ಸಾರಾಂಶ
ಏರ್ ಶೋನಲ್ಲಿ ದೇಶಿಯ ಹಾಗೂ ವಿದೇಶಿ ವಿಮಾನಗಳು ನೋಡುಗರನ್ನು ರಂಜಿಸುತ್ತಿದ್ದು, ಸಾಹಸಿಗರ ಪ್ರದರ್ಶನ ಹುಬ್ಬೇರಿಸುವಂತೆ ಮಾಡಿದೆ. ಏಷ್ಯಾದ ಅತಿದೊಡ್ಡ ಏರ್ ಶೋ ಫೆ.14ರವರೆಗೆ ನಡೆಯಲಿದೆ.
ಬೆಂಗಳೂರು : ಯಲಹಂಕ ವಾಯುನೆಲೆಯಲ್ಲಿ ಐದು ದಿನಗಳ ಏರೋ ಇಂಡಿಯಾಗೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಸೋಮವಾರ ಚಾಲನೆ ನೀಡಿದ್ದು, ಸಾವಿರಾರು ಮಂದಿ ಪ್ರದರ್ಶನ ವೀಕ್ಷಿಸಲು ಆಗಮಿಸುತ್ತಿದ್ದಾರೆ. ಏರ್ ಶೋನಲ್ಲಿ ದೇಶಿಯ ಹಾಗೂ ವಿದೇಶಿ ವಿಮಾನಗಳು ನೋಡುಗರನ್ನು ರಂಜಿಸುತ್ತಿದ್ದು, ಸಾಹಸಿಗರ ಪ್ರದರ್ಶನ ಹುಬ್ಬೇರಿಸುವಂತೆ ಮಾಡಿದೆ. ಏಷ್ಯಾದ ಅತಿದೊಡ್ಡ ಏರ್ ಶೋ ಫೆ.14ರವರೆಗೆ ನಡೆಯಲಿದೆ.
ಏರೋ ಇಂಡಿಯಾ-2025ರ ಪ್ರಮುಖ ಆಕರ್ಷಣೆಯಾಗಿರುವ 5ನೇ ತಲೆಮಾರಿನ ಯುದ್ಧ ವಿಮಾನಗಳಾದ ಅಮೆರಿಕದ ಎಫ್-35 ಮತ್ತು ರಷ್ಯಾದ ಎಸ್‌ಯು-57 ವೈಮಾನಿಕ ಪ್ರದರ್ಶನವು ನೋಡುಗರನ್ನು ಮೂಕವಿಸ್ಮಿತಗೊಳಿಸಿತು.
ಈ ವಿಮಾನಗಳ ಬಳಿ ಕುತೂಹಲದೊಂದಿಗೆ ಧಾವಿಸುತ್ತಿದ್ದ ದೇಶ-ವಿದೇಶಗಳ ಪ್ರತಿನಿಧಿಗಳು, ಮಿಲಿಟರಿ ಆಸಕ್ತರು, ವಿವಿಧ ಕಂಪನಿಗಳ ಪ್ರತಿನಿಧಿಗಳು, ಭಾರತೀಯ ವಾಯುಸೇನೆ ಮತ್ತು ಇತರ ಪಡೆಗಳ ಅಧಿಕಾರಿಗಳು ವಿಮಾನಗಳನ್ನು ಗಹನವಾಗಿ ವೀಕ್ಷಿಸಿದರು. ಈ ವಿಮಾನದ ಜೊತೆಗೆ ಡಮ್ಮಿ ರಾಕೆಟ್, ಮಿಸೈಲ್, ಬಾಂಬ್‌ಗಳನ್ನು ಕೂಡ ಪ್ರದರ್ಶನಕ್ಕೆ ಇರಿಸಲಾಗಿತ್ತು. ಬಿಳಿ ಮತ್ತು ತಿಳಿ ನೀಲಿ ಬಣ್ಣದ ಎಸ್‌ಯು-57 ಯುದ್ಧ ವಿಮಾನವು ವೀಕ್ಷಕರನ್ನು ಸೂಜಿಗಲ್ಲಿನಂತೆ ತನ್ನತ್ತ ಸೆಳೆಯುತ್ತಿತ್ತು. ಅತ್ಯಾಧುನಿಕ ಯುದ್ಧ ವಿಮಾನವಾಗಿರುವ ಎಸ್‌ಯು-57 ಕೇವಲ 12 ಸೆಕೆಂಡುಗಳಲ್ಲೇ ಆಕಾಶಕ್ಕೆ ಹಾರಿತು. ಕಡಿಮೆ ರನ್ ವೇ ಬಳಸಿಕೊಂಡು ಕೇವಲ 12 ಸೆಕೆಂಡುಗಳಲ್ಲೇ ಆಕಾಶಕ್ಕೆ ಹಾರುವುದನ್ನು ನೋಡಿದ ವೀಕ್ಷಕರು ಕೇಕೆ ಹಾಕಿದರು. ವಿಮಾನದ ಅಸಾಧಾರಣ ಸಾಮರ್ಥ್ಯಕ್ಕೆ ಬೆರಗಾಗಿ ಚಪ್ಪಾಳೆ ತಟ್ಟಿದರು.
ಎಫ್-35 ಚಮತ್ಕಾರ:
ಎಸ್‌ಯು-57 ಪ್ರದರ್ಶನ ನೀಡಿದ ಬೆನ್ನಲ್ಲೇ ರಷ್ಯಾದ ಬದ್ಧ ವೈರಿ ಅಮೆರಿಕ ಸೇನಾಪಡೆಯ ಪ್ರಬಲ ಅಸ್ತ್ರ ಎಫ್-35 ಕೂಡ ಆಕಾಶದಲ್ಲಿ ತನ್ನ ಚಮತ್ಕಾರ ಪ್ರದರ್ಶಿಸಿತು. ಈ ಎರಡು ವಿಮಾನಗಳಿಂದ ಕಿವಿಗಡಚ್ಚಿಕ್ಕುವ ಸದ್ದಿನೊಂದಿಗೆ ಶರವೇಗ, ಅಸಾಧ್ಯ ಎನಿಸುವ ತಿರುವು, ಹಿಮ್ಮುಖ ಹಾರಾಟ, ನೆಟ್ಟಗೆ ಹಾರಾಟ, ಆಕಾಶದಲ್ಲಿ ಸ್ಥಿರ ನಿಲುಗಡೆ, ನಿಯಂತ್ರಣ ತಪ್ಪಿ ಬೀಳುವಂತೆ ಹಾರಾಟ ಪ್ರದರ್ಶನವು ನೋಡುಗರನ್ನು ಮೂಕವಿಸ್ಮಿತಗೊಳಿಸಿತು.
ವಿಕಾಸ, ಪರಂಪರೆಯ ದರ್ಶನ: ರಾಜನಾಥ್
ರಕ್ಷಣಾ ಕ್ಷೇತ್ರ ಕೂಡ ದೇಶದ ಆರ್ಥಿಕ ಅಭಿವೃದ್ಧಿಗೆ ಶಕ್ತಿ ನೀಡುತ್ತಿದೆ. ಈವರೆಗೆ ರಕ್ಷಣಾ ಕ್ಷೇತ್ರವನ್ನು ಆರ್ಥಿಕತೆಯ ಭಾಗವೆಂದು ಪರಿಗಣಿಸಿರಲಿಲ್ಲ. ಕಳೆದ 10 ವರ್ಷಗಳಲ್ಲಿ ಮೂಲ ಸೌಕರ್ಯ, ಕೃಷಿ, ಕೈಗಾರಿಕೆಗಳ ಜೊತೆ ರಕ್ಷಣಾ ವಲಯವನ್ನೂ ದೇಶದ ಆರ್ಥಿಕ ಅಭಿವೃದ್ಧಿಯ ಭಾಗವಾಗಿ ನೋಡಲಾಗುತ್ತಿದೆ. ಬಜೆಟ್‌ನಲ್ಲಿ ಬರೋಬ್ಬರಿ ₹6.81 ಲಕ್ಷ ಕೋಟಿ ಅನ್ನು ರಕ್ಷಣಾ ಇಲಾಖೆಗೆ ಮೀಸಲಿಡಲಾಗಿದೆ. ಇದರಲ್ಲಿ ₹1.80 ಲಕ್ಷ ಕೋಟಿಯಷ್ಟು ಬಂಡವಾಳ ವೆಚ್ಚಕ್ಕೆ ಮೀಸಲಿಡಲಾಗಿದೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದರು.
ಯಲಹಂಕ ವಾಯುನೆಲೆಯಲ್ಲಿ 5 ದಿನಗಳ ಏರೋ ಇಂಡಿಯಾಗೆ ಸೋಮವಾರ ಚಾಲನೆ ನೀಡಿ ಮಾತನಾಡಿ, ಶೇ.75ರಷ್ಟು ಬಜೆಟ್ ವೆಚ್ಚವನ್ನು ದೇಶೀಯ ಮೂಲಗಳಿಂದಲೇ ಮಾಡಲು ಉದ್ದೇಶಿಸಿದ್ದು, ತನ್ಮೂಲಕ ದೇಶದ ರಕ್ಷಣಾ ಕೈಗಾರಿಕೆ ವಲಯಕ್ಕೆ ಉತ್ತೇಜಿಸಲಾಗುತ್ತದೆ. ಇದು ಕೇಂದ್ರ ಸರ್ಕಾರವು ರಕ್ಷಣಾ ಇಲಾಖೆಯನ್ನು ಆದ್ಯತೆಯಾಗಿ ಪರಿಗಣಿಸಿರುವುದಕ್ಕೆ ಸಾಕ್ಷಿ ಎಂದು ಹೇಳಿದರು.
ಬಾಹ್ಯಬಲ ನೀಡುವ ಏರೋ ಇಂಡಿಯಾ:
ಅತಿಥಿ ದೇವೋ ಭವ ಎಂಬ ಸಂಸ್ಕೃತ ಶ್ಲೋಕದಂತೆ ನಮಗೆ ಅತಿಥಿ ದೇವರು ಇದ್ದಂತೆ. ಇತ್ತೀಚೆಗಷ್ಟೇ ಪ್ರಯಾಗ್‌ರಾಜ್‌ನ ಕುಂಭಮೇಳದಲ್ಲಿ ಪವಿತ್ರ ಸ್ನಾನ ಮಾಡಿ ತ್ರಿವೇಣಿ ಸಂಗಮದಲ್ಲಿ ಮುಳುಗುವ ಅವಕಾಶ ಸಿಕ್ಕಿತ್ತು. ಇದೀಗ ಏರೋ ಇಂಡಿಯಾ ರೂಪದಲ್ಲಿ ಯಲಹಂಕ ವಾಯುನೆಲೆಯಲ್ಲಿ ಮತ್ತೊಂದು ಮಹಾಕುಂಭ ನಡೆಯುತ್ತಿದೆ. ಪ್ರಯಾಗ್ ರಾಜ್‌ನ ಮಹಾಕುಂಭ ಆತ್ಮಸಂಧಾನದ ಕುಂಭವಾದರೆ, ಏರೋ ಇಂಡಿಯಾ ಶಕ್ತಿ ಪರಾಕ್ರಮ ಹಾಗೂ ಸಂಶೋಧನೆಯ ಅನುಸಂಧಾನದ ಕುಂಭ. ಪ್ರಯಾಗರಾಜದ ಕುಂಭಮೇಳ ಆಂತರಿಕ ಬಲ ನೀಡಿದರೆ, ಏರೋ ಇಂಡಿಯಾ ಬಾಹ್ಯಬಲ ನೀಡುತ್ತದೆ. ಏರೋ ಇಂಡಿಯಾ ಎಂಬ ಕುಂಭಮೇಳದಲ್ಲಿ ವಿಕಾಸ ಹಾಗೂ ಪರಂಪರೆ ಎರಡೂ ಕಾಣಬಹುದು ಎಂದು ರಾಜನಾಥ್ ಸಿಂಗ್ ತಿಳಿಸಿದರು.
ರಾಜ್ಯ ಖಾತೆ ರಕ್ಷಣಾ ಸಚಿವ ಸಂಜಯ್ ಸೇಠ್, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ರಕ್ಷಣಾ ಮುಖ್ಯಸ್ಥ ಅನಿಲ್ ಚೌಹಾಣ್, ನೌಕಾ ಸೇನೆ ಮುಖ್ಯಸ್ಥ ದಿನೇಶ್ ಕೆ ತ್ರಿಪಾಠಿ, ಭೂ ಸೇನಾ ಮುಖ್ಯಸ್ಥ ಉಪೇಂದ್ರ ದ್ವಿವೇದಿ, ರಾಜ್ಯ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್, ರಕ್ಷಣಾ ಇಲಾಖೆ ಕಾರ್ಯದರ್ಶಿ ರಾಜೇಶ್ ಕುಮಾರ್ ಸಿಂಗ್ ಹಾಜರಿದ್ದರು.
ಎಚ್‌ಎಎಲ್ ಹಿಂದೂಸ್ತಾನ್ ಜೆಟ್ ಟ್ರೇನರ್ ಹೆಸರು ಈಗ ‘ಯಶಸ್’
ಎಚ್‌ಎಎಲ್ ಅಭಿವೃದ್ಧಿಪಡಿಸಿರುವ ಜೆಟ್ ತರಬೇತಿ ವಿಮಾನ ಹಿಂದೂಸ್ತಾನ್ ಜೆಟ್ ಟ್ರೈನರ್‌ಗೆ (ಎಚ್‌ಜೆಟಿ-36) ‘ಯಶಸ್’ ಎಂದು ಮರುನಾಮಕರಣ ಮಾಡಿ ಏರೋ ಇಂಡಿಯಾದಲ್ಲಿ ಸೋಮವಾರ ಅನಾವರಣಗೊಳಿಸಲಾಯಿತು.
ವಿಮಾನದಲ್ಲಿ ಅನೇಕ ಸುಧಾರಣೆ ಮತ್ತು ಬದಲಾವಣೆಗಳನ್ನು ಮಾಡಲಾಗಿದ್ದು, ಎರಡನೇ ಹಂತದ ಪೈಲಟ್ ತರಬೇತಿ ಕಾರ್ಯಕ್ರಮಕ್ಕೆ ಈ ವಿಮಾನ ಸಮರ್ಥವಾಗಿದೆ. ಸಾಮರ್ಥ್ಯ ಹೆಚ್ಚಳವಾಗಿರುವುದರಿಂದ ವಿಮಾನಕ್ಕೆ ಹೊಸ ಹೆಸರು ಇರಿಸಲಾಗಿದೆ ಎಂದು ಎಎಚ್‌ಎಎಲ್ ಸಿಎಂಡಿ ಡಾ.ಡಿ.ಕೆ.ಸುನೀಲ್ ಹೇಳಿದ್ದಾರೆ.
ಏರೋಬ್ಯಾಟಿಕ್ ಪ್ರದರ್ಶನ, ಶಸ್ತ್ರಾಸ್ತ್ರ ತರಬೇತಿ, ಬಂಡುಕೋರರ ವಿರುದ್ಧ ಕಾರ್ಯಾಚರಣೆ ಸೇರಿದಂತೆ ವಿವಿಧೋದ್ದೇಶಗಳಿಗೆ ಈ ವಿಮಾನವನ್ನು ಬಳಸಬಹುದು. ಅತ್ಯಾಧುನಿಕ ಏವಿಯಾನಿಕ್ಸ್, ಕಾಕ್‌ಪಿಟ್‌ಗಳನ್ನು ಅಳವಡಿಸಲಾಗಿದೆ. ವಿದೇಶಿ ಉತ್ಪನ್ನಗಳ ಮೇಲಿನ ಅವಲಂಬನೆಯನ್ನು ಕಡಿತಗೊಳಿಸಿರುವುದರಿಂದ ಹೆಚ್ಚು ಪರಿಣಾಮಕಾರಿ ತರಬೇತಿ ಮತ್ತು ದಕ್ಷ ಕಾರ್ಯಾಚರಣೆಗೆ ಅನುಕೂಲವಾಗುತ್ತದೆ ಎಂದು ಎಚ್‌ಎಎಲ್ ತಿಳಿಸಿದೆ.
ಮೇಲೆ ವಿಮಾನ ಹಾರಾಟ, ಕೆಳಗೆ ಜನರ ಪರದಾಟ
ಯಲಹಂಕದ ವಾಯು ನೆಲೆಯಲ್ಲಿ ಏರೋ ಇಂಡಿಯಾ ವೈಮಾನಿಕ ಪ್ರದರ್ಶನ ಆರಂಭವಾದ ಬೆನ್ನಲ್ಲೇ ಸೋಮವಾರ ಯಲಹಂಕ, ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ರಸ್ತೆ ಸೇರಿದಂತೆ ಸುತ್ತಮುತ್ತಲ ಹಲವು ರಸ್ತೆಗಳಲ್ಲಿ ಭಾರೀ ಸಂಚಾರ ದಟ್ಟಣೆ ಉಂಟಾಗಿ ಸವಾರರು ಪರದಾಡಿದರು.
ವೈಮಾನಿಕ ಪ್ರದರ್ಶನ ವೀಕ್ಷಣೆಗೆ ತೆರಳುವ ವಾಹನಗಳನ್ನು ತಪಾಸಣೆ ನಡೆಸಿ ಒಳಗೆ ಬಿಡುತ್ತಿರುವುದರಿಂದ ಕಿಲೋ ಮೀಟರ್‌ಗಳಷ್ಟು ಉದ್ದಕ್ಕೆ ವಾಹನಗಳ ಸಂಚಾರ ದಟ್ಟಣೆ ಉಂಟಾಯಿತು. ಅದರಲ್ಲೂ ಯಲಹಂಕ ಬಿಎಸ್‌ಎಫ್ ಟ್ರೈನಿಂಗ್ ಸೆಂಟರ್‌ನಿಂದ ಯಲಹಂಕ ವಾಯು ನೆಲೆ, ಬೆಂಗಳೂರು-ಹೈದರಾಬಾದ್ ಹೆದ್ದಾರಿ, ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ರಸ್ತೆ, ಹೆಬ್ಬಾಳ ಮೇಲ್ಸೇತುವೆ, ಬಾಗಲೂರು ಕ್ರಾಸ್, ಸರ್ವಿಸ್ ರಸ್ತೆ ಸೇರಿದಂತೆ ಸುತ್ತಮುತ್ತಲ ರಸ್ತೆಗಳಲ್ಲಿ ಸುಮಾರು ಐದಾರು ಕಿ.ಮೀ. ಉದ್ದಕ್ಕೆ ವಾಹನಗಳು ಸಾಲುಗಟ್ಟಿ ನಿಂತಿದ್ದವು. ಸುಡು ಬಿಸಿಲಿನ ತಾಪ ಒಂದೆಡೆಯಾದರೆ, ಸಂಚಾರ ದಟ್ಟಣೆಯ ಬಿಸಿ ವಾಹನ ಸವಾರರನ್ನು ಹೈರಣಾಗಿಸಿತು.
ಸಂಚಾರ ಪೊಲೀಸರು ಯಲಹಂಕ ಭಾಗದ ರಸ್ತೆಗಳಲ್ಲಿ ಸಂಚಾರ ವ್ಯವಸ್ಥೆಯಲ್ಲಿ ಹಲವು ಬದಲಾವಣೆ ಮಾಡಿದ್ದರೂ ಸಂಚಾರ ದಟ್ಟಣೆ ತಪ್ಪಿಸಲು ಸಾಧ್ಯವಾಗಲಿಲ್ಲ. ನಗರದಿಂದ ಏರ್‌ಪೋರ್ಟ್ ಕಡೆಗೆ ತೆರಳುತ್ತಿದ್ದ ವಾಹನ ಸವಾರರು, ಸುಮಾರು ಎರಡು ತಾಸು ಟ್ರಾಫಿಕ್ ಜಾಮ್‌ನಲ್ಲಿ ಸಿಲುಕಿ ಪರದಾಡಿದರು. ಯಲಹಂಕ ಸುತ್ತಮುತ್ತಲ ರಸ್ತೆಗಳಲ್ಲಿ ಆ್ಯಂಬುಲೆನ್ಸ್‌ಗಳ ಸಂಚಾರಕ್ಕೂ ಟ್ರಾಫಿಕ್ ಜಾಮ್ ಬಿಸಿ ತಟ್ಟಿತು.