್ಯರ್ಥಿಗಳು ರ್‍ಯಾಂಕ್ ಪಡೆಯಲು ಸಾಧ್ಯವಾಗಿದೆ.
ಪಶು ವೈದ್ಯಾಧಿಕಾರಿಗಳ ಹುದ್ದೆ ನೇಮಕಾತಿ ಲಿಖಿತ ಪರೀಕ್ಷೆಯಲ್ಲಿ ಅತ್ಯುನ್ನತ ಶ್ರೇಣಿಯಲ್ಲಿ ತೇರ್ಗಡೆಯಾದ ಅಭ್ಯರ್ಥಿಗಳ ಪೂರ್ವಾಪರವನ್ನು ಇ.ಡಿ. ಜಾಲಾಡಿದೆ. ಆಗ ರ್‍ಯಾಂಕ್ ಪಡೆದಿದ್ದ ವಿನುತಾ ಹಾಗೂ ನಂದೀಶ್ ಮೇಲೆ ಶಂಕೆ ಮೂಡಿದೆ. ಈ ಅಭ್ಯರ್ಥಿಗಳ ಬಗ್ಗೆ ಮತ್ತಷ್ಟು ಶೋಧಿಸಿದಾಗ ಪರೀಕ್ಷಾ ಕೇಂದ್ರಗಳ ಮಾಹಿತಿ ಬಹಿರಂಗ ಗೊತ್ತಾಗಿದೆ ಎಂದು ತಿಳಿದು ಬಂದಿದೆ. ವಿನುತಾ(483 ಅಂಕ)ಗೆ ‘ಬಿ’ ಸರಣಿಯ ಸಾಮಾನ್ಯ ವಿಜ್ಞಾನ ಮತ್ತು ‘ಕ್ಯು’ ಸರಣಿಯ ಪಶುವಿಜ್ಞಾನದ ಉತ್ತರ ಪತ್ರಿಕೆ ಸಿಕ್ಕಿದ್ದವು. ಅದೇ ರೀತಿ ಮೊದಲೇ ರ್‍ಯಾಂಕ್ ಪಡೆದಿರುವ ನಂದೀಶ್(490 ಅಂಕ)ಗೆ ‘ಎಸ್’ ಸರಣಿಯ ಸಾಮಾನ್ಯ ವಿಜ್ಞಾನ ಮತ್ತು ‘ಡಿ’ ಸರಣಿಯ ಪಶುವಿಜ್ಞಾನದ ಉತ್ತರ ಪತ್ರಿಕೆಗಳು ಸಿಕ್ಕಿದ್ದವು.
ಮೂರು ಕೇಂದ್ರಗಳಲ್ಲಿ ಪರೀಕ್ಷೆ:
ಪಶುವೈದ್ಯಾಧಿಕಾರಿಗಳ ನೇಮಕಾತಿ ಸಂಬಂಧ ಜ.7 ಮತ್ತು 8 ರಂದು ಯಲಹಂಕದ ಸರ್ಕಾರಿ ಪಿಯು ಕಾಲೇಜು ಹಾಗೂ ಕೆ.ಆರ್.ಸರ್ಕಲ್ ಸಮೀಪದ ಸರ್ಕಾರಿ ಪದವಿ ಕಾಲೇಜುಗಳಲ್ಲಿ ಪರೀಕ್ಷೆ ನಡೆದಿತ್ತು. ಯಲಹಂಕ ಪಿಯು ಕಾಲೇಜಿನ ಆವರಣದ ಎರಡು ಕಟ್ಟಡಗಳಲ್ಲಿ ಪರೀಕ್ಷಾ ಕೇಂದ್ರಗಳಿದ್ದವು. ಪರೀಕ್ಷೆಗೆ ನಾಲ್ಕು ಸೆಟ್ ಪ್ರಶ್ನೆ ಪತ್ರಿಕೆಗಳನ್ನು ಕೆಪಿಎಸ್‌ಸಿ ಸಿದ್ಧಪಡಿಸಿತ್ತು. ಇದರ ಉಸ್ತುವಾರಿಯನ್ನು ಅಂದು ಆಯೋಗದ ಪರೀಕ್ಷಾ ನಿಯಂತ್ರಕರಾಗಿದ್ದ ಐಎಎಸ್ ಅಧಿಕಾರಿ ಜ್ಞಾನೇಂದ್ರ ವಹಿಸಿದ್ದರು.
ಈಗ ಅಕ್ರಮದಲ್ಲಿ ಶಾಮೀಲಾದ ಅಭ್ಯರ್ಥಿಗಳು ಬೇರೆ ಬೇರೆ ಕಡೆ ಪರೀಕ್ಷೆ ಬರೆದಿದ್ದಾರೆ. ಆದರೆ ಅಂಕ ಗಳಿಕೆಯಲ್ಲಿ ಆ ಅಭ್ಯರ್ಥಿಗಳು ಸಮಾನತೆ ಸಾಧಿಸಿದ್ದಾರೆ. ಎರಡ್ಮೂರು ಅಂಕಗಳು ಹೆಚ್ಚುಕಮ್ಮಿಯಾಗಿವೆ ಅಷ್ಟೇ. ಹೀಗಾಗಿ ವಿಭಿನ್ನ ಪರೀಕ್ಷಾ ಕೇಂದ್ರ ಹಾಗೂ ಬೇರೆ ಸೆಟ್ ಪ್ರಶ್ನೆ ಪತ್ರಿಕೆಗಳು ಹಂಚಿಕೆಯಾಗಿದ್ದರೂ ಹೇಗೆ ಒಂದೇ ರೀತಿಯ ಅಂಕ ಬರಲು ಸಾಧ್ಯ ಎಂದು ಇ.ಡಿ. ಅಧಿಕಾರಿಗಳಿಗೆ ಅನುಮಾನ ಮೂಡಿದೆ.
ಈ ಗುಮಾನಿ ಮೇರೆಗೆ ಪರೀಕ್ಷಾ ನಿಯಂತ್ರಕ ಜ್ಞಾನೇಂದ್ರ ಗಂಗ್ವಾರ್ ಅವರನ್ನು ತೀವ್ರವಾಗಿ ಪ್ರಶ್ನಿಸಿದಾಗ ಪರೀಕ್ಷಾ ಕೇಂದ್ರಗಳ ಭಾನಗಡಿ ಬಯಲಾಗಿದೆ. ಪರೀಕ್ಷೆಗೂ ಮುನ್ನ ಯಾವ್ಯಾವ ಅಭ್ಯರ್ಥಿಗಳು ಎಲ್ಲಿ ಪರೀಕ್ಷೆ ಬರೆಯುತ್ತಾರೆ ಎಂಬ ಪರೀಕ್ಷಾ ಕೊಠಡಿಗಳ ವಿವರವನ್ನು ಕೆಪಿಎಸ್‌ಸಿ ಅಧ್ಯಕ್ಷ ಶಿವಶಂಕರಪ್ಪ, ಸದಸ್ಯೆ ಗೀತಾ, ಬೀದರ್ ಜಿಲ್ಲೆಯ ಬಿಜೆಪಿ ಮುಖಂಡ ಬಸವರಾಜ್ ಕನ್ನಾಳೆಗೆ ಜ್ಞಾನೇಂದ್ರ ಕೊಟ್ಟಿದ್ದರು ಎಂದು ಮೂಲಗಳು ಹೇಳಿವೆ.
ಈ ಮಾಹಿತಿ ಅನುಸಾರ ಅಭ್ಯರ್ಥಿಗಳಿಗೆ ಆಯಾ ಪರೀಕ್ಷಾ ಕೇಂದ್ರಗಳಿಗೆ ಹಂಚಿಕೆಯಾಗಿದ್ದ ಪ್ರಶ್ನೆ ಪತ್ರಿಕೆಗಳಲ್ಲಿ ಪ್ರಶ್ನೆಗಳನ್ನು ಆರೋಪಿಗಳು ಮಾರಾಟ ಮಾಡಿದ್ದರು. ಈ ಪ್ರಶ್ನೆಗಳಿಗೆ ಅಭ್ಯರ್ಥಿಗಳು ಸಿದ್ಧವಾಗಿದ್ದರು. ಅಂತೆಯೇ ಬೇರೆ ಬೇರೆ ಕೇಂದ್ರಗಳಲ್ಲಿ ಪರೀಕ್ಷೆ ಬರೆದಿದ್ದರೂ ಒಂದೇ ರೀತಿಯ ಅಂಕಗಳನ್ನು ವಿನುತಾ ಹಾಗೂ ನಂದೀಶ್ ಪಡೆದಿದ್ದಾರೆ ಎಂದು ತಿಳಿದು ಬಂದಿದೆ.
ಕೀ ಉತ್ತರ ಮಾರಾಟ:
ಅಭ್ಯರ್ಥಿಗಳಿಗೆ ಪ್ರಶ್ನೆಗಳನ್ನು ಮಾತ್ರ ಅಲ್ಲ, ನಿಖರ ಉತ್ತರಗಳನ್ನೂ ಶಿವಶಂಕರಪ್ಪ ಹಾಗೂ ಸದಸ್ಯೆ ಗೀತಾ ಮಾರಾಟ ಮಾಡಿದ್ದರು. ಹೀಗಾಗಿ ನಾಲ್ಕು ಸೆಟ್ ಪ್ರಶ್ನೆ ಪತ್ರಿಕೆಗಳ ನಿಖರ ಉತ್ತರವನ್ನು ಜ್ಞಾನೇಂದ್ರ ಅವರಿಂದ ಪಡೆದು ಅಭ್ಯರ್ಥಿಗಳ ಜತೆ ಗೀತಾ ಹಾಗೂ ಶಿವಶಂಕರಪ್ಪ ಡೀಲ್ ಕುದುರಿಸಿದ್ದರು. ಪಶುವಿಜ್ಞಾನ ಹಾಗೂ ಸಾಮಾನ್ಯ ಜ್ಞಾನ ವಿಷಯಗಳಲ್ಲಿ ಆಬ್ಜೆಕ್ಟಿವ್ ಪ್ರಶ್ನೆ ಪತ್ರಿಕೆಗಳಿಗೆ ಅವರು ಉತ್ತರ ಒದಗಿಸಿದ್ದರು ಎಂದು ತಿಳಿದು ಬಂದಿದೆ.
ಪಿಂಚಣಿಯಲ್ಲಿ ಕೂಡಿಟ್ಟ ಹಣ
ತಾನು ಪಿಂಚಣಿಯಿಂದ ಕೂಡಿಟ್ಟಿದ್ದ ಹಣವನ್ನು ಮಗಳಿಗೆ ಪಶುವೈದ್ಯೆ ಹುದ್ದೆ ಕೊಡಿಸಲು ಶಿವಶಂಕರಪ್ಪ ಸಾಹುಕಾರ್ ಅವರಿಗೆ ಕೊಟ್ಟಿದ್ದೆ ಇ.ಡಿ ಮುಂದೆ ಡಾ.ವಿನುತಾ ತಂದೆ ಮಲ್ಲಪ್ಪ ಹೇಳಿಕೆ ಕೊಟ್ಟಿದ್ದಾರೆ.
ಪಶುವೈದ್ಯ ಹುದ್ದೆಗೆ 50 ಲಕ್ಷ ರು.ಗೆ ಶಿವಶಂಕರಪ್ಪ ಬೇಡಿಕೆ ಇಟ್ಟಿದ್ದರು. ಆಗ ನಾವು ನಿಮ್ಮದೇ ಸಮುದಾಯದವರು ಎಂದು ಹೇಳಿದಾಗ ಮಾತುಕತೆ ನಡೆಸಿದವು. ಕೊನೆಗೆ 20 ಲಕ್ಷ ರು.ಗೆ ಅಧ್ಯಕ್ಷರು ಒಪ್ಪಿದರು. ನನಗೆ ಮಾಸಿಕ 50 ಸಾವಿರ ರು. ಪಿಂಚಣಿ ಬರುತ್ತದೆ. ಅಲ್ಲದೆ 12 ಎಕರೆ ಕೃಷಿ ಭೂಮಿ ಇದೆ. ಇವುಗಳ ಆದಾಯದಲ್ಲಿ ಕೂಡಿಟ್ಟ ಹಣದಲ್ಲಿ 10 ಲಕ್ಷ ರು. ಹಣವನ್ನು ಶಿವಶಂಕರಪ್ಪ ಅವರಿಗೆ ನೀಡಿದೆ. ಇನ್ನುಳಿದ ಹಣವನ್ನು ವೈದ್ಯ ಹುದ್ದೆ ಖಚಿತವಾದ ನಂತರ ಕೊಡುವುದಾಗಿ ವಾಗ್ದಾನ ಮಾಡಿದ್ದೆ ಎಂದು ಮಲ್ಲಪ್ಪ ತಿಳಿಸಿದ್ದಾರೆ.

ಸ್ವಂತ ಜಾತಿ ಎಂದು ₹30 ಲಕ್ಷ ಡಿಸ್ಕೌಂಟ್ ಕೊಟ್ಟಿದ್ದ ಸಾಹುಕಾರ್!
‘ಪುತ್ರಿಗೆ ಪಶುವೈದ್ಯ ಹುದ್ದೆ ನೀಡಲು ಶಿವಶಂಕರಪ್ಪ ಸಾಹುಕಾರ್ 50 ಲಕ್ಷ ರು. ಕೇಳಿದ್ದರು. ನಾನು ನಿಮ್ಮದೇ ಸಮುದಾಯದವನು ಅಂತ ಹೇಳಿದಾಗ 20 ಲಕ್ಷ ರು.ಗೆ ಒಪ್ಪಿದ್ದರು’ ಎಂದು ಅಕ್ರಮವಾಗಿ ಹುದ್ದೆ ಪಡೆದ ಆರೋಪಕ್ಕೆ ಗುರಿಯಾಗಿರುವ ಅಭ್ಯರ್ಥಿ ಡಾ. ವಿನುತಾ ಅವರ ತಂದೆ ಮಲ್ಲಪ್ಪ ಇ.ಡಿ. ಮುಂದೆ ಹೇಳಿಕೆ ನೀಡಿದ್ದಾರೆ.