ಸಾರಾಂಶ
ಮಂಗಳವಾರದಿಂದ ಹಾಲು, ಮೊಸರಿನ ದರ ಹೆಚ್ಚಳವಾಗುವ ಹಿನ್ನೆಲೆಯಲ್ಲಿ ಹೋಟೆಲ್‌ಗಳಲ್ಲಿ ಚಹ, ಕಾಫಿ ಸೇರಿದಂತೆ ಹಾಲಿನ ಖಾದ್ಯ, ಸಿಹಿ ತಿನಿಸುಗಳ ಬೆಲೆಯಲ್ಲೂ ಏರಿಕೆಯಾಗಲಿದೆ.
ಬೆಂಗಳೂರು : ಮಂಗಳವಾರದಿಂದ ಹಾಲು, ಮೊಸರಿನ ದರ ಹೆಚ್ಚಳವಾಗುವ ಹಿನ್ನೆಲೆಯಲ್ಲಿ ಹೋಟೆಲ್‌ಗಳಲ್ಲಿ ಚಹ, ಕಾಫಿ ಸೇರಿದಂತೆ ಹಾಲಿನ ಖಾದ್ಯ, ಸಿಹಿ ತಿನಿಸುಗಳ ಬೆಲೆಯಲ್ಲೂ ಏರಿಕೆಯಾಗಲಿದೆ.
ಸದ್ಯ ನಗರದಲ್ಲಿ ಟೀ, ಕಾಫಿ ಬೆಲೆ ₹15- ₹20 ಇದೆ. ಇದನ್ನು ಎಷ್ಟರ ಪ್ರಮಾಣದಲ್ಲಿ ಏರಿಕೆ ಮಾಡಬಹುದು ಎಂಬ ಬಗ್ಗೆ ಬೆಂಗಳೂರು ಹೋಟೆಲ್‌ಗಳ ಸಂಘ, ಕರ್ನಾಟಕ ಹೋಟೆಲ್‌ಗಳ ಸಂಘಗಳು ಸಭೆ ಸೇರಿ ನಿರ್ಧರಿಸಲಿವೆ. ಈಗಾಗಲೆ ಎರಡು ಹಂತದಲ್ಲಿ ಕಾಫಿ ಪುಡಿ ಬೆಲೆ ಕೇಜಿಗೆ ₹200ನಷ್ಟು ಹೆಚ್ಚಾಗಿದೆ. ಈ ಹಿನ್ನೆಲೆಯಲ್ಲಿ ಪೇಯಗಳ ಬೆಲೆಯನ್ನೂ ಹಲವು ಹೋಟೆಲ್‌ಗಳು ಏರಿಕೆ ಮಾಡಿವೆ.
ಇದೀಗ ನಂದಿನಿ ಹಾಲಿನ ಬೆಲೆ ಕೂಡ ಲೀಟರ್‌ಗೆ ₹4 ಹೆಚ್ಚಳವಾಗುತ್ತಿದ್ದು, ಅದಕ್ಕೆ ಅನುಗುಣವಾಗಿ ಹೋಟೆಲ್‌ಗಳು ತಮ್ಮ ದರವನ್ನು ಪರಿಷ್ಕರಣೆ ಮಾಡುವುದು ಅನಿವಾರ್ಯ. ಕಾಫಿ-ಟೀ ದರದಲ್ಲಿ ಶೇ.10ರಿಂದ 15ರಷ್ಟು ಹೆಚ್ಚಳವಾಗಲಿದೆ ಎಂದು ಬೃಹತ್ ಬೆಂಗಳೂರು ಹೋಟೆಲ್‌ಗಳ ಸಂಘದ ಗೌರವಾಧ್ಯಕ್ಷ ಪಿ.ಸಿ.ರಾವ್ ತಿಳಿಸಿದ್ದಾರೆ.
ಹೋಟೆಲ್‌ಗಳಿಗೆ ಇಕ್ಕಟ್ಟು:
ಕಳೆದೊಂದು ವರ್ಷದಲ್ಲಿ ದಿನಸಿ ವಸ್ತುಗಳು ಬೆಲೆಯೇರಿಕೆ ಕಂಡಿವೆ. ಅಕ್ಕಿ, ಬೇಳೆ, ತರಕಾರಿ, ಎಣ್ಣೆ ಎಲ್ಲವೂ ಕಳೆದ ಒಂದು ವರ್ಷದಲ್ಲಿ ಶೇ.30 ರಷ್ಟು ಏರಿಕೆ ಕಂಡಿವೆ. ದುಬಾರಿ ಸಂಬಳ, ಕಾರ್ಮಿಕರ ಕೊರತೆ, ಸರ್ಕಾರದ ಪ್ರೋತ್ಸಾಹವಿಲ್ಲದೆ ಲಾಭ, ನಷ್ಟ ಸರಿದೂಗಿಸಿಕೊಂಡು ಹೋಗುವುದು ಹೋಟೆಲ್ ಉದ್ಯಮಕ್ಕೆ ಸವಾಲಾಗಿದೆ. ಕಾಫಿ, ಚಹ, ತಿಂಡಿ, ಊಟದ ಗುಣಮಟ್ಟ ವ್ಯತ್ಯಾಸವಾದರೆ ಗ್ರಾಹಕರು ಕೈತಪ್ಪುತ್ತಾರೆ. ₹1, ₹2 ಏರಿಕೆಯನ್ನು ಹೇಗಾದರೂ ನಿಭಾಯಿಸಬಹುದು. ಆದರೆ, ಹಾಲಿನ ದರದಲ್ಲಿ ಏಕಾಏಕಿ ₹4ರಷ್ಟು ಏರಿಕೆ ಹೋಟೆಲ್ ನವರ ಲಾಭಕ್ಕೆ ಕುತ್ತು ತಂದಿದೆ. ಇದು ಹೋಟೆಲ್ ನ ಅಸ್ತಿತ್ವವನ್ನೇ ಅಲುಗಾಡಿಸುವ ಪ್ರಕ್ರಿಯೆಯಾಗಿದೆ ಎಂದು ಹೋಟೆಲ್ ಮಾಲೀಕರೊಬ್ಬರು ಬೇಸರ ವ್ಯಕ್ತಪಡಿಸಿದರು.
ರಸ್ತೆ ಬದಿ ಇರುವ ಸಣ್ಣ ಕ್ಯಾಂಟೀನ್‌ಗಳಲ್ಲಿ ಚಹಾಕ್ಕೆ ₹25 ವಿಧಿಸಲು ಸಾಧ್ಯವಿಲ್ಲ. ಅಷ್ಟೊಂದು ದರ ಮಾಡಿದಲ್ಲಿ ಸಾಮಾನ್ಯ ಗ್ರಾಹಕರು ಕುಡಿಯುತ್ತಾರಾ ಎಂದು ಹೋಟೆಲ್‌ನವರು ಪ್ರಶ್ನಿಸುತ್ತಾರೆ.
ಇತರ ಖಾದ್ಯವೂ ಹೆಚ್ಚಳ:
ಹೋಟೆಲ್ ಗಳಲ್ಲಿನ ಹಾಲು, ಮೊಸರಿನ ಖಾದ್ಯಗಳ ಬೆಲೆ ಏರಿಕೆ ಮಾಡುವುದೂ ಅನಿವಾರ್ಯವಾಗಿದೆ. ಬೆಣ್ಣೆ, ತುಪ್ಪ, ಪನ್ನೀರು ಬಳಸುವ ಎಲ್ಲ ತಿನಿಸುಗಳ ಬೆಲೆಯೂ ಗ್ರಾಹಕರ ಮೇಲೆ ವರ್ಗಾವಣೆ ಆಗಲಿದೆ. ಉತ್ತರ ಭಾರತದ ತಿನಿಸುಗಳು, ಬೇಕರಿಯಲ್ಲಿ ಬ್ರೆಡ್, ಖೋವಾ, ಚಂಪಾಕಲಿ, ಮಿಲ್ಕ್ ಕೇಕ್, ಗಿಣ್ಣು, ಶಾಹಿ ತುಕ್ಡಾ, ಹಾಲಿನ ಪುಡಿ ಬಳಸಿ ಮಾಡುವ ತಿನಿಸುಗಳ ಬೆಲೆ ಕೂಡ ಏರಿಕೆಯಾಗುವ ಎಲ್ಲ ಸಾಧ್ಯತೆಗಳಿವೆ. ಅದರಂತೆ ಜ್ಯೂಸ್, ಐಸ್‌ಕ್ರೀಮ್ ಮಳಿಗೆಗಳಲ್ಲೂ ಹಾಲಿನ ಬಳಕೆ ವ್ಯಾಪಕ. ಹೀಗಾಗಿ, ಇವುಗಳ ದರ ಕೂಡ ಹೆಚ್ಚಳವಾಗಲಿದೆ ಎಂದು ಪಿ.ಸಿ.ರಾವ್ ಹೇಳಿದರು.
;Resize=(690,390))
)
)

;Resize=(128,128))
;Resize=(128,128))
;Resize=(128,128))
;Resize=(128,128))
;Resize=(128,128))