ಸಾರಾಂಶ
ಅಭಿವೃದ್ಧಿ ಹಾಗೂ ಗ್ಯಾರಂಟಿ ಹೆಸರಿನಲ್ಲಿ ಅಧಿಕಾರಕ್ಕೆ ಬಂದಿರುವ ರಾಜ್ಯ ಕಾಂಗ್ರೆಸ್ ಸರ್ಕಾರ ಭ್ರಷ್ಟಾಚಾರದಲ್ಲಿ ಮುಳುಗಿ ಹೋಗಿದೆ. ಜನರು ಸುಸೂತ್ರವಾಗಿ ಸಾಯುವುದಕ್ಕೂ ದುಡ್ಡು ಕೊಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಪ್ರಹ್ಲಾದ ಜೋಶಿ ಲೇವಡಿ ಮಾಡಿದರು.
ಹುಬ್ಬಳ್ಳಿ : ಅಭಿವೃದ್ಧಿ ಹಾಗೂ ಗ್ಯಾರಂಟಿ ಹೆಸರಿನಲ್ಲಿ ಅಧಿಕಾರಕ್ಕೆ ಬಂದಿರುವ ರಾಜ್ಯ ಕಾಂಗ್ರೆಸ್ ಸರ್ಕಾರ ಭ್ರಷ್ಟಾಚಾರದಲ್ಲಿ ಮುಳುಗಿ ಹೋಗಿದೆ. ಜನರು ಸುಸೂತ್ರವಾಗಿ ಸಾಯುವುದಕ್ಕೂ ದುಡ್ಡು ಕೊಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಲೇವಡಿ ಮಾಡಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯ ಸರ್ಕಾರ ಗ್ಯಾರಂಟಿ ಯೋಜನೆಯ ಹೆಸರಿನಲ್ಲಿ ಜನರ ಜೀವನವನ್ನೇ ದುಬಾರಿ ಮಾಡಿದೆ. ಅಗತ್ಯ ವಸ್ತುಗಳು ಹಾಗೂ ವಿದ್ಯುತ್ ಸೇರಿ ಎಲ್ಲ ವಸ್ತಗಳ ದರ ಏರಿಕೆ ಮಾಡುತ್ತಿದೆ. ರೈತರಿಗೆ ಸಮರ್ಪಕ ವಿದ್ಯುತ್ ಪೂರೈಕೆ ಸಹ ಮಾಡುತ್ತಿಲ್ಲ ಎಂದು ಆರೋಪಿಸಿದರು.
ಬೆಂಗಳೂರಿಗೆ ಅಗತ್ಯವಿರುವ ಮೂಲಭೂತ ಸೌಕರ್ಯ ಕಲ್ಪಿಸುವುದಕ್ಕೆ ಆಗಲ್ಲ ಅಂತ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿಕೆ ನೀಡಿದ್ದಾರೆ. ಜತೆಗೆ ಮೂಲಭೂತ ಸೌಕರ್ಯಗಳ ಬಗ್ಗೆ ಟ್ವೀಟ್ ಮಾಡಿದ ಉದ್ಯಮಿಗಳನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡು ಅಪಮಾನ ಮಾಡಿದ್ದಾರೆ. ಉದ್ಯಮಿ ಮೋಹನ್ ದಾಸ್ ಪೈ ಟ್ವೀಟ್‌ಗೆ ಸಚಿವ ಪ್ರಿಯಾಂಕ ಖರ್ಗೆ ಖಾರವಾಗಿ ಉತ್ತರಿಸಿದ್ದಾರೆ. ಪ್ರಿಯಾಂಕ್ ಖರ್ಗೆ ಅವರ ತಂದೆಯನ್ನು ನೋಡಿ ಕಲಿಯಬೇಕು. ಬಹಳ ದುರಹಂಕಾರಿ ವರ್ತನೆ ಸರಿ ಅಲ್ಲ ಎಂದು ಸಚಿವ ಜೋಶಿ ಎಚ್ಚರಿಸಿದ್ದಾರೆ.
ಬೆಳಗಾವಿಯಲ್ಲಿ ಕಂಡಕ್ಟರ್ ಮೇಲೆ ನಡೆದ ಹಲ್ಲೆ ಪ್ರಕರಣ ಸಂಬಂಧ ಮಾತನಾಡಿ, ನೆಪದಲ್ಲಿ ಎರಡೂ ರಾಜ್ಯಗಳ ಬಸ್ ಸಂಚಾರ ಸ್ಥಗಿತಗೊಳಿಸುವುದು ಸರಿಯಲ್ಲ. ಇದರಿಂದ ಪ್ರಯಾಣಿಕರಿಗೆ ಬಹಳಷ್ಟು ಸಮಸ್ಯೆಯಾಗುತ್ತಿದೆ. ಎರಡೂ ರಾಜ್ಯಗಳ ಸಂಘಟನೆಗಳು ಇದನ್ನು ಅರ್ಥ ಮಾಡಿಕೊಳ್ಳಬೇಕು ಎಂದರು. ಕಂಡಕ್ಟರ್ ಮೇಲಿನ ಹಲ್ಲೆ ಪ್ರಕರಣ ಅಕ್ಷಮ್ಯ ಅಪರಾಧ. ಹಲ್ಲೆಕೋರರ ಮೇಲೆ ಕಟ್ಟುನಿಟ್ಟಿನ ಕ್ರಮ ಆಗಬೇಕು. ಇದಕ್ಕೆ ನಮ್ಮ ಬೆಂಬಲವಿದೆ. ಆದರೆ, ಅದೇ ಕಾರಣಕ್ಕೆ ಎರಡೂ ರಾಜ್ಯಗಳ ಮಧ್ಯ ಬಸ್ ಸ್ಥಗಿತಗೊಳಿಸುವುದು ಸರಿಯಲ್ಲ ಎಂದರು.