ಸಾರಾಂಶ
ದೇಶ ತೊರೆಯಲು ಮೇ 15ರವರೆಗೆ ಕಾಲಾವಕಾಶ ನೀಡುವಂತೆ ಕೋರಿ ಮೈಸೂರಿನಲ್ಲಿ ನೆಲೆಸಿರುವ ಪಾಕಿಸ್ತಾನದ ಮೂವರು ಮಕ್ಕಳು ತಮ್ಮ ತಾಯಿಯೊಂದಿಗೆ ಸಲ್ಲಿಸಿದ್ದ ತಕರಾರು ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದೆ.
ಬೆಂಗಳೂರು : ಪಹಲ್ಗಾಂ ಉಗ್ರರ ದಾಳಿ ಹಿನ್ನೆಲೆಯಲ್ಲಿ ಪಾಕಿಸ್ತಾನದ ಎಲ್ಲ ಪ್ರಜೆಗಳು ಕೂಡಲೇ ಭಾರತ ತೊರೆಯಲು ಕೇಂದ್ರ ಸರ್ಕಾರ ನಿರ್ದೇಶಿಸಿರುವ ಹಿನ್ನೆಲೆಯಲ್ಲಿ, ತಮ್ಮ ವಿರುದ್ಧ ಬಲವಂತದ ಕ್ರಮ ಜರುಗಿಸದಂತೆ ಸೂಚಿಸಲು ಮತ್ತು ದೇಶ ತೊರೆಯಲು ಮೇ 15ರವರೆಗೆ ಕಾಲಾವಕಾಶ ನೀಡುವಂತೆ ಕೋರಿ ಮೈಸೂರಿನಲ್ಲಿ ನೆಲೆಸಿರುವ ಪಾಕಿಸ್ತಾನದ ಮೂವರು ಮಕ್ಕಳು ತಮ್ಮ ತಾಯಿಯೊಂದಿಗೆ ಸಲ್ಲಿಸಿದ್ದ ತಕರಾರು ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದೆ.
ಪಾಕಿಸ್ತಾನದ ಬಲೂಚಿಸ್ತಾನದ 8 ವರ್ಷದ ಬಿಬಿ ಯಾಮಿನಾ, 4 ವರ್ಷದ ಮೊಹಮ್ಮದ್ ಮುದಾಸ್ಸಿರ್ ಮತ್ತು 3 ವರ್ಷದ ಮೊಹಮ್ಮದ್ ಯೂಸುಫ್ ಅವರು ತಮ್ಮ ತಾಯಿ ರಾಂಶ ಜಹಾನ್ ಅವರೊಂದಿಗೆ ಹೈಕೋರ್ಟ್‌ಗೆ ತಕರಾರು ಅರ್ಜಿ ಸಲ್ಲಿಸಿದ್ದರು.
ಅರ್ಜಿ ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು, ಕೇಂದ್ರ ಸರ್ಕಾರದ ಆದೇಶದಂತೆ ಏ.28ರಂದು ಪಾಕಿಸ್ತಾನಕ್ಕೆ ತೆರಳಲು ಅಟ್ಟಾರಿ ಗಡಿಗೆ ಹೋಗಿದ್ದರು. ಪಾಕಿಸ್ತಾನ ಪ್ರವೇಶಕ್ಕೆ ಅವಕಾಶ ನೀಡದೆ ಗಡಿ ದ್ವಾರ ಮುಚ್ಚಲಾಗಿತ್ತು. ಇದರಿಂದ ಅವರು ಮೈಸೂರಿಗೆ ಹಿಂದಿರುಗಿದ್ದಾರೆ. ಭಾರತ ತೊರೆಯಲು ಅರ್ಜಿದಾರರು ಸಿದ್ಧರಿದ್ದಾರೆ. ಆದರೆ, ಮೇ 15ವರೆಗೆ ಕಾಲಾವಕಾಶ ನೀಡಬೇಕು ಎಂದು ಕೋರಿದರು.
ಈ ಮನವಿ ಒಪ್ಪದ ನ್ಯಾಯಮೂರ್ತಿ ಎಂ.ಜಿ.ಉಮಾ ಅವರ ಪೀಠ, ದೇಶದ ನಾಗರಿಕರ ಸುರಕ್ಷತೆ ಮತ್ತು ಭದ್ರತೆ ಹಿತದೃಷ್ಟಿಯಿಂದ ಕೇಂದ್ರ ಸಂಪುಟ ಸಮಿತಿ ಈ ಆದೇಶ ಮಾಡಿದೆ. ಅದರಲ್ಲಿ ನ್ಯಾಯಾಲಯ ಮಧ್ಯಪ್ರವೇಶ ಮಾಡುವುದಿಲ್ಲ ಎಂದು ತಿಳಿಸಿ ಅರ್ಜಿ ವಜಾಗೊಳಿಸಿ ಆದೇಶಿಸಿತು.
ಉಗ್ರರು ಏ.22ರಂದು ಪಹಲ್ಗಾಂ ನಲ್ಲಿ ಭಯಾನಕ ದಾಳಿ ನಡೆಸಿದ್ದಾರೆ. ಇದರಿಂದ ಕೇಂದ್ರ ಸರ್ಕಾರ ಸಂಪುಟ ಸಮಿತಿಯು ವಿಸಿಟರ್ ವೀಸಾ ಸೇರಿ ಎಲ್ಲಾ ರೀತಿಯ ವೀಸಾಗಳನ್ನು ಅಮಾನತುಪಡಿಸಿತ್ತು. ಹಾಗೆಯೇ, ಭಾರತದಲ್ಲಿರುವ ಪಾಕಿಸ್ತಾನ ಪ್ರಜೆಗಳು ಏ.27ರೊಳಗೆ ದೇಶಬಿಟ್ಟು ತೆರಳುವಂತೆ ಸೂಚನೆ ನೀಡಿದೆ.