ಮೇ 1ಕ್ಕೆ 12,692 ಪೌರಕಾರ್ಮಿಕರು ಕಾಯಂ ಅಂದು ನೇಮಕಾತಿ ಪತ್ರ ವಿತರಣೆ - ಗೊಂದಲ ಆಗದಂತೆ ನೇಮಕ

| N/A | Published : Apr 18 2025, 08:27 AM IST

BBMP

ಸಾರಾಂಶ

ಬಿಬಿಎಂಪಿಯಲ್ಲಿ ಗುತ್ತಿಗೆ ಮತ್ತು ನೇರ ವೇತನದಲ್ಲಿ ಕೆಲಸ ಮಾಡುತ್ತಿರುವ 12,692 ಪೌರ ಕಾರ್ಮಿಕರನ್ನು ಕಾಯಂ ಮಾಡಿಕೊಳ್ಳಲಾಗುತ್ತಿದೆ.

ಬೆಂಗಳೂರು : ಬಿಬಿಎಂಪಿಯಲ್ಲಿ ಗುತ್ತಿಗೆ ಮತ್ತು ನೇರ ವೇತನದಲ್ಲಿ ಕೆಲಸ ಮಾಡುತ್ತಿರುವ 12,692 ಪೌರ ಕಾರ್ಮಿಕರನ್ನು ಕಾಯಂ ಮಾಡಿಕೊಳ್ಳಲಾಗುತ್ತಿದೆ. ಮೇ 1ರಂದು ನೇಮಕ ಆದೇಶ ಪತ್ರಗಳನ್ನು ನೀಡಿ ಬಿಬಿಎಂಪಿಯಿಂದ ನೇರವಾಗಿ ವೇತನ ಪಾವತಿಸಲಾಗುತ್ತದೆ ಎಂದು ಬಿಬಿಎಂಪಿ ಆಡಳಿತಗಾರ ಎಸ್.ಆರ್.ಉಮಾಶಂಕರ್ ಹೇಳಿದ್ದಾರೆ.

ಗುರುವಾರ ಬಿಬಿಎಂಪಿಯ ಡಾ। ರಾಜಕುಮಾರ್ ಗಾಜಿನ ಮನೆಯಲ್ಲಿ ಡಾ। ಬಿ.ಆರ್.ಅಂಬೇಡ್ಕರ್ ಜನ್ಮ ದಿನಾಚರಣೆ ಹಾಗೂ ಪೌರಕಾರ್ಮಿಕರ ದಿನಾಚರಣೆ ಉದ್ಘಾಟಿಸಿ ಮಾತನಾಡಿದ ಅವರು, ಮಳೆ, ಚಳಿ, ಬಿಸಿಲು, ಧೂಳು ಲೆಕ್ಕಿಸದೆ ಕೆಲಸ ಮಾಡಿ ನಗರವನ್ನು ಸ್ವಚ್ಛವಾಗಿರಿಸಿ ನಾಗರಿಕರನ್ನು ಆರೋಗ್ಯವಾಗಿಡುವ ಪೌರ ಕಾರ್ಮಿಕರ ಸೇವೆ ಅಮೂಲ್ಯವಾದದ್ದು ಎಂದರು.

ಪೌರಕಾರ್ಮಿಕರ ನೇಮಕಾತಿ ವೇಳೆ ಸಾಕಷ್ಟು ದೂರುಗಳು ಬಂದಿದ್ದವು. ಆದರೆ, ಮೋಸ, ದುರುಪಯೋಗಗಳಿಗೆ ಆಸ್ಪದ ನೀಡದೆ, ನೇಮಕ ಪ್ರಕ್ರಿಯೆಯನ್ನು ಬಹುತೇಕ ಪೂರ್ಣಗೊಳಿಸಲಾಗಿದೆ. ಖಾಯಂ ಪೌರಕಾರ್ಮಿಕರು ಮುಂದಿನ ದಿನಗಳಲ್ಲಿ ನೆಮ್ಮದಿಯ ಜೀವನ ಸಾಗಿಸಲು ಅನುಕೂಲವಾಗಲಿದೆ. ಪೌರಕಾರ್ಮಿಕರಿಗಾಗಿ ಒಂಟಿ ಮನೆ ಯೋಜನೆ, ಮಕ್ಕಳ ವಿದ್ಯಾಭ್ಯಾಸಕ್ಕಾಗಿ ವಿವಿಧ ಸೌಲಭ್ಯ, ಧನಸಹಾಯ ಹಾಗೂ ಬೋನಸ್ ನೀಡಲಾಗುತ್ತಿದೆ ಎಂದು ಉಮಾಶಂಕರ್ ತಿಳಿಸಿದರು.

ಡಾ। ಬಿ.ಆರ್.ಅಂಬೇಡ್ಕರ್ ಅವರು ಇಡೀ ದೇಶಕ್ಕೆ ಅತ್ಯುತ್ತಮ ಸಂವಿಧಾನವನ್ನು ನೀಡಿದ್ದಾರೆ. ಅದು ಇಡೀ ಪ್ರಪಂಚದಲ್ಲಿಯೇ ಉತ್ತಮವಾದ, ವಿವರಣಾತ್ಮಕವಾದ ಸಂವಿಧಾನವಾಗಿದೆ. ಇದು ಕೇವಲ ಭಾರತಕ್ಕೆ ಮಾತ್ರವಲ್ಲ, ಮುಂದಿನ ದಿನಗಳಲ್ಲಿ ವಿಶ್ವದ ಅನೇಕ ದೇಶಗಳಿಗೆ ಮುನ್ನುಡಿಯಾಗಲಿದೆ ಎಂದು ಉಮಾಶಂಕರ್ ಹೇಳಿದರು.

ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಮಾತನಾಡಿ। ಡಾ। ಬಿ.ಆರ್.ಅಂಬೇಡ್ಕರ್ ಕುರಿತಾದ ಪುಸ್ತಕಗಳನ್ನು ನಾವೆಲ್ಲರೂ ಓದಿ ಅರಿತುಕೊಳ್ಳಬೇಕಿದೆ. ಅವರ ವ್ಯಕ್ತಿತ್ವವನ್ನು ನಾವು ಎಲ್ಲರಿಗೂ ಪರಿಚಯಿಸಬೇಕು. ಅವರ ಎಲ್ಲಾ ವಿಚಾರಧಾರೆಗಳನ್ನು ಇತರರಿಗೂ ತಿಳಿಯುವಂತೆ ಮಾಡಬೇಕು ಎಂದರು.

ಉತ್ತಮ ಸೇವೆ ಸಲ್ಲಿಸಿದ 17 ಪೌರ ಕಾರ್ಮಿಕರಿಗೆ ಹಾಗೂ ಎಸ್.ಎಸ್.ಎಲ್.ಸಿ, ಪಿಯುಸಿ ಹಾಗೂ ಪದವಿಯಲ್ಲಿ ಉತ್ತಮ ಅಂಕ ಗಳಿಸಿದ ಪೌರ ಕಾರ್ಮಿಕರ ಮಕ್ಕಳಿಗೆ ಸನ್ಮಾನಿಸಲಾಯಿತು.

ಪೌರ ಕಾರ್ಮಿಕರಿಗೆ ಬೋನಸ್

ಡಾ। ಬಿ.ಆರ್.ಅಂಬೇಡ್ಕರ್ ಜಯಂತಿ ಪ್ರಯುಕ್ತ ಕಾಯಂ ಪೌರಕಾರ್ಮಿಕರಿಗೆ ₹22,000 ಹಾಗೂ ನೇರ ವೇತನ ಪೌರಕಾರ್ಮಿಕರಿಗೆ ₹8,000 ಬೋನಸ್ ನೀಡಲಾಗುವುದು ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್‌ ಗಿರಿನಾಥ್‌ ತಿಳಿಸಿದ್ದಾರೆ.